More

    ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದವರು ಕಾಂಗ್ರೆಸ್ ಬೆಂಬಲಿಸಿ

    ಹುಣಸೂರು : ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕೋರಿದರು.


    ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರೊಂದಿಗಿನ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.


    ದೇಶದಲ್ಲಿ ಇಂದು ವಾಕ್ ಸ್ವಾತಂತ್ರ್ಯ ಇಲ್ಲದಾಗಿದೆ. ಪ್ರಶ್ನೆ ಮಾಡುವ ಪತ್ರಕರ್ತರನ್ನು ಜೈಲಿಗಟ್ಟಲಾಗುತ್ತಿದೆ. ವ್ಯಕ್ತಿಪೂಜೆಯಿಂದ ಸರ್ವಾಧಿಕಾರಿ ಹುಟ್ಟುತ್ತಾನೆಯೇ ಹೊರತು ಪ್ರಜಾತಂತ್ರ ಉಳಿಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತದಾರರು ಮತ ನೀಡಬೇಕು. ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.


    ಸಚಿವ ವೆಂಕಟೇಶ್ ಮಾತನಾಡಿ, ನಮ್ಮ ಅಭ್ಯರ್ಥಿ ಲಕ್ಷ್ಮಣ್ ಬೀದಿಯಲ್ಲಿ ನಿಂತು ಜನರ ಸಮಸ್ಯೆ ಆಲಿಸುವ ವ್ಯಕ್ತಿ. ಆದರೆ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಅರಮನೆಯಲ್ಲಿ ವಾಸಿಸುವರು. ಅವರಿಗೆ ನಿಮ್ಮ ಸಮಸ್ಯೆ ತಿಳಿಸಲು ಸಾಧ್ಯವೇ? ಅಳಿಯ ಸಿ.ಎನ್. ಮಂಜುನಾಥ್ ಬಿಜೆಪಿ ಅಂತೆ, ಮಿಕ್ಕವರು ಜೆಡಿಎಸ್ ಅಂತೆ. ನಾನು ಒಕ್ಕಲಿಗನೇ. ಇಲ್ಲಿರುವ ಒಕ್ಕಲಿಗರು ದೇವೇಗೌಡರನ್ನು ನಂಬುವ ಕಾರ್ಯ ಮಾಡಬೇಡಿ ಎಂದರು.


    ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಇಡಿ, ಐಟಿ ದುರ್ಬಳಕೆಯಾಗುತ್ತಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ ಕ್ರಿಮಿನಲ್ ದೋಷಾರೋಪವುಳ್ಳವರು ಎಂದು ನಾನು ಹೇಳಿದ್ದಲ್ಲ, ಗುಜರಾತ್‌ನ ಪ್ರಕರಣವೊಂದರ ಕುರಿತು ಸಿಬಿಐ ಅಂದೇ ಹೇಳಿದೆ. ಅದನ್ನು ನಾನು ಹೇಳಿದ್ದೇನೆ. ಅದಕ್ಕೆ ಬಿಜೆಪಿಯವರು ನನ್ನ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ ಎಂದರು.


    ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಎಲೆಕ್ಟ್ರೋರಲ್ ಬಾಂಡ್ ಪಡೆಯುವ ಮೂಲಕ ಬಿಜೆಪಿ ಲಂಚ ಪಡೆಯುವುದನ್ನು ಕಾನೂನಾತ್ಮಕಗೊಳಿಸಿದೆ. ಗಟ್ಟಿಹಾಲಿನಂತಿದ್ದ ಸಂವಿಧಾನಕ್ಕೆ ನೀರು ಬೆರೆಸಿ ನೀರು ಹಾಲು ಮಾಡುವ ಕಾರ್ಯ ಮಾಡುತ್ತಿದೆ. ಕಳೆದ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ನಾನು ನಂಬಿದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದರಿಂದ ನನಗೆ ಸೋಲಾಯಿತು. ಅದರೆ ಅದು ಮತ್ತೆ ಮರುಕಳಿಸಬಾರದು. ನಮ್ಮ ಅಭ್ಯರ್ಥಿ ಲಕ್ಷ್ಮಣ್‌ಪರ ಎಲ್ಲರೂ ಒಂದಾಗಿ ದುಡಿದು ತಾಲೂಕಿನಲ್ಲಿ ಹೆಚ್ಚಿನ ಲೀಡ್ ಕೊಡಿಸುವ ಮೂಲಕ ಗೆಲ್ಲಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಉಸ್ತುವಾರಿ ಸಮಿತಿ ರಾಜ್ಯ ಉಪಾದ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿದರು.


    ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಗ್ಯಾರಂಟಿ ಯೋಜನೆಯಗಳ ಉಸ್ತುವಾರಿ ಸಮಿತಿ ಅಧ್ಯಕ್ಷ ಅರುಣ,ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಎಚ್.ಎನ್.ಪ್ರೇಮ್‌ಕುಮಾರ್ ಸೇರಿದಂತೆ ಕಾಂಗ್ರೆಸ್ ಸ್ಥಳೀಯ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.


    ತಲೆಕೆಡಿಸ್ಕೋಬೇಡಪ್ಪ ನಿನಗೆ ಶಕ್ತಿಯಿದೆ:ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸೋತ ಎಚ್.ಪಿಮಂಜುನಾಥ್ ಸೋಲಿನ ವಿಮರ್ಶೆ ಮಾಡುತ್ತಾ, ‘ಮಂಜು ನೀನೇನೂ ತಲೆಕೆಡಿಸ್ಕೋಬೇಡಪ್ಪಾ, ಜಿಟಿ, ಅವರ ಮಗ ಯಾರೇ ಬಂದರೂ ಎದುರಿಸುವ ಶಕ್ತಿ ನಿನಗಿದೆ. ಈ ಎಲೆಕ್ಷನ್‌ನಲ್ಲಿ ಲೀಡ್ ಕೊಡಿಸು ಎಂದಾಗ ಅವರಿಗೆ ಎಂಎಲ್‌ಸಿ ಮಾಡಿ ಎನ್ನುವ ಕೂಗು ಸಭಿಕರಂದ ಬಂತು. ಅದರ ಬಗ್ಗೆ ನಾವು ತೀರ್ಮಾನ ಮಾಡ್ತೇವೆ. ನೀವು ಮತ ಹಾಕಿಸಿ ಎಂದು ವೆಂಕಟೇಶ್ ಸಮಾಧಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts