More

    ರಾಜ್ಯ ಚುನಾವಣೆಗೆ ಭದ್ರಕೋಟೆ: ಅರೆಸೇನಾ ಪಡೆಗಳಿಗೆ ಹೆಚ್ಚಿದ ಬೇಡಿಕೆ; ಗದ್ದಲ, ಹಿಂಸಾಚಾರದ ಭೀತಿ

    | ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

    ವರ್ಷದ ಆರಂಭದಿಂದಲೇ ರಾಜ್ಯ ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿ ಶುರುವಾಗಿದೆ. ಕೆಲವೆಡೆ ಅಹಿತಕರ ಘಟನೆಗಳು ವರದಿಯಾಗಿವೆ. ಈ ಬಾರಿಯದ್ದು ಹೈ ವೋಲ್ಟೇಜ್ ಚುನಾವಣೆಯಾಗಲಿರುವ ಕಾರಣಕ್ಕೆ ಗಲಾಟೆ, ದೊಂಬಿ, ಹಿಂಸಾಚಾರ ಪ್ರಕರಣಗಳು ಹೆಚ್ಚಾಗುವ ಬಗ್ಗೆ ಅಂದಾಜು ಮಾಡಿರುವ ಪೊಲೀಸ್ ಇಲಾಖೆ, ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಜತೆಗೆ, ಸಮಾಜಘಾತುಕ ಶಕ್ತಿಗಳ ಮೇಲೆ ಕಣ್ಗಾವಲಿರಿಸಿದ್ದು, ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಈಗಾಗಲೇ ರಾಜಕೀಯ ಪಕ್ಷಗಳು ಪ್ರಚಾರ ಶುರುಮಾಡಿದ್ದು, ದೊಡ್ಡ ದೊಡ್ಡ ಕಾರ್ಯಕ್ರಮಗಳು, ಕ್ರೀಡಾಕೂಟ, ಭೋಜನಕೂಟ ಸೇರಿ ಹಲವು ರೀತಿಯಲ್ಲಿ ಜನರನ್ನು ಸೇರಿಸಿ ಸೆಳೆಯುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಹೀಗಾಗಿಯೇ ಪೊಲೀಸರ ಬೇಕಾಬಿಟ್ಟಿ ರಜೆಗೆ ಕಡಿವಾಣ ಹಾಕಲಾಗಿದೆ. ಮಾರ್ಚ್ 1ರಿಂದ ಸ್ವಂತ ಮದುವೆ, ವೈದ್ಯಕೀಯ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ರಜೆ ಪಡೆಯಬೇಕು, ಅನಗತ್ಯ ರಜೆಗಳನ್ನು ಪಡೆಯಬಾರದು ಎಂದು ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಜನವರಿ ಕೊನೆಯ ವಾರದಿಂದಲೇ ಎಲ್ಲ ಜಿಲ್ಲೆಗಳಲ್ಲಿರುವ ರೌಡಿಶೀಟರ್​ಗಳಿಗೆ ಮತ್ತು ಸಮಾಜಘಾತುಕರಿಗೆ ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ. ರೌಡಿಗಳು, ಚುನಾವಣೆ ಗಲಾಟೆ, ಹಿಂಸಾಚಾರಗಳಲ್ಲಿ ಭಾಗಿಯಾಗಿರುವ ಆರೋಪಿಗಳು, ಅಪರಾಧಿಗಳನ್ನು ತಹಸೀಲ್ದಾರ್​ಗಳ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಪಡೆಯುವ ಕಾರ್ಯವನ್ನು (ಬಾಂಡ್ ಓವರ್) ಚುರುಕುಗೊಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ರೌಡಿಗಳು ಬಾಂಡ್​ಒವರ್ ಪ್ರಕ್ರಿಯೆಗೆ ಒಳಪಟ್ಟಿದ್ದಾರೆನ್ನಲಾಗಿದೆ. ಇದಲ್ಲದೆ, ಪರವಾನಗಿ ಪಡೆದಿರುವ ಗನ್, ಪಿಸ್ತೂಲ್​ಗಳನ್ನು ಆಯಾ ಪೊಲೀಸ್ ಠಾಣೆಗಳಿಗೆ ಒಪ್ಪಿಸುವಂತೆ ವಾರಸುದಾರರಿಗೆ ಸೂಚನೆ ನೀಡುತ್ತಿದ್ದಾರೆ. ಚುನಾವಣೆ ಅಧಿಸೂಚನೆಯೊಳಗೆ ಈ ಕೆಲಸಗಳನ್ನು ಪೂರ್ಣಗೊಳಿಸಲು ಆಯಾ ಠಾಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

    ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ: ಚಾಲನೆ ನೀಡಿ ಗಂಭೀರ ವಿಚಾರಗಳನ್ನು ತೆರೆದಿಟ್ಟ ನಟ ಧನಂಜಯ್

    ಮತದಾನ ಹಂತ ಎಷ್ಟು ಎಂಬುದು ಖಚಿತವಾಗಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲೂ ಏಕಕಾಲಕ್ಕೆ ಮತದಾನ ನಡೆದರೆ ಹೆಚ್ಚು ಪೊಲೀಸ್ ಬಲ ಬೇಕಾಗಲಿದೆ. ಕ್ಷೇತ್ರವಾರು ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮವಾದವುಗಳನ್ನು ಗುರುತಿಸಿ ಪೊಲೀಸರ ಹೆಚ್ಚು ನಿಗಾ ವಹಿಸಲಿದ್ದಾರೆ.

    ಸ್ಥಳೀಯ ಪೊಲೀಸ್ ಬಲದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರೀಯ ಮೀಸಲು ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ತುಕಡಿ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್, ಆರ್​ಎಎಫ್ ಯೋಧರು ರಾಜ್ಯಕ್ಕೆ ಬರಲಿದ್ದಾರೆ. ಆಯಾ ಜಿಲ್ಲೆಯಲ್ಲಿ ಹಿಂದಿನ ಚುನಾವಣೆ ವೇಳೆ ನಿಯೋಜನೆಯಾಗಿದ್ದ ಈ ಅರೆಸೇನಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬೇಡಿಕೆ ಸಲ್ಲಿಕೆಯಾಗಿದೆ. ಹೊರ ರಾಜ್ಯಗಳ ಮೀಸಲು ಪಡೆ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಯೂ ಬಂದೋಬಸ್ತ್​ಗೆ ನಿಯೋಜನೆಗೊಳ್ಳಲಿದ್ದಾರೆ.

    ಅಹಿತಕರ ಘಟನೆಗಳಾಗಬಾರದೆಂಬ ಕಾರಣಕ್ಕೆ ಕೆಲವು ರೌಡಿಗಳನ್ನು ಗಡಿಪಾರು ಮಾಡುವಂತೆ ಸಹಾಯಕ ವಿಭಾಗಾಧಿಕಾರಿಗಳಿಗೆ (ಎಸಿ) ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣೆ ಘೊಷಣೆಯೊಳಗೆ ಗಡಿಪಾರು ಪ್ರಸ್ತಾವನೆಗಳು ಇತ್ಯರ್ಥವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕ್ರೀಡಾಕೂಟದ ಮೇಲೂ ಕಣ್ಣು
    ಯುವ ಸಮೂಹವನ್ನು ಸೆಳೆಯಲು ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಎಲ್ಲ ಪಕ್ಷದ ಯುವಕರು ಭಾಗವಹಿಸುವ ಕಾರಣಕ್ಕೆ ಕಿತ್ತಾಟ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಇಬ್ಬರು ಅಮಾಯಕ ಯುವಕರನ್ನು ಕೊಲೆ ಮಾಡಲಾಗಿತ್ತು. ಇದರಿಂದಾಗಿ ಎಚ್ಚೆತ್ತಿರುವ ಬೆಂಗಳೂರು ಜಿಲ್ಲೆ ಎಸ್​ಪಿ ಚುನಾವಣೆ ಮುಗಿಯುವವರೆಗೂ ರಾಜಕೀಯಪ್ರೇರಿತ ಕ್ರಿಕೆಟ್, ವಾಲಿಬಾಲ್, ಕಬ್ಬಡಿ, ಖೋಖೋ ಇನ್ನಿತರ ಕ್ರೀಡಾಕೂಟಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರೆ. ಅನುಮತಿ ಇಲ್ಲದೆ ಆಯೋಜಿಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಠಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    229ಎ ಬ್ರಹ್ಮಾಸ್ತ್ರ
    ಜಾಮೀನುರಹಿತ ವಾರಂಟ್ (ನಾನ್ ಬೇಲ್​ಬಲ್ ವಾರಂಟ್- ಎನ್​ಬಿಡಬ್ಲ್ಯು) ಅಸಾಮಿಗಳ ವಿರುದ್ಧ ಪೊಲೀಸರು ಬ್ರಹ್ಮಾಸ್ತ್ರ ಹೂಡಿದ್ದಾರೆ. ಆರೋಪಿ ಜಾಮೀನಿನ ಮೇಲೆ ಹೊರಬಂದ ಬಳಿಕ ವಿಚಾರಣೆಗೆ ಹಾಜರಾಗದಿದ್ದರೆ ಕೋರ್ಟ್ ಎನ್​ಬಿಡಬ್ಲ್ಯು ಹೊರಡಿಸುತ್ತದೆ. ಅಂಥವರನ್ನು ಕರೆತಂದು ಕೋರ್ಟಿಗೆ ಹಾಜರುಪಡಿಸುತ್ತಿದ್ದ ಪೊಲೀಸರು ಈಗ ಐಪಿಸಿ 229ಎ ಅನ್ವಯ ಕೇಸ್ ದಾಖಲಿಸುತ್ತಿದ್ದಾರೆ. ಈ ಹಿಂದೆ ನಿದೋಷಿ ಎಂದಾಗಿದ್ದರೂ, ಈ ಸೆಕ್ಷನ್ ಅನ್ವಯ ಶಿಕ್ಷೆ ಖಚಿತ ಎನ್ನುತ್ತಾರೆ ಪೊಲೀಸರು.

    ಪೊಲೀಸ್ ನಡೆ ಚರ್ಚೆಗೆ ಗ್ರಾಸ
    ವಿಧಾನಸಭಾ ಚುನಾವಣೆ ವರ್ಷವಾದ 2023ರ ಜನವರಿಯಲ್ಲಿಯೇ ರೌಡಿಪಟ್ಟಿಯಿಂದ 7,361 ಮಂದಿಯನ್ನು ಕೈಬಿಟ್ಟಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ವರ್ಷದಲ್ಲಿ ಸಮಾಜಘಾತುಕ ಶಕ್ತಿಗಳು ಮತ್ತು ಅಪರಾಧ ಹಿನ್ನೆಲೆಯುಳ್ಳವರನ್ನು ಕೋರ್ಟ್ ಅನುಮತಿ ಪಡೆದು ಬಂಧಿಸಿ ಜೈಲಿಗೆ ಕಳುಹಿಸುವುದು ಅಥವಾ ಗಡಿಪಾರು ಮಾಡುವುದು ಸಾಮಾನ್ಯ. ಆದರೆ, ಒಂದೇ ತಿಂಗಳಲ್ಲಿ 7,361 ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಟ್ಟಿರುವುದು ಕುತೂಹಲ ಕೆರಳಿಸಿದ್ದು, ಇದು ಮತದಾರರ ಮೇಲೆ ಪ್ರಭಾವ ಬೀರಬಹುದೇ ಎಂಬ ಕಳವಳವೂ ವ್ಯಕ್ತವಾಗಿದೆ.

    ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗಾಗಿ ಕಾನೂನು ಸುವ್ಯವಸ್ಥೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಪ್ಯಾರಾ ಮಿಲಿಟರಿ ಪಡೆಗಳ ಯೋಧರು ಬಂದೋಬಸ್ತ್​ಗೆ ನಿಯೋಜನೆಗೊಳ್ಳಲಿದ್ದಾರೆ.

    | ಜಿಆರ್​ಜೆ ದಿವ್ಯಾಪ್ರಭು ಚಿತ್ರದುರ್ಗ ಜಿಲ್ಲಾಧಿಕಾರಿ

    ಆರ್ಥಿಕ ಬಿಕ್ಕಟ್ಟಿನ ಬಿಸಿ: ಪಾಕಿಸ್ತಾನ ಸೇನೆ ಪರದಾಟ, ಸೈನಿಕರ ಆಹಾರಕ್ಕೂ ಹಣದ ಕೊರತೆ

    ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ: ಚಾಲನೆ ನೀಡಿ ಗಂಭೀರ ವಿಚಾರಗಳನ್ನು ತೆರೆದಿಟ್ಟ ನಟ ಧನಂಜಯ್

    ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ವೃದ್ಧ ದಂಪತಿ: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts