More

    ತಿಹಾರ್ ಜೈಲು ಕೋಲಾಹಲ; ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಕೈ ನಾಯಕರು

    ಬೆಂಗಳೂರು: ಡಿ.ಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.
    ಸಂಸದ ಡಿ.ಕೆ ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾಗ ಅಮಿತ್ ಶಾಗೆ ಮನವಿ ಮಾಡಿದ್ದಾರೆ ಅನ್ನಿಸುತ್ತದೆ. ಡಿ.ಕೆ ಶಿವಕುಮಾರ್‌ರನ್ನ ತಿಹಾರ್ ಜೈಲಿಗೆ ಕಳಿಸಿ ಎಂದು ಬಹುಶಃ ಇವರೇ ರಿಕ್ವೆಸ್ಟ್ ಮಾಡಿಕೊಂಡು ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ ಎಂದರು.
    ಇವರ ದಾಖಲೆಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ಧರಾಗಿದ್ದೇವೆ ಎಂದ ಸುರೇಶ್, ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ಎಕ್ಸ್‌ಪರ್ಟ್. ಇವರು ಯಾವ ಯಾವ ಸಂದರ್ಭದಲ್ಲಿ ಯಾರ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಿದೆ. ಇವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವವರು ಎಂದರು.
    ಮಂಡ್ಯದ ಜನರೇ ಜೆಡಿಎಸ್‌ನವರನ್ನು ತಿರಸ್ಕಾರ ಮಾಡಿದ್ದರು. ನಾವು ಮೈತ್ರಿ ಧರ್ಮಪಾಲನೆ ಮಾಡಿದ್ದೇವೆ ತಿರಸ್ಕರಿಸಿಲ್ಲ. ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಏನು ಸಹಕಾರ ಕೊಡಬೇಕೊ ಕೊಟ್ಟಿದ್ದರು. ಯಾಕೆ ಸೋಲಿಸಿದರು ಎಂದು ಮಂಡ್ಯದ ಜನರನ್ನೇ ಕೇಳಬೇಕು. ಈಗ ಬಂದು ನಮ್ಮನ್ನು ಕೇಳಿದರೆ ಹೇಗೆ ? ಎಂದು ವಾಗ್ದಾಳಿ ನಡೆಸಿದರು.
    ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಈಗ ಜೆಡಿಎಸ್ ಪಕ್ಷ ನಿರ್ನಾಮ ಆಗುತ್ತಿದೆ. ಹಾಗಾಗಿ ಕಾರ್ಯಕರ್ತರನ್ನ ಉಳಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಅವರು ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕಿದೆ. ಪಕ್ಷವನ್ನು ಸರಿಯಾಗಿ ನಿರ್ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದು ಕುಮಾರಸ್ವಾಮಿ ಸ್ವಯಂಕೃತ ಅಪರಾಧ. ಏಕಾಏಕಿ ತೀರ್ಮಾನ ಮಾಡಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲು ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದರು.
    ತಿಹಾರ್ ಜೈಲಿಗೆ ಕಳುಹಿಸುವ ಶಕ್ತಿ ಕುಮಾರಸ್ವಾಮಿಯವರಿಗಿದೆಯೇ? ಅವರೇನು ಜಡ್ಜಾ ಎಂದು ಸಚಿವ ರಾಜಣ್ಣ ಹೇಳಿದರು.
    ಶಾಸಕ ಶಿವಲಿಂಗೇಗೌಡ ಮಾತನಾಡಿ, ಯಾಕೋ ಕುಮಾರಸ್ವಾಮಿ ಮತ್ತೆ ಡಿಸಿಎಂ ಮೇಲೆ ಬಿದ್ದುಬಿಟ್ಟಿದ್ದಾರೆ. ಜೈಲಿಗೆ ಹಾಕಬೇಕೆಂದೋ ಏನೋ ಬಿಜೆಪಿ ಸಖ್ಯ ಬೆಳೆಸಿದರು ಎಂದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
    ಮೈತ್ರಿ ಸರ್ಕಾರ ಉಳಿಸಲು ಡಿ.ಕೆ ಶಿವಕುಮಾರ್‌ಸಾಕಷ್ಟು ಪ್ರಯತ್ನ ಮಾಡಿದರು. ಆ ಸರ್ಕಾರ ಹೇಗೆ ಬಿದ್ದು ಹೋಯಿತೆಂದು ಎಲ್ಲರಿಗೂ ಗೊತ್ತಿದೆ. ಅವರವರ ಪಾಪದ ಹೊರೆಯನ್ನು ಅವರೇ ಹೊರಬೇಕು. ಪಾಪದ ಹೊರೆಯನ್ನು ಡಿಕೆಶಿ ಮೇಲೆ ಹೊರಿಸುವುದು ಬೇಡವೆಂದರು.
    ಸಚಿವ ಚೆಲುವರಾಯ ಸ್ವಾಮು ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಗೆ ರಾತ್ರಿ 3 ಗಂಟೆಗೆ ಕನಸು ಬಿದ್ದಿತ್ತಾ, ಇಲ್ಲ ರಾತ್ರಿ 10 ಗಟೆಗೆ ಬಿದ್ದ ಕನಸಾ? ಡಿಸಿಎಂ ಬಗ್ಗೆ ಲಘುವಾಗಿ ಮಾತನಾಡಿದರೆ ಏನು ಲಾಭ ಸಿಗುತ್ತೋ ಎಂದು ಕುಟುಕಿದರು.

    ದೇವೇಗೌಡರ ಮಗನಾಗಿ ಹಾಗೆ ಮಾತನಾಡುವುದು ಸರಿಯಲ್ಲ. ಇವರು ಗೆಲ್ಲುವುದಕ್ಕಾಗಿ ಹೋರಾಟ ಮಾಡಲ್ಲ, ಸೋಲಿಸುವುದಕ್ಕೆ ಹೋರಾಟ ಮಾಡುತ್ತಾರೆ.
    – ಚೆಲುವರಾಯಸ್ವಾಮಿ, ಸಚಿವ

    ಒಕ್ಕಲಿಗ ಸಮಾಜದ ಮತಗಳನ್ನು ಡಿಕೆಶಿ ಸೆಳೆದುಕೊಂಡು ತಾವೆಲ್ಲಿ ಝೀರೋ ಆಗಿಬಿಡುತ್ತೀವಾ ಎಂದು ಆತಂಕ ಇದೆ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ.
    – ಶಿವಲಿಂಗೇಗೌಡ, ಅರಸೀಕೆರೆ ಶಾಸಕ

    ಇವರ ಕನಸು ನನಸಾಗುವುದಿಲ್ಲ. ಕನಸು ಕನಸಾಗಿಯೇ ಉಳಿಯುತ್ತದೆ. ಜೆಡಿಎಸ್ ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ.
    – ಡಿ.ಕೆ ಸುರೇಶ್, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts