More

    ಆತ್ಮಹತ್ಯೆ ಮಾಡಿಕೊಂಡಾತನ ಶವ ಮೂರು ದಿನಗಳ ಬಳಿಕ ಹಸ್ತಾಂತರ

    ಕಾರ್ಕಳ: ಒಡಿಶಾದಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಊರಿಗೆ ಕರೆತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದ ಕಾರ್ಕಳದ ಯುವಕನ ಮೃತದೇಹ ರಾಜ್ಯಗಳ ಠಾಣಾ ವ್ಯಾಪ್ತಿಯ ಗೊಂದಲದ ಪರಿಣಾಮ ಮೂರು ದಿನಗಳ ಕಾಲ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲೇ ಬಾಕಿಯಾಗಿದ್ದು, ಉಡುಪಿ ಎಸ್‌ಪಿ ವಿಷ್ಣುವರ್ಧನ್ ಮಧ್ಯಪ್ರವೇಶದಿಂದ ಶನಿವಾರ ವಾರಸುದಾರರಿಗೆ ಹಸ್ತಾಂತರಗೊಂಡಿತು.
    ಒಡಿಶಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಕಾರ್ಕಳ ಬಂಗ್ಲೆಗುಡ್ಡೆ ಇಮ್ಮುಂಜೆ ರಸ್ತೆ ನಿವಾಸಿ ಕಾರ್ತಿಕ್(25) ಯಾವುದೋ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಊರಿಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಸಾವು ಸಂಭವಿಸಿದೆ. ಬಳಿಕ ಮೃತದೇಹವನ್ನು ಮಣಿಪಾಲದ ಖಾಸಗಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು.
    ಕಾರ್ತಿಕ್ ಆತ್ಮಹತ್ಯೆಗೆ ಯತ್ನಿಸಿದ್ದು ಒಡಿಶಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಹಾಗಾಗಿ ಅಲ್ಲಿನ ಪೊಲೀಸರು ಮಣಿಪಾಲ ಆಸ್ಪತ್ರೆಗೆ ಆಗಮಿಸಿ ದೂರು ದಾಖಲಿಸಿಕೊಳ್ಳಬೇಕಿತ್ತು. ಈ ಬಗ್ಗೆ ಕಾರ್ಕಳ ಠಾಣೆ ಪೊಲೀಸರು ಒಡಿಶಾದ ಪಾರಾದೀಪ್ ಲಾಕ್ ಠಾಣೆಗೆ ಸೂಚನಾ ಪತ್ರ ಕಳುಹಿಸಿದ್ದರು. ಪತ್ರ ಕಳುಹಿಸಿ ಮೂರು ದಿನ ಕಳೆದರೂ ಅಲ್ಲಿನ ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಶವ ಮಣಿಪಾಲ ಆಸ್ಪತ್ರೆಯಲ್ಲೇ ಬಾಕಿಯಾಗಿತ್ತು. ಈ ಬಗ್ಗೆ ಯುವಕನ ಮನೆಯವರು ಉಡುಪಿ ಎಸ್‌ಪಿ ವಿಷ್ಣುವರ್ಧನ್‌ಗೆ ಮನವಿ ಮಾಡಿದ ಬಳಿಕ ಎಸ್‌ಪಿ ಸೂಚನೆ ಮೇರೆಗೆ ಶನಿವಾರ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts