More

    ನಿತ್ಯವೂ ಆಹಾರದಲ್ಲಿ ಇರಲೇಬೇಕಾದ ಪದಾರ್ಥ ಇದು; ಮಳೆಗಾಲದಲ್ಲಂತೂ ಬೇಕೇಬೇಕು! ಯಾವುದದು?

    • ಡಾ. ವೆಂಕಟ್ರಮಣ ಹೆಗಡೆ

    ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿ ಕಡಿಮೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಜೀರ್ಣಶಕ್ತಿ ಕಡಿಮೆ ಇರುವ ಕಾಲದಲ್ಲಿ ಅಗ್ನಿ ಬಲವನ್ನು ಹೆಚ್ಚಿಸುವ ಮತ್ತು ಉಷ್ಣಗುಣವನ್ನು ಹೊಂದಿರುವ ಆಹಾರ ದ್ರವ್ಯಗಳು ಆರೋಗ್ಯಕ್ಕೆ ಹಿತಕಾರಿಯಾಗುತ್ತವೆ. ಆದರೆ ಕಾಳುಮೆಣಸು, ಜೇನುತುಪ್ಪದಂತಹ ಆಹಾರ ಪದಾರ್ಥಗಳನ್ನು ಸೇವಿಸಿದರೆ ಕೆಲವರಿಗೆ ತುಂಬಾ ಉಷ್ಣವಾಗಿ ಸಮಸ್ಯೆಯಾಗುತ್ತದೆ. ಆದರೆ ಶುಂಠಿ ಉಷ್ಣಗುಣವನ್ನು ಹೊಂದಿದ್ದರೂ ಮಿತಿಯಲ್ಲಿ ಸೇವಿಸಿದರೆ ಬಹುತೇಕ ಜನರಿಗೆ ಉಷ್ಣದ ಯಾವುದೇ ಸಮಸ್ಯೆಯನ್ನು ತರುವುದಿಲ್ಲ. ಅಂತಹ ಆಹಾರ ದ್ರವ್ಯಗಳಲ್ಲಿ ಮೊದಲ ಸಾಲಿನಲ್ಲಿ ಬರುವ ಆಹಾರ ಅಥವಾ ಔಷಧವೆಂದರೆ ಅದು ಶುಂಠಿ.

    ಉಷ್ಣ ಅಂತ ದೂರವಿಡಬೇಡಿ!
    ಆಯುರ್ವೇದದ ಪ್ರಕಾರ ನಿತ್ಯವೂ ಬಳಕೆಗೆ ಯೋಗ್ಯವಾದ ಆಹಾರ ಪದಾರ್ಥಗಳಲ್ಲಿ ಶುಂಠಿಯೂ ಒಂದು. ಇದಕ್ಕೆ ಆಯುರ್ವೇದದಲ್ಲಿ ವಿಶ್ವಭೇಷಜ ಎಂಬ ಪರ್ಯಾಯ ಪದ ಇದೆ. ಅಂದರೆ ಇದು ಇಡೀ ಜಗತ್ತಿಗೆ ಔಷದ ಎಂದರ್ಥ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮಗೆಲ್ಲ ಬರುವ ಬಹುತೇಕ ಕಾಯಿಲೆಗಳನ್ನು ನಿವಾರಿಸುವ ಮತ್ತು ತಡೆಯುವ ಶಕ್ತಿ ಶುಂಠಿಗೆ ಇದೆ ಎಂದರ್ಥ. ‘ಸರ್ವೇಪಿ ಮಂದಾಗ್ನೌ’ ಎಂಬ ಮಾತಿದೆ. ಅಂದರೆ ಎಲ್ಲಾ ರೋಗಗಳಿಗೆ ಅಗ್ನಿಮಾಂದ್ಯ ಕಾರಣವಾಗುತ್ತದೆ ಎಂದರ್ಥ. ವಿಶೇಷವಾಗಿ ಮಳೆಗಾಲದಲ್ಲಿ ಅಗ್ನಿಮಾಂದ್ಯವಾಗುವ ಕಾರಣ ಈ ಕಾಲದಲ್ಲಿಯೇ ಬಹಳಷ್ಟು ರೋಗಗಳ ಬಿತ್ತನೆ ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದೆಯೇ ನಡೆದುಬಿಡುತ್ತದೆ. ಅದನ್ನು ತಡೆಯುವ ಶಕ್ತಿ ಶುಂಠಿಗೆ ಇರುವ ಕಾರಣ ಇಂದು ಶುಂಠಿಯ ಗುಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳೋಣ. ಇದನ್ನು ತಿಳಿದುಕೊಂಡರೆ ಶುಂಠಿ ಉಷ್ಣ ಎಂಬ ಕಾರಣಕ್ಕೆ ಅದನ್ನು ದೂರವಿಡುವ ನಮ್ಮ ತಪ್ಪು ಕಲ್ಪನೆ ಹೊರಟುಹೋಗುತ್ತದೆ.

    ದರಿಂದ ಏನೇನು ಪ್ರಯೋಜನ?
    ಆಯುರ್ವೇದದ ಪ್ರಕಾರ, ಶುಂಠಿಯು ಖಾರವಾಗಿದ್ದು ಉಷ್ಣಗುಣವನ್ನು ಹೊಂದಿದ್ದರೂ ಮಧುರ ವಿಪಾಕವನ್ನು ಹೊಂದಿರುವ ಕಾರಣದಿಂದ ಅದರ ಉಷ್ಣ ಗುಣದಿಂದ ಸಮಸ್ಯೆಯಾಗುವುದಿಲ್ಲ. ವಿಪಾಕ ಎಂದರೆ ಜೀರ್ಣಕ್ರಿಯೆಯ ನಂತರ ಆ ದ್ರವ್ಯದ ಗುಣದಲ್ಲಿ ಆಗುವ ಬದಲಾವಣೆ. ಅದೇನೇ ಇದ್ದರೂ ಮಹೌಷಧ ಎಂದು ಕರೆಸಿಕೊಳ್ಳುವ ಶುಂಠಿಯ ಬಳಕೆಯನ್ನು ಮಳೆಗಾಲದಲ್ಲಿ ಯಾವ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮಳೆಗಾಲದಲ್ಲಿ ಮಾಡಿದ ಊಟ ಸುಲಭವಾಗಿ ಜೀರ್ಣವಾಗಲು ಊಟದ ಪ್ರಾರಂಭದಲ್ಲಿ ಚಿಕ್ಕ ಚೂರು ಹಸಿ ಶುಂಠಿಯನ್ನು ತೆಗೆದುಕೊಂಡು ಅದನ್ನು ಉಪ್ಪಿಗೆ ತಾಗಿಸಿ ತಿನ್ನಬೇಕು. ಇದರಿಂದ ಮಾಡಿದ ಊಟ ಜೀರ್ಣವಾಗುವುದಲ್ಲದೇ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವ ಸಮಸ್ಯೆ ಬರುವುದಿಲ್ಲ. ಬಾಯಲ್ಲಿ ಸಪ್ಪೆ ನೀರು ಬರುವುದು, ಆಮಶಂಕೆಯಂತಹ ಸಮಸ್ಯೆ ಆಗುವುದು ಮುಂತಾದ ತೊಂದರೆಗಳೂ ಉಂಟಾಗಲು ಸಾಧ್ಯವಿಲ್ಲ.

    ಯಾವ್ಯಾವ ರೂಪದಲ್ಲಿ ಸೇವಿಸಬಹುದು?
    ಮಳೆಗಾಲದಲ್ಲಿ ಶುಂಠಿಯನ್ನು ತಂಬುಳಿ, ಚಟ್ನಿ ಅಥವಾ ಕಷಾಯದ ರೂಪದಲ್ಲಿ ಆಹಾರವಾಗಿ ಸೇವಿಸಬಹುದು. ಆಯುರ್ವೇದ ಹೇಳುವಂತೆ ಇದನ್ನು ಪ್ರತಿನಿತ್ಯವೂ ಆಹಾರವಾಗಿ ಬಳಕೆ ಮಾಡಬಹುದು. ಅದರಲ್ಲಿಯೂ ವಿಶೇಷವಾಗಿ ಮಳೆಗಾಲದಲ್ಲಿ ಇದನ್ನು ನಿತ್ಯ ಬಳಸಬೇಕು. ಮಳೆಗಾಲದಲ್ಲಿ ಸೈನಸೈಟಿಸ್ ಅಥವಾ ಕಫದ ಕಾರಣದಿಂದ ತಲೆನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ತಲೆನೋವು ಇರುವಾಗ ಶುಂಠಿಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಹಣೆಯ ಮೇಲೆ ಲೇಪ ಮಾಡಿಕೊಂಡರೆ ಕಫ ಕರಗಿ ತಲೆನೋವು ಬೇಗ ಗುಣವಾಗಲು ಸಹಾಯವಾಗುತ್ತದೆ. ಆಮಶಂಕೆ ಇರುವವರಿಗೆ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗುವ ಕಾರಣ ದಿನಕ್ಕೆ ಎರಡರಿಂದ ಮೂರು ಗ್ರಾಂ ಶುಂಠಿಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯಲು ಚರಕ ಸಂಹಿತೆಯಲ್ಲಿ ಹೇಳಿದ್ದಾರೆ. ಶುಂಠಿ ರಸ, ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪಗಳನ್ನು ತಲಾ ಒಂದು ಚಮಚದಂತೆ ಸೇರಿಸಿ ಈ ಮಿಶ್ರಣವನ್ನು ಮೂರು ಭಾಗ ಮಾಡಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಆಹಾರ ಸೇವಿಸುವ ಮೊದಲು ತೆಗೆದುಕೊಂಡರೆ ಅಜೀರ್ಣ, ವಾಂತಿ, ತಲೆನೋವು, ಇಡೀ ದಿನ ನಿದ್ದೆ ಬಂದಂತೆನಿಸುವುದು, ತಲೆಭಾರ ಮುಂತಾದ ಸಮಸ್ಯೆಗಳು ಗುಣವಾಗುತ್ತವೆ. ದೇಹದಲ್ಲಿ ಎಲ್ಲಿಯಾದರೂ ಉರಿಯೂತ ಇದ್ದರೆ ಅದು ಕಡಿಮೆಯಾಗಲು ಸಹಾಯವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಶುಂಠಿಯನ್ನು ಹಲವು ರೀತಿಯ ರಾಸಾಯನಿಕಗಳಲ್ಲಿ ಸಂಸ್ಕರಿಸುವ ಕಾರಣದಿಂದ ಅದು ವಿಷಕಾರಿಯಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ನಾವೇ ಶುಂಠಿಯನ್ನು ಬೆಳೆದುಕೊಳ್ಳಬೇಕು ಅಥವಾ ಸಾವಯವ ಶುಂಠಿಯನ್ನು ಖರೀದಿಸಿ ಬಳಸಬೇಕು. ಇಂಥ ಶುಂಠಿಯ ಬಳಕೆಯೇ ಹೆಚ್ಚು ಸೂಕ್ತ ಹಾಗೂ ಹೆಚ್ಚು ಉಪಯುಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts