More

    ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಈ ಸುಲಭ ಉಪಾಯ ಸಹಕಾರಿ

    ಇಂದು ದೈಹಿಕ ಕಾಯಿಲೆಗಳಿಂದ ಬಳುತ್ತಿರುವವರಿಗಿಂತ ಮನೋದೈಹಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳ ತಂದೆ-ತಾಯಿಯರಿಗೆ ಮಕ್ಕಳ ನೆನಪಿನ ಶಕ್ತಿಯದ್ದೇ ದೊಡ್ಡ ಚಿಂತೆಯಾಗುತ್ತದೆ. ಟಿವಿ, ಮೊಬೈಲ್ ಮುಂತಾದವುಗಳ ಕಾರಣದಿಂದಾಗಿ ಏಕಾಗ್ರತೆಯನ್ನು ಸಾಧಿಸುವುದು ಕೂಡ ಬಹುತೇಕ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುವ ಗುಣವನ್ನು ಬೂದುಗುಂಬಳಕಾಯಿ ಹೊಂದಿದೆ. ಹಾಗಾಗಿ ಇಂದು ನಾವು ಬೂದುಗುಂಬಳಕಾಯಿಯ ಲೇಹ್ಯವನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

    ಬೂದುಗುಂಬಳಕಾಯಿ ತಂಪು ಗುಣವನ್ನು ಹೊಂದಿದ್ದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಲೆಕೂದಲಿನಿಂದ ಹಿಡಿದು ಕಾಲು ಪಾದದವರೆಗೆ ಹಲವಾರು ರೋಗಗಳನ್ನು ನಿಯಂತ್ರಿಸುವ, ಗುಣಪಡಿಸುವ ಮತ್ತು ಮರುಕಳಿಸದಂತೆ ತಡೆಯುವ ಶಕ್ತಿ ಬೂದುಗುಂಬಳಕಾಯಿಗೆ ಇದೆ. ಆಯುರ್ವೇದದಲ್ಲಿ ಬೂದುಗುಂಬಳಕಾಯಿಯ ಬಗ್ಗೆ ವಿವರಿಸುವಾಗ ಮೇಧ್ಯಾ ಎಂದು ಕರೆದಿದ್ದಾರೆ. ಅಂದರೆ ನೆನಪಿನ ಶಕ್ತಿಯನ್ನು, ವಿಷಯಗಳನ್ನು ಗ್ರಹಿಸುವ ಮತ್ತು ಬುದ್ಧಿಯನ್ನು ಉಪಯೋಗಿಸಿ ಅದನ್ನು ಬಳಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಹಾಗಾಗಿ ಇದನ್ನು ಚಿಕ್ಕಮಕ್ಕಳಿಂದ ಹಿಡಿದು ನೂರು ವರ್ಷದ ವೃದ್ಧರವರೆಗೆ ಎಲ್ಲರೂ ಬಳಸುವುದು ಒಳ್ಳೆಯದು. ಆದರೆ ಅದರ ಜ್ಯೂಸ್ ಮಾಡಲು ತೆಗೆದುಕೊಳ್ಳುವ ಸಮಯ, ಹಾಳಾಗದಂತೆ ಇಟ್ಟುಕೊಳ್ಳುವ ಸಮಸ್ಯೆಗಳ ಕಾರಣದಿಂದಾಗಿ ಇದನ್ನು ನಿತ್ಯವೂ ಬಳಸುವುದು ಕಷ್ಟವಾಗುತ್ತದೆ. ಬದಲಿಗೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿದ ಬೂದುಗುಂಬಳಕಾಯಿಯನ್ನು ಬಳಸಿ ತಯಾರಿಸುವ ಕೂಷ್ಮಾಂಡ ರಸಾಯನವನ್ನು ಮಾಡುವ ಮತ್ತು ಬಳಸುವ ವಿಧಾನವನ್ನು ಈಗ ತಿಳಿದುಕೊಳ್ಳೋಣ.

    ಮಾಡುವ ವಿಧಾನ
    ಬೂದುಗುಂಬಳಕಾಯಿಯನ್ನು ತೆಗೆದುಕೊಂಡು ಸಿಪ್ಪೆ ಮತ್ತು ಬೀಜಗಳನ್ನು ಬಿಟ್ಟು ಉಳಿದ ಭಾಗಗಳನ್ನು ಹೋಳುಗಳನ್ನಾಗಿ ಮಾಡಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು. ನಂತರ ಬೆಂದ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಸಾಧ್ಯವಾದಷ್ಟು ನೀರಿನ ಅಂಶವನ್ನು ತೆಗೆಯಬೇಕು. ಬೇಯಿಸಿದಾಗ ಮತ್ತು ರುಬ್ಬಿದ ನಂತರ ಸಿಕ್ಕ ಇದರ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಪಕ್ಕದಲ್ಲಿಡಬೇಕು. ಈಗ ನಮಗೆ ಸಿಕ್ಕ ಬೂದುಗುಂಬಳದ ನುಣ್ಣನೆಯ ಪೇಸ್ಟ್ ಗೆ ಕಾಲುಭಾಗದಷ್ಟು ತುಪ್ಪ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿದು ಒಂದು ಕಡೆ ಇಟ್ಟುಕೊಳ್ಳಬೇಕು. ನಂತರ ಸ್ವಲ್ಪ ಹಿಪ್ಪಲಿ, ಶುಂಠಿ, ಜೀರಿಗೆ, ಚಕ್ಕೆ, ದಾಲ್ಚಿನ್ನಿ ಎಲೆ, ಏಲಕ್ಕಿ, ಕಾಳುಮೆಣಸು ಮತ್ತು ಕೊತ್ತಂಬರಿ ಬೀಜಗಳನ್ನು ಪುಡಿ ಮಾಡಿಟ್ಟುಕೊಳ್ಳಬೇಕು. ಎಲ್ಲ ಸೇರಿ ತುಪ್ಪದ ಅರ್ಧಭಾಗದಷ್ಟು ಆದರೆ ಸಾಕಾಗುತ್ತದೆ.

    ಈಗ ಮೊದಲೇ ತೆಗೆದಿರಿಸಿದ್ದ ಬೂದುಗುಂಬಳಕಾಯಿಯ ನೀರಿಗೆ ಬೂದುಗುಂಬಳದ ಪೇಸ್ಟ್ ನ ಎರಡು ಪಟ್ಟು ಜೋನಿ ಬೆಲ್ಲ ಅಥವಾ ಸಾವಯವ ಸಕ್ಕರೆಯನ್ನು ಹಾಕಿ ಪಾಕ ಬರಿಸಬೇಕು. ಎರಡರಿಂದ ಮೂರೆಳೆಯಷ್ಟು ಪಾಕ ಬರುತ್ತಿದ್ದಂತೆಯೇ ಮೊದಲೇ ಹುರಿದಿಟ್ಟ ಬೂದುಗುಂಬಳಕಾಯಿಯ ಪೇಸ್ಟ್ ಮತ್ತು ಪುಡಿ ಮಾಡಿಟ್ಟ ಹಿಪ್ಪಲಿ ಮುಂತಾದ ದ್ರವ್ಯಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಬೆಂಕಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ತುಪ್ಪದ ಅರ್ಧದಷ್ಟು ಜೇನುತುಪ್ಪವನ್ನು ಹಾಕಿ ಸೇರಿಸಬೇಕು. ಈಗ ತಿನ್ನಲು ರುಚಿಯಾಗಿಯೂ ಇರುವ ಕೂಷ್ಮಾಂಡ ರಸಾಯನ ತಯಾರಾಯಿತು.

    ಆಯುರ್ವೇದ ಗ್ರಂಥಗಳಲ್ಲಿ ನಿಖರವಾದ ಅಳತೆಯನ್ನು ಹೇಳಿದ್ದರೂ ಮನೆಯಲ್ಲಿ ಮಾಡುವಾಗ ತಾಯಂದಿರ ಕಣ್ಣಳತೆಯ ಪ್ರಮಾಣದಲ್ಲಿ ಎಲ್ಲಾ ದ್ರವ್ಯಗಳನ್ನು ಹಾಕಿ ತಯಾರಿಸಿ ಸೇವಿಸಿದರೂ ಅದೇ ಪರಿಣಾಮ ಸಿಗುತ್ತದೆ. ಹೀಗೆ ತಯಾರಾದ ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ಅಕ್ರೋಟ್ ಗಳನ್ನು ಇದರ ಜೊತೆಗೆ ಸೇರಿಸಬಹುದು. ಇವುಗಳಿಂದಲೂ ನೆನಪಿನ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ.

    ಈ ರೀತಿ ತಯಾರಾದ ಲೇಹ್ಯವನ್ನು ಬೆಳಿಗ್ಗೆ ಮತ್ತು ರಾತ್ರಿ ಆಹಾರ ಸೇವಿಸುವ ಸುಮಾರು ಒಂದು ಗಂಟೆ ಮೊದಲು ಒಂದು ಚಮಚದಷ್ಟು ಸೇವಿಸಿ ಬೆಚ್ಚಗಿನ ಹಾಲು ಅಥವಾ ನೀರನ್ನು ಸೇವಿಸಬೇಕು. ಈ ರೀತಿ ಪ್ರತಿನಿತ್ಯ ನಾವು ಇದನ್ನು ತೆಗೆದುಕೊಂಡರೆ ಆಗಲೇ ಹೇಳಿದಂತೆ ಮೇಧಾಶಕ್ತಿಗೆ ಅಂದರೆ ನೆನಪಿನ ಶಕ್ತಿಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರಯೋಜನಗಳು ಸಿಗುವುದರಲ್ಲಿ ಸಂಶಯವಿಲ್ಲ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts