More

    ಹ್ಯಾಟ್ರಿಕ್ ಶತಕ ಸಿಡಿಸಿದ ರೂಟ್, ಲೀಡ್ಸ್‌ನಲ್ಲಿ ಭಾರತಕ್ಕೆ ಭಾರಿ ಹಿನ್ನಡೆ

    ಲೀಡ್ಸ್: ಸತತ 3ನೇ ಟೆಸ್ಟ್‌ನಲ್ಲೂ ಶತಕ ಸಿಡಿಸಿದ ನಾಯಕ ಜೋ ರೂಟ್ (121 ರನ್, 165 ಎಸೆತ, 14 ಬೌಂಡರಿ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಇಂಗ್ಲೆಂಡ್ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಎದುರು ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಭಾರತ, ಪಂದ್ಯ ರಕ್ಷಿಸಿಕೊಳ್ಳಲು ಉಳಿದ 3 ದಿನದಾಟದಲ್ಲಿ ಹರಸಾಹಸ ನಡೆಸಬೇಕಾದ ಸವಾಲು ಎದುರಾಗಿದೆ.

    ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 129 ಓವರ್‌ಗಳಲ್ಲಿ 8 ವಿಕೆಟ್‌ಗೆ 423 ರನ್ ಪೇರಿಸಿದ್ದು, 345 ಮುನ್ನಡೆ ಸಾಧಿಸಿದೆ. ಭಾರತ ಮೊದಲ ದಿನದಾಟದಲ್ಲಿ ಕೇವಲ 78 ರನ್‌ಗೆ ಆಲೌಟ್ ಆಗಿತ್ತು.

    ಇದನ್ನೂ ಓದಿ: VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?

    ಮೊದಲ ದಿನದಾಟದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಬೌಲರ್‌ಗಳು ಕಾಡಿದ್ದರೆ, 2ನೇ ದಿನದಾಟದಲ್ಲಿ ಬ್ಯಾಟ್ಸ್‌ಮನ್‌ಗಳು ಕಾಡಿದರು. ಕ್ರಮವಾಗಿ 52 ಮತ್ತು 60 ರನ್‌ಗಳಿಂದ ದಿನದಾಟ ಆರಂಭಿಸಿದ ರೋರಿ ಬನ್ಸ್ ಹಾಗೂ ಹಸೀಬ್ ಹಮೀದ್ ಜೋಡಿಗೆ ಮೊಹಮದ್ ಶಮಿ ದಿನದಾರಂಭದಲ್ಲೇ ಬ್ರೇಕ್ ಹಾಕಿದರು. ಮೊದಲ ದಿನದಾಟದ 120 ರನ್ ಜತೆಯಾಟಕ್ಕೆ ಈ ಜೋಡಿ ಮತ್ತೆ 15 ರನ್ ಸೇರಿಸಿ ಬೇರ್ಪಟ್ಟಿತು. ರೋರಿ ಬನ್ಸ್ ಅವರನ್ನು ಬೌಲ್ಡ್ ಮಾಡಿದ ಶಮಿ ಕೊಂಚ ನೆಮ್ಮದಿ ತಂದರು. ಇದಾದ ಕೆಲಹೊತ್ತಿನಲ್ಲೇ ಹಮೀದ್ (68) ಕೂಡ ಜಡೇಜಾ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ಜತೆಯಾದ ಡೇವಿಡ್ ಮಲಾನ್ (70 ರನ್, 128 ಎಸೆತ, 11 ಬೌಂಡರಿ) ಹಾಗೂ ಜೋ ರೂಟ್ ಜೋಡಿ ಭಾರತದ ಬೌಲರ್‌ಗಳಿಗೆ ಇನ್ನಿಲ್ಲದಂತೆ ಕಾಡಿತು.

    ದಿನದ ಆರಂಭದಲ್ಲೇ ಆರಂಭಿಕರನ್ನು ಪೆವಿಲಿಯನ್‌ಗೆ ಅಟ್ಟಿ ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕುವ ಯೋಜನೆಯಲ್ಲಿದ್ದ ಬೌಲರ್‌ಗಳಿಗೆ ಈ ಜೋಡಿ ತಿರುಗೇಟು ನೀಡಿತು. ಮೂರು ವರ್ಷಗಳ ಬಳಿಕ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಮಲಾನ್ ಅರ್ಧಶತಕ ಸಿಡಿಸಿ ಮಿಂಚಿದರು. ಮಲಾನ್-ರೂಟ್ ಜೋಡಿ 3ನೇ ವಿಕೆಟ್‌ಗೆ 139 ರನ್ ಕಲೆಹಾಕಿತು. ಮಲಾನ್ ವಿಕೆಟ್ ಕಬಳಿಸುವ ಮೂಲಕ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು.

    ರೂಟ್ ಹ್ಯಾಟ್ರಿಕ್ ಶತಕ
    ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಈಗಾಗಲೇ ಸಾವಿರ ರನ್‌ಗಡಿ ದಾಟಿರುವ ಜೋ ರೂಟ್ ಸರಣಿಯ ಸತತ 3ನೇ ಪಂದ್ಯದಲ್ಲೂ ರನ್‌ಹೊಳೆ ಹರಿಸಿದರು. ಮಲಾನ್ ಜತೆಗೂಡಿ 3ನೇ ವಿಕೆಟ್‌ಗೆ ಉಪಯುಕ್ತ ಶತಕದ ಜತೆಯಾಟವಾಡಿದ್ದ ರೂಟ್ ಅವರನ್ನು ಜಾನಿ ಬೇರ್‌ಸ್ಟೋ (29) ಆಧರಿಸಿದರು. ಬೇರ್‌ಸ್ಟೋ ಅವರಿಂದ ಅಗತ್ಯ ಸಾಥ್ ಗಿಟ್ಟಿಸಿಕೊಂಡ ರೂಟ್, ಮತ್ತೊಂದು ತುದಿಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಸತತ 3ನೇ ಶತಕ ಸಿಡಿಸಿ ಮಿಂಚಿದರು. ರೂಟ್ ಶತಕ ಸಿಡಿಸಿದ ಬೆನ್ನಲ್ಲೇ ಮೊಹಮದ್ ಶಮಿ, ಬೇರ್‌ಸ್ಟೋ ಹಾಗೂ ಜೋಸ್ ಬಟ್ಲರ್ (7) ವಿಕೆಟ್ ಕಬಳಿಸಿದರು. ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ರೂಟ್ ಕೊನೆಗೆ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ದಿನದ ಕೊನೇ ಅವಧಿಯ ಆಟದಲ್ಲಿ ಭಾರತ 5 ವಿಕೆಟ್ ಕಬಳಿಸಿತು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts