More

    ಹಾನಗಲ್ಲ ಕಾಂಗ್ರೆಸ್​ನಲ್ಲಿ ಟಿಕೆಟ್ ವಾರ್

    ಹಾನಗಲ್ಲ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ 2 ವರ್ಷ ಇರುವಾಗಲೇ ಹಾನಗಲ್ಲ ತಾಲೂಕು ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ತಿಕ್ಕಾಟ ಆರಂಭವಾಗಿದೆ.

    ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂದು ಗೊಂದಲ ಸೃಷ್ಟಿಯಾಗಿ, ಕೊನೆಯ ಘಳಿಗೆಯಲ್ಲಿ ಕ್ಷೇತ್ರಕ್ಕೆ ಹೊರಗಿನವರಾದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಭ್ಯರ್ಥಿಯಾಗಿದ್ದರು. ಇದರಿಂದ ಪಾಠ ಕಲಿತಿರುವ ಸ್ಥಳೀಯ ಮುಖಂಡರು ಈ ಬಾರಿ 2 ವರ್ಷಕ್ಕಿಂತ ಮುಂಚಿತವಾಗಿಯೇ ಒಗ್ಗಟ್ಟಿನಿಂದ ಪ್ರಯತ್ನ, ಒತ್ತಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀನಿವಾಸ ಮಾನೆ ಹಾಗೂ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮಧ್ಯೆ ಬಹಿರಂಗವಾಗಿ ವಾಕ್ಸಮರವೂ ಶುರುವಾಗಿದೆ.

    ಕಳೆದ ಬಾರಿ ಮನೋಹರ್ ತಹಶೀಲ್ದಾರ್ ಅವರೊಂದಿಗೆ ಟಿಕೆಟ್​ಗೆ ಪೈಪೋಟಿ ನಡೆಸಿದವರೆಲ್ಲ ಇದೀಗ ಒಂದಾಗಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅವರನ್ನು ಮುಂದಿಟ್ಟುಕೊಂಡು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ತಮಗೆ ಟಿಕೆಟ್ ತಪ್ಪಲು ಕಾರಣರಾದ ಶ್ರೀನಿವಾಸ ಮಾನೆ ವಿರುದ್ಧ ಮನೋಹರ ತಹಶೀಲ್ದಾರ್ ತೊಡೆ ತಟ್ಟಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಸಭೆ, ಮಾತುಕತೆ ಆರಂಭಿಸಿರುವ ಅವರು, ಯುವ ಸಮುದಾಯ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್​ಗೆ ಪಟ್ಟು ಹಿಡಿದಿದ್ದಾರೆ.

    ಕ್ಷೇತ್ರಕ್ಕೆ ಹೊರಗಿನವರಾದ ಶ್ರೀನಿವಾಸ ಮಾನೆ ಅವರ ವಿರುದ್ಧ ಗೋ-ಬ್ಯಾಕ್ ಚಳವಳಿ ಪಕ್ಷದ ಆಂತರಿಕ ವಲಯದೊಳಗೆ ನಡೆಯುತ್ತಿದೆ. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ಮನೋಹರ ತಹಶೀಲ್ದಾರ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಕುರಿತು ಶ್ರೀನಿವಾಸ ಮಾನೆ ಬೆಂಬಲಿಗರು ಹೈಕಮಾಂಡ್​ಗೆ ದೂರು ಸಲ್ಲಿಸಿದ್ದರು.

    ಪಕ್ಷ ಯಾರಿಗೆ ಬೇಕಾದರೂ ಸ್ಪರ್ಧಿಸಲು ಅವಕಾಶ ನೀಡಬಹುದು. ಅನಗತ್ಯವಾಗಿ ಕಾರ್ಯಕರ್ತರನ್ನು ಒಕ್ಕಲೆಬ್ಬಿಸುವಂಥ ಹೇಳಿಕೆ ನೀಡುವುದರಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಏನೇ ಅಸಮಾಧಾನವಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆಸಬೇಕಿತ್ತು. ಸಮಯ ಬಂದಾಗ ಹೈಕಮಾಂಡ್​ಎಲ್ಲರಿಗೂ ಉತ್ತರಿಸುತ್ತದೆ ಎಂಬುದು ಮಾನೆ ಬೆಂಬಲಿಗರ ಅನಿಸಿಕೆ.

    ಸ್ಥಳೀಯರನ್ನು ಹೊರತುಪಡಿಸಿ ಯಾರನ್ನೂ ತಾಲೂಕಿನ ಜನತೆ ಒಪ್ಪಿಕೊಳ್ಳುವುದಿಲ್ಲ ಎಂಬುದು ಸ್ಥಳೀಯ ನಾಯಕತ್ವ ಬೆಂಬಲಿಸುವ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವಾಗಿದೆ. ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು, ಕ್ಷೇತ್ರಗಳಿಗೆ ಬೇರೆಡೆಯ ಅಭ್ಯರ್ಥಿ ಹಾಕುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ಸ್ಥಳೀಯ ನಾಯಕರಲ್ಲಿ ಹುಮ್ಮಸ್ಸು ಮೂಡಿಸಿದೆ. ಹಾನಗಲ್ಲ ತಾಲೂಕು ಕಾಂಗ್ರೆಸ್​ನಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ, ಹೈಕಮಾಂಡ್ ಮೂಕಪ್ರೇಕ್ಷನಾಗಿ ಗಮನಿಸುತ್ತಿದೆ.

    ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲೇ ನನ್ನ ಮುಂದಿನ ಚುನಾವಣೆ. ಇದನ್ನು ಹೊರತುಪಡಿಸಿ ಬೇರೆಡೆ ಹೋಗುವ ಪ್ರಶ್ನೆಯೇ ಇಲ್ಲ. ಕಳೆದ 3 ವರ್ಷಗಳಿಂದ ಇಲ್ಲಿನ ಮತದಾರರ ಮನಸ್ಸು ಗೆದ್ದಿದ್ದೇನೆ. ಅವರ ನೋವಿಗೆ ಸ್ಪಂದಿಸಿ ವಿಶ್ವಾಸ ಉಳಿಸಿಕೊಂಡಿದ್ದೇನೆ. ಇಲ್ಲಿನ ಜನತೆ ನನ್ನನ್ನು ದತ್ತು ಪಡೆದಿದ್ದಾರೆ. ಇದೇ ನನ್ನ ಕರ್ಮಭೂಮಿ.
    | ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯ

    ಹಾನಗಲ್ಲ ಕೆಲವರಿಗೆ ಕರ್ಮಭೂಮಿಯಾದರೆ, ಸ್ಥಳೀಯರಿಗೆ ಜನ್ಮಭೂಮಿ, ಕರ್ಮಭೂಮಿ, ರುದ್ರಭೂಮಿ ಎಲ್ಲವೂ ಆಗಿದೆ. ಬೇರೆಡೆಯವರನ್ನು ದತ್ತು ಪಡೆಯುವ ದುಸ್ಥಿತಿ ಬಂದಿಲ್ಲ. ಇದೆಲ್ಲವನ್ನು ಮೇಲ್ಮಟ್ಟದ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ನ್ಯಾಯಕ್ಕಾಗಿ, ನಮ್ಮ ಹಕ್ಕಿಗಾಗಿ ಹೈಕಮಾಂಡ್​ಗೆ ಬೇಡಿಕೆ ಇಡುವುದರಲ್ಲಿ ತಪ್ಪೇನಿದೆ. ಸ್ಥಳೀಯ ನಾಯಕತ್ವದ ಗೊಂದಲ ನಿವಾರಣೆ ಅನಿವಾರ್ಯವಾಗಿದೆ. ಸ್ಥಳೀಯರಿಗೆ ಮಾನ್ಯತೆ ನೀಡಿ ಎಂಬುದೇ ಇಲ್ಲಿನ ಮುಖಂಡರ ಸ್ಪಷ್ಟ ನಿಲುವು.
    | ಮನೋಹರ ತಹಶೀಲ್ದಾರ್, ಮಾಜಿ ಸಚಿವ

    ಮಾಜಿ ಸಚಿವ ಮನೋಹರ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಖಂಡರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ಒಂದಂಶದ ಬೇಡಿಕೆ ಸಲ್ಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನೂ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗುವುದು. ರಾಜ್ಯ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಸೂಕ್ತ ತೀರ್ಮಾನ ಪ್ರಕಟಿಸುತ್ತಾರೆ.
    | ಪ್ರಕಾಶಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts