More

    ಇಂದು ಭಾರತ-ವಿಂಡೀಸ್ ಮೊದಲ ಟಿ20, ಕೋಲ್ಕತದಲ್ಲಿ ಕಾದಾಟ

    ಕೋಲ್ಕತ: ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ತೋರುವ ಮೂಲಕ ಬೀಗಿದ್ದ ಭಾರತ ತಂಡ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಾಗಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ ನಡೆಯಲಿದೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಬಳಗಕ್ಕೆ ಈ ಸರಣಿ ಮಹತ್ವದ್ದಾಗಿದೆ.

    ವಿಂಡೀಸ್ ತಂಡ ಏಕದಿನ ಸರಣಿಯಲ್ಲಿ ಸುಲಭ ತುತ್ತಾಗಿದ್ದರೂ, ಟಿ20 ಸರಣಿಯಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಪ್ರವಾಸಕ್ಕೆ ಮುನ್ನ ತವರಿನಲ್ಲಿ ವಿಶ್ವ ನಂ. 1 ಟಿ20 ತಂಡವಾದ ಇಂಗ್ಲೆಂಡ್ ವಿರುದ್ಧ ಸರಣಿ ಜಯಿಸಿದ ವಿಶ್ವಾಸದಲ್ಲಿರುವ ವಿಂಡೀಸ್, ಈಗಾಗಲೆ ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಅವಕಾಶ ಪಡೆದಿರುವ ಟಿ20 ತಜ್ಞ ಆಟಗಾರರನ್ನು ಒಳಗೊಂಡಿದೆ. 2016ರಲ್ಲಿ ತಾನು 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಮೈದಾನದಲ್ಲಿ ವಿಂಡೀಸ್, ಪ್ರಬಲ ಪೈಪೋಟಿ ಒಡ್ಡುವ ಲೆಕ್ಕಾಚಾರದಲ್ಲಿದೆ.

    ಟಿ20 ವಿಶ್ವಕಪ್‌ಗೆ ಇನ್ನು 8 ತಿಂಗಳಷ್ಟೇ ಬಾಕಿ ಉಳಿದಿದ್ದು, ಕಳೆದ ವರ್ಷ ಯುಎಇಯಲ್ಲಿ ತಂಡದ ಆಯ್ಕೆಯ ವೇಳೆ ಕೆಲ ಪ್ರಯೋಗಗಳನ್ನು ಮಾಡಿ ಕೈಸುಟ್ಟುಕೊಂಡಿದ್ದ ಭಾರತ ಈ ಬಾರಿ ಅದರಿಂದ ಪಾಠ ಕಲಿಯಬೇಕಿದೆ. ಕಳೆದ 4 ವರ್ಷಗಳಿಂದ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯಜುವೇಂದ್ರ ಚಾಹಲ್‌ರನ್ನು ಕೈಬಿಟ್ಟು ವರುಣ್ ಚಕ್ರವರ್ತಿ, ರಾಹುಲ್ ಚಹರ್ ಮುಂತಾದ ಅನನುಭವಿ ಸ್ಪಿನ್ನರ್‌ಗಳೊಂದಿಗೆ ಆಡಿದ್ದ ಭಾರತ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಹೀಗಾಗಿ ಈ ಬಾರಿ ಪ್ರಯೋಗಗಳಿಗೆ ಬದಲಾಗಿ, ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ಸಂಭಾವ್ಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ನಾಯಕ ರೋಹಿತ್ ಶರ್ಮ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ನಾಯಕರಾಗಿರುವ ರೋಹಿತ್ ಶರ್ಮ, ಪೂರ್ಣ ಪ್ರಮಾಣದಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ಅಲ್ಪ ಅವಧಿಯಲ್ಲೇ ಕೆಲ ಜಾಣ್ಮೆಯ ನಡೆಗಳಿಂದ ಗಮನಸೆಳೆದಿದ್ದಾರೆ. ಮಧ್ಯಮ ಕ್ರಮಂಕದ ಬ್ಯಾಟರ್‌ಗಳು ಮತ್ತು ಬೌಲಿಂಗ್ ಕಾಂಬಿನೇಷನ್ ಗುರುತಿಸುವುದು ಈಗ ಅವರ ಮುಂದಿರುವ ಪ್ರಮುಖ ಸವಾಲಾಗಿದೆ.

    *ಪಂದ್ಯ ಆರಂಭ: ರಾತ್ರಿ 7.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    *ಮುಖಾಮುಖಿ: 17
    ಭಾರತ: 10
    ವೆಸ್ಟ್ ಇಂಡೀಸ್: 6
    ರದ್ದು: 1

    4: ಭಾರತ ತಂಡ ಕೋಲ್ಕತದಲ್ಲಿ ಇದುವರೆಗೆ 4 ಟಿ20 ಪಂದ್ಯ ಆಡಿದ್ದು, 3ರಲ್ಲಿ ಗೆದ್ದಿದ್ದು, 1ರಲ್ಲಿ ಸೋತಿದೆ.

    *ಐಪಿಎಲ್ 2 ತಿಂಗಳು ಮಾತ್ರ ನಡೆಯುತ್ತದೆ. ವರ್ಷದ ಉಳಿದ 10 ತಿಂಗಳು ನಾವು ಭಾರತ ಪರ ಆಡುತ್ತಿರುತ್ತೇವೆ. ಐಪಿಎಲ್ ಹರಾಜು ಮುಗಿಯಿತು. ಇನ್ನೀಗ ಮತ್ತೆ ನೀಲಿ ಬಣ್ಣದ ಜೆರ್ಸಿಯತ್ತ ಗಮನಹರಿಸಬೇಕಾಗಿದೆ. ಆಟಗಾರರು ಐಪಿಎಲ್‌ನಲ್ಲಿ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಟೀಮ್ ಇಂಡಿಯಾ ಪರ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದೇ ಮುಖ್ಯವಾದುದು.
    | ರೋಹಿತ್ ಶರ್ಮ, ಭಾರತ ತಂಡದ ನಾಯಕ

    ಟೀಮ್ ನ್ಯೂಸ್:

    ಭಾರತ: ಕನ್ನಡಿಗ ಕೆಎಲ್ ರಾಹುಲ್ ಗೈರಿನಲ್ಲಿ, ಐಪಿಎಲ್ ಹರಾಜಿನಲ್ಲಿ ₹15.25 ಕೋಟಿಗೆ ಮುಂಬೈ ತಂಡಕ್ಕೆ ಮರಳಿರುವ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಕಳೆದ ಐಪಿಎಲ್‌ನ ಟಾಪ್ ಸ್ಕೋರರ್ ಋತುರಾಜ್ ಗಾಯಕ್ವಾಡ್ ಅವಕಾಶಕ್ಕೆ ಇನ್ನಷ್ಟು ಕಾಯಬೇಕಾಗಬಹುದು. ವಾಷಿಂಗ್ಟನ್ ಸುಂದರ್ ಗಾಯದಿಂದ ಸರಣಿಗೆ ಅಲಭ್ಯರಾಗಿರುವುದರಿಂದ ಚಾಹಲ್ ಜತೆಗೆ ಎಡಗೈ ಸ್ಪಿನ್ನರ್ ಕುಲದೀಪ್ ಸ್ಪಿನ್ ವಿಭಾಗದ ಜವಾಬ್ದಾರಿ ಪಡೆಯಬಹುದು. ವೆಂಕಟೇಶ್ ಅಯ್ಯರ್, ದೀಪಕ್ ಹೂಡಾರನ್ನು ಆಡಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ಹರ್ಷಲ್ ಪಟೇಲ್/ಶಾರ್ದೂಲ್, ಕುಲದೀಪ್/ರವಿ ಬಿಷ್ಣೋಯಿ, ಮೊಹಮದ್ ಸಿರಾಜ್, ಚಾಹಲ್, ಆವೇಶ್ ಖಾನ್.

    ವೆಸ್ಟ್ ಇಂಡೀಸ್: ಗಾಯದಿಂದಾಗಿ ಕೊನೇ 2 ಏಕದಿನ ಪಂದ್ಯ ತಪ್ಪಿಸಿಕೊಂಡಿದ್ದ ನಾಯಕ ಕೈರಾನ್ ಪೊಲ್ಲಾರ್ಡ್ ಟಿ20 ಸರಣಿಗೆ ಫಿಟ್ ಆಗುವ ನಿರೀಕ್ಷೆ ಇದೆ. ಜೇಸನ್ ಹೋಲ್ಡರ್, ಒಡೇನ್ ಸ್ಮಿತ್, ಅಕೀಲ್ ಹೊಸೀನ್ ಮುಂತಾದವರು ವಿಂಡೀಸ್ ಟಿ20 ತಂಡದ ಎಕ್ಸ್-ಫ್ಯಾಕ್ಟರ್ ಆಗಿದ್ದಾರೆ.

    ಸಂಭಾವ್ಯ ತಂಡ: ಕೈಲ್ ಮೇಯರ್ಸ್‌, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್ (ವಿ.ಕೀ), ಕೈರಾನ್ ಪೊಲ್ಲಾರ್ಡ್ (ನಾಯಕ), ರೊವ್ಮನ್ ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಫ್ಯಾಬಿಯನ್ ಅಲೆನ್, ಒಡೇನ್ ಸ್ಮಿತ್, ಅಕೀಲ್ ಹೊಸೀನ್, ಶೆಲ್ಡನ್ ಕಾಟ್ರೆಲ್.

    ಪಂತ್ ಹಂಗಾಮಿ ಉಪನಾಯಕ
    ಭಾರತ ಸೀಮಿತ ಓವರ್ ತಂಡದ ಉಪನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಹಂಗಾಮಿ ಉಪನಾಯಕರನ್ನಾಗಿ ಬಿಸಿಸಿಐ ನೇಮಿಸಿದೆ.

    ಪ್ರೇಕ್ಷಕರಿಗೆ ಪ್ರವೇಶವಿಲ್ಲ
    ಬಂಗಾಳ ಸರ್ಕಾರ ಶೇ. 75 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿರುವುದರಿಂದ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ ನೀಡಬೇಕೆಂದು ಆತಿಥೇಯ ಬಂಗಾಳ ಕ್ರಿಕೆಟ್ ಸಂಸ್ಥೆ ಮನವಿ ಸಲ್ಲಿಸಿದ್ದರೂ, ಬಿಸಿಸಿಐ ಅದನ್ನು ತಿರಸ್ಕರಿಸಿದೆ. ಸರಣಿಗೆ ಸುರಕ್ಷಿತ ಬಯೋಬಬಲ್ ಕಾಪಾಡಿಕೊಳ್ಳುವ ಸಲುವಾಗಿ ಬಿಸಿಸಿಐ, ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಿದೆ. ಈ ಮುನ್ನ ಅಹಮದಾಬಾದ್‌ನಲ್ಲಿ ನಡೆದ ಏಕದಿನ ಸರಣಿಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ.

    ಇಬ್ಬನಿ ಸಮಸ್ಯೆ ಭೀತಿ
    ಈಡನ್ ಗಾರ್ಡನ್ ಮೈದಾನದಲ್ಲಿ ಇಬ್ಬನಿ ಸಮಸ್ಯೆ ಕಾಡುವ ಭೀತಿ ಇದೆ. ಆಗ ಚೇಸಿಂಗ್ ಸುಲಭವಾಗಲಿದೆ ಮತ್ತು ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. 5 ದಿನಗಳ ಅಂತರದಲ್ಲಿ ನಡೆಯಲಿರುವ 3 ಪಂದ್ಯಗಳಿಗೆ 4 ಪಿಚ್ ಸಿದ್ಧಗೊಳಿಸಲಾಗಿದೆ.

    ಕೊಹ್ಲಿ ಪರ ರೋಹಿತ್ ಬ್ಯಾಟಿಂಗ್
    ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕಳವಳ ಪಡಬೇಕಾದ ಅಗತ್ಯವಿಲ್ಲ. ಅವರ ಬಗ್ಗೆ ಅತಿಯಾಗಿ ಮಾತನಾಡುವುದನ್ನು ನಿಲ್ಲಿಸಿದರೆ, ಅವರ ಬ್ಯಾಟ್‌ನಿಂದ ತಾನಾಗಿಯೇ ಸಾಕಷ್ಟು ರನ್ ಹರಿಯಲಿದೆ ಎಂದು ಹೊಸ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ದಶಕಕ್ಕೂ ಹೆಚ್ಚು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ಒತ್ತಡ ನಿಭಾಯಿಸುವುದು ಗೊತ್ತಿದೆ. ಅವರ ಮೇಲೆ ಅನಗತ್ಯ ಒತ್ತಡ ಹೇರಬೇಕಿಲ್ಲ ಎಂದು ಹೇಳಿದ್ದಾರೆ.

    30: ಟಿ20 ಕ್ರಿಕೆಟ್ ರನ್ ಗಳಿಕೆಯಲ್ಲಿ ಸದ್ಯ ವಿರಾಟ್ ಕೊಹ್ಲಿ (3227) ಮತ್ತು ರೋಹಿತ್ ಶರ್ಮ (3197) ನಡುವೆ ಕೇವಲ 30 ರನ್ ಅಂತರವಿದೆ. ಕೊಹ್ಲಿ 73 ಮತ್ತು ರೋಹಿತ್ 103 ರನ್ ಗಳಿಸಿದರೆ, ಮಾರ್ಟಿನ್ ಗುಪ್ಟಿಲ್ (3299) ಅವರನ್ನು ಹಿಂದಿಕ್ಕಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗರಿಷ್ಠ ರನ್ ಸ್ಕೋರರ್ ಎನಿಸಲಿದ್ದಾರೆ.

    ಸುರೇಶ್ ರೈನಾರನ್ನು ಕೈಬಿಟ್ಟಿದ್ದಕ್ಕೆ ಕಾರಣ ವಿವರಿಸಿದ ಚೆನ್ನೈ ಸೂಪರ್‌ಕಿಂಗ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts