More

    ಸಾಮಾನ್ಯರಲ್ಲ ಈ ರಾಕೇಶ ರಂಜನ್ !

    ಹುಬ್ಬಳ್ಳಿ: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆಯ ಹೊಣೆಹೊತ್ತ ಸಿಬಿಐ ಅಧಿಕಾರಿ ರಾಕೇಶ ರಂಜನ್ ಸಾಮಾನ್ಯದವರಲ್ಲ!

    ಕರ್ನಾಟಕದ ಜನತೆಗೆ ನೆನಪಿರಬಹುದು, ಮಾಜಿ ಸಚಿವ ಜನಾರ್ದನ ರೆಡ್ಡಿಯ ಗಣಿಯನ್ನು ಅಗೆದು-ಬಗೆದು ಜೈಲಿಗೆ ಅಟ್ಟಿದ ಅಧಿಕಾರಿ ಇವರೇ.

    ಈಗ ಮತ್ತೊಬ್ಬ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2019ರ ಸೆಪ್ಟೆಂಬರ್​ನಲ್ಲಿ ಯೋಗೀಶಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ ತನಿಖಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು ಇದೇ ರಾಕೇಶ ರಂಜನ್.

    ಯೋಗೀಶಗೌಡ ಕೊಲೆಯಾದ 48 ತಾಸಿನಲ್ಲಿ 6 ಆರೋಪಿಗಳು ಪೊಲೀಸರಿಗೆ ಶರಣಾಗಿ, ತಾವೇ ಕೊಲೆ ಆರೋಪಿಗಳು ಎಂದು ಹೇಳಿಕೊಂಡಾಗ ಈ ಪ್ರಕರಣ ಮುಗಿದೇ ಹೋಯಿತು ಎಂದು ಭಾವಿಸಿದವರೇ ಹೆಚ್ಚು. ಸರ್ಕಾರ ಸಿಬಿಐಗೆ ಪ್ರಕರಣ ಹಸ್ತಾಂತರಿಸಿದ ನಂತರ ತನಿಖೆಯ ಜವಾಬ್ದಾರಿ ಹೊತ್ತುಕೊಂಡವರು ರಾಕೇಶ ರಂಜನ್.

    ಯೋಗೀಶಗೌಡನನ್ನು ಕೊಲೆಗೈದ ಶೂಟರ್​ಗಳು ಸ್ಥಳೀಯರಲ್ಲ. ಬದಲಾಗಿ ತಮಿಳುನಾಡು, ಬೆಂಗಳೂರು ಮೂಲದವರು. ಇವರು ಸುಪಾರಿ ಹಂತಕರು ಎಂಬ ಸತ್ಯ ಸಂಗತಿಯನ್ನು ಬಹಿರಂಗಗೊಳಿಸಿದವರು ಇದೇ ಅಧಿಕಾರಿ.

    ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಿ, ಕೆಲವರನ್ನು ಬಂಧಿಸುವ ಮೂಲಕ ತನಿಖೆಯ ಗತಿಯನ್ನೇ ಬದಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು.

    ರಾಕೇಶ ರಂಜನ್ ತನಿಖೆಯೇ ವಿಭಿನ್ನ. ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಿಸುವ ಪೂರ್ವ ಎಲ್ಲ ದಾಖಲೆಗಳನ್ನು ಗೌಪ್ಯವಾಗಿ, ಅಷ್ಟೇ ನಿಖರವಾಗಿ ಸಂಗ್ರಹಿಸುವುದು ಇವರ ವಿಶೇಷತೆ.

    ಈಗ ಇದೇ ನೋಡಿ ವಿನಯ ಕುಲಕರ್ಣಿ ಪ್ರಕರಣ. ಯಾವ ದಿನಾಂಕದಂದು ಇವರು ಎಲ್ಲಿದ್ದರು? ಏನೇನು ಮಾತನಾಡಿದರು ? ಯಾವ ಹೋಟೆಲ್​ನಲ್ಲಿ ತಂಗಿದ್ದರು? ಯಾವ ವಿಮಾನಕ್ಕೆ ಹೋದರು? ಯಾವ ವಿಮಾನದಲ್ಲಿ ವಾಪಸ್ ಬಂದರು, ಯಾರೊಂದಿಗೆ ಎಷ್ಟು ಸಮಯ ಮಾತನಾಡಿದರು? ಇಂತಹ ಹಲವಾರು ಮಾಹಿತಿಯ ಜಾಲವನ್ನು ಭೇದಿಸಿ, ಈಗ ವಿಚಾರಣಾಧೀನ ಕೈದಿ ವಿನಯ ಕುಲಕರ್ಣಿ ಅವರನ್ನು ಹಿಗ್ಗಾಮುಗ್ಗಾ ಜಾಲಾಡಿಸುತ್ತಿದ್ದಾರೆ. ಇದೇ ರಂಜನ್ ವಿಶೇಷತೆ.

    ಮಹತ್ವದ ಸಂಗತಿಯೆಂದರೆ ರಾಕೇಶ ರಂಜನ್​ಗೆ ಸಿಟ್ಟು ಬರುವುದಿಲ್ಲ. ಇವರು ಯಾವುದೇ ಪರಿಸ್ಥಿತಿಯಲ್ಲಿ ಸಂಯಮ ಕಳೆದುಕೊಳ್ಳುವುದಿಲ್ಲ. ಯಾರಿಗೂ ಬೇಸರ ಮಾಡುವುದಿಲ್ಲ. ಆದರೆ ಬಾಯಿ ಬಿಡಿಸುವ ಕಲೆ ಕರಗತ. ವಿಚಾರಣೆಯ ಶೈಲಿ, ತನಿಖೆಯ ವೈಖರಿ ವಿಭಿನ್ನ.

    ಮೂಲತಃ ಬಿಹಾರದವರಾದ ರಾಕೇಶ ರಂಜನ್, ಸಾಮಾನ್ಯ ರೈತರೊಬ್ಬರ ಪುತ್ರ. ಪದವಿ ಅಧ್ಯಯನ ನಂತರ ಬಿಎಸ್​ಎಫ್ ಸೇರಿಕೊಂಡಿದ್ದರು. ಅಲ್ಲಿಂದ ಅವರು ಏರಿದ ಹುದ್ದೆಗಳು, ಸ್ಥಾನಮಾನ ಎಲ್ಲವೂ ನಿಷ್ಠೆ, ಪ್ರಾಮಾಣಿಕತೆಯಿಂದಲೇ ಬಂದಿದ್ದು.

    ವೃತ್ತಿ ಬದುಕಿನಲ್ಲಿ ಈವರೆಗೆ ನಡೆಸಿದ 14 ಪ್ರಕರಣಗಳ ತನಿಖೆಯಲ್ಲಿ 12ರಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಇನ್ನೆರಡು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 15ನೇ ಪ್ರಕರಣವೇ ಯೋಗೀಶಗೌಡ ಕೊಲೆಗೆ ಸಂಬಂಧಿಸಿದ್ದು.

    ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಇನ್​ಸ್ಪೆಕ್ಟರ್ ರಾಕೇಶ ರಂಜನ್ ಮೂಲತಃ ಬಿಎಸ್​ಎಫ್ ಉದ್ಯೋಗಿ. ಗಡಿಭದ್ರತಾ ಪಡೆಯ ಇಂಟೆಲಿಜೆನ್ಸ್ ವಿಂಗ್​ನಲ್ಲಿ 5 ವರ್ಷ ನಿರ್ವಹಿಸಿದ ಕಾರ್ಯವೈಖರಿ ಇವರ ತನಿಖಾಶೈಲಿಯನ್ನು ಒರೆಗೆ ಹಚ್ಚಿತು.

    ಅವರನ್ನು ಸಿಬಿಐಗೆ ಕರೆಯಿಸಿಕೊಂಡಿದ್ದು ನ್ಯಾಷನಲ್ ಸೆಕ್ಯುರಿಟಿ ಗ್ರುಪ್​ನ ಮುಖ್ಯಸ್ಥರಾಗಿದ್ದ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯಾದ ಟಿ. ಮಡಿಯಾಳ್ ಅವರು. ಅಲ್ಲಿಂದ ರಾಕೇಶ ಅವರು ಸಿಬಿಐನಲ್ಲಿ ತಮಗೆ ವಹಿಸಿದ ಪ್ರಕರಣಗಳನ್ನೆಲ್ಲ ಭೇದಿಸುತ್ತ ಅಪರಾಧಿಗಳನ್ನು ಕಂಬಿ ಹಿಂದೆ ಅಟ್ಟಿದರು.

    ಇವರ ಚಾಕಚಕ್ಯತೆಯ ಕಾರ್ಯವೈಖರಿಗೆ ಕಳೆದ ಆ.15ರಂದು ‘ಕೇಂದ್ರ ಗೃಹ ಸಚಿವರ ಮೆಡಲ್’ ಪುರಸ್ಕಾರ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts