More

    ಕಾಂಗ್ರೆಸ್‌ನಿಂದ ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗ; ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪ

    ಹಾವೇರಿ: ಕಳೆದ ವರ್ಷ ಎಸ್‌ಸಿ, ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ. ಸೇರಿದಂತೆ 28 ಸಾವಿರ ಕೋಟಿ ರೂ.ಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ, ಮತ್ತಿತರ ಯೋಜನೆಗೆ ಬಳಸಿಕೊಂಡಿದೆ. ಈ ಕೂಡಲೇ ಈ ಹಣವನ್ನು ವಾಪಸ್ ಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆಗ್ರಹಿಸಿದರು.
    ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣ ದುರುಪಯೋಗ ಮಾಡಿಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಮುಖ್ಯಮಂತ್ರಿ ವಿರುದ್ಧವೇ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕಾಗುತ್ತದೆ. ಹಾಗಾಗಿ, ಈ ಕೂಡಲೇ ಹಣ ಬಿಡುಗಡೆಗೊಳಿಸಿ ಜಮೀನು ಇಲ್ಲದ ಬಡವರಿಗೆ, ಶಿಕ್ಷಣಕ್ಕೆ, ಹಾಸ್ಟೆಲ್ ನಿರ್ಮಾಣಕ್ಕೆ ಹಣ ಉಪಯೋಗಿಸಬೇಕು ಎಂದರು.
    ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ಘೋಷಿಸಲಿ. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೋ ಆಗೆಲ್ಲ ದಲಿತರಿಗೆ ಅನ್ಯಾಯ ಮಾಡುತ್ತಾರೆ. ಬಿಜೆಪಿ ಸಂವಿಧಾನ ಬದಲಾಯಿಸಲು ಸಾಧ್ಯವೇ ಇಲ್ಲ. ಸಂವಿಧಾನಕ್ಕೆ ಹೆಚ್ಚು ಗೌರವ ಕೊಟ್ಟವರೇ ಪ್ರಧಾನಿ ಮೋದಿ. ಮೊದಲ ಬಾರಿಗೆ ಸಂಸತ್‌ಗೆ ಪದಾರ್ಪಣೆ ಮಾಡಿದಾಗ ಮೆಟ್ಟಿಲಿಗೆ ಹಣೆ ಹಚ್ಚಿ ನಮಸ್ಕರಿಸುವ ಮೂಲಕ ಸಂವಿಧಾನಕ್ಕೆ ಗೌರವ ಕೊಟ್ಟರು. ಈ ದೇಶದ ಧರ್ಮಗ್ರಂಥ ಅಂಬೇಡ್ಕರ್ ಬರೆದ ಸಂವಿಧಾನ ಎಂದು ಮೋದಿ ಹೇಳಿದರು. ಕಾಂಗ್ರೆಸ್‌ನವರು ಯಾರೂ ಅಂಬೇಡ್ಕರ್‌ಗೆ ಗೌರವ ಕೊಡಲಿಲ್ಲ. ಅವರ ಸಮಾಧಿಗೆ ಆರಡಿ, ಮೂರಡಿ ಜಾಗವನ್ನೂ ಕೊಡಲಿಲ್ಲ ಎಂದು ಕುಟುಕಿದರು.
    ದಲಿತರಿಗೆ ರಕ್ಷಣೆ ಇಲ್ಲ. ರಾಯಚೂರು ಜಿಲ್ಲೆಯ ಲಿಂಗಸಗೂರಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಿಲ್ಲ. ಇಂತಹ ಅನೇಕ ಪ್ರಸಂಗಗಳು ಇವೆ. ಸಿದ್ದರಾಮಯ್ಯ ದಲಿತರ ಪರ ಎಂಬುದು ಕೇವಲ ಹೇಳಿಕೆೆಗೆ ಸೀಮಿತವಾಗಿದೆ. ಮೋದಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿಲ್ಲ. ಯಾವತ್ತೂ ಜಾತಿ ರಾಜಕಾರಣ ಮಾಡಲಿಲ್ಲ ಎಂದರು.
    ಸದಾಶಿವ ಆಯೋಗದ ಮೀಸಲಾತಿ ಕೈಹಾಕಿದ್ದಕ್ಕೆ ವಿಧಾನಸಭೆ ಸೋಲು ಆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಅಸ್ಪೃಶ್ಯ ಜನ ಮೀಸಲಾತಿ ಸಿಗಲಿಲ್ಲ ಎಂದು ಹೋರಾಟ ಮಾಡಿದರು. ಅವರಿಗೆಲ್ಲ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ ಎಂದಷ್ಟೇ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಡಿ.ಎಸ್.ಮಾಳಗಿ, ಪರಮೇಶಪ್ಪ ಮೇಗಳಮನಿ, ಇತರರಿದ್ದರು.
    ಎರಡು ಲಕ್ಷ ಓಟಿನಿಂದ ಬೊಮ್ಮಾಯಿ ಗೆಲುವು
    ಕಾಂಗ್ರೆಸ್ ಗ್ಯಾರಂಟಿ ಎಂದರೆ ಬಡವರ ಮನಸು, ಬುದ್ದಿ ಖರೀದಿಸುವ ಗ್ಯಾರಂಟಿ. ಮೋದಿ ಗ್ಯಾರಂಟಿ ಅಂದರೆ ಖಚಿತವಾಗಿ ವಿಶ್ವಾಸದಿಂದ ಬಡವರನ್ನು ಮೇಲೆತ್ತುವ ಗ್ಯಾರಂಟಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಅದಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬೊಮ್ಮಾಯಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದು ಕಾರಜೋಳ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts