More

    ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಗಾಗಿ ಕಾದು ಕುಳಿತಿದ್ದ ಜವರಾಯ!

    ಚೆನ್ನೈ: ಕರ್ತವ್ಯ ನಿರ್ವಹಿಸುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಟಾಯ್ಲೆಟ್​ ಇಲ್ಲದಿದ್ದರಿಂದ ಎಂದಿನಂತೆಯೇ ಹೊರಗಡೆ ಹೋದ ಸರ್ಕಾರಿ ಉದ್ಯೋಗಿಯೊಬ್ಬರು ದುರಂತ ಸಾವಿಗೀಡಾಗಿರುವ ಅಮಾನವೀಯ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಲಕತ್ತೂರ್​ನಲ್ಲಿ ಕಳೆದ ಶನಿವಾರ ನಡೆದಿದೆ.

    ಶರಣ್ಯಾ(24) ಮೃತ ಸರ್ಕಾರಿ ಉದ್ಯೋಗಿ. ಶರಣ್ಯಾ ಕೆಲಸ ಮಾಡುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇಲ್ಲ. ಹೀಗಾಗಿ ಇತರೆ ಮಹಿಳಾ ಉದ್ಯೋಗಿಗಳಂತೆ ಶರಣ್ಯಾ ಸಹ ಕಚೇರಿ ಪಕ್ಕದ ಮನೆಗಳು ಅಥವಾ ಕಟ್ಟಡಗಳ ಬಳಿ ಹೋಗುತ್ತಿದ್ದರು. ಶನಿವಾರವೂ ಸಹ ಎಂದಿನಂತೆ ಶೌಚಕ್ಕೆ ಹೋದ ಶರಣ್ಯಾ ಮರಳಿ ಕಚೇರಿಗೆ ಬರಲೇ ಇಲ್ಲ. ಏನಾಯಿತು ಎಂದು ನೋಡುವಷ್ಟರಲ್ಲಿ ಆಕೆ ಕಾಲು ಜಾರಿ ನಿರ್ಮಾಣ ಹಂತದ ಮನೆಯ ತೆರೆದ ಸೆಪ್ಟಿಕ್​ ಟ್ಯಾಂಕ್​ ಒಳಗೆ ಬಿದ್ದು ದುರಂತ ಸಾವಿಗೀಡಾಗಿದ್ದರು.

    ಬೆಳೆದು ಮನೆಗೆ ಆಶ್ರಯವಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಶರಣ್ಯಾ ನನ್ನ ಜೀವ. ಆಕೆಯ ಸಾವನ್ನು ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗಳು ಐಎಎಸ್​ ಕನಸು ಹೊತ್ತಿದ್ದಳು. ಕೆಲಸದೊಂದಿಗೆ ಐಎಎಸ್​ ತಯಾರಾಗಲು ನಿರ್ಧರಿಸಿದ್ದಳು. ಆದರೆ, ಆಕೆಯ ಸಾವಿನೊಂದಿಗೆ ಕೊನೆಯಾಯಿತು ಎಂದು ಆಕೆಯ ತಂದೆ ಷಣ್ಮುಗಂ ನೋವಿನಿಂದಲೇ ಹೇಳಿದರು.

    ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಕಡಿವಾಣಕ್ಕೆ ವಿರೋಧ; ವಾಕ್​ ಸ್ವಾತಂತ್ರ್ಯ ನಿಯಂತ್ರಣ ಪ್ರಜಾಪ್ರಭುತ್ವಕ್ಕೆ ಮಾರಕ

    ಶರಣ್ಯಾ ಟಿಎನ್​ಪಿಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇದೇ ವರ್ಷದ ಮಾರ್ಚ್​ನಲ್ಲಿ ಸರ್ಕಾರಿ ಸೇವೆಗೆ ಸೇರಿದ್ದಳು. ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಸಾಕಷ್ಟು ಹೋರಾಟ ನಡೆಸಿದ್ದ ಶರಣ್ಯಾ, ಒಂದೊಮ್ಮೆ ಕೆಲಸ ಬಿಡುವ ನಿರ್ಧಾರಕ್ಕೆ ಬಂದಿದ್ದಳು ಎಂದು ಕುಟುಂಬ ಹೇಳಿದೆ. ನಿರ್ಮಾಣ ಹಂತದ ಕಟ್ಟಡ ಬಳಿ ತನ್ನ ಮಹಿಳಾ ಸಹೋದ್ಯೋಗಿಗಳ ಜತೆಯಲ್ಲಿಯೇ ತೆರಳುತ್ತಿದ್ದಳು. ಆದರೆ, ಈ ಬಾರಿ ಹೀಗಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎನ್ನುತ್ತಲೇ ತಂದೆ ಕುಸಿದುಬಿದ್ದರು.

    ಶರಣ್ಯಾ ಕಾಂಚೀಪುರಂ ಕೃಷಿ ಅಭಿವೃದ್ಧಿ ಇಲಾಖೆಯ ಗೋದಾಮಿನ ವ್ಯವಸ್ಥಾಪಕರಾಗಿದ್ದರು. ಸರ್ಕಾರದ ಅಡಿಯಲ್ಲಿ ಕಚೇರಿಯ ಆವರಣದಲ್ಲೇ ನಿರ್ಮಾಣ ಆಗುತ್ತಿರುವ ಕಟ್ಟಡಗಳ ಬಳಿ ಶೌಚಕ್ಕೆ ತೆರಳತ್ತಿದ್ದರು. ಸಣ್ಣ ಶೀಟ್​ನಿಂದ ಸೆಪ್ಟಿಕ್​ ಟ್ಯಾಂಕ್​ ಮುಚ್ಚಲಾಗಿತ್ತು ಅದನ್ನು ತೆರೆದು ಪ್ರಕೃತಿ ಕರೆಯನ್ನು ಮುಗಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್​ ಒಳಗೆ ಬಿದ್ದಿದ್ದಾರೆ. ಸುಮಾರು ಅರ್ಧ ಗಂಟೆಯವರೆಗೂ ಶರಣ್ಯಾ ಕಚೇರಿಗೆ ಮರಳದಿದ್ದಾಗ ಅವರು ಸಹೋದ್ಯೋಗಿಗಳು ಚಿಂತಿತರಾಗಿ ಹುಡುಕಾಡಿದ್ದಾರೆ. ಸೆಪ್ಟಿಕ್​ ಟ್ಯಾಂಕ್​ನಲ್ಲಿ ಚಪ್ಪಲಿ ತೇಲುವುದನ್ನು ನೋಡಿ ಆಕೆಯನ್ನು ರಕ್ಷಣೆ ಮಾಡಿ, ತಕ್ಷಣ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಶರಣ್ಯಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಶರಣ್ಯಾ ಸಾವಿಗೆ ರಾಜ್ಯಾದ್ಯಂತ ಕಂಬನಿ ಜತೆಗೆ ಆಕ್ರೋಶವು ವ್ಯಕ್ತವಾಗಿದೆ. ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇರದಿರುವುದು ಸರ್ಕಾರದ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು, ತೀವ್ರ ಟೀಕೆಗಳು ಕೇಳಿಬರುತ್ತಿವೆ. ಹಳೆಯ ಕಚೇರಿಗಳನ್ನು ನವೀಕರಿಸಲು ತಮಿಳುನಾಡು ಸರ್ಕಾರ 90 ಕೋಟಿ ರೂ. ಅನುದಾನ ನೀಡಿದ್ದರೂ ಬಹುತೇಕ ಕಚೇರಿಗಳಲ್ಲಿ ಈಗಲೂ ಮೂಲಸೌಕರ್ಯಗಳು ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದ್ದು, ಕಠಿಣ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಏಳೂರು ರೋಗಕ್ಕೆ ಜಲಮಾಲಿನ್ಯ ಅಥವಾ ಅದೃಶ್ಯ ವೈರಸ್ ಕಾರಣ?

    ಇನ್ನೊಂದೆಡೆ ಕುಟುಂಬ ಪರಿಹಾರ ಹಣಕ್ಕಾಗಿ ಆಗ್ರಹಿಸಿದ್ದು, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಗೃಹ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ಅನಸೂಯ ಈಗ ಸಿಲ್ಕ್; ಸ್ಮಿತಾ ಕುರಿತು ಇನ್ನೊಂದು ಬಯೋಪಿಕ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts