More

    Vijayavani Yugadi Special; ವಿದೇಶಗಳಲ್ಲಿ ಹೀಗೆ ನಡೆಯುತ್ತೆ ಎಲೆಕ್ಷನ್​

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದೇ ಏಪ್ರಿಲ್​ನಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅಂತೆಯೇ, ಈ ಬಾರಿ ಜಗತ್ತಿನಾದ್ಯಂತ ಜನಾದೇಶ ಪರ್ವ ರಂಗೇರಿದ್ದು, 50ಕ್ಕೂ ಅಧಿಕ ದೇಶಗಳಲ್ಲಿ ಚುನಾವಣೆ ನಡೆಯಲಿವೆ. ಬಾಂಗ್ಲಾದೇಶ, ಪಾಕಿಸ್ತಾನ, ರಷ್ಯಾದಲ್ಲಿ ವರ್ಷಾರಂಭದಲ್ಲೇ ಚುನಾವಣೆ ಮುಗಿದಿದೆ. ಇತರ ಬೃಹತ್ ರಾಷ್ಟ್ರಗಳಲ್ಲಿ ಚುನಾವಣೆ ಹೇಗೆ ನಡೆಯುತ್ತೆ, ಅಲ್ಲಿನ ಪ್ರಕ್ರಿಯೆ ಸರಳವೋ, ಸಂಕೀರ್ಣವೋ ಎಂಬ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    Vijayavani Yugadi Special; ವಿದೇಶಗಳಲ್ಲಿ ಹೀಗೆ ನಡೆಯುತ್ತೆ ಎಲೆಕ್ಷನ್​

    ಅಮೆರಿಕದಲ್ಲಿ ದೀರ್ಘ ಪ್ರಕ್ರಿಯೆ : ಮತದಾರರ ಸಂಖ್ಯೆ 23.92 ಕೋಟಿ

    ಚುನಾವಣೆಯಲ್ಲಿ ಜನರು ಅಧ್ಯಕ್ಷರನ್ನು ನೇರವಾಗಿ ಚುನಾಯಿಸುವುದಿಲ್ಲ. ಅಮೆರಿಕದ ಚುನಾಯಕ ಸಮುದಾಯ (ಇಲೆಕ್ಟೋರಲ್ ಕಾಲೇಜ್) ಎನ್ನಲಾಗುವ ವ್ಯವಸ್ಥೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಆಯ್ಕೆ ಯಾರು ಎಂಬುದನ್ನು ನಾಗರಿಕರು ಮತದಾನದ ಮೂಲಕ ಚುನಾಯಿಸುತ್ತಾರೆ. ಹೀಗೆ ಚುನಾಯಿತರಾದವರು ರಾಷ್ಟ್ರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇರವಾಗಿ ಚುನಾಯಿಸುತ್ತಾರೆ. ಒಕ್ಕೂಟದ ಕಾನೂನುಗಳು ಮತ್ತು ಸಂಸ್ಥಾನದ ಕಾನೂನುಗಳ ಸಂಯೋಜನೆಯೊಂದು ಈ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಅಮೆರಿಕದ ಪ್ರತಿ ಸಂಸ್ಥಾನಕ್ಕೂ, ಅಂದರೆ ರಾಜ್ಯಕ್ಕೂ ನಿರ್ದಿಷ್ಟ ಸಂಖ್ಯೆಯ ಅಧ್ಯಕ್ಷ ಚುನಾಯಕ ಸಮುದಾಯದ ಸದಸ್ಯರನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಅಮೆರಿಕದ ಕಾಂಗ್ರೆಸ್​ನಲ್ಲಿನ ಅದರ ಸೆನೆಟರ್​ಗಳು ಮತ್ತು ಪ್ರತಿನಿಧಿಗಳ ಸಂಖ್ಯೆಗೆ ಈ ಚುನಾಯಕ ಸದಸ್ಯರ ಸಂಖ್ಯೆ ಸಮನಾಗಿರುತ್ತದೆ.

    ಬೇಕು 270 ಮತ: ಚುನಾಯಿತ ಸದಸ್ಯರನ್ನು ಆರಿಸುವ ವಿಧಾನವನ್ನು ನಿಯೋಜಿಸುವುದಕ್ಕೆ ಪ್ರತಿ ಸಂಸ್ಥಾನದ ಶಾಸನಸಭೆಗೆ ಅವಕಾಶ ನೀಡಲಾಗಿರುತ್ತದೆ. ಹೀಗಾಗಿ ಚುನಾವಣೆಯ ದಿನದಂದು ನಡೆಯುವ ಸಾರ್ವಜನಿಕ ಮತದಾನವನ್ನು ವಿವಿಧ ಸಂಸ್ಥಾನಗಳು ನಿರ್ವಹಿಸುತ್ತವೆಯೇ ಹೊರತು, ಫೆಡರಲ್ ಸರ್ಕಾರ ಇದರಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದಿಲ್ಲ. ಅಂದರೆ, ಪರೋಕ್ಷ ಚುನಾವಣೆ ಮೂಲಕ ನಡೆಯುವ ಅಧ್ಯಕ್ಷರ ಆಯ್ಕೆಯಲ್ಲಿ ಸಾರ್ವಜನಿಕರ ನೇರ ತೊಡಗಿಸಿಕೊಳ್ಳುವಿಕೆ ಅಥವಾ ಜನಪ್ರಿಯ ಮತಗಳಿಗೆ ಅವಕಾಶವಿರುವುದಿಲ್ಲ; ಬದಲಿಗೆ 435 ಮಂದಿ ಮತದಾರರ ಪ್ರತಿನಿಧಿಗಳು ಮತ್ತು ಪ್ರತಿ ಸಂಸ್ಥಾನ/ರಾಜ್ಯದಿಂದ ಇಬ್ಬರು ಸೆನೆಟರುಗಳಂತೆ ಒಟ್ಟು 100 ಮಂದಿ ಸೆನೆಟರುಗಳು ಅಧ್ಯಕ್ಷರ ನೇರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಚುನಾಯಕ ಸದಸ್ಯರು ಯಾರಿಗೆ ಬೇಕಾದರೂ ಮತ ನೀಡಬಹುದು, ಆದರೆ ಅವರು ತಮ್ಮ ನಿಯೋಜಿತ ಅಭ್ಯರ್ಥಿಗೇ ಮತ ನೀಡುವುದು ವಾಡಿಕೆ (ಕೆಲ ಸಂದರ್ಭ ಹೊರತುಪಡಿಸಿ). ಅವರ ಮತಗಳನ್ನು ಜನವರಿ ಆರಂಭದಲ್ಲಿ ಪ್ರಮಾಣೀಕರಿಸುವ ಕಾಂಗ್ರೆಸ್, ಚುನಾಯಕ ಸದಸ್ಯರ ಅಂತಿಮ ತೀರ್ಪಗಾರನಾಗಿರುತ್ತದೆ. ಅಮೆರಿಕದಲ್ಲಿ ಒಟ್ಟು 50 ಸಂಸ್ಥಾನ/ರಾಜ್ಯಗಳಿದ್ದು ಇವು ಒಟ್ಟಾರೆಯಾಗಿ 538 ಸ್ಥಾನಗಳನ್ನು ಹೊಂದಿವೆ. ಒಬ್ಬ ಪ್ರತಿನಿಧಿಗೆ ಒಂದು ಮತ. ಅಮೆರಿಕದ ಅಧ್ಯಕ್ಷನಾಗಲು ಅಭ್ಯರ್ಥಿ ಕನಿಷ್ಠ 270 ಮತಗಳನ್ನು ಪಡೆಯಬೇಕು.

    Vijayavani Yugadi Special; ವಿದೇಶಗಳಲ್ಲಿ ಹೀಗೆ ನಡೆಯುತ್ತೆ ಎಲೆಕ್ಷನ್​

    ಬ್ರಿಟನ್​ನಲ್ಲಿ ಮತದಾನವೇ ಸುಪ್ರೀಂ: ಬ್ರಿಟನ್​ನಲ್ಲಿ ಒಟ್ಟು 650 ಹೌಸ್ ಆಫ್ ಕಾಮನ್ಸ್​ನ (ನಮ್ಮಲ್ಲಿ ಸಂಸದೀಯ ಕ್ಷೇತ್ರಗಳಿರುವಂತೆ) ಕ್ಷೇತ್ರಗಳಿವೆ. ಪ್ರತಿಕ್ಷೇತ್ರದಲ್ಲಿ ಗೆದ್ದವರು ಹೌಸ್ ಆಫ್ ಕಾಮನ್ಸ್​ನಲ್ಲಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವುಗಳ ಪೈಕಿ ಗರಿಷ್ಠ 533 ಕ್ಷೇತ್ರಗಳು ಇಂಗ್ಲೆಂಡ್​ನಲ್ಲೂ, 59 ಸ್ಕಾಟ್ಲೆಂಡ್​ನಲ್ಲೂ, 40 ವೇಲ್ಸ್​ನಲ್ಲೂ, 18 ಐರ್ಲೆಂಡ್​ನಲ್ಲೂ ಇವೆ. ಈ ಚುನಾವಣಾ ವ್ಯವಸ್ಥೆಯನ್ನು ‘ಊಜ್ಟಿಠಠಿ ಕಚಠಠಿ ಠಿಜಛಿ ಕಟಠಠಿ’ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂದರೆ, ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಸಂಸದನಾಗಿ ಆಯ್ಕೆಯಾಗುತ್ತಾನೆ. ಬಹುಮತ ಪಡೆದ ಅಥವಾ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗುತ್ತದೆ. ಎರಡನೇ ಸ್ಥಾನದ ಪಕ್ಷವು ವಿಪಕ್ಷ ಸ್ಥಾನದಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ. 18 ವರ್ಷ ಮತ್ತು ಮೇಲ್ಪಟ್ಟ ಎಲ್ಲ ವಯೋಮಾನದವರು ಮತದಾನಕ್ಕೆ ಅರ್ಹರು. 2025 ಜನವರಿ 28ಕ್ಕೆ ಮುಂಚೆ ಈ ಬಾರಿಯ ಚುನಾವಣೆ ಪ್ರಕ್ರಿಯೆ ಮುಗಿದು, ಹೊಸ ಸಂಸತ್ ಅಸ್ತಿತ್ವಕ್ಕೆ ಬರಬೇಕಿದೆ.

    ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆಗಳು ಒಟ್ಟಿಗೇ ನಡೆಯುತ್ತವೆ. ಅಂದರೆ, ‘ಒಂದು ದೇಶ-ಒಂದು ಚುನಾವಣೆ’ಯನ್ನು ದ.ಆಫ್ರಿಕಾ ಈಗಾಗಲೇ ಅಳವಡಿಸಿಕೊಂಡಿದೆ. ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆ (ನಮ್ಮಲ್ಲಿನ ವಿಧಾನಸಭೆ ಚುನಾವಣೆಯಂತೆ) ನಡೆದ ಎರಡು ವರ್ಷಗಳ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತದೆ. ಇದೇ ವರ್ಷದ ಮೇ 29ರಂದು ಇಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆ ನಡೆಯಲಿದೆ. 18 ವರ್ಷ ತುಂಬಿದ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಸಿನವರೂ ಮತದಾನಕ್ಕೆ ಅರ್ಹರು. 1994ರ ಮುಂಚೆ ಈ ಪರಿಸ್ಥಿತಿ ಇರಲಿಲ್ಲ. ವರ್ಣಭೇದ ನೀತಿ ಬೇರುಬಿಟ್ಟಿತ್ತು ಮತ್ತು ಕಪು್ಪವರ್ಣೀಯರಿಗೆ ಮತಾಧಿಕಾರವೇ ಇರಲಿಲ್ಲ. ಆದರೆ, 1994ರಲ್ಲಿ ಈ ನ್ಯೂನತೆಯನ್ನು ಹೊಗಲಾಡಿಸಿ, ವಯಸ್ಸಿನ ಆಧಾರದ ಮೇಲೆ ಮತಾಧಿಕಾರ ನೀಡಲಾಯಿತು. ಇಲ್ಲಿ ಅಧ್ಯಕ್ಷರೇ ಸಂಸದೀಯ ವ್ಯವಸ್ಥೆಯ ಮುಖ್ಯಸ್ಥರು.

    ಪ್ರಕ್ರಿಯೆ: ಜನರು ಇಲ್ಲಿ ನೇರವಾಗಿ ರಾಷ್ಟ್ರಾಧ್ಯಕ್ಷರನ್ನು ಚುನಾಯಿಸುವುದಿಲ್ಲ. ಬದಲಿಗೆ, ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ. ಪಕ್ಷಗಳಿಗೆ ಈ ಮತಗಳ ಆಧಾರದ ಮೇಲೆ 400 ಸ್ಥಾನಗಳ ಸಂಸತ್ತಿನಲ್ಲಿ ಸ್ಥಾನ (ಸೀಟು) ಹಂಚಿಕೆ ಮಾಡ ಲಾಗುತ್ತದೆ. ಈ ಪಕ್ಷಗಳ ಪ್ರತಿನಿಧಿಗಳು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ವರ್ಣನೀತಿ ವಿರುದ್ಧ ಜನಾಂದೋಲನ ನಡೆಸಿದ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್​ಸಿ) ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ (1994ರಿಂದ) ಅಧಿಕಾರದಲ್ಲಿದೆ.

    Vijayavani Yugadi Special; ವಿದೇಶಗಳಲ್ಲಿ ಹೀಗೆ ನಡೆಯುತ್ತೆ ಎಲೆಕ್ಷನ್​

    ಚೀನಾದಲ್ಲಿ ಹೆಸರಿಗಷ್ಟೇ ಚುನಾವಣೆ:  ಚೀನಾ ಕೇಂದ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಒಟ್ಟು ಐದು ಪೀಪಲ್ಸ್ ಕಾಂಗ್ರೆಸ್ಸನ್ನು ಹೊಂದಿದೆ. ಇಲ್ಲಿ ಸರ್ಕಾರದ ವೆಚ್ಚದಲ್ಲಿ ಮತ್ತು ಸರ್ಕಾರದ ಕಣ್ಗಾವಲಿನಲ್ಲೇ ಮತದಾನ ನಡೆಯುತ್ತದೆ. 18 ವರ್ಷ ಮತ್ತು ಮೇಲ್ಪಟ್ಟವರು ಮತದಾನಕ್ಕೆ ಅರ್ಹರು. ನೇರ ಮತ್ತು ಪರೋಕ್ಷ ಚುನಾವಣೆ ಎರಡೂ ಜಾರಿಯಲ್ಲಿದೆ. ಸ್ಥಳೀಯ ಸಂಸ್ಥೆಗಳಿಗೆ ಮತದಾರರು ನೇರವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ರಾಷ್ಟ್ರೀಯ ಚುನಾವಣೆಗಳಲ್ಲಿ ಜನರ ಮತದಾನದ ಆಧಾರದ ಮೇಲೆ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುತ್ತವೆ. ಅಲ್ಲದೆ, ರಾಷ್ಟ್ರೀಯ ಚುನಾವಣೆಗಳು ಅಧ್ಯಕ್ಷರ ಮರ್ಜಿಯಂತೆ ನಡೆಯುವುದರಿಂದ, ಹೆಸರಿಗಷ್ಟೇ ಚುನಾವಣೆ ವ್ಯವಸ್ಥೆ ಇದೆ. ಕೆಲ ಸ್ವಾಯತ್ತ ಪ್ರದೇಶಗಳಿಗೆ ಬೇರೆ ನಿಯಮಗಳು ಅನ್ವಯವಾಗುತ್ತವೆ. ಕಮ್ಯೂನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಅಧ್ಯಕ್ಷ ಮತ್ತು ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸುತ್ತದೆ. ಸೇನೆಯ ಆಯಕಟ್ಟಿನ ಹುದ್ದೆಗಳಿಗೂ ಈ ಸಮಿತಿಯೇ ಆಯ್ಕೆ ಮಾಡುತ್ತದೆ. ಕಮ್ಯೂನಿಸ್ಟ್ ಪಕ್ಷದಲ್ಲಿ 365 ಸದಸ್ಯರಿದ್ದು ಬಹುಮತ ಅಥವಾ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. 24 ಸದಸ್ಯರ ಸ್ಥಾಯಿ ಸಮಿತಿ ಆಡಳಿತದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತದೆ.

    ಸ್ವಾರಸ್ಯಕರ ಸಂಗತಿಗಳು…

    • ಚುನಾವಣೆ ವ್ಯವಸ್ಥೆ ಜಾರಿ ಇರುವ ಪ್ರಪಂಚದ 226 ದೇಶಗಳ ಪೈಕಿ 112 ದೇಶಗಳು ಮತದಾರರ ನೋಂದಣಿಯನ್ನು ಕಡ್ಡಾಯಗೊಳಿಸಿವೆ. ಅರ್ಜೆಂಟೀನಾ, ಚಿಲಿ, ಹಂಗೇರಿ, ಇಸ್ರೇಲ್, ನೆದರ್ಲೆಂಡ್ ಮತ್ತು ಇತರೆಡೆಗಳಲ್ಲಿ, ಜನಗಣತಿ ಎಣಿಕೆಯಂತಹ ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಮತದಾರರ ನೋಂದಣಿ ನಡೆಯುತ್ತದೆ. ಇಲ್ಲಿ ಜನರೇ ತೆರಳಿ ನೋಂದಣಿ ಮಾಡಿಸಬೇಕು ಎಂದೇನಿಲ್ಲ. ಸರ್ಕಾರಿ ದಾಖಲೆಗಳ ಪ್ರಕಾರ ಅಧಿಕಾರಿಗಳೇ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತಾರೆ. ಆದರೆ, ನ್ಯೂಜಿಲೆಂಡ್, ಟೊಂಗಾ ಮತ್ತು ಯುನೈಟೆಡ್ ಕಿಂಗ್​ಡಮ್ ಸೇರಿದಂತೆ ಕೆಲವು ದೇಶಗಳಲ್ಲಿ ಜನರೇ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಈ ನೋಂದಣಿ ಮಾಡಲು ವಿಫಲವಾದರೆ ಈ ಮೇಲ್ಕಂಡ ರಾಷ್ಟ್ರಗಳಲ್ಲಿ ದಂಡ ವಿಧಿಸಲಾಗುತ್ತದೆ.
    • ಬಹುಪಾಲು ದೇಶಗಳು ಮತ್ತು ಪ್ರಾಂತ್ಯಗಳು ರಾಷ್ಟ್ರೀಯ ಚುನಾವಣೆಗಳಿಗೆ ಹೊಂದಿರುವ ಮತದಾನದ ವಯಸ್ಸು 18. 205 ದೇಶಗಳಲ್ಲಿ ಕನಿಷ್ಠ ಮತದಾನದ ವಯಸ್ಸು 18. ಕೇವಲ 12 ದೇಶಗಳು ಅಥವಾ ಪ್ರಾಂತ್ಯಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಾಷ್ಟ್ರೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡುತ್ತವೆ. ಉದಾಹರಣೆಗೆ, ಅರ್ಜೆಂಟೀನಾ, ಆಸ್ಟ್ರಿಯಾ ಮತ್ತು ಬ್ರೆಜಿಲ್. ಇಲ್ಲಿ 16ನೇ ವಯಸ್ಸಿಗೇ ಮತಾಧಿಕಾರ ಪ್ರಾಪ್ತವಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ 25 ವರ್ಷವಾದರೆ ಮಾತ್ರ ಮತ ಹಾಕಬಹುದು. ಇಟಲಿಯಲ್ಲಿ ಸಂಸತ್ತಿನ ಕೆಳಮನೆಗೆ ಮತದಾನ ಮಾಡಲು 18 ವರ್ಷ ಆಗಿರಬೇಕು, ಆದರೆ ಸೆನೆಟ್ ಚುನಾವಣೆಗಳಲ್ಲಿ ಮತ ಚಲಾಯಿಸಲು 25 ವರ್ಷ ಆಗಿರಬೇಕು.
    • ಅಮೆರಿಕ, ಭಾರತ, ಸಿಂಗಾಪುರ ಸೇರಿ ಹಲವು ರಾಷ್ಟ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯಾಗುತ್ತಿದೆ. ಹೆಚ್ಚಿನ ದೇಶಗಳು ಇಂದಿಗೂ ಮತಪತ್ರಗಳನ್ನು ಬಳಸುತ್ತಿದ್ದರೂ, ಕ್ರಮೇಣವಾಗಿ ಇವಿಎಂ ಬಳಕೆಯತ್ತ ವಾಲುತ್ತಿವೆ.
    • ಆನ್​ಲೈನ್ ಮೂಲಕ ಮತ ಚಲಾಯಿಸುವ ಅವಕಾಶ ನಾಲ್ಕು ರಾಷ್ಟ್ರಗಳಲ್ಲಿ ಲಭ್ಯವಿದೆ-ಅಮೇನಿಯಾ, ಕೆನಡಾ,ಎಸ್ಟೋನಿಯಾ ಮತ್ತು ಸ್ವಿಜರ್ಲೆಂಡ್.

    ಧನಸಂಗ್ರಹದ ಕಸರತ್ತು

    • ಚುನಾವಣೆಗೆಂದು ಅಭ್ಯರ್ಥಿ ಖರ್ಚುಮಾಡುವ ಹಣದ ಬಹುದೊಡ್ಡ ಭಾಗ ಆತ ಪ್ರತಿನಿಧಿಸುವ ರಾಜಕೀಯ ಪಕ್ಷದಿಂದ (ಅಂದರೆ ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್) ಬರುತ್ತದೆ.
    • ಕಂಪನಿಗಳು-ವ್ಯಕ್ತಿಗಳು-ಒಕ್ಕೂಟಗಳಿಂದ ಹಣ ಸಂಗ್ರಹಿಸುವ ರಾಜಕೀಯ ಕ್ರಿಯಾ ಸಮಿತಿಗಳು ಕೂಡ ಅಭ್ಯರ್ಥಿಗಳಿಗೆ ಗಣನೀಯ ಮೊತ್ತದ ಹಣ ನೀಡುತ್ತವೆ.
    • ಇವೆರಡು ವ್ಯವಸ್ಥೆಗಳನ್ನು ಹೊರತುಪಡಿಸಿ ಅಭ್ಯರ್ಥಿಯು ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಹಣ ಸಂಗ್ರಹಿಸುತ್ತಾರೆ. ದೇಣಿಗೆಗಳಿಗೆ ದಾಖಲೆಗಳನ್ನಿಡುವುದು ಕಡ್ಡಾಯ.

    ಸ್ಪರ್ಧಾ ನಿಯಮ

    • ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಕ್ಕಿರುವ ನಿಯಮಗಳು
    • ಅಭ್ಯರ್ಥಿಯು ಹುಟ್ಟಿನಿಂದ ಅಮೆರಿಕದ ಪ್ರಜೆಯಾಗಿರಬೇಕು.
    • ಕನಿಷ್ಠ 35 ವರ್ಷ ವಯಸ್ಸಿನವನಾಗಿರಬೇಕು
    • ಕನಿಷ್ಠ 14 ವರ್ಷಗಳ ಕಾಲ ಅಮೆರಿಕದ ನಿವಾಸಿಯಾಗಿರಬೇಕು.

    | ರವೀಂದ್ರ ಎಸ್​.ದೇಶಮುಖ್​, ವಿಜಯವಾಣಿ

    (ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)

    ಪಂಜಾಬ್​: ತಾಯಿಯನ್ನು ಅರೆಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ಸೊಸೆಯ ಕುಟುಂಬಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts