More

    ಬಿಜೆಪಿಯಿಂದ ಟಿಕೆಟ್ ವಂಚನೆ, ಸ್ವತಂತ್ರವಾಗಿ ಕಣಕ್ಕಿಳಿಯಲು ಚಿಂತನೆ, ಡಾ.ಬಾಬುರಾಜೇಂದ್ರ ನಾಯಕ ಸ್ಪಷ್ಟನೆ

    ವಿಜಯಪುರ: ಕಳೆದ 35 ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಅಂಗ ಸಂಸ್ಥೆಗಳಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿರುವ ನನಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸ ಇತ್ತು. ಆದರೆ, ಕೆಲವರ ಬ್ಲಾೃಕ್ ಮೇಲ್ ತಂತ್ರದಿಂದಾಗಿ ಟಿಕೆಟ್ ಕೈತಪ್ಪಿತು. ಇನ್ನೂ ಆಶಾಭಾವ ಇದೆ. ಕೊನೇ ಕ್ಷಣದವರೆಗೂ ಕಾಯುವೆ. ಬಿ ಫಾರ್ಮ್ ಸಿಗದೇ ಹೋದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮಾಜಿ ಜಿಲ್ಲಾಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಕ ಹೇಳಿದರು.

    ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರವಾಗಿ ಕಣಕ್ಕಿಳಿಯಲು ಈಗಾಗಲೇ ತೀರ್ಮಾನಿಸಿಯಾಗಿದೆ. ಟಿಕೆಟ್ ನೀಡುವ ಭರವಸೆ ಮೇರೆಗೆ ಸಾಕಷ್ಟು ಪರಿಶ್ರಮ ಹಾಕಿ ಪಕ್ಷ ಸಂಘಟಿಸಿದ್ದೇನೆ. ನನ್ನದೇ ಆದ ಬೆಂಬಲಿಗರಿದ್ದಾರೆ, ಅಪಾರ ಕಾರ್ಯಕರ್ತರು, ಮಠಾಧೀಶರು, ಸಂತರು ನನ್ನ ಬೆಂಬಲಕ್ಕಿದ್ದಾರೆ. ಹೀಗಾಗಿ ಟಿಕೆಟ್ ಪಡೆದು ಕಣಕ್ಕಿಳಿಯಬೇಕೆನ್ನುವ ಉತ್ಸಾಹದಲ್ಲಿದ್ದಾಗಲೇ ಕೆಲವರ ಕುತಂತ್ರದಿಂದಾಗಿ ಕೈತಪ್ಪಿತು. ಇನ್ನೂ ಕಾಲ ಮಿಂಚಿಲ್ಲ. ಹಾಗೊಂದು ವೇಳೆ ಟಿಕೆಟ್ ಸಿಗದೇ ಹೋದಲ್ಲಿ ಸ್ಪರ್ಧೆ ಖಚಿತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಪಕ್ಷ ನನಗೆ ಅನೇಕ ಜವಾಬ್ದಾರಿ ಕೊಟ್ಟಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ವೈದ್ಯಕೀಯ ಪ್ರಕೋಷ್ಠಕದ ಸಂಚಾಲಕನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅನೇಕ ಸಂಕಷ್ಠಗಳ ಸ್ಥಿತಿಯಲ್ಲಿ ಪಕ್ಷದ ಪರವಾಗಿ ಜನರಿಗೆ ನೆರವಾಗಿದ್ದೇನೆ. ಹಿಂದು ಧರ್ಮಕ್ಕೆ ಕಂಟಕವಾಗಿರುವ ಮತಾಂತರಕ್ಕೆ ಸೆಡ್ಡು ಹೊಡೆದು, ಕ್ರಿಶ್ಚಿಯನ್ ಮಿಷನರಿಗಳ ದಾಳಿಗೆ ಪ್ರತ್ಯುತ್ಯರ ನೀಡುತ್ತಾ, ಮತಾಂತರಗೊಂಡವರನ್ನು ಮರಳಿ ಸ್ವಧರ್ಮ ಕ್ಕೆ ಕರೆತರುವ ಪ್ರಯತ್ನ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನನ್ನ ಆಸ್ಪತ್ರೆ ಬೇರೆಯವರಿಗೆ ಕೊಟ್ಟು ಸಂಘಚಾಲಿತ ಕೋವಿಡ್ ಕೇರ್ ಕೇಂದ್ರಗಳ ಜವಾಬ್ದಾರಿ ನಿಭಾಯಿಸಿರುವೆ.

    ಆದರೆ, ಒಬ್ಬ ಮಹಾನುಭಾವ, 50 ವರ್ಷ ರಾಜಕೀಯ ಲಾಭ ಪಡೆದವ, ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದವರು, ಹೊಂದಾಣಿಕೆ ರಾಜಕಾರಣದ ಭೀಷ್ಮ ಪಿತಾಮಹ ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ನನ್ನನ್ನು ಕುರಿತು ‘ಅವನು ಬಾಗಲಕೋಟೆಯಿಂದ ಜನರನ್ನು ಕರೆಯಿಸಿ ಪ್ರತಿಭಟನೆ ಮಾಡಿಸುತ್ತಾನೆ’ ಎಂದು ಟೀಕಿಸುತ್ತಾರೆ. ಅಭಿಮಾನದಿಂದ ಪ್ರಶ್ನೆ ಕೇಳಲು ಬಂದ ನಮ್ಮವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಆ ಮೂಲಕ ಬಂಜಾರಾ ಸಮುದಾಯದ ಸ್ವಾಭಿಮಾನ ಕೆಣಕಿದ್ದಾರೆ. ಕಾಡು ಮೇಡು ಅಲೆದು ಮೇಲ್ವರ್ಗದ ಜನರ ಸಹಕಾರದೊಂದಿಗೆ ಹೋಗುತ್ತಿರುವುದು ಈ ಮಹಾನುಭವಾರಿಗೆ ಸಹನೆಯಾಗುತ್ತಿಲ್ಲ ಎಂದು ಕಾಣುತ್ತದೆ ಎಂದು ಪರೋಕ್ಷವಾಗಿ ರಮೇಶ ಜಿಗಜಿಣಗಿ ವಿರುದ್ಧ ಕಿಡಿಕಾರಿದರು.

    ಡಾ.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಂಬಿಕೆ ಇಟ್ಟವರು ನಾವು. ಅವರಿಂದ ಪ್ರದತ್ತವಾದ ಹಕ್ಕು ಪ್ರತಿಪಾದಿಸುವುದು ನ್ಯಾಯ ಅಲ್ಲವೇ? ದೇಶದ ಯಾವುದೇ ಮೂಲೆಯಿಂದಲೂ ಪ್ರಜೆಗಳು ಚುನಾವಣೆಗೆ ಸ್ಪರ್ಧಿಸಬಹುದೆಂದು ಸಂವಿಧಾನ ಹೇಳಿದ್ದು ತಮಗೆ ಗೊತ್ತಿಲ್ಲವೇ? ತಾವು ಚಿಕ್ಕೋಡಿಯಿಂದ ಸ್ಪರ್ಧಿಸಿಲ್ಲವೇ? ಹಾಗೆಯೇ ನಾನು ಸಹ ವಿಜಯಪುರ ದಿಂದ ಸ್ಪರ್ಧಿಸಿದರೆ ಸಮಸ್ಯೆ ಏನು? ಎಂದು ಜಿಗಜಿಣಗಿ ಹೆಸರು ಉಲ್ಲೇಖಿಸದೆ ಪ್ರಶ್ನೆಗಳ ಸುರಿಮಳೆಗೈದರು.

    ನನ್ನ ಗುರುವಿನ ಅಪ್ಪಣೆ ಮೇರೆಗೆ ಸ್ವತಂತ್ರವಾಗಿ ಕಣಕ್ಕಿಳಿಯುತ್ತಿದ್ದೇನೆ. ಅವರ ಆಶೀರ್ವಾದ ಇದೆ. ಸಮಗ್ರ ಅಭಿವೃದ್ಧಿಗಾಗಿ, ವಿಕಸಿತ ಭಾರತಕ್ಕಾಗಿ ಚುನಾವಣೆಯಲ್ಲಿ ಮುಂದುವರಿತ್ತೇನೆ. ಜಿಲ್ಲೆಯ ಕೃಷಿ, ತೋಟಗಾರಿಕೆ, ನೀರಾವರಿ ಅಭಿವೃದ್ಧಿ ಗಾಗಿ ಬಿಜೆಪಿಯ ಅಭ್ಯರ್ಥಿಯಂತೆ ಬರುವ ಬರುವ ಮಂಗಳವಾರದಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
    ಮುಖಂಡರಾದ ಮೋಹನ ಚವಾಣ್, ಅಪ್ಪು ರಾಠೋಡ, ರವಿ ರಾಠೋಡ, ರಾಕೇಶ ರಜಪೂತ, ಸುನೀಲ ಪವಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts