More

    ಲಾಕ್‌ಡೌನ್‌ಗೆ ಕುಂದಾನಗರಿ ಸ್ತಬ್ಧ

    ಬೆಳಗಾವಿ: ಮಾರಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಜಾರಿಗೊಳಿಸಿರುವ ‘ಸಂಡೇ ಲಾಕ್‌ಡೌನ್’ಗೆ ಬೆಳಗಾವಿಯಲ್ಲಿ ಭಾನುವಾರ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್‌ಶಾಪ್ ಹಾಗೂ ಹಾಲು ಮಾರಾಟ ಹೊರತು ಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಯಾವುದೇ ರೀತಿಯ ವ್ಯಾಪಾರ-ವಹಿವಾಟು ನಡೆಯಲಿಲ್ಲ.

    ಲಾಕ್‌ಡೌನ್ ಸಡಿಲಿಕೆ ನಂತರ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ನಗರದ ಚನ್ನಮ್ಮವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಪಿಬಿ ರಸ್ತೆ, ಕೇಂದ್ರ ಮತ್ತು ಸಿಟಿ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.

    ಲಾಠಿ ರುಚಿ: ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಸಂಚಾರ ನಿರ್ಬಂಧಿಸಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ತೆರಳುತ್ತಿರುವ ಜನರ ಸಂಚಾರಕ್ಕೆ ಅವಕಾಶ ನೀಡುತ್ತಿದ್ದ ಪೊಲೀಸರು ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿ, ಮನೆಗೆ ಕಳುಹಿಸುತ್ತಿರುವುದು ಸಾಮಾನ್ಯವಾಗಿತ್ತು. ಗ್ರಾಮೀಣ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಅಲ್ಲಲ್ಲಿ ರೈತರು ಹೊಲಗದ್ದೆಗಳಲ್ಲಿದ್ದ ದೃಶ್ಯ ಕಂಡು ಬಂತು.

    ಬೆಳಗಾವಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಸವದತ್ತಿ, ಖಾನಾಪುರ ಮತ್ತು ನಿಪ್ಪಾಣಿ ಸೇರಿ ವಿವಿಧ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡುವ ಜನರನ್ನು ಪೊಲೀಸರು ಮನೆಗೆ ಕಳುಹಿಸುತ್ತಿರುವುದು ಕಂಡುಬಂತು. ಕರೊನಾದ ಆರಂಭಿಕ ದಿನಗಳಲ್ಲಿ ನೀಡಿದ್ದ ಲಾಕ್‌ಡೌನ್‌ಗೆ ಹೋಲಿಸಿದರೆ ಈ ಬಾರಿಯ ವೀಕೇಂಡ್ ಲಾಕ್‌ಡೌನ್‌ಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಪೊಲೀಸರು ಸೇರಿ ಇನ್ನಿತರ ಕರೊನಾ ಸೇನಾನಿಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ವರದಿಯಾಗಿಲ್ಲ.

    ಬಸ್ ಪ್ರಯಾಣಿಕರ ಪರದಾಟ!: ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಲ್ಲಿರುವ ಬಸ್‌ಗಳು ನಿತ್ಯ 692 ಟ್ರಿಪ್ ಸಂಚರಿಸುತ್ತವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಎಲ್ಲ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಬೆಂಗಳೂರು ಮತ್ತು ಮೈಸೂರಿನಿಂದ ಶನಿವಾರ ರಾತ್ರಿ ಹೊರಟಿದ್ದ ಎರಡು ಬಸ್‌ಗಳು ಭಾನುವಾರ ಬೆಳಗ್ಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ತಲುಪಿದವು. ಇಲ್ಲಿಂದ ತಮ್ಮ ಮನೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಿದರು. ಕೆಲವರು ನಡೆದುಕೊಂಡು ಸಾಗಿದರೆ, ಇನ್ನೂ ಕೆಲವರು ಮನೆಗೆ ೆನಾಯಿಸಿ ವಾಹನ ತರಿಸಿಕೊಂಡು ತೆರಳಿದರು.

    ನಗರದಲ್ಲಿ ಅತಂತ್ರನಾದ ಯೋಧ: ತುರ್ತು ರಜೆ ಹಾಕಿ ಡೆಹರಾಡೂನ್‌ನಿಂದ ಬೆಂಗಳೂರಿಗೆ ಬಂದಿಳಿದ ಯೋಧ ಅರುಣ ಪಾಟೀಲ ದಂಪತಿ, ಖಾಸಗಿ ವಾಹನದ ಮೂಲಕ ಬೆಳಗಾವಿಗೆ ಆಗಮಿಸಿದ್ದರು. ಆದರೆ, ಬೆಳಗಾವಿವರೆಗೆ ಮಾತ್ರ ಪಾಸ್ ಇರುವ ಹಿನ್ನೆಲೆಯಲ್ಲಿ ಸ್ವಗಾಮ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ತೆರಳಲು ವಾಹನ ಚಾಲಕ ನಿರಾಕರಿಸಿದ. ಹೀಗಾಗಿ ದಂಪತಿ ಕೆಲ ಕಾಲ ವಾಹನ ಸಿಗದೆ ಪರದಾಡಿದರು. ಬಳಿಕ ಸ್ಥಳೀಯರ ನೆರವಿನೊಂದಿಗೆ ಇನ್ನೊಂದು ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಂಡು ತಮ್ಮೂರಿಗೆ ತೆರಳಿದರು.

    ಗುರು ಪೂರ್ಣಿಮೆ ಆಚರಣೆ: ಶನಿವಾರ ರಾತ್ರಿಯಿಂದಲೇ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಭಾನುವಾರ ಬೆಳಗಾವಿಯಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ಯಿಂದ ಆಗಾಗ ಬಂದು ಹೋಗುತ್ತಿದ್ದ ಮಳೆ, ತಂಪು ಗಾಳಿಯಿಂದಾಗಿ ಜನ ಮನೆಯಲ್ಲಿದ್ದರು. ಬಹುತೇಕರು ಗುರು ಪೂರ್ಣಿಮೆ ಆಚರಿಸಿ ಮನೆಯಲ್ಲಿ ಕಾಲ ಕಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts