More

    ‘ಇದು ನನ್ನ ಕೊನೆಯ ಚುನಾವಣೆ’; ಭಾವನಾತ್ಮಕವಾಗಿ ಮತದಾರರ ಸೆಳೆಯಲು ಶಾಸಕರ ಯತ್ನ

    ತುಮಕೂರು: ಈ ಬಾರಿಯ ವಿಧಾನಸಭಾ ಚುನಾವಣೆ ಮೂರೂ ಪಕ್ಷಗಳ ಹಿರಿಯ ರಾಜಕಾರಣಿಗಳ ಪಾಲಿಗೆ ಬಹುತೇಕ ಕೊನೆಯ ಚುನಾವಣೆ!. ಮತದಾರರನ್ನು ಸೆಳೆಯಲು ಚುನಾವಣಾ ರಣಾಂಗಣದಲ್ಲಿ ಪ್ರಯೋಗಿಸುತ್ತಿರುವ ಈ ಭಾವನಾತ್ಮಕ ಅಸ್ತ್ರವೇ ಹೆಚ್ಚು ಸದ್ದು ಮಾಡುತ್ತಿದೆ.

    2023ರ ಚುನಾವಣೆಯು ವಿಭಿನ್ನ ಕಾರಣಕ್ಕಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿದೆ. 70 ವರ್ಷ ಮೇಲ್ಪಟ್ಟ ಹಲವು ಹಿರಿಯ ಮುಖಂಡರಿಗೆ ಇದು ಕೊನೆಯ ಚುನಾವಣೆ ಆಗಲಿದೆ. ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಬಹುಚರ್ಚೆಗೆ ಒಳಗಾಗಿದೆ.

    ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಡಿ.ನಾಗರಾಜಯ್ಯ, ಸೊಗಡುಶಿವಣ್ಣ, ಜಿ.ಪರಮೇಶ್ವರ್ ಅಲ್ಲದೆ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಕೆ.ಎನ್.ರಾಜಣ್ಣ, ವೆಂಕಟರಮಣಪ್ಪ, ಎಂ.ಟಿ.ಕೃಷ್ಣಪ್ಪ ಈಗಾಗಲೇ 7-8 ಚುನಾವಣೆಗಳನ್ನು ಎದುರಿಸಿ ಹೈರಾಣಾಗಿದ್ದಾರೆ. ಹಾಗಾಗಿ, ಮುಂಬರುವ ಚುನಾವಣೆಯು ಹಿರಿಯರ ಪಾಲಿಗೆ ವಿದಾಯದ ಚುನಾವಣೆ ಎನಿಸಿದೆ.

    ಟಿಬಿಜೆಗೆ ಇದು 11ನೇ ಚುನಾವಣೆ!: ಮಾಜಿ ಸಚಿವ ಟಿ.ಬಿ.ಜಯಚಂದ್ರಗೆ ಈಗ 75 ವರ್ಷ. 1978ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು ಈವರೆಗೆ 11 ಸಾರ್ವತ್ರಿಕ, 1 ಬೈಎಲೆಕ್ಷನ್ ಎದುರಿಸಿ 6 ಬಾರಿ ಶಾಸಕರಾಗಿದ್ದಾರೆ. ಕಳ್ಳಂಬೆಳ್ಳ, ಶಿರಾ ಕ್ಷೇತ್ರ ಪ್ರತಿನಿಧಿಸಿರುವ ಟಿಬಿಜೆ 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಎದುರಾದ ಮತ್ತೊಂದು ಉಪಚುನಾವಣೆಯಲ್ಲೂ ಸೋಲುಂಡಿದ್ದರು.

    ರಾಜಕೀಯದಿಂದ ಹೈರಾಣಾಗಿರುವ ಜಯಚಂದ್ರ ಈಗಾಗಲೇ ಕ್ಷೇತ್ರದಲ್ಲಿ ‘ಇದು ನನ್ನ ಕೊನೆಯ ಚುನಾವಣೆ’ ಎಂದು ಹೇಳುವ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.

    ಇದೇ ಹಾದಿಯಲ್ಲಿ ಸಾಗಿರುವ 79 ವರ್ಷದ ಮಾಜಿ ಸಚಿವ ಕುಣಿಗಲ್‌ನ ಡಿ.ನಾಗರಾಜಯ್ಯ ಪರವಾಗಿ ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವ ಅವರ ಮಕ್ಕಳು ಕೊನೆಯ ಚುನಾವಣೆ ದಾಳ ಉರುಳಿಸಿದ್ದಾರೆ.

    ಸಹಜವಾಗಿ ಕಾಂಗ್ರೆಸ್‌ನ ಹಾಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಜೆಡಿಎಸ್‌ನ ಚೆಕ್ ಮೇಟ್‌ನಿಂದ ಗಲಿಬಿಲಿಗೊಂಡಿದ್ದಾರೆ. 73 ವರ್ಷ ದಾಟಿರುವ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಎಂ.ಟಿ.ಕೃಷ್ಣಪ್ಪಗೂ ಸಹ 2023 ಕೊನೆಯ ಚುನಾವಣೆ. ಯುವ ಕಾಂಗ್ರೆಸ್‌ನಿಂದ ಹೋರಾಟ ಮಾಡಿಕೊಂಡು ರಾಜಕೀಯವಾಗಿ ಸ್ವ-ಸಾಮರ್ಥ್ಯದ ಮೇಲೆ ಬೆಳೆದಿರುವ ರೆಬೆಲ್ ನಾಯಕ ಕೆಎನ್ನಾರ್ ಈಗ ಹಳೆಯ ರಾಜಣ್ಣರಾಗಿ ಉಳಿದಿಲ್ಲ. ಮಾಗಿರುವ ಜತೆ ಬಾಗಿರುವ ರಾಜಣ್ಣಗೆ ಪುತ್ರ ರಾಜೇಂದ್ರನನ್ನು ವಿಧಾನ ಪರಿಷತ್‌ಗೆ ಗೆಲ್ಲಿಸಿಕೊಂಡ ಬಳಿಕ ಈ ಚುನಾವಣಾ ರಾಜಕೀಯವೇ ಸಾಕು ಎನಿಸಿಬಿಟ್ಟಿದೆ. ಮುಂಬರುವ ಚುನಾವಣೆ ಕಡೆಯ ಹೋರಾಟ ಎಂದು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ.

    ವೀರಭದ್ರಯ್ಯಗೆ ಮತ್ತೆ ಉತ್ಸಾಹ: ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ 6 ಸಾರ್ವತ್ರಿಕ, 1 ಉಪಚುನಾವಣೆ ಎದುರಿಸಿ 3 ಬಾರಿ ಗೆದ್ದಿದ್ದರು. ರಾಜಕೀಯ ಜೀವನದಲ್ಲಿ ಸಾಕಷ್ಟು ಸೋತು ಸುಣ್ಣಾಗಿದ್ದಾರೆ. ಈಗಾಗಲೇ ಎಂಟಿಕೆ ಕೂಡ ಕೊನೆಯ ಚುನಾವಣೆ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಟಿಕೆಟ್‌ಗಾಗಿ ಪೈಪೋಟಿ ನಡೆಸಿರುವ ಕಾಂಗ್ರೆಸ್ ಮಾಜಿ ಶಾಸಕ ಕೆ.ಷಡಕ್ಷರಿಗೂ ಹೋರಾಟದ ಕಸುವು ಉಳಿದಿಲ್ಲ. ಪಾವಗಡದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಪುತ್ರನಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧರಿರುವರಾದರೂ ವರಿಷ್ಠರ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ. ಆರೋಗ್ಯದ ನೆಪವೊಡ್ಡಿ ಚುನಾವಣಾ ರಾಜಕೀಯದಿಂದಲೇ ಹಿಂದೆ ಸರಿಯುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರಥ್ಯದ ಪಂಚರತ್ನ ಯಾತ್ರೆ ಹೊಸ ಚೈತನ್ಯ ತುಂಬಿದೆ. ಇದು ಇನ್ನೊಂದು ಚುನಾವಣೆ ಎದುರಿಸುವ ಶಕ್ತಿ, ಉತ್ಸಾಹವನ್ನು ವೀರಭದ್ರಯ್ಯ ಅವರಲ್ಲಿ ಮೂಡಿಸಿದೆ.

    ಸೊಗಡು ಕಡೇ ಆಟ !
    ಮಾಜಿ ಸಚಿವ ಸೊಗಡು ಶಿವಣ್ಣಗೆ ಈಗ 76 ವರ್ಷ. 1994ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದು, ತುಮಕೂರು ನಗರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು. ಆ ನಂತರ 1999, 2004, 2008ರಲ್ಲಿ ಸತತ ಗೆಲುವು ಸಾಧಿಸಿ 4 ಬಾರಿ ಶಾಸಕ, 2 ಬಾರಿ ಮಂತ್ರಿ ಕೂಡ ಆಗಿದ್ದರು. 2013ರಲ್ಲಿ ಬಿಜೆಪಿ-ಕೆಜೆಪಿ ಇಬ್ಭಾಗವಾದ ಕಾರಣ ಸೋಲುಂಡ ಶಿವಣ್ಣಗೆ 2018ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿತು. ಹಾಗಾಗಿ, ಈ ಬಾರಿ ಪಕ್ಷದಿಂದಲೇ ಟಿಕೆಟ್ ಪಡೆಯುವ ಹಠಕ್ಕೆ ಬಿದ್ದಿರುವ ಸೊಗಡು ಶಿವಣ್ಣ ಬೆಂಬಲಿಗರು ಇದು ಕಡೇ ಆಟ ಎಂದು ಹೇಳುತ್ತಿರುವುದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.

    ಪರಂ, ಜೆಸಿಎಂ ಅವರಲ್ಲಿನ್ನೂ ಛಲ: 

    ‘ಇದು ನನ್ನ ಕೊನೆಯ ಚುನಾವಣೆ’; ಭಾವನಾತ್ಮಕವಾಗಿ ಮತದಾರರ ಸೆಳೆಯಲು ಶಾಸಕರ ಯತ್ನ
    ಡಾ.ಜಿ.ಪರಮೇಶ್ವರ್‌

    ‘ಇದು ನನ್ನ ಕೊನೆಯ ಚುನಾವಣೆ’; ಭಾವನಾತ್ಮಕವಾಗಿ ಮತದಾರರ ಸೆಳೆಯಲು ಶಾಸಕರ ಯತ್ನ

    ಮಾಧುಸ್ವಾಮಿ

    ಮಾಜಿ ಡಿಸಿಎಂ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ಗೆ 72 ವರ್ಷ ತುಂಬುತ್ತಿದೆ. ಆದರೆ, ಚುನಾವಣಾ ಹೋರಾಟದಲ್ಲಿ ದಣಿದಂತೆ ಪರಂ ಎಲ್ಲೂ ತೋರಿಸಿಕೊಳ್ಳುತ್ತಿಲ್ಲ. 1989ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಪರಮೇಶ್ವರ್ 1994ರಲ್ಲಿ ಸೋಲುಂಡಿದ್ದರು. 1999, 2004 ಮಧುಗಿರಿ ಕ್ಷೇತ್ರ ಪ್ರತಿನಿಧಿಸಿದ ಬಳಿಕ ಕ್ಷೇತ್ರ ಮರುವಿಂಗಡಣೆ ಬಳಿಕ ಕೊರಟಗೆರೆ ಕ್ಷೇತ್ರಕ್ಕೆ ವಲಸೆ ಬಂದು 2008ರಲ್ಲಿ ಗೆಲುವು ಕಂಡಿದ್ದರು. 2013ರಲ್ಲಿ ಸ್ವಪಕ್ಷೀಯರ, ಹಿತಶತ್ರುಗಳ ವ್ಯೆಹಕ್ಕೆ ಸಿಲುಕಿ ಕಂಡ ಸೋಲು ಪರಂ ಅವರನ್ನು ಜಜ್ಜರಿತಗೊಳಿಸಿತು. 2018ರಲ್ಲಿ ಗೆದ್ದು ಉಪಮುಖ್ಯಮಂತ್ರಿ ಹುದ್ದೆಗಿಟ್ಟಿಸಿಕೊಂಡರಾದರೂ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬಾಳಲಿಲ್ಲ. ಅವರಲ್ಲಿನ್ನೂ ಹುಮ್ಮಸ್ಸು ಕಡಿಮೆ ಆಗಿಲ್ಲ. 1989ರಲ್ಲಿ ಜನತಾದಳ ಮೂಲಕ ಶಕ್ತಿಸೌಧ ಪ್ರವೇಶಿಸಿದ್ದ ಮಾಧುಸ್ವಾಮಿ ಸೋಲು-ಗೆಲುವು ಸಮಚಿತ್ತದಿಂದ ಸ್ವೀಕರಿಸಿದ್ದಾರೆ. 1997ರ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಜೆಸಿಎಂ 2004ರಲ್ಲಿ ಜೆಡಿಯು ಮೂಲಕ 3ನೇ ಬಾರಿ ಶಾಸಕರಾದರು. ಜನತಾಪರಿವಾರದ ಮಾಧುಸ್ವಾಮಿ 2013ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಜತೆಗೆ ಕೆಜೆಪಿ ಸೇರಿ ಸೋಲುಂಡಿದ್ದರು. 2018ರಲ್ಲಿ ಬಿಜೆಪಿ ಸೇರಿ ಗೆದ್ದು ಸಮ್ಮಿಶ್ರ ಸರ್ಕಾರದ ಪತನ ಬಳಿಕ ಬಿಎಸ್‌ವೈ, ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದ ಜೆಸಿಎಂ 70 ವರ್ಷ ದಾಟಿದರೂ ಅವರಲ್ಲಿನ್ನೂ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts