More

    ಆನ್​ಲೈನ್ ಮತದಾನಕ್ಕೆ ಚಿಂತನೆ; ಕಡ್ಡಾಯ ಮತದಾನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದ ರಿಜಿಜು

    ನವದೆಹಲಿ: ಮತದಾನ ಕಡ್ಡಾಯ ಮಾಡುವಂತಹ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ಶುಕ್ರವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಮಾಡಲು ಮತದಾನ ಮಾಡಿದ ಪ್ರಮಾಣಪತ್ರ ಹಾಜರು ಪಡಿಸಿದವರಿಗೆ ಮಾತ್ರ ಸರ್ಕಾರಿ ಯೋಜನೆ ದೊರೆಯುವಂತೆ ಮಾಡಬೇಕು ಎಂಬ ಸಲಹೆಯನ್ನು ಕೆಲ ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ನೀಡಿವೆ. ಆದರೆ, ಈ ಬಗ್ಗೆ ಕಾನೂನು ರೂಪಿಸುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.

    ಚುನಾವಣಾ ಅಕ್ರಮವನ್ನು ತಡೆಯಲು ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂಬ ಮನವಿಗಳು ಬಂದಿವೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಸಂಸತ್​ನಲ್ಲಿ ತಿಳಿಸಿದೆ. ಜತೆಗೆ ವಿದೇಶದಲ್ಲಿರುವ ಭಾರತೀಯರಿಗೆ ಅಲ್ಲಿಂದಲೇ ಆನ್​ಲೈನ್ ಮೂಲಕ ವೋಟಿಂಗ್ ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದಕ್ಕೆ ಅಗತ್ಯವಾದ ನಿಯಮಗಳನ್ನು ಚುನಾವಣಾ ಆಯೋಗ ನಿಷ್ಕರ್ಷೆ ಮಾಡಲಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಐಚ್ಛಿಕವಾಗಿದೆಯೇ ಹೊರತು ಕಡ್ಡಾಯವಲ್ಲ. ಇದನ್ನು ಕಡ್ಡಾಯ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಸರ್ಕಾರ ಕೂಡ ‘ಒಂದು ದೇಶ, ಒಂದು ಚುನಾವಣೆ’ ಎಂಬ ಪರಿಕಲ್ಪನೆ ಬಗ್ಗೆ ಪರಿಶೀಲಿಸುತ್ತಿರುವುದರಿಂದ ಆಧಾರ್ ಲಿಂಕ್ ಮಾಡುವ ಸಾಧಕ-ಬಾಧಕದ ಬಗ್ಗೆ ಚಿಂತನೆ ನಡೆಸಿದೆ. ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆ ಹೆಸರು ಇರುವುದನ್ನು ತಡೆಯಲು ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಬೇಕು ಎಂದು ಚುನಾವಣಾ ಆಯೋಗ ಕೂಡ ಕೇಳಿದೆ. ಎಂದು ಪ್ರಶ್ನೋತ್ತರ ವೇಳೆ ಹೇಳಿದ್ದಾರೆ.

    ಚುನಾವಣಾ ಕೆಲಸಕ್ಕೆ ಶಿಕ್ಷಕರು ಬೇಡ: ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಳಿಸಬಾರದು ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಶೂನ್ಯವೇಳೆಯಲ್ಲಿ ಆಗ್ರಹಿಸಿದರು. ಶಿಕ್ಷಕರನ್ನು ಕೆಲಸಕ್ಕೆ ಬಳಸಿಕೊಂಡರೆ ವಿದ್ಯಾರ್ಥಿಗಳ ಪಾಠ-ಪ್ರವಚನಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿದರು.

    ಇವಿಎಂ ಬಗ್ಗೆ ಕಳವಳ ಬೇಡ: ವಿದ್ಯುನ್ಮಾನ ಮತ ಯಂತ್ರ (ಇವಿಎಂ) ತಯಾರಕರು ಅವುಗಳನ್ನು ಪೂರೈಸಿದ ನಂತರ ಅದು ಚುನಾವಣಾ ಆಯೋಗದ ಸುಪರ್ದಿನಲ್ಲಿ ಇರುತ್ತದೆ. ಅದರ ಸುರಕ್ಷತೆ ಮತ್ತು ಕಾರ್ಯಕ್ಷಮತೆ, ಪಾರದರ್ಶಕತೆ ಬಗ್ಗೆ ಅನುಮಾನ ಬೇಡ ಎಂದು ಸರ್ಕಾರ ಹೇಳಿದೆ. ಇವಿಎಂಗಳ ಮೂಲ ಕೋಡ್ ಚುನಾವಣಾ ಆಯೋಗ ಅಥವಾ ಅದನ್ನು ತಯಾರಿಸಿದ ಕಂಪನಿ ಇವೆರಡರಲ್ಲಿ ಯಾರ ಬಳಿ ಇರುತ್ತದೆ ಎಂದು ಕಾಂಗ್ರೆಸ್ ಸದಸ್ಯ ಮನಿಷ್ ತಿವಾರಿ ಲೋಕಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕಿರಣ್ ರಿಜಿಜು, ಇವಿಎಂ ತಯಾರಿಕಾ ಕಂಪನಿಗಳು ಅದನ್ನು ಆಯೋಗಕ್ಕೆ ಪೂರೈಸುತ್ತವೆ. ಹೀಗಾಗಿರುವಾಗ ಕಂಪನಿಗಳು ಇವಿಎಂಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.

    ಆಮ್ಲಜನಕ ಕೊರತೆಯಿಂದ ಸತ್ತಿಲ್ಲ: ಕರೊನಾ ವ್ಯಾಪಕವಾಗಿದ್ದ ಸಮಯದಲ್ಲಿ ಆಮ್ಲಜನಕ ಕೊರತೆ ಯಿಂದ ಸೋಂಕಿತರು ಸತ್ತಿರುವ ಬಗ್ಗೆ ರಾಜ್ಯಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀನ್ ಪವಾರ್ ತಿಳಿಸಿದರು. ಈ ಕುರಿತಂತೆ ಕೆಲವು ರಾಜ್ಯ ಮತ್ತು ಕೇಂದ್ರಡಳಿತ ಪ್ರದೇಶಗಳಿಂದಷ್ಟೆ ಮಾಹಿತಿ ಬಂದಿದ್ದು, ಇದರಲ್ಲಿ ಆಕ್ಸಿಜನ್ ಅಲಭ್ಯತೆಯಿಂದ ಸಾವು ಸಂಭವಿಸಿರುವ ಒಂದು ಪ್ರಕರಣವೂ ಉಲ್ಲೇಖವಾಗಿಲ್ಲ ಎಂದು ಲೋಕಸಭೆಗೆ ತಿಳಿಸಿದರು.

    ತೈಲ ದರ ಏರಿಕೆ ಖಂಡಿಸಿ ಸಭಾತ್ಯಾಗ: ಕಳೆದ ಮೂರು ದಿನಗಳಿಂದ ತೈಲ ದರ ಏರಿಸುತ್ತಿರುವುದನ್ನು ಖಂಡಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ, ನಂತರ ಸಭಾತ್ಯಾಗ ಮಾಡಿದರು. ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದ ತೈಲ ಕಂಪನಿಗಳು ಈಗ ನಿತ್ಯ ಗ್ರಾಹಕರ ಮೇಲೆ ಹೊರೆ ಹೇರುತ್ತಿವೆ. ನಾಲ್ಕೂವರೆ ತಿಂಗಳಿಂದ ತೆಪ್ಪಗಿದ್ದ ಸರ್ಕಾರ ಈಗ ರಷ್ಯಾ-ಯೂಕ್ರೇನ್ ಯುದ್ಧ ಬೆಲೆ ಏರಿಕೆ ಕಾರಣ ಎಂದು ಸಬೂಬು ನೀಡುತ್ತಿದೆ. ಚುನಾವಣೆ ಕಾಲದಲ್ಲೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿದ್ದರೂ, ಇಲ್ಲಿ ಏಕೆ ದರ ಪರಿಷ್ಕರಣೆ ಆಗಲಿಲ್ಲ ಎಂದು ಕಾಂಗ್ರೆಸ್​ನ ಸಂಸದರು ಲೋಕಸಭೆಯ ಶೂನ್ಯವೇಳೆ ಚರ್ಚೆಯಲ್ಲಿ ಖಾರವಾಗಿ ಪ್ರಶ್ನಿಸಿದರು. ಕಾಂಗ್ರೆಸ್​ಗೆ ಡಿಎಕೆ, ಎನ್​ಸಿಪಿ, ಎಡರಂಗ ಇನ್ನಿತರ ಪಕ್ಷಗಳು ದನಿಗೂಡಿಸಿ ಪ್ರತಿಭಟನೆ ನಡೆಸಿತು.

    ಹಿಜಾಬ್ ಬಾಲಕಿಯರ ವೈಯಕ್ತಿಕ ಮಾಹಿತಿ ಸೋರಿಕೆ: ಹಿಜಾಬ್ ವಿವಾದದಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಆರು ಬಾಲಕಿಯರ ವಿವರ ಆನ್​ಲೈನ್ ಮೂಲಕ ಸೋರಿಕೆ ಆಗಿರುವುದು ರಾಜ್ಯಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಆರು ವಿದ್ಯಾರ್ಥಿನಿಯರ ಹೆಸರು, ವಿಳಾಸಗಳನ್ನು ಒಳಗೊಂಡ ವೈಯಕ್ತಿಕ ಡೇಟಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದೆ. ಇದು ಖಾಸಗಿತನ ಉಲ್ಲಂಘನೆ ಎಂದು ಟಿಎಂಸಿ ಸಂಸದೆ ಮೌಸಮ್ ನೂರ್ ಶೂನ್ಯವೇಳೆ ವಿಷಯ ಪ್ರಸ್ತಾಪಿಸಿದರು. ವೈಯಕ್ತಿಕ ಡೇಟಾ ಸೋರಿಕೆಯಿಂದ ಮಹಿಳೆಯರ ಸುರಕ್ಷತೆಗೆ ಅಪಾಯ ಎದುರಾಗುತ್ತದೆ. ಹೀಗಾಗಿ ಖಾಸಗಿತನ ಉಲ್ಲಂಘನೆ ಆಗದಂತೆ ತಡೆಯಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

    ಪ್ರಮುಖಾಂಶಗಳು

    • 2022-23ನೇ ಸಾಲಿನ ಹಣಕಾಸು ವಿಧೇಯಕಕ್ಕೆ 39 ತಿದ್ದುಪಡಿಯೊಂದಿಗೆ ಲೋಕಸಭೆ ಅನುಮೋದನೆ
    • ಯುದ್ಧ ಅಥವಾ ಕೋವಿಡ್ ಕಾರಣ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿಗಳು ಅಲ್ಲಿ ಇಂಟರ್ನ್​ಶಿಪ್ ಪೂರೈಸಲು ಆಗದಿದ್ದರೆ ಅದನ್ನು ಸ್ವದೇಶದಲ್ಲಿ ಪೂರ್ಣಗೊಳಿಸಲು ಅವಕಾಶ.
    • 2016ರಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಹೃದ್ರೋಗದ ಕಾರಣ ಶೇ. 28 ಮಂದಿ ಮರಣಿಸಿದ್ದಾರೆ.
    • ದೆಹಲಿಯ 3 ನಗರಪಾಲಿಕೆಗಳನ್ನು ವಿಲೀನಗೊಳಿಸುವ ತಿದ್ದುಪಡಿ ಮಸೂದೆ ಮಂಡನೆ.
    • 5ಜಿ ಸ್ಪೆಕ್ಟ್ರಂ ಹರಾಜು ಶೀಘ್ರ. ಈ ವರ್ಷಾಂತ್ಯದೊಳಗೆ 5ಜಿ ಚಾಲನೆಗೊಳ್ಳಲಿದೆ.
    • ಮಾನ್ಯತೆ ಪಡೆದ ಸ್ಟಾರ್ಟಪ್​ಗಳ ಸಂಖ್ಯೆ 65,861ಕ್ಕೆ ಏರಿಕೆ ಆಗಿದೆ.
    • ದೂರವಾಣಿ ಸಂಪರ್ಕ ಬೇಡವೆಂದ 13 ಲಕ್ಷ ಪ್ರಕರಣಗಳಲ್ಲಿ ಗ್ರಾಹಕರಿಗೆ ಅವರ ಠೇವಣಿ ಮೊತ್ತವನ್ನು ಬಿಎಸ್​ಎನ್​ಎಲ್ ಹಿಂದಿರುಗಿಸಿದೆ.
    • ನಿವೃತ್ತ ಜಡ್ಜ್​ಗಳು, ಮಾಜಿ ಸರ್ಕಾರಿ ಅಧಿಕಾರಿಗಳು ಶಾಸನಸಭೆ ಪ್ರವೇಶಿಸದಂತೆ ತಡೆಯುವ ಯಾವುದೇ ಪ್ರಸ್ತಾವನೆ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts