More

    ಮಂಗಳೂರಿಗೆ ಸದ್ಯಕ್ಕಿಲ್ಲ ನೀರಿನ ಅಭಾವ ಆತಂಕ

    -ಹರೀಶ್ ಮೋಟುಕಾನ ಮಂಗಳೂರು
    ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ 6 ಮೀ. ನೀರು ಸಂಗ್ರಹ ಇರುವುದರಿಂದ ಈ ಬಾರಿ ನೀರಿನ ಅಭಾವದ ಆತಂಕವಿಲ್ಲ.
    2019ರಲ್ಲಿ ತುಂಬೆ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾದ ಕಾರಣ ಮಂಗಳೂರು ನಗರಕ್ಕೆ ನೀರಿನ ಅಭಾವ ಉಂಟಾಗಿತ್ತು. ಪ್ರಸ್ತುತ ಒಳಹರಿವು ಇದೆ. ಮೂರು ದಿನಗಳಿಗೊಮ್ಮೆ ಹೊರಬಿಡಲಾಗುತ್ತಿದೆ. ಶಂಭೂರು ಎಎಂಆರ್ ಅಣೆಕಟ್ಟೆಯಿಂದ ಪ್ರತಿ ಮೂರು ದಿನಗಳಿಗೊಮ್ಮೆ ನೀರು ಹೊರಬಿಡುತ್ತಿದ್ದಾರೆ.
    ಅಣೆಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದ ಕಾರಣ ಕಳೆದ ವರ್ಷವೂ ನೀರಿನ ಅಭಾವ ಆಗಿರಲಿಲ್ಲ. ಜತೆಗೆ ಬೇಸಿಗೆಯಲ್ಲಿ ಬೇಗ ಮಳೆಯೂ ಬಂದಿತ್ತು. ಹೀಗಾಗಿ ಆತಂಕ ದೂರವಾಗಿತ್ತು. ಈ ಬಾರಿಯೂ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮಳೆ ಬಂದಿದ್ದು ಈಗಿನ ಪರಿಸ್ಥಿತಿ ನೋಡಿದಾಗ ಮಂಗಳೂರು ನಗರಕ್ಕೆ ರೇಷನಿಂಗ್ ಮಾಡಿ ನೀರು ಪೂರೈಸುವ ಅನಿವಾರ್ಯತೆ ಎದುರಾಗದು. ಕೆಲವು ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರು ಹೊರಗೆ ಬಿಡಲಾಗಿದೆ. ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ಬಳಿಕ ನೀರು ಹೊರಗೆ ಬಿಡಲಾಗುತ್ತಿದೆ. ಅದರ ನೀರು ಕೂಡ ತುಂಬೆ ಅಣೆಕಟ್ಟಿನ ಕಡೆಗೆ ಹರಿದು ಬರುತ್ತದೆ.

    ಆತಂಕ ಪಡುವ ಅಗತ್ಯವಿಲ್ಲ: ಮಂಗಳೂರು ನಗರಕ್ಕೆ ನೀರು ಪೂರೈಕೆ ಉದ್ದೇಶದಿಂದ 7 ಮೀ. ನೀರು ಸಾಮರ್ಥ್ಯದ ಹೊಸ ಅಣೆಕಟ್ಟು ಉದ್ಘಾಟನೆ ಬಳಿಕ ನೀರಿನ ಅಭಾವದ ಆತಂಕ ಬಹುತೇಕ ದೂರವಾಗಿದೆ. ಪ್ರಸ್ತುತ ಅಣೆಕಟ್ಟು ಭರ್ತಿಯಾಗಿದ್ದು, ಮುಂದಿನ ಒಂದಷ್ಟು ಸಮಯ ಅಣೆಕಟ್ಟಿನಲ್ಲಿ 6 ಮೀ.ನಷ್ಟು ನೀರಿನ ಸಂಗ್ರಹ ಇರಲಿದೆ ಎಂದು ತುಂಬೆ ಡ್ಯಾಂ ವಿಭಾಗದ ಇಂಜಿನಿಯರ್ ರಿಚರ್ಡ್ ತಿಳಿಸಿದ್ದಾರೆ.

    160 ಎಂಎಲ್‌ಡಿ ಪೂರೈಕೆ: ಮಂಗಳೂರು ನಗರದಲ್ಲಿ ಗೃಹಬಳಕೆಗೆ 80 ಎಂಎಲ್‌ಡಿ, ವಾಣಿಜ್ಯ ಬಳಕೆಗೆ 39.50 ಎಂಎಲ್‌ಡಿ, ಭಾರಿ ಕೈಗಾರಿಕಾ ಬಳಕೆಗೆ 11 ಎಂಎಲ್‌ಡಿ, ಸಗಟು ಪೂರೈಕೆ ಮತ್ತು ನೀರಿನ ಸಂಪರ್ಕಗಳಿಗೆ 4 ಎಂಎಲ್‌ಡಿ, ಶಾಲೆ, ಸರ್ಕಾರಿ ಆಸ್ಪತ್ರೆ, ಕಟ್ಟಡ ರಚನೆಗಳಿಗೆ5.50 ಎಂಎಲ್‌ಡಿ, ಪೂರೈಕೆ ವ್ಯರ್ಥ 20 ಎಂಎಲ್‌ಡಿ ಸೇರಿದಂತೆ ಒಟ್ಟು 160 ಎಂಎಲ್‌ಡಿ ಪ್ರಮಾಣದ ನೀರು ತುಂಬೆಯಿಂದ ಪೂರೈಕೆಯಾಗುತ್ತದೆ.

    ಗ್ರಾಮಾಂತರದಲ್ಲೂ ಅಭಾವವಿಲ್ಲ: ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ಪ್ರಸ್ತುತ ನೀರಿನ ಹರಿವು ಉತ್ತಮವಾಗಿದೆ. ಏಪ್ರಿಲ್ ತಿಂಗಳ ತನಕ ಕುಡಿಯಲು ಹಾಗೂ ಕೃಷಿಗೆ ಯಾವುದೇ ತೊಂದರೆಯಾಗಲಾರದು. ಗುರುಪುರ ಫಲ್ಗುಣಿ ನದಿಯಲ್ಲೂ ಸದ್ಯ ಸಮಸ್ಯೆ ಇಲ್ಲ. ಮೂಡುಶೆಡ್ಡೆ ಹಾಗೂ ಮರವೂರಿನಲ್ಲಿ ನದಿಗೆ ಅಡ್ಡವಾಗಿ ಅಣೆಕಟ್ಟು ಹಾಕಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಕೃಷಿ ಹಾಗೂ ಕುಡಿಯಲು ಧಾರಾಳವಾಗಿ ನೀರು ಸಿಗುತ್ತಿದೆ. ಮೇ ಅಂತ್ಯದ ತನಕ ಯಾವುದೇ ಸಮಸ್ಯೆ ಎದುರಾಗದು ಎಂದು ಗುರುಪುರ ಗ್ರಾಮಸ್ಥರು ತಿಳಿಸಿದ್ದಾರೆ. ಸುಳ್ಯದ ಪಯಸ್ವಿನಿ ನದಿಯಲ್ಲಿ ಮಾರ್ಚ್ ತನಕ ನೀರಿನ ಲಭ್ಯತೆ ಇರುತ್ತದೆ. ಏಪ್ರಿಲ್, ಮೇ ತಿಂಗಳಿನಲ್ಲಿ ನದಿ ಬತ್ತಿ ಹೋಗುತ್ತದೆ. ಜಿಲ್ಲೆಯ ಇತರ ಸಣ್ಣ ನದಿಗಳು ಈಗಾಗಲೇ ಬತ್ತಿ ಹೋಗಿವೆ. ನದಿಗಳ ಬದಿಗಳಲ್ಲಿ ತೋಟ ಮಾಡಿಕೊಂಡವರು ನದಿಯ ನೀರನ್ನೇ ಆಶ್ರಯಿಸಿದವರು ಒಂದಷ್ಟು ತೊಂದರೆ ಅನುಭವಿಸುವುದು ಸಹಜ.

    ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಭರ್ತಿ 6 ಮೀ. ನೀರಿನ ಸಂಗ್ರಹವಿದೆ. ಆದ್ದರಿಂದ ಈ ಬಾರಿ ಕುಡಿಯುವ ನೀರಿನ ಅಭಾವ ಸಾಧ್ಯತೆ ಇಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ನೀರಿನ ಬಳಕೆ ಮಿತವಾಗಿರಲಿ.
    – ಅಕ್ಷಿ ಶ್ರೀಧರ್, ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts