ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಹಲವು ಗೊಂದಲ, ವಿವಾದಗಳಿಗೆ ಕಾರಣವಾಯಿತು. ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಗೆಲುವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಇನಾಗ್ಯುರೇಶನ್ ಡೇಗೆ ಟ್ರಂಪ್ ಗೈರಾಗುತ್ತಿದ್ದಾರೆ. ಆದ್ದರಿಂದ ಅಮೆರಿಕದಲ್ಲಿ ಬೈಡೆನ್-ಹ್ಯಾರಿಸ್ ಯುಗ ವಿಭಿನ್ನ ರೀತಿಯಲ್ಲಿ ಶುರುವಾಗುತ್ತಿದೆ.
ಅಮೆರಿಕದಲ್ಲಿ ರಿಪಬ್ಲಿಕನ್ನರ ಆಡಳಿತ ಮುಕ್ತಾಯಗೊಂಡು ಇಂದಿನಿಂದ (ಬುಧವಾರ) ಡೆಮಾಕ್ರಟನ್ನರ ಆಡಳಿತ ಶುರುವಾಗುತ್ತಿದೆ. ಜೋ ಬೈಡೆನ್ ಇಂದು 46ನೇ ಅಧ್ಯಕ್ಷರಾಗಿ ವಾಷಿಂಗ್ಟನ್ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಪದಗ್ರಹಣ ಮಾಡಲಿದ್ದಾರೆ.
ಹೀಗಿರಲಿದೆ ಕಾರ್ಯಕ್ರಮ
- ದಿನಾಂಕ- 20 ಜನವರಿ 2021
- ಇನಾಗ್ಯುರೇಶನ್ ಕಾರ್ಯಕ್ರಮ ಶುರುವಾಗುವ ಸಮಯ ಪೂರ್ವಾಹ್ನ 11.30 (ಭಾರತೀಯ ಸಮಯ ರಾತ್ರಿ 10 ಗಂಟೆ )
- ಮಧ್ಯಾಹ್ನ 12 ಗಂಟೆ (ಭಾರತೀಯ ಕಾಲಮಾನ ರಾತ್ರಿ 10.30) ಆಸುಪಾಸಿನಲ್ಲಿ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರಂಭದಲ್ಲಿ ಕಮಲಾ ಅವರಿಗೆ ಸುಪ್ರೀಂ ಕೋರ್ಟ್ನ ಅಸೋಸಿಯೇಟ್ ಜಸ್ಟೀಸ್ ಸೋನಿಯಾ ಸೊಟೊಮೇಯರ್ ಉಪಾಧ್ಯಕ್ಷ ಪದವಿಯ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. ನಂತರ ಜೋ ಬೈಡೆನ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅಧ್ಯಕ್ಷ ಪದವಿಯ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ.
ಪ್ರೆಸಿಡೆನ್ಶಿಯಲ್ ಎಸ್ಕಾರ್ಟ್: ನೂತನ ಅಧ್ಯಕ್ಷ ಬೈಡೆನ್ ಅವರಿಗೆ 15ನೇ ಸ್ಟ್ರೀಟ್ನಿಂದ ಶ್ವೇತಭವನದ ತನಕ ಪ್ರೆಸಿಡೆನ್ಶಿಯಲ್ ಎಸ್ಕಾರ್ಟ್ ಗೌರವ ಸಿಗುತ್ತದೆ. ಈ ಎಸ್ಕಾರ್ಟ್ನಲ್ಲಿ ಸೇನೆ ಎಲ್ಲ ಶಾಖೆಗಳ ಪ್ರಾತಿನಿಧ್ಯವೂ ಅಂದರೆ ಯುಎಸ್ ಆರ್ವಿು ಬ್ಯಾಂಡ್, ಜಾಯಿಂಟ್ ಸರ್ವೀಸ್ ಹಾನರ್ ಗಾರ್ಡ್, ಕಮಾಂಡರ್ ಇನ್ ಚೀಫ್ ಗಾರ್ಡ್ ಆಂಡ್ ಫೈಫ್ ಮತ್ತು ಮೂರನೇ ಯುಎಸ್ ಇನ್ಫ್ಯಾಂಟ್ರಿಯ ದ ಓಲ್ಡ್ ಗಾರ್ಡ್ ಡ್ರಮ್ ಕೋರ್ಗಳಿರುತ್ತಾರೆ.
ರೀತ್ ಲೇಯಿಂಗ್: ಅರ್ಲಿಂಗ್ಟನ್ ನ್ಯಾಷನಲ್ ಸೆಮೆಟ್ರಿಗೆ ತೆರಳಲಿರುವ ನೂತನ ಅಧ್ಯಕ್ಷ ಬೈಡೆನ್ ಮತ್ತು ಫಸ್ಟ್ ಲೇಡಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಸೆಕೆಂಡ್ ಜೆಂಟಲ್ವ್ಯಾನ್ ಅಲ್ಲಿ ರೀತ್ ಲೇಯಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಾರೆ.
ವರ್ಚುವಲ್ ಪರೇಡ್: ಪ್ರೆಸಿಡೆನ್ಶಿಯಲ್ ಎಸ್ಕಾರ್ಟ್ ಕಾರ್ಯಕ್ರಮದ ಬೆನ್ನಿಗೆ ಅಮೆರಿಕದಾದ್ಯಂತ ವರ್ಚುವಲ್ ಪರೇಡ್ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಲ್ಲಿ ಅಮೆರಿಕದ ವಿವಿಧ ರಾಜ್ಯಗಳ ವಿವಿಧ ಸಮುದಾಯಗಳವರು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಯುವ ಅಮೆರಿಕನ್ನರಿಗಾಗಿ: ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರ ತನಕ ಯುವ ಅಮೆರಿಕನ್ನರಿಗಾಗಿ ಪ್ರೆಸಿಡೆನ್ಶಿಯಲ್ ಇನಾಗ್ಯುರಲ್ ಕಮಿಟಿ ಇನಾಗ್ಯುರಲ್ ಕಾರ್ಯಕ್ರಮದ ನೇರಪ್ರಸಾರಕ್ಕೆ ಕ್ರಮ ತೆಗೆದುಕೊಂಡಿದೆ. ಪ್ರಶಸ್ತಿ ವಿಜೇತ ಎಂಟರ್ಟೇನರ್, ಅಡ್ವೋಕೇಟ್ ಕೆಕೆ ಪಾಲ್ಮರ್ ಈ ಕಾರ್ಯಕ್ರಮದ ನಿರೂಪಕರಾಗಿರಲಿದ್ದಾರೆ.
ನಿರೀಕ್ಷೆ ಮೂಡಿಸಿರುವ ಕಮಲಾ: ಪೂರ್ಣ ಹೆಸರು ಕಮಲಾ ದೇವಿ ಹ್ಯಾರಿಸ್. ಹುಟ್ಟಿದ್ದು 1964ರ ಅಕ್ಟೋಬರ್ 20. ಕ್ಯಾಲಿಫೋರ್ನಿಯಾದ ಓಕ್ಲಂಡ್ ಹುಟ್ಟೂರು. ಕ್ಯಾಲಿಫೋರ್ನಿಯಾದಲ್ಲೇ ಶಿಕ್ಷಣ ನೆರವೇರಿದೆ. ತಾಯಿ ಶ್ಯಾಮಲಾ ಗೋಪಾಲನ್. ತಮಿಳುನಾಡು ಮೂಲದವರು. ತಂದೆ ಡೊನಾಲ್ಡ್ ಜೆ.ಹ್ಯಾರಿಸ್. ಬ್ರಿಟಿಷ್ ಜಮೈಕಾ ಮೂಲದವರು. ಪತಿಯ ಹೆಸರು ಡೌಗ್ ಎಮ್ಹಾಫ್. 2014ರಲ್ಲಿ ವಿವಾಹವಾದರು. ಕಮಲಾ ವೃತ್ತಿಯಲ್ಲಿ ರಾಜಕಾರಣಿ, ನ್ಯಾಯವಾದಿ ಮತ್ತು ಲೇಖಕಿ.
ಕಮಲಾ ಸೀರೆ ಉಡ್ತಾರಾ?: ಕಮಲಾ ಹ್ಯಾರಿಸ್ ಭಾರತೀಯತೆಯನ್ನು ಬಿಂಬಿಸುವ ಸಲುವಾಗಿ ಸೀರೆ ಉಡ್ತಾರಾ? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ.
ಅನುಭವಿ ಬೈಡೆನ್: ಜೋಸೆಫ್ ರಾಬಿನೆಟ್ ಬೈಡೆನ್ ಜೂನಿಯರ್ (ಜೋ ಬೈಡೆನ್), 1942ರ ನವೆಂಬರ್ 20ರಂದು ಪೆನ್ಸಿಲ್ವೇನಿಯಾದ ಸ್ಕಾ›ಂಟನ್ ಸಿಟಿಯಲ್ಲಿ ಜನಿಸಿದರು. ಅವರ ತಂದೆ-ತಾಯಿ: ಜೋಸೆಫ್ ಆರ್. ಬೈಡೆನ್ ಸೀನಿಯರ್ ಮತ್ತು ಕ್ಯಾಥರೀನ್ ಯುಜೆನಿಯಾ ಫೆನ್ನೆಗನ್. ಮಧ್ಯಮ ವರ್ಗದ ಕುಟುಂಬದವರು. ಇಬ್ಬರು ಸೋದರರು, ಒಬ್ಬ ಸೋದರಿ. (ಒಬ್ಬ ಸೋದರ ಸಂಸದರಾಗಿದ್ದರು) ಮೊದಲ ಪತ್ನಿ ನೀಲಿಯಾ ಹಂಟರ್ (1966ರಲ್ಲಿ ವಿವಾಹ) ಮತ್ತು ಒಂದು ವರ್ಷ ಮಗಳು ನವೋಮಿ 1972ರ ಡಿಸೆಂಬರ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮರಣಿಸಿದರು. ಪುತ್ರರಾದ ಬ್ಯೂ ಮತ್ತು ಹಂಟರ್ಗೆ ಗಾಯವಾಗಿತ್ತು. 1977ರಲ್ಲಿ ಜಿಲ್ ಜೇಕಬ್ಸ್ರನ್ನು ವಿವಾಹವಾದರು (ಜಿಲ್ಗೂ ಎರಡನೇ ವಿವಾಹ). ಇವರಿಗೆ ಆಶ್ಲೆ ಎಂಬ ಮಗಳು ಇದ್ದಾಳೆ. 2015ರಲ್ಲಿ ಮಗ ಬ್ಯೂ ಮಿದುಳು ಕ್ಯಾನ್ಸರ್ನಿಂದ ಮೃತಪಟ್ಟ. ಜೋ ಬೈಡೆನ್ ಬಿಎ ಮತ್ತು ಜ್ಯೂರಿಸ್ ಡಾಕ್ಟರ್ (ಕಾನೂನು) ಪದವಿ ಪಡೆದಿದ್ದು, ವಕೀಲ, ರಾಜಕಾರಣಿ, ಲೇಖಕರೂ ಹೌದು.
4 ದಿನಗಳ ಕಾರ್ಯಕ್ರಮ: ಇನಾಗ್ಯುರಲ್ ಡೇ ಕಾರ್ಯಕ್ರಮ 4 ದಿನ ಮುಂಚಿತವಾಗಿ ಶುರುವಾಗುತ್ತದೆ. ಜ.16ರಂದು ಅಮೆರಿಕ ಯುನೈಟೆಡ್ ಎಂಬ ಸಂಗೀತ ಕಾರ್ಯಕ್ರಮ, ಸೆಲೆಬ್ರಿಟಿಗಳ ಮನರಂಜನೆಯೊಂದಿಗಿನ ಸ್ವಾಗತ ಕಾರ್ಯಕ್ರಮ ನಡೆಯಿತು. ಜ.17ರಂದು ‘ವಿ ದ ಪೀಪಲ್’ ಎಂಬ ವರ್ಚುವಲ್ ಕನ್ಸರ್ಟ್ ಅನ್ನು ಕೀಗನ್ ಮೈಕಲ್ ಕೀ ಮತ್ತು ದೇಬ್ರಾ ಮೆಸ್ಸಿಂಗ್ ನಡೆಸಿಕೊಟ್ಟರು. 18ರಂದು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಡೇಯನ್ನು ರಾಷ್ಟ್ರೀಯ ಸೇವಾ ಮತ್ತು ಸ್ವಯಂಸೇವಾದಿನವನ್ನಾಗಿ ಆಚರಿಸಲಾಗಿದೆ. ಕೋವಿಡ್ 19 ಸೋಂಕಿಗೆ ಬಲಿಯಾದವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಜ.19ರಂದು ನಡೆಯಿತು.
ಪ್ರೖೆಮ್ ಟೈಮ್: ರಾತ್ರಿ 8.30ರ ನಂತರ ಟಾಮ್ ಹಾನ್ಕಸ್ ನಿರೂಪಣೆಯ 90 ನಿಮಿಷಗಳ ಪ್ರೖೆಮ್ ಟೈಮ್ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಲ್ಲಿ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಇತರರ ಹೇಳಿಕೆಗಳೂ ಇರಲಿವೆ.
ಇನಾಗ್ಯುರೇಶನ್ ಡೇ: ಹೊಸ ಅಧ್ಯಕ್ಷರ ಅವಧಿ ಶುರುವಾಗುವ ದಿನವನ್ನು ಔಪಚಾರಿಕವಾಗಿ ಇನಾಗ್ಯುರೇಶನ್ ಡೇ ಎನ್ನುತ್ತಾರೆ. ಇದು ಪದಗ್ರಹಣ ಕಾರ್ಯಕ್ರಮವನ್ನು ಒಳಗೊಂಡಿದೆ.
ಚೊಚ್ಚಲ ಭಾಷಣ: ಅಪರಾಹ್ನ 1 ಗಂಟೆ ಸುಮಾರಿಗೆ(ಭಾರತೀಯ ಕಾಲಮಾನ ರಾತ್ರಿ 11 ಗಂಟೆ ಸುಮಾರಿಗೆ) ಬೈಡೆನ್ ಅಧ್ಯಕ್ಷರಾಗಿ ದೇಶವನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಲಿದ್ದಾರೆ.
ಪಾಸ್ ಇನ್ ರಿವ್ಯೂವ್: ಚೊಚ್ಚಲ ಭಾಷಣ ಮಾಡಿದ ಬಳಿಕ ಅಧ್ಯಕ್ಷ ಬೈಡೆನ್, ಫಸ್ಟ್ ಲೇಡಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಸೆಕೆಂಡ್ ಜೆಂಟಲ್ವ್ಯಾನ್ ಸೇನಾ ಯೋಧರ ಜತೆಗೆ ಈಸ್ಟ್ ಫ್ರಂಟ್ನಲ್ಲಿ ಪಾಸ್ ಇನ್ ರಿವ್ಯೂನಲ್ಲಿ ಪಾಲ್ಗೊಳ್ಳುವರು. ಇದು ಸೇನಾ ಸಂಪ್ರದಾಯವಾಗಿದ್ದು, ಹೊಸ ಕಮಾಂಡರ್ ಇನ್ ಚೀಫ್ಗೆ ಅಧಿಕಾರ ಹಸ್ತಾಂತರಿಸುವ ಕ್ರಮವಾಗಿದೆ.
ಬೈಡೆನ್ ಅವರಿಗೆ ಸುದೀರ್ಘ ರಾಜಕೀಯ ಅನುಭವ, ಮುತ್ಸದ್ದಿತನ ಇದೆ. ಟ್ರಂಪ್ ಆಡಳಿತದಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳಿಗೆ ನಿರ್ಬಂಧ ವಿಧಿಸಲಾಗಿತ್ತು, ಚೀನಾಕ್ಕೂ ನಿರ್ಬಂಧವಿತ್ತು. ಆದರೆ, ಬೈಡೆನ್ ಆ ರೀತಿಯ ವ್ಯಕ್ತಿಯಲ್ಲ. ಜಗತ್ತಿನ ಎಲ್ಲ ಮೂಲೆಗಳಿಂದಲೂ ಒಳ್ಳೆಯ ವಿಚಾರಗಳು ಹರಿದುಬರಲಿ ಎಂಬ ಯೋಚನೆಯಂತೆ ಎಲ್ಲ ಜಾತಿ, ಧರ್ಮಗಳನ್ನೂ ಸಮಾನವಾಗಿ ಕಾಣುತ್ತಾರೆ. ವಲಸೆ ನೀತಿಯನ್ನು ಟ್ರಂಪ್ ಬಿಗಿಗೊಳಿಸಿದ್ದರಿಂದ ಭಾರತೀಯರು, ಚೀನೀಯರು ಸೇರಿ ಅನೇಕ ವಿದ್ಯಾರ್ಥಿಗಳು, ಐಟಿಬಿಟಿ ನೌಕರರಿಗೆ ತೊಂದರೆಯಾಗಿತ್ತು. ಇಲ್ಲಿನ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಮತ್ತು ಪಿಎಚ್ಡಿ ಹಂತದ ಶಿಕ್ಷಣದಲ್ಲಿ ಭಾರತ, ಚೀನಾ, ಪಾಕಿಸ್ತಾನ ಸೇರಿ ವಲಸೆ ವಿದ್ಯಾರ್ಥಿಗಳದ್ದೇ ಪಾರಮ್ಯ ಇದೆ. ಇನ್ನೊಂದಷ್ಟು ವರ್ಷ ನಿರ್ಬಂಧ ನೀತಿ ಮುಂದುವರಿದಿದ್ದರೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮುಚ್ಚಿಹೋಗುತ್ತಿದ್ದವು. ಇದೀಗ ಬೈಡೆನ್ ಆ ನಿರ್ಬಂಧಗಳನ್ನು ತೆರವುಗೊಳಿಸಲಿದ್ದಾರೆ. ಒಟ್ಟಿನಲ್ಲಿ ಭಾರತೀಯ ಮೂಲದವರೂ ಸೇರಿ ಅಮೆರಿಕದಲ್ಲಿ ವಾಸಿಸುವ ಎಲ್ಲರಿಗೂ ಬೈಡೆನ್ ಆಡಳಿತ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ.
| ಕರ್ನಲ್ ನಟರಾಜ್ ಕೋಟೆ ಅಮೆರಿಕದಲ್ಲಿ ಸ್ಟಾರ್ ಹೋಟೆಲ್ಗಳ ಉದ್ಯಮಿ
ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವಲ್ಲಿ ಜೋ ಬೈಡೆನ್ ಆಡಳಿತ ಆಶಾಭಾವನೆ ಮೂಡಿಸಿದೆ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ, ಅದರಲ್ಲೂ ಕೊನೆಯ ಕಾಲಘಟ್ಟದಲ್ಲಿ ನಡೆದ ಬೇಜವಾಬ್ದಾರಿಯುತ ನಡವಳಿಕೆ ಬೇಸರ ಮೂಡಿಸಿದೆ.
| ವಲ್ಲೀಶ ಶಾಸ್ತ್ರಿ ನಾವಿಕ ಅಧ್ಯಕ್ಷ
ನಿಯಂತ್ರಣಕ್ಕೆ ಬರದ ಕರೊನಾ, ವ್ಯಾಪಕವಾಗಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಪಾತಾಳಕ್ಕೆ ಬಿದ್ದು ಹೋಗಿರುವ ಅರ್ಥವ್ಯವಸ್ಥೆಯಂಥ ಅನೇಕ ದೊಡ್ಡ ಸವಾಲುಗಳು ಜೋ ಬೈಡೆನ್ ಅವರ ಮುಂದೆ ಇವೆ. ಡೊನಾಲ್ಡ್ ಟ್ರಂಪ್ ಮಾಡಿ ಹೋಗಿರುವ ದೊಡ್ಡ ಅವಾಂತರಗಳನ್ನೂ ಸರಿ ಮಾಡಬೇಕಾಗಿದೆ. ‘ಮಾನವ ಹಕ್ಕುಗಳ ರಕ್ಷಣೆ’ ಡೆಮಾಕ್ರೆಟಿಕ್ ಪಕ್ಷದವರ ಪ್ರಮುಖ ಘೊಷಣೆಯಾಗಿರುವುದರಿಂದ, ಕಾಶ್ಮೀರ ಸಮಸ್ಯೆಯನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತುವ ಭಯವಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಚೀನಾ ಪ್ರಾಬಲ್ಯ ಮುರಿಯಲು ಬರಾಕ್ ಒಬಾಮ ಮತ್ತು ಟ್ರಂಪ್ ಮಾಡಿದಂತೆಯೇ ಜೋ ಬೈಡೆನ್ ಸಹ ಭಾರತದ ಜತೆ ಕೈಜೋಡಿಸಲಿದ್ದಾರೆ. ಬೈಡೆನ್ ಆಡಳಿತದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಮತ್ತಷ್ಟು ಸುಧಾರಿಸಿ ಎತ್ತರಕ್ಕೆ ಹೋಗುವ ನಿರೀಕ್ಷೆಯಿದೆ.
| ಬೆಂಕಿ ಬಸಣ್ಣ ನ್ಯೂಯಾರ್ಕ್