More

    ಈ ಬಾರಿಯೂ ಪ್ರವಾಹ ಭೀತಿ

    ಕೆ.ಎಸ್.ನಾಗೇಶ್ ಕುಶಾಲನಗರ
    ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಪಟ್ಟಣದ ಜನಜೀವನ ತಲ್ಲಣಗೊಳಿಸಿದೆ. ಹವಾಮಾನ ಇಲಾಖೆ ಈ ಬಾರಿಯೂ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೂ.5ರಿಂದ ಮುಂಗಾರು ಮಳೆ ಚುರುಕಾಗುವುದಾಗಿ ತಿಳಿಸಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗಿದೆ.

    ಕಾವೇರಿ ನದಿಯಂಚಿನ ನಿವಾಸಿಗಳ ದುಗುಡ ಈಗಾಗಲೇ ಹೆಚ್ಚಾಗಿದೆ. ಈ ಬಾರಿಯೂ ಪ್ರವಾಹ ಉಂಟಾಗುವ ಆತಂಕ ಬಹುತೇಕರಲ್ಲಿ ಇದೆ. ಈಗಾಗಲೇ ಜಿಲ್ಲೆಯ ಹಲವು ನದಿ ತೀರದಲ್ಲಿ ವಾಸಿಸುತ್ತಿರುವ ಹಲವರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಇಂತಹ ಸಂದರ್ಭದಲ್ಲಿ ನದಿ ತೀರದಲ್ಲಿ ವಾಸಿಸುವ ಹಲವರು ಆತಂಕದಲ್ಲಿ ಬದುಕು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಎಲ್ಲಿಗೆ ಹೋಗಬೇಕೆಂಬ ಅಲೋಚನೆಯ ಗೊಂದಲಕ್ಕೆ ಸಿಲುಕಿದ್ದಾರೆ.

    2018ರಲ್ಲಿ ಪ್ರವಾಹವಾದಾಗ ಕೆಲ ಉತ್ಸಾಹಿಗಳು ಸ್ವಯಂ ಸೇವಕರಾಗಿ ಸಂಕಷ್ಟದಲ್ಲಿದ್ದವರ ರಕ್ಷಣೆ, ಸಹಾಯಕ್ಕೆ ಧಾವಿಸಿದ್ದರು ಮತ್ತು ಅಗತ್ಯ ವಸ್ತುಗಳನ್ನು ನೀಡಿದರು. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರಕೃತಿ ಮುನಿಸಿಕೊಂಡು ಅವಾಂತರ ಸೃಷ್ಟಿಯಾಗಿತ್ತು. ಕಳೆದ ವರ್ಷ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಬಹಳ ನಷ್ಟ ಅನುಭವಿಸುವಂತ್ತಾಗಿತ್ತು.

    ಇನ್ನು ಈ ಬಾರಿ ಏನು ಗಂಡಾಂತರ ಕಾದಿದೆಯೋ ಅನ್ನುವ ಆತಂಕ ಮನೆ ಮಾಡಿದೆ. ಕುಶಾಲನಗರದಲ್ಲಿ ಪ್ರವಾಹದಿಂದಾಗಿ ಹಲವು ಮನೆಗಳು ಕುಸಿದಿತ್ತು. ಮನೆಗಳ ಮರುನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ. ಇದರಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ ಮತ್ತೆ ಕೆಲವರು ಇನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಬಡ ವರ್ಗ ಮತ್ತು ನದಿ ಪ್ರವಾಹದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆನ್ನುವ ಒತ್ತಾಯ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ ಯಾವುದೇ ವ್ಯವಸ್ಥೆ ಆಗದಿರುವುದು ಸೋಜಿಗವೇ ಸರಿ.

    ಜಿಲ್ಲಾಡಳಿತ ಪ್ರತಿವರ್ಷ ಮುನ್ನೆಚ್ಚರಿಕೆ ವಹಿಸುವುದಕ್ಕಿಂತ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಾರ್ಯ ಯೋಜನೆ ರೂಪಿಸಬೇಕಾಗಿರುವುದು ಉತ್ತಮ. ನದಿ ತೀರದ ಪ್ರತಿ ಊರಿನಲ್ಲೂ ಸರ್ಕಾರಿ ಜಾಗವನ್ನು ಗುರುತಿಸಿ ನದಿ ಪ್ರವಾಹದಿಂದ ತೊಂದರೆಯಾಗುವವರನ್ನು ಸ್ಥಳಾಂತರ ಮಾಡಿದರೆ ಒಳ್ಳೆಯದು.

    ಕಳೆದ ಪ್ರವಾಹದಿಂದ ನಾವು ಮನೆ ಕಳೆದುಕೊಂಡಿದ್ದು, ಸರ್ಕಾರದ ಪರಿಹಾರದಲ್ಲಿ ಒಂದೇ ಒಂದು ನಯಾ ಪೈಸೆ ಇದುವರೆಗೂ ಸಿಕ್ಕಿಲ್ಲ. ಪಂಚಾಯಿತಿಗೆ ಅಲೆದು ಸಾಕಾಗಿದೆ. ಪರಿಹಾರದ ದುಡ್ಡು ತಗೋಬೇಕಾದರೆ ಸರಿಯಾದ ದಾಖಲೆ ಕೊಡಿ ಅಂತ ಕೇಳುತ್ತಾರೆ. ನಮ್ಮ ಪೂರ್ವಜರು ಬಾಳಿದಂತ ಮನೆ ಇದು. ಆವಾಗಿನಿಂದ ಏನೂ ಇಲ್ಲ. ಈಗ ಅದು ಕೊಡಿ, ಇದು ಕೊಡಿ ಅಂತ ಕೇಳಿದರೆ ಎಲ್ಲಿಂದ ತರೋದು ಅಂತ ತಿಳಿಯದೆ ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಾಯ ಮಾಡುತ್ತೇವೆ ಅಂತ ಹೇಳಿ ಹೋಗೋದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ.
    ಬೇಬಿ ಜಾನ್, ದಂಡಿನಪೇಟೆಯಲ್ಲಿ ಮನೆ ಕಳೆದುಕೊಂಡವರು, ಕುಶಾಲನಗರ

    ಕಾವೇರಿ ನದಿಯಲ್ಲಿ ಹೂಳು ತೆಗೆದಿರುವುದರಿಂದ ಈ ಬಾರಿ ಪ್ರವಾಹ ಆಗದಿರುವ ಆಶಾಭಾವನೆ ಇದೆ. ಆದರೂ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೋಟ್‌ಗಳನ್ನು ಸಿದ್ಧಗೊಳಿಸಲಾಗಿದೆ. ಮಳೆ ಪ್ರಮಾಣ ನೋಡಿಕೊಂಡು ನದಿಯಂಚಿನ ನಿವಾಸಿಗಳಿಗೆ ಏನು ಮಾಡಬೇಕೆಂಬುದನ್ನು ತಿಳಿಸಲಾಗುವುದು. ಅದಕ್ಕೆ ಪೂರಕವಾದ ಎಲ್ಲ ಜಾಗೃತಿಯನ್ನು ನಿವಾಸಿಗಳಿಗೆ ತಿಳಿಸಲಾಗುವುದು.
    ಸುಜಯ್ ಕುಮಾರ್, ಮುಖ್ಯಾಧಿಕಾರಿ, ಪಟ್ಟಣ್ಣ ಪಂಚಾಯಿತಿ, ಕುಶಾಲನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts