More

    ಶ್ರೀರಂಗಪಟ್ಟಣದಲ್ಲಿ ಬೆಳಗಿದ ಸಹಸ್ರಾರು ದೀಪಗಳು

    ಶ್ರೀರಂಗಪಟ್ಟಣ: ತಾಲೂಕಿನ ಎಲ್ಲ ಗ್ರಾಮಗಳ ಮೂಲೆ ಮೂಲೆಯಲ್ಲೂ ಜನರ ಮನದಲ್ಲೂ ಶ್ರೀರಾಮನಾಮ ಸ್ಮರಣೆ ಹಾಗೂ ಪೂಜಾಚರಣೆ ಮುಗಿಲು ಮುಟ್ಟಿತು.

    ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲೂ ಜನರು ಸ್ವಯಂಪ್ರೇರಣೆಯಿಂದ ತಮ್ಮೂರಿನ ಹಬ್ಬದಂತೆ ರಾಮೋತ್ಸವ ಆಚರಿಸಿದರು. ಸೋಮವಾರ ಪ್ರಾತಃ ಕಾಲದಲ್ಲೇ ನಗರ ಸಂಕೀರ್ತನೆ, ಶ್ರೀರಾಮ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ವೇದ ಪಾರಾಯಣ ಅಖಂಡ ಭಜನೆ, ಮಹಾಮಂಗಳಾರತಿ ನೇರವೇರಿಸಿ ಕೋಸಂಬರಿ, ಪಾನಕ, ಮಜ್ಜಿಗೆ ಸೇರಿದಂತೆ ದಿನವಿಡೀ ಅನ್ನಪ್ರಸಾದ ನೀಡಲಾಯಿತು.

    ತಾಲೂಕಿನ ಪಾಲಹಳ್ಳಿ ಗ್ರಾಮದ ರಾಮಮಂದಿರಲ್ಲಿ ಪೂರ್ವವಾಹಿನಿಯ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಶ್ರೀಗಳ ನೇತೃತ್ವದಲ್ಲಿ ಗ್ರಾಮದ ಯಜಮಾನರು ಹಾಗೂ ಮಹಿಳೆಯರು ಮಾತೆ ಸೀತಾದೇವಿ ಸ್ಮರಣೆಯೊಂದಿಗೆ ಶ್ರೀರಾಮನಿಗೆ ವಿಶೇಷ ಪೂಜೆ ಭಜನೆ ಅರ್ಪಿಸಿದರು. ಬಳಿಕ ಹೊರ ಅಂಗಳದಲ್ಲಿ ಗ್ರಾಮಸ್ಥರು ಸುಮಾರು 8 ಸಾವಿರ ಜನರಿಗೆ ಅನ್ನಸಂತರ್ಪಣೆ ನೆರವೇರಿಸಿದರು.

    ಶ್ರೀರಂಗಪಟ್ಟಣದ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಚಿತ್ರ ಕಲಾವಿದರು 10 ಅಡಿ ಉದ್ದದ ಈಶ್ವರ ಮತ್ತು ಬಾಲರಾಮನ ಚಿತ್ರಗಳನ್ನು ವಿಶೇಷ ಬಣ್ಣಗಳಲ್ಲಿ ಚಿತ್ರಿಸಿ ಪೂಜಿಸಿದ್ದು, ಇದರೊಂದಿಗೆ ಶ್ರೀರಾಮ ತಾರಕ ಹೋಮ ನೆರವೇರಿಸಿ ರಾಮಜಪ, ರಾಮಭಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು.

    ಪಟ್ಟಣದ ಪಟ್ಟಾಭಿರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ಹಾಗೂ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಸಂಪೂರ್ಣ ಅಂಚೆ ತಿಪ್ಪಯ್ಯ ರಸ್ತೆಯ 300 ಮೀಟರ್ ಉದ್ದಕ್ಕೂ ಎರಡು ಸಾಲುಗಳಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts