More

    ಶ್ರೀಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆ ತರಬೇತಿ ಕೇಂದ್ರ ಶೀಘ್ರ ಆರಂಭ

    ನಾಗಮಂಗಲ: ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಲು ಮತ್ತು ಆಸಕ್ತ ಪಾರಂಪರಿಕ ವೈದ್ಯರಿಗೆ ಹೆಚ್ಚಿನ ಮಾಹಿತಿ ನೀಡಲು ಶ್ರೀಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.


    ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಬುಧವಾರ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಸಂಚಾಲಕರ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.


    ಪಾರಂಪರಿಕ ವೈದ್ಯ ಪದ್ಧತಿಯು ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಮೂಲ ಬೇರಿಲ್ಲವೆಂದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿ ಹೋಗುತ್ತಾರೆ. ಅಂತಹ ಪದ್ಧತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಶ್ರೀಕ್ಷೇತ್ರದಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಆರಂಭಿಸಲು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ನಿರ್ಧರಿಸಿದ್ದಾರೆ. ಒಂದು ತರಬೇತಿಯಲ್ಲಿ ಕನಿಷ್ಠ 50 ಜನರನ್ನು ನಿಗದಿಪಡಿಸಲಾಗುವುದು. ಭಾಗವಹಿಸುವ ವೈದ್ಯರಿಗೆ ವಸತಿ ಮತ್ತು ಉಪಾಹಾರವನ್ನು ಶ್ರೀಮಠದಿಂದಲೇ ಉಚಿತವಾಗಿ ನೀಡಲಾಗುವುದು. ಈ ತರಬೇತಿ ಕೇಂದ್ರ ಪ್ರಾರಂಭವಾದ ನಂತರ ದೂರದ ವೈದ್ಯರಿಗೆ ಅನುಕೂಲವಾಗಲೆಂದು ರಾಜ್ಯ, ಜಿಲ್ಲೆ, ಇಲ್ಲವೆ ವಲಯವಾರು ಮೂಲಿಕೆಗಳ ಪ್ರಾಥಮಿಕ ಪಾಠ ಪ್ರವಚನದ ಮೂಲಕ ಪರಿಷತ್ತಿನ ಪದಾಧಿಕಾರಿಗಳು ಎರಡು ಅಥವಾ ಮೂರು ದಿನಗಳ ತರಬೇತಿಯನ್ನು ನೀಡಿ ಇವರೆಲ್ಲರಿಗೂ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಪ್ರಾಯೋಗಿಕ ತರಬೇತಿಯನ್ನು ಶ್ರೀಕ್ಷೇತ್ರದಲ್ಲಿ 10ದಿನಗಳ ನೀಡಲಾಗುವುದು. ಇದರ ಸದುಪಯೋಗವನ್ನು ಪಾರಂಪರಿಕ ವೈದ್ಯರು ಪಡೆದುಕೊಳ್ಳಬೇಕೆಂದು ತಿಳಿಸಿದರು.


    ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಜಿ.ಮಹದೇವಯ್ಯ ಮಾತನಾಡಿ, ಪರಿಷತ್ತಿನ ಸಂಸ್ಥಾಪಕರು ಮತ್ತು ಹಿಂದಿನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಷತ್ ಮುನ್ನಡೆಯುತ್ತಿದೆ. ಪರಿಷತ್ತಿನ ಎಲ್ಲ ಜಿಲ್ಲಾ ಸಂಚಾಲಕರು ಈ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು, ನಿಮ್ಮ ಜಿಲ್ಲೆಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ವೈದ್ಯರ ಪಟ್ಟಿಯನ್ನು ರಾಜ್ಯ ಸಮಿತಿಗೆ ಅತಿ ಶೀಘ್ರವಾಗಿ ಕಳುಹಿಸಿಕೊಡಬೇಕು ಎಂದರು.


    ರಾಜ್ಯದಲ್ಲಿ ಪ್ರಥಮ ಬಾರಿಗೆ ಪಾರಂಪರಿಕ ವೈದ್ಯರಿಗೋಸ್ಕರ ನಿರಂತರವಾಗಿ ಗುರು- ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿರುವ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಹಾಗೂ ಪರಿಷತ್‌ನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪರಿಷತ್ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಇದರ ಪ್ರಯೋಜನವನ್ನು ವೈದ್ಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.


    ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಗಿಡಮೂಲಿಕೆಗಳ ಮಾಹಿತಿಯನ್ನು ಕೊಡಿಸುವ ಜತೆಗೆ, ಮೂಲಿಕೆಗಳಿಂದ ಚೂರ್ಣ ತೆಗೆಯುವ ವಿಧಾನ, ರಸ ಔಷಧ ತಯಾರಿಕೆ ಇನ್ನು ಮುಂತಾದ ಮೂಲಿಕೆಗಳಿಂದ ಔಷಧ ತಯಾರಿಕೆಯ ಬಗ್ಗೆ ಹಂತ ಹಂತವಾಗಿ ತರಬೇತಿ ಕೊಡಿಸಲಾಗುವುದು. ಶ್ರೀಮಠದ ಪೀಠಾಧ್ಯಕ್ಷರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕ್ಷೇತ್ರದ ತಪೋವನದಲ್ಲಿ ಸುಂದರವಾದ ಧನ್ವಂತರಿ ವನ ನಿರ್ಮಿಸಿ, ತರಬೇತಿಯಲ್ಲಿ ಭಾಗವಹಿಸುವ ವೈದ್ಯರಿಗೆ ಗಿಡಗಳ ಪರಿಚಯದ ಜತೆಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು ಎಂದರು.


    ಮಾಸಾಂತ್ಯದ ವೇಳೆಗೆ ತರಬೇತಿ ಪ್ರಾರಂಭಿಸಲಾಗುವುದು, ತರಬೇತಿಯಲ್ಲಿ ಭಾಗವಹಿಸಲು 50 ಜನರಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸುವ ವೈದ್ಯರು ಮೇ 10ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.


    ಪರಿಷತ್ತಿನ ಖಜಾಂಚಿ ವೈದ್ಯ ಶಿವಾನಂದ ಜಂಗಿನಮಠ ವಿಜಯಪುರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚಿತ್ರದುರ್ಗ ಜಿಲ್ಲೆಯ ವೈದ್ಯ ವೀರಣ್ಣ, ಉಡುಪಿ ಜಿಲ್ಲೆಯ ವೈದ್ಯ ಜಯರಾಮ್‌ರಾವ್, ವಿಜಯನಗರ ಜಿಲ್ಲೆಯ ವೈದ್ಯ ಎಂ.ಸೂರಣ್ಣ, ಜಿಲ್ಲಾ ಸಂಚಾಲಕರಾದ ತುಮಕೂರು ಜಿಲ್ಲೆಯ ವೈದ್ಯ ಸುರೇಶ್‌ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ವೈದ್ಯ ನಾಗರಾಜ್, ಗದದ ಜಿಲ್ಲೆಯ ವೈದ್ಯ ಶಿವಕುಮಾರ್ ಹಿರೇಮಠ, ಹಾವೇರಿ ಜಿಲ್ಲೆಯ ವೈದ್ಯ ಮಹೇಶ್‌ಗೌಡ ಪಾಟೀಲ್, ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ವೈದ್ಯ ಗಂಗಾಧರ್, ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾದ ವೈದ್ಯ ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts