More

    ಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿ

    ತುಮಕೂರು: ಹಾಲಿ ಶಾಸಕರಾಗಿದ್ದವರು ಮರು ಆಯ್ಕೆಯಾದ ಉದಾಹರಣೆ ಇಲ್ಲದ ತೆಂಗಿನ ಸೀಮೆ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ.

    ಈವರೆಗೆ ಯಾರೊಬ್ಬರೂ ಮೂರನೇ ಸಲ ವಿಧಾನಸಭೆ ಪ್ರವೇಶಿಸಿಲ್ಲ. ತಾಲೂಕಿನಲ್ಲಿ ನಾಲ್ಕು ಬಾರಿ ಸಿದ್ದರಾಮ ಜಯಂತಿ ನಡೆದಿದ್ದು, ಇದರ ಬೆನ್ನಲ್ಲೇ ನಡೆದಿರುವ ಚುನಾವಣೆಯಲ್ಲಿ ಶಾಸಕರು ಬದಲಾಗಿರುವ ಸ್ವಾರಸ್ಯವಿದೆ. 1975, 1983, 1997, 2012 ಹಾಗೂ 2023ರಲ್ಲಿ ತಿಪಟೂರಲ್ಲಿ ಅದ್ದೂರಿಯಾಗಿ ಸಿದ್ದರಾಮ ಜಯಂತಿ ನಡೆದಿದೆ.

    ಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿ
    ಕೆ.ಟಿ.ಶಾಂತಕುಮಾರ್

    ಮೇಲ್ನೋಟಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಫೈಟ್ ಎಂದು ಕಾಣಿಸುವ ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಶಕ್ತಿ ವೃದ್ಧಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಅಭ್ಯರ್ಥಿ ಘೋಷಣೆ ತಡವಾಗಿರುವುದು ಅಲ್ಲಿಯೂ ಉತ್ಸಾಹ ಕುಗ್ಗಿಸಿದೆ.

    ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ಬಿಜೆಪಿ ಟಿಕೆಟ್ ಫಿಕ್ಸ್, ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ, ಟೂಡಾ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್ ನಡುವೆ ಜಿದ್ದಾಜಿದ್ದಿಯೇ ಏರ್ಪಟ್ಟಿದೆ. ಜತೆಗೆ ಲೋಕೇಶ್ವರ ಕೂಡ ಕೈ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.

    2018ರ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಕೆ.ಟಿ.ಶಾಂತಕುಮಾರ್ ಕಳೆದ ಐದು ವರ್ಷದಲ್ಲಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಓಡಾಡಿಕೊಂಡು ಕೊನೆಗೆ ಜೆಡಿಎಸ್ ಮನೆಗೆ ಬಂದು ನಿಂತಿದ್ದಾರೆ. ಜೆಡಿಎಸ್ ವರಿಷ್ಠರು ಅಭ್ಯರ್ಥಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ ಸಮುದಾಯಕ್ಕೆ ಒಂದಾದರೂ ಟಿಕೆಟ್ ನೀಡಬೇಕು ಎಂದು ಲಿಂಗಾಯತ ಮತವಿರುವ ಜಿಲ್ಲೆಯ ಇತರ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು ವರಿಷ್ಠರನ್ನು ಒತ್ತಾಯಿಸುತ್ತಿದ್ದು ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪುವ ಒಬ್ಬ ಲಿಂಗಾಯತರಿಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಗಾಳ ಹಾಕಿದರೂ ಆಶ್ಚರ್ಯ ಪಡಬೇಕಿಲ್ಲ.
    2018ರಲ್ಲಿ ಹಾಲಿ ಶಾಸಕರಾಗಿದ್ದರೂ ಕೆ.ಷಡಕ್ಷರಿ ಅವರಿಗೆ ಟಿಕೆಟ್ ತಪ್ಪಿಸಿದ್ದ ಕಾಂಗ್ರೆಸ್, ಪಕ್ಷದ ಸದಸ್ಯರೇ ಅಲ್ಲದ ಬಿ.ನಂಜಾಮರಿ ಅವರಿಗೆ ಟಿಕೆಟ್ ಘೋಷಿಸಿ ಶಾಕ್ ನೀಡಿತ್ತು, ನಂತರ ಸ್ಥಳೀಯರ ಒತ್ತಡಕ್ಕೆ ಮಣಿದು ಷಡಕ್ಷರಿ ಅವರನ್ನೇ ಕಣಕ್ಕಿಳಿಸಿತ್ತು.

    ಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿ
    ಟೂಡಾ ಶಶಿಧರ್

    ಅಂದೇ ಆಕಾಂಕ್ಷಿಯೆಂದು ಘೋಷಿಸಿಕೊಂಡಿದ್ದ ಟೂಡಾ ಶಶಿಧರ್ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಈ ಚುನಾವಣೆಯಲ್ಲಿಯೂ ಟಿಕೆಟ್ ಬಯಸಿದ್ದಾರೆ. ಪಾದಯಾತ್ರೆ, ಮಹಿಳಾ ಆರೋಗ್ಯ ಕಾರ್ಯಕ್ರಮಗಳ ಮೂಲಕ ಹೈಕಮಾಂಡ್ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ, ಕೆ.ಷಡಕ್ಷರಿ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ.

    ಶಿಕ್ಷಣ ಮಂತ್ರಿಯಾಗಿ ರಾಜ್ಯದೆಲ್ಲೆಡೆ ಸುದ್ದಿಯಾಗಿರುವ ಬ್ರಾಹ್ಮಣ ಸಮುದಾಯದ ಬಿ.ಸಿ.ನಾಗೇಶ್‌ಗೆ ಕ್ಷೇತ್ರದಲ್ಲಿ ಜಾತಿಬಲವಿಲ್ಲ. ಆದರೆ, ಎಲ್ಲ ಸಮುದಾಯಗಳೂ ಇವರನ್ನು ಬೆಂಬಲಿಸಿವೆ. ಬಿಎಸ್‌ವೈ ಕಾರಣಕ್ಕೆ ಬಿಜೆಪಿ ಮತಬ್ಯಾಂಕ್ ಆದ ‘ಲಿಂಗಾಯತ’ ಮತಗಳನ್ನೇ ನಂಬಿಕೊಂಡಿರುವ ನಾಗೇಶ್‌ಗೆ ಸಣ್ಣ- ಪುಟ್ಟ ಸಮುದಾಯಗಳ ದೊಡ್ಡ ಬೆಂಬಲ ಹಿಂದಿನ ಚುನಾವಣೆಯಲ್ಲಿ ಜಯ ತಂದುಕೊಟ್ಟಿದೆ.

    ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಷ್ಠಿತ ಕ್ಷೇತ್ರದಲ್ಲಿ ಏರ್ಪಟ್ಟಿರುವ ತ್ರಿಕೋನ ಸ್ಪರ್ಧೆಯಲ್ಲಿ ಬರುವ ದಿನಗಳ ಬದಲಾವಣೆಯನ್ನು ಕಾದುನೋಡಬೇಕಿದೆ.

    ಒಟ್ಟು ಮತದಾರರು: 181387
    ಪುರುಷರು: 88355
    ಮಹಿಳೆಯರು: 93030
    ಇತರೆ: 2

    2008ರ ಚುನಾವಣೆ
    ಅಭ್ಯರ್ಥಿ ಪಕ್ಷ ಪಡೆದಮತ
    ಬಿ.ಸಿ.ನಾಗೇಶ್ ಬಿಜೆಪಿ 46034
    ಕೆ.ಷಡಕ್ಷರಿ ಕಾಂಗ್ರೆಸ್ 39168
    ಬಿ.ನಂಜಾಮರಿ ಜೆಡಿಎಸ್ 18943

    2013
    ಕೆ.ಷಡಕ್ಷರಿ ಕಾಂಗ್ರೆಸ್ 56817
    ಬಿ.ಸಿ.ನಾಗೇಶ್ ಬಿಜೆಪಿ 45215
    ಲೋಕೇಶ್ವರ ಕೆಜೆಪಿ 28667
    ಎಂ.ಲಿಂಗರಾಜು ಜೆಡಿಎಸ್ 6104

    2018
    ಬಿ.ಸಿ.ನಾಗೇಶ್ ಬಿಜೆಪಿ 61383
    ಕೆ.ಷಡಕ್ಷರಿ ಕಾಂಗ್ರೆಸ್ 35820
    ಲೋಕೇಶ್ವರ ಜೆಡಿಎಸ್ 17027
    ಕೆ.ಟಿ.ಶಾಂತಕುಮಾರ್ ಪಕ್ಷೇತರ 13506

    ಜಾತಿವಾರು ಅಂಕಿ, ಅಂಶ(ಅಂದಾಜು)
    ಲಿಂಗಾಯತರು 61000
    ಪರಿಶಿಷ್ಟ ಜಾತಿ 25000
    ಕುರುಬರು 23000
    ಒಕ್ಕಲಿಗರು 18000
    ಮುಸ್ಲಿಂರು 15000
    ಕಾಡುಗೊಲ್ಲರು 10000
    ಪರಿಶಿಷ್ಟ ಪಂಗಡ 12000
    ಇತರ 17387

    ಪ್ಲಸ್ ಮೈನಸ್

    ಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿ
    ಬಿ.ಸಿ.ನಾಗೇಶ್
    +ಸಚಿವರಾಗಿ ಮಾಡಿರುವ ಅಭಿವೃದ್ಧಿ ಕಾರ್ಯ
    +ಸಂಘ, ಪಕ್ಷನಿಷ್ಠ ನಾಯಕ
    +ಸಣ್ಣ, ಪುಟ್ಟ ಸಮುದಾಯಗಳ ಬಲ
    -ಜಿಲ್ಲಾ ಕೇಂದ್ರ ಘೋಷಣೆಗೆ ಸಿಗದ ಮನ್ನಣೆ
    -ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಬರದ ಸರ್ಕಾರ
    -ಪಠ್ಯ ಪುಸ್ತಕ, ಹಿಜಾಬ್ ವಿವಾದ

    ಪುನಾರಾಯ್ಕೆ ಇತಿಹಾಸವಿಲ್ಲದ ತಿಪಟೂರು; ಸಚಿವ ಬಿ.ಸಿ.ನಾಗೇಶ್‌ಗೆ ಕಾಂಗ್ರೆಸ್ ಎದುರಾಳಿ

    ಕೆ.ಷಡಕ್ಷರಿ
    +ಲಿಂಗಾಯತರ ಮತವೇ ಹೆಚ್ಚಿರುವುದು
    +ಪೂರಕ ಜಾತಿ ಸಮೀಕರಣ
    +ಕಾಂಗ್ರೆಸ್ ಕಾರ್ಯಕರ್ತರ ಪಡೆ
    -ಟಿಕೆಟ್ ಇನ್ನೂ ಖಚಿತವಾಗಿಲ್ಲ
    -ಯುವಕರಿಗೆ ಆದ್ಯತೆ ನೀಡಬೇಕು ಎಂಬ ಕೂಗು
    -ಸಾಂಪ್ರದಾಯಿಕ ರೀತಿಯ ರಾಜಕಾರಣ

    ಪಕ್ಷಗಳ ಸಿದ್ಧತೆ
    ಬಿಜೆಪಿ 
    *ಸಚಿವರಾಗಿ ಅನುದಾನದ ಹರಿವು
    *ಮನೆಮನೆಗಳಲ್ಲಿ ವಿಜಯ ಸಂಕಲ್ಪ ಅಭಿಯಾನ
    *ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರ ಸಭೆ
    ಕಾಂಗ್ರೆಸ್
    *ಭಾರತ್ ಜೋಡೋ ಯಾತ್ರೆ
    *ಪಠ್ಯ ಪುಸ್ತಕ ವಿವಾದ ಖಂಡಿಸಿ ಪಾದಯಾತ್ರೆ
    *ಹೋಬಳಿ ಕೇಂದ್ರದಲ್ಲಿ ನಮ್ಮ ಆರೋಗ್ಯ ಕೇಂದ್ರ
    ಜೆಡಿಎಸ್
    *ಕೆ.ಟಿ.ಶಾಂತಕುಮಾರ್ ಸಂಘಟನೆ ಬಲ
    *ಎಚ್‌ಡಿಕೆ, ಸಿಎಂ ಇಬ್ರಾಹಿಂ ನೇತೃತ್ವದ ಸಭೆ
    *ಅನ್ಯ ಪಕ್ಷಗಳಿಂದ ಸ್ಥಳೀಯ ಮುಖಂಡರಿಗೆ ಗಾಳ

    ‘ಪಂಚ’ರಿಗೂ ಹ್ಯಾಟ್ರಿಕ್ ಸಾಧನೆ ಮಾಡಲಾಗಿಲ್ಲ! ತಿಪಟೂರು ರಾಜಕೀಯ ಇತಿಹಾಸದಲ್ಲಿಯೇ ಯಾರೊಬ್ಬ ಶಾಸಕರೂ ಮೂರು ಸಲ ಗೆದ್ದಿಲ್ಲ. ಶಿವಪ್ಪ, ಮಂಜುನಾಥ್, ಬಿ.ನಂಜಾಮರಿ, ಕೆ.ಷಡಕ್ಷರಿ ಹಾಗೂ ಬಿ.ಸಿ.ನಾಗೇಶ್ ಮಾತ್ರ ಎರಡೂ ಸಲ ವಿಧಾನಸಭೆ ಪ್ರತಿನಿಧಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿರುವ ಬಿ.ಸಿ.ನಾಗೇಶ್, ಕೆ.ಷಡಕ್ಷರಿ ಅವರಿಗೆ ಮಾತ್ರ ಮೂರನೇ ಸಲ ವಿಧಾನಸಭೆ ಪ್ರವೇಶಿಸಲು ಅವಕಾಶವಿದ್ದು ಅದೃಷ್ಟ ಕೈಹಿಡಿಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts