More

    ತಂಬಾಕು ಪದಾರ್ಥಕ್ಕಾಗಿ ಗಡಿ ದಾಟುವ ಜನರು

    ಕೊಕಟನೂರ: ಗುಟ್ಖಾ, ಪಾನ್ ಮಸಾಲಾ ಸೇರಿ ಮಹಾರಾಷ್ಟ್ರದಲ್ಲಿ ನಿಷೇಧಿಸಲಾಗಿರುವ ಕೆಲ ತಂಬಾಕು ವಸ್ತುಗಳ ಖರೀದಿಗಾಗಿ ಅಲ್ಲಿಯ ಜನ ತಂಡೋಪತಂಡವಾಗಿ ಗಡಿಭಾಗದ ಕರ್ನಾಟಕದ ಹಳ್ಳಿಗಳಿಗೆ ಲಗ್ಗೆ ಇಡುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇದರಿಂದ ಕರೊನಾ ಪ್ರಕರಣ ಹೆಚ್ಚೆಚ್ಚು ಕಾಣಿಸಿಕೊಳ್ಳಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಬಿಳ್ಳೂರ, ಬಸರಗಿ, ಗೂಗವಾಡ, ಸಂಕ, ಉಮರಾಣಿ, ಸಿಂಧೂರ ಸೇರಿ ವಿವಿಧ ಹಳ್ಳಿಗಳ ಮರಾಠಿಗರು ಮಾದಕ ವಸ್ತು ಹಾಗೂ ಸಾರಾಯಿ ಖರೀದಿಸಲು ಅಥಣಿ ತಾಲೂಕಿನ ಗಡಿಭಾಗದ ಅನಂತಪುರ, ಖಿಳೇಗಾಂವ, ಬಾಳಿಗೇರಿ, ಕೋಹಳ್ಳಿ, ರಾಮತೀರ್ಥ ಮುಂತಾದ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಗುಟ್ಖಾ ಮತ್ತು ಪಾನ್ ಮಸಲಾ ಸೇರಿ ಇತರ ಮಾದಕ ವಸ್ತುಗಳನ್ನು ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕರೊನಾ ಆತಂಕದ ನಡುವೆಯೂ ಅಲ್ಲಿಯ ಜನ ಚೆಕ್‌ಪೋಸ್ಟ್ ಸಿಬ್ಬಂದಿ ಕಣ್ಣುತಪ್ಪಿಸಿ ಒಳ ನುಗ್ಗುತ್ತಿದ್ದಾರೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳಲು ಜನರಿಗೆ ಅಲ್ಲಿನ ಚೆಕ್‌ಪೋಸ್ಟ್ ನಲ್ಲಿ ಕಟ್ಟುನಿಟ್ಟಾಗಿ ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಆದರೆ, ಕರ್ನಾಟಕದ ಚೆಕ್‌ಪೋಸ್ಟ್ ಗಳಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ ಎಂಬ ಆರೋಪ ಕೇಳಿ ಬರುತ್ತಿವೆ. ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಮಹಾರಾಷ್ಟ್ರದಿಂದ ಬರುವ ವಲಸಿಗರನ್ನು ಕಟ್ಟುನಿಟ್ಟಾಗಿ ತಡೆಯಬೇಕು. ತಾಲೂಕಿನ ಗಡಿ ಭಾಗದಲ್ಲಿ ಕರೊನಾ ಪ್ರಕರಣ ಉಲ್ಬಣಿಸುವ ಸಾಧ್ಯತೆ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಮಹಾರಾಷ್ಟ್ರದವರನ್ನು ರಾಜ್ಯದ ಒಳಗೆ ಬಿಡದಂತೆ ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚಿಸಲಾಗುವುದು. ಕಣ್ಣು ತಪ್ಪಿಸಿ ಒಳ ರಸ್ತೆಗಳಿಂದ ಗಡಿ ಗ್ರಾಮದೊಳಗೆ ಬರುವವರನ್ನು ತಡೆಯಲು ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು.
    | ದುಂಡಪ್ಪ ಕೋಮಾರ ತಹಸೀಲ್ದಾರ್ ಅಥಣಿ

    | ಮೋಹನ ಪಾಟಣಕರ ಕೊಕಟನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts