More

    ಮೂರು ವರ್ಷದಲ್ಲಿ ಎರಡು ಸಾವಿರ ಜನ ನಾಪತ್ತೆ!

    ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಲವು ಕಾರಣಗಳಿಂದಾಗಿ ಎರಡು ಸಾವಿರಕ್ಕೂ ಅಧಿಕ ಮಹಿಳೆ-ಪುರುಷರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಪ್ರೇಮ ಪಾಶಕ್ಕೆ ಸಿಲುಕಿ ಕಣ್ಮರೆಯಾದವರೇ ಹೆಚ್ಚಿದ್ದಾರೆ.

    ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ 1,446 ನಾಪತ್ತೆ ಪ್ರಕರಣಗಳು, ಬೆಳಗಾವಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 568 ಕೇಸಗಳು ದಾಖಲಿವೆ. ಇದರಲ್ಲಿ ಶೇ.80 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಬಹಳಷ್ಟು ಪ್ರಕರಣಗಳಲ್ಲಿ ಹದಿಹರೆಯದವರು ಪ್ರೀತಿಸಿ ನಾಪತ್ತೆಯಾಗಿರುವುದು ಪೊಲೀಸರ ಕಾರ್ಯಾಚರಣೆಯಿಂದ ಗೊತ್ತಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ 2021ರಲ್ಲಿ 436, 2022ರಲ್ಲಿ 540, 2023ರಲ್ಲಿ 470 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಆಯುಕ್ತಾಲಯ ಕಚೇರಿ ವ್ಯಾಪ್ತಿಯಲ್ಲಿ 3 ವರ್ಷದಲ್ಲಿ ಕ್ರಮವಾಗಿ 145, 211 ಹಾಗೂ 212 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಜಿಲ್ಲಾದ್ಯಂತ ಒಟ್ಟು 2,014 ದಾಖಲಾಗಿದ್ದು, ಈ ಪೈಕಿ 1,345 ಯುವತಿಯರು- ಮಹಿಳೆಯರು ನಾಪತ್ತೆಯಾಗಿದ್ದಾರೆ.
    ನಾಪತ್ತೆಗೆ ವಿವಿಧ ಕಾರಣಗಳು: ಹುಡುಗ-ಹುಡುಗಿಯರು ನಾಪತ್ತೆಯಾಗಿ ವಾಪಸ್ ಪೊಲೀಸ್ ಠಾಣೆಗಳಿಗೆ ಬಂದು ವರದಿ ಮಾಡಿಕೊಂಡ ಪ್ರಕಣಗಳೂ ಇವೆ. ಅಂತಹ ಪ್ರಕರಣಗಳಲ್ಲಿ ಪೊಲೀಸರು ಸೌಹಾರ್ದಯುತವಾಗಿ ಎರಡೂ ಕಡೆ ಸಂಬಂಧಿಕರನ್ನು ಕರೆಯಿಸಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಿದ್ದಾರೆ. ಇನ್ನು ಪುರುಷರು ಸಾಲ ಮಾಡಿ ಊರು ತೊರೆದಿದ್ದು, ಗಂಡ-ಹೆಂಡತಿ ಜಗಳವಾಡಿ ಮನೆಬಿಟ್ಟು ಹೋದ ಪ್ರಕರಣಗಳು ದಾಖಲಾಗಿವೆ. ಮಾನಸಿಕ ಅಸ್ವಸ್ಥತೆಯಿಂದ ಮನೆ ತೊರೆದು ಹೋದ ವ್ಯಕ್ತಿಗಳು ವಾಪಸ್ ಬಂದಿಲ್ಲ. ಕೆಲವರು ಮಠಗಳಲ್ಲಿ ವಾಸವಾಗಿದ್ದಾರೆ. ಕೆಲವು ಯುವತಿಯರು ಮನೆ ಬಿಟ್ಟು ಹೋಗಿ ಮತ್ತೆ ವಾಪಸ್ ಬಂದು, ಸಾಂತ್ವನ ಕೇಂದ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಪೊಲೀಸರ ಕಾರ್ಯಾಚರಣೆ: ನಾಪತ್ತೆಯಾದ ವ್ಯಕ್ತಿಗಳ ಸಂಬಂಧಿಕರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಾರೆ. ನಾಪತ್ತೆಯಾದ ವ್ಯಕ್ತಿಗಳ ಆಪ್ತರು ಹಾಗೂ ನಾಪತ್ತೆಯಾದ ವ್ಯಕ್ತಿಯ ಜತೆ ಯಾರಾದರೂ ಜಗಳವಾಡಿದ್ದರೆ ಅಂತವರನ್ನು ವಿಚಾರಿಸುತ್ತಾರೆ. ಒಂದೇ ಊರಿನಲ್ಲಿ ಹುಡುಗ-ಹುಡಗಿ ನಾಪತ್ತೆಯಾಗಿದ್ದರೆ ಅಂತಹ ಪ್ರಕರಣಗಳನ್ನು ಮೊಬೈಲ್ ನಂಬರ್ ಟ್ರಾೃಕಿಂಗ್ ಮಾಡಿ, ಲೋಕೇಶನ್ ಪತ್ತೆ ಮಾಡುತ್ತಾರೆ. ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಿಸುತ್ತಾರೆ. ಅಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಲುಕ್‌ಔಟ್ ನೋಟಿಸ್ ನೀಡಿ, ಮಾಹಿತಿ ರವಾನಿಸುತ್ತಾರೆ. ಪೊಲೀಸ್ ಐಟಿ ಇಂಟರನ್ ತಂತ್ರಾಂಶದ ಮೂಲಕ ನಾಪತ್ತೆ ಪ್ರಕರಣಗಳನ್ನು ಪೊಲೀಸರು ಬಹುಬೇಗ ಪತ್ತೆ ಹಚ್ಚುತ್ತಿದ್ದಾರೆ. ಪೊಲೀಸ್ ಐಟಿ ಇಂಟರನ್ ತಂತ್ರಾಂಶ 2011ರಲ್ಲಿ ಜಾರಿಯಲ್ಲಿದ್ದರೂ, ಅದರ ಬಳಕೆ ಈಚೆಗೆ ಹೆಚ್ಚಾಗುತ್ತಿದೆ. ಬೆಳಗಾವಿ ಪೊಲೀಸರು ಕೊಲ್ಲಾಪುರ, ಸಾಂಗ್ಲಿ, ಮಿರಜ್ ಹಾಗೂ ಗಡಿಯಾಚೆ ಪ್ರದೇಶಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ನಾಪತ್ತೆ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

    ಆಪ್ತ ಸಮಾಲೋಚನೆ: ನಾಪತ್ತೆಯಾಗಿ ಬಳಿಕ ಮರಳುವ ಯುವತಿಯರು ಅಪ್ರಾಪ್ತರಾಗಿದ್ದರೆ, ಅವರನ್ನು ಪೊಲೀಸರು ಅವರ ಇಚ್ಛೆಯಂತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಆಪ್ತ ಸಮಾಲೋಚನೆ ಮಾಡುತ್ತಾರೆ. ನ್ಯಾಯಾಲಯದಲ್ಲಿ ಅವರ ಹೇಳಿಕೆಗಳನ್ನು ದಾಖಲಿಸುತ್ತಾರೆ. ಅವರ ಇಚ್ಛೆಯಂತೆ ಮನೆಗೆ ಅಥವಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಪ್ರಕರಣ ಇತ್ಯರ್ಥಗೊಳಿಸುತ್ತಾರೆ.

    ಬೆಳಗಾವಿ ಜಿಲ್ಲೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳನ್ನು ಬಹುಬೇಗ ಪತ್ತೆ ಹಚ್ಚಲಾಗುತ್ತಿದೆ. ನಮ್ಮ ಪೊಲೀಸರು ಪ್ರಕರಣಗಳ ಪತ್ತೆಗೆ ಶ್ರಮಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
    | ಡಾ.ಭೀಮಾಶಂಕರ ಗುಳೇದ, ಎಸ್‌ಪಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts