More

    ಪ್ರತಿನಿತ್ಯ ದೇವರ ಚಿಂತನೆ ಮಾಡಿ

    ಶಿರಸಿ: ದೇವರ ಚಿಂತನೆಯು ಯಾವುದೇ ಸಮಸ್ಯೆ ತರುವುದಿಲ್ಲ. ನಿತ್ಯವೂ ದೇವರ ಚಿಂತನೆ, ಜಪ, ಭಜನೆ, ಪೂಜೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

    ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಸಿದ ಚಾತುರ್ವಸ್ಯ ವ್ರತಾಚರಣೆ ವೇಳೆ ಭಂಡಾರಿ ಸಮಾಜದಿಂದ ಪಾದ ಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ದಿನವೂ ಸ್ವಲ್ಪ ಹೊತ್ತು ದೇವರ ಚಿಂತನೆ ಮಾಡಬೇಕು. ಉಳಿದ ಚಿಂತನೆಗಳಿಂದ ಸಂತೋಷ ಬಂದರೂ ನಿಜವಾದ ಸಂತೋಷ ದೇವರ ಚಿಂತನೆ ಮತ್ತು ಪೂಜೆಯಿಂದ ಮಾತ್ರ ಸಿಗುತ್ತದೆ ಎಂದರು.

    ಯಾರಿಗಾದರೂ ವ್ಯವಹಾರಿಕ ಚಿಂತನೆಯಿಂದ ಹೊರಗೆ ಹೋಗಬೇಕು ಅಂತಿದ್ದರೆ ದೇವರ ಕುರಿತಾದ ಭಜನೆ, ಧ್ಯಾನ, ಜಪ ಮಾಡಬೇಕು. ದೇವರ ಚಿಂತನೆ ಮಾಡುವಾಗ ಇತರೆ ವಿಷಯದ ಬಗ್ಗೆ ಲಕ್ಷ್ಯ ಹಾಕಬಾರದು ಎಂದು ಸಲಹೆ ಮಾಡಿದರು.

    ಸಂಗೀತದಲ್ಲಿ ತಲ್ಲೀನರಾದರೆ ಉಳಿದ ಚಿಂತನೆಗಳು ಬರುವುದಿಲ್ಲ. ಸಂಗೀತದಿಂದ ಅಳುವ ಮಗು ಕೂಡ ತನ್ನ ಅಳುವನ್ನು ನಿಲ್ಲಿಸುತ್ತದೆ. ಪಶುಗಳೂ ತಲ್ಲೀನವಾಗುತ್ತವೆ. ಅಂಥ ಶಕ್ತಿ ಸಂಗೀತಕ್ಕೆ ಇದೆ. ಸಂಗೀತ ಮನಸಿಗೆ ಭಕ್ತಿ ಭಾವ ಉದ್ದೀಪನಗೊಳಿಸುತ್ತದೆ. ದೇವರಿಗೂ ಇದು ಪ್ರಿಯ. ಅಂಥ ಸೇವೆಯನ್ನು ಬಂಡಾರಿ ಸಮಾಜ ಶ್ರೀಮಠದ ಪರಂಪರೆಯುದ್ದಕ್ಕೂ ಮಾಡುತ್ತಿದೆ. ಶ್ರೀ ಮಠದ ಉತ್ಸವಾದಿಗಳಲ್ಲಿ ಅತ್ಯಂತ ಸುಶ್ರಾವ್ಯವಾಗಿ ವಾದ್ಯ ನುಡಿಸುವುದರ ಮೂಲಕ ಒಳ್ಳೆಯ ವಾತಾವರಣ ನಿರ್ವಿುಸುತ್ತದೆ ಎಂದು ಬಣ್ಣಿಸಿದರು.

    ಬಂಡಾರಿ ಸಮಾಜದ ಸಂಗೀತ ಸೇವೆ, ಕುಲ ಕಸುಬು ಮುನ್ನಡೆಸುತ್ತಿದ್ದಾರೆ. ಆ ಪರಂಪರೆ ಉಳಿಸಿಕೊಳ್ಳಬೇಕು. ಹೊಸ ಮಕ್ಕಳಿಗೆ ಕಲಿಸಬೇಕು ಎಂದೂ ಸೂಚಿಸಿದರು.

    ಯಾವುದೇ ವಿಷಯದಲ್ಲೂ ಮಕ್ಕಳು ದಾರಿ ತಪ್ಪಬಾರದು, ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದರು. ಈ ವೇಳೆ ಮಠದ ಆಡಳಿತ ಮಂಡಳಿಯ ಆರ್.ಎಸ್. ಹೆಗಡೆ ಭೈರುಂಬೆ ಮಾತನಾಡಿದರು. ಸಭೆಯಲ್ಲಿ ದತ್ತಾತ್ರಯ ಭಂಡಾರಿ ಸ್ವರ್ಣವಲ್ಲೀ, ಮಂಜುನಾಥ ಭಂಡಾರಿ ಹೊಸಗದ್ದೆ, ಪರಶುರಾಮ ಭಂಡಾರಿ ಮಂಜುಗುಣಿ, ವಿಶ್ವೇಶ್ವರ ಭಂಡಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts