More

    ಈ ವರ್ಷ ಮಠದಲ್ಲೇ ಸರಳವಾಗಿ ತರಳಬಾಳು ಹುಣ್ಣಿಮೆ ಉತ್ಸವ

    ಶಿಕಾರಿಪುರ: ಈ ವರ್ಷ ಭರಮಸಾಗರದಲ್ಲಿ ಆಚರಿಸಬೇಕಾಗಿದ್ದ ತರಳಬಾಳು ಹುಣ್ಣಿಮೆ ಉತ್ಸವವನ್ನು ಬರದ ಕಾರಣ ರದ್ದು ಪಡಿಸಲಾಗಿದ್ದು, ಶ್ರೀ ಮಠದಲ್ಲೇ ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿರಿಗೆರೆ ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ಆಯೋಜಿಸಿದ್ದ ಶಿವ ಸಹಕಾರಿ ಬ್ಯಾಂಕ್‌ನ ನೂತನ ಶಾಖೆಯ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಈ ಬಾರಿ ಉತ್ಸವದಲ್ಲಿ ಗ್ರಾಮೀಣ ಕ್ರೀಡಾಕೂಟ ಸಹ ಏರ್ಪಡಿಸಲಾಗುತ್ತಿದೆ. ಜತೆಗೆ 10 ಹುತಾತ್ಮ ಯೋಧರ ಕುಟುಂಬಗಳಿಗೆ ಮಠದಿಂದ ಒಂದು ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
    ಆಧ್ಯಾತ್ಮಿಕ ಚಿಂತನೆಗಳು ನಮ್ಮನ್ನು ಬಹಳಷ್ಟು ಎತ್ತರಕ್ಕೆ ಕರೆದೊಯ್ಯುತ್ತವೆ. ಧರ್ಮ ಮಾರ್ಗವೆಂದರೆ ಅದು ಸಹನೆ, ಶಾಂತಿ, ಸಹಬಾಳ್ವೆ, ಸಮರಸತೆಯ ಸಾಕ್ಷಿರೂಪ. ನಾವು ಧರ್ಮದ ದಾರಿಯಲ್ಲಿ ಸಾಗುವಾಗ ಧರ್ಮ ನಮ್ಮ ನೆರಳಿನಂತೆ ಸದಾ ಬೆಂಗಾವಲಾಗಿದ್ದು, ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
    ಬ್ಯಾಂಕ್‌ಗಳು ಬೆಳೆಯಬೇಕಾದರೆ ನಿಮ್ಮೆಲ್ಲರ ಹಣಕಾಸಿನ ವಹಿವಾಟಿನಿಂದ. ಉಳ್ಳವರು ಹೆಚ್ಚು ಹಣ ಬ್ಯಾಂಕ್‌ನಲ್ಲಿ ತೊಡಗಿಸಿ, ಅದು ಇನ್ನೊಬ್ಬ ಸಾಮಾನ್ಯನಿಗೆ ಆಧಾರವಾಗುತ್ತದೆ. ಶಿವ ಸಹಕಾರಿ ಬ್ಯಾಂಕ್ ಶರವೇಗದಲ್ಲಿ ಬೆಳೆದು ನಿಲ್ಲಲು ಕಾರಣ ಇದರ ಆಡಳಿತ ಮಂಡಳಿ, ಷೇರುದಾರರು ಮತ್ತು ಗ್ರಾಹಕರು. ಶಿವ ಸಹಕಾರಿ ಬ್ಯಾಂಕ್‌ನ ಜನಸ್ನೇಹಿ ಬ್ಯಾಂಕ್ ಮಾಡಿದ್ದು ನೀವು, ನಿಮ್ಮ ಪರಿಶ್ರಮ. ನಮ್ಮ ಆಶಯಗಳನ್ನು ಶಿಕಾರಿಪುರ ತಾಲೂಕಿನ ಜನತೆ ಬ್ಯಾಂಕ್ ಅಭಿವೃದ್ಧಿ ಮುಖೇನ ಈಡೇರಿಸಿದ್ದಾರೆ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದು ಅಭಿನಂದನಾರ್ಹ ಎಂದರು.
    ಬ್ಯಾಂಕ್‌ಗಳು ಸದಾ ಜನಸ್ನೇಹಿ ಆಗಿರಬೇಕು. ಬಡವ, ಬಲ್ಲಿದ ಯಾರೇ ಬಂದರೂ ಅವರೊಂದಿಗೆ ಅವಿನಾಭವ ಸಂಬಂಧ ಹೊಂದಿರಬೇಕು. ಅನುಪಮ ಸೇವೆ ನೀಡಬೇಕು. ಸೇವೆಯೇ ಪರಮಧರ್ಮ ಆಗಬೇಕು. ಆಗ ಗ್ರಾಹಕರ ಬೆಂಬಲ ಬ್ಯಾಂಕ್‌ಗಳಿಗೆ ದೊರೆಯುತ್ತದೆ ಎಂದು ಹೇಳಿದರು.
    ಸಹಕಾರಿ ತತ್ವ ಅದ್ಭುತವಾದದ್ದು. ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮೊದಲಿಗಿಂತ ಈಗ ಸಹಕಾರ ಬ್ಯಾಂಕ್‌ಗಳು ತ್ರಿವಿಕ್ರಮನಂತೆ ಬೆಳೆದು ನಿಂತಿವೆ. ಜನ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ನಂಬಿಕೆ ಮತ್ತು ವಿಶ್ವಾಸಗಳೇ ಇಲ್ಲಿನ ಅಡಿಪಾಯ. ಕೇವಲ ಕೆಲವೇ ಲಕ್ಷಗಳಿಂದ ಪ್ರಾರಂಭವಾದ ಶಿವ ಸಹಕಾರಿ ಬ್ಯಾಂಕ್, ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಇದು ನಮಗೆಲ್ಲ ಅತ್ಯಂತ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
    ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗಂಗಾಧರಪ್ಪ, ಮಾಜಿ ಅಧ್ಯಕ್ಷ ಕೊಳಗಿ ರೇವಣಪ್ಪ, ಮಾಜಿ ಶಾಸಕ ಬಿ.ಎನ್.ಮಹಾಲಿಂಗಪ್ಪ, ಪರಮೇಶ್ವರಪ್ಪ, ಮಹದೇವ್ ಪಾಟೀಲ್, ಪ್ರಕಾಶ್, ತಾಳಗುಂದ ಸತೀಶ್, ಆರ್.ಕೆ.ಶಂಭು, ಬಸವರಾಜಪ್ಪ ಇತರರಿದ್ದರು

    ಉಳಿಕೆಯೂ ಗಳಿಕೆ ಇದ್ದಂತೆ
    ಆರ್ಥಿಕ ಸದೃಢತೆ ಬದುಕಿನ ಸಪ್ತ ಸೂತ್ರಗಳಲ್ಲಿ ಒಂದು. ಮಿತವ್ಯಯಿಗಳಾಗಿ ಉಳಿಸಿದ ಹಣ ನಮ್ಮ ಸಂಕಷ್ಟದ ಸಮಯದಲ್ಲಿ ಕೈ ಹಿಡಿದು ಮುನ್ನೆಡೆಸುತ್ತದೆ. ಉಳಿಕೆಯೂ ಒಂದರ್ಥದಲ್ಲಿ ಗಳಿಕೆ ಇದ್ದಂತೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸಿರಿಗೆರೆ ಪೂಜ್ಯರ ಆಗಮನದಿಂದ ಸಂತಸವಾಗಿದೆ. ಶಿವ ಸಹಕಾರಿ ಬ್ಯಾಂಕಿಗೆ ಜಗದ್ಗುರುಗಳು ಬೆನ್ನೆಲುಬಾಗಿ ಮತ್ತು ಚೈತನ್ಯರೂಪವಾಗಿದ್ದಾರೆ. ಗ್ರಾಹಕರು ಮತ್ತು ಆಡಳಿತ ಮಂಡಳಿಗಳ ಪರಿಶ್ರಮದಿಂದ ಆರ್ಥಿಕ ಸಂಸ್ಥೆಗಳು ಬದುಕುತ್ತವೆ. ಇವತ್ತು ಶಿವ ಸಹಕಾರಿ ಬ್ಯಾಂಕ್ ಎಲ್ಲರ ಪರಿಶ್ರಮದಿಂದ ಅತ್ಯುತ್ತಮ ಬ್ಯಾಂಕ್ ಆಗಿದೆ. ಈ ಬ್ಯಾಂಕಿನ ಶಾಖೆ ಶಿರಾಳಕೊಪ್ಪದಲ್ಲಿ ಆಗುತ್ತಿರುವುದರಿಂದ್ದ ಈ ಭಾಗದ ಜನರಿಗೆ ಅನುಕೂಲವಾಗಿದೆ. ಶಿವ ಸಹಕಾರಿ ಬ್ಯಾಂಕ್ ಸಿರಿಗೆರೆ ಪೂಜ್ಯರ ದೂರದೃಷ್ಟಿಯ ಫಲ ಎಂದು ಬಣ್ಣಿಸಿದರು. ಉಳ್ಳವರು ಹೆಚ್ಚಿನ ಠೇವಣಿ ಇಟ್ಟಾಗ ಅದು ಮಧ್ಯಮವರ್ಗದವರಿಗೆ ಸಾಲದ ಮೂಲಕ ಸಹಕಾರಿಯಾಗುತ್ತದೆ. ಇದರಿಂದ ಬ್ಯಾಂಕ್ ತನ್ನಿಂದ ತಾನೆ ಬೆಳೆಯುತ್ತದೆ. ಸಹಕಾರಿ ಬ್ಯಾಂಕ್‌ಗಳು ಕೃಷಿ ಕ್ಷೇತ್ರಕ್ಕೆ ಮತ್ತು ರೈತರ ಪಾಲಿಗೆ ವರದಾನವಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts