More

    ತಿಮ್ಮಂಪಲ್ಲಿ-ಬಿಳ್ಳೂರು ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು ; ಪ್ರಯಾಣಿಕರ ಜೀವಕ್ಕೆ ಕಂಟಕ

    ಪಿ.ಮಂಜುನಾಥರೆಡ್ಡಿ, ಬಾಗೇಪಲ್ಲಿ

    ಕೊಟ್ಯಾಂತರ ಅನುದಾನದಲ್ಲಿ ತಿಮ್ಮಂಪಲ್ಲಿ-ಬಿಳ್ಳೂರು ಮುಖ್ಯರಸ್ತೆ ಹಾಕಲಾಗಿದ್ದು ಡಾಂಬರು 2 ವರ್ಷದಲ್ಲೇ ಕಿತ್ತುಹೋಗಿ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳಿಂದಲೇ ರಾರಾಜಿಸುತ್ತಿವೆ. ಮಳೆ ಬಂತೆಂದರೆ ನೀರು ತುಂಬಿಕೊಂಡು ಕುಂಟೆಗಳಂತೆ ಕಾಣುತ್ತಿದ್ದು ವಾಹನ ಸಂಚಾರ ದುಸ್ತರವಾಗಿರುವುದಲ್ಲದೆ ಪ್ರಯಾಣಿಕರ ಜೀವಕ್ಕೆ ಕಂಟಕವಾಗಿವೆ.

    ತಾಲೂಕಿನ ಗೂಳೂರು-ತಿಮ್ಮಂಪಲ್ಲಿ ಮಾರ್ಗದ ಬಿಳ್ಳೂರು ಮುಖ್ಯರಸ್ತೆಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಮೇಲ್ದೆರ್ಜೆಗೇರಿಸಿ ಕೊಟ್ಯಾಂತರ ರೂ. ಅನುದಾದದಲ್ಲಿ 4 ಕಿ.ಮೀ.ಗೆ ಲೋಕೋಪಯೋಗಿ ಇಲಾಖೆ, ಹಾಗೂ 1 ಕಿ.ಮೀ.ಗೆ ಜಿಲ್ಲಾ ಪಂಚಾಯತಿ ಒಟ್ಟು 5 ಕಿ.ಮೀ ಉದ್ದದ ಮುಖ್ಯರಸ್ತೆಗೆ ರಾಜ್ಯ ಹೆದ್ದಾರಿ ಗುಣಮಟ್ಟದ ಮಾನದಂಡನೆಗಳ ದರಪಟ್ಟಿಯಂತೆ ಟೆಂಡರ್ ಕರೆದು ಡಾಂಬರು ಹಾಕಿಸಿ ಕಾಮಗಾರಿ ಪೂರ್ಣಗೊಳಿಸಿತ್ತು.

    ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷಗಳು ಕಳೆಯುವಷ್ಟರಲ್ಲೇ ಡಾಂಬರು ಕಿತ್ತು ಬರುತ್ತಿದ್ದು, ಸಂಪೂರ್ಣ ಗುಂಡಿಗಳ ಮಯವಾಗಿದೆ. ನಡುರಸ್ತೆಯಲ್ಲಿ ಮೊಣಕಾಲು ಆಳದಷ್ಟು ಗುಂಡಿಗಳು ಬಿದ್ದಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸಿಕೊಂಡು ಮುಂದೆ ಸಾಗುತ್ತಿದ್ದಾರೆ ಹೊರತು ಸುಗಮ ಸಂಚಾರಕ್ಕೆ, ರಸ್ತೆ ಅವ್ಯವಸ್ಥೆಗೆ ಸರಿಪಡಿಸುವ ಮನಸ್ಸು ಮಾಡಿಲ್ಲ.

    ಆಟೋ, ಸರಕು ಸಾಗಣೆ, ದ್ವಿಚಕ್ರ ವಾಹನ ಸವಾರರಿಗೆ ಗುಂಡಿಗಳು ಯಮಪಾಶದಂತೆ ಭಾಸವಾಗುತ್ತಿವೆ. ರಾತ್ರಿ ವೇಳೆ, ಮಳೆಗಾಲ ಗುಂಡಿಗಳು ಕಾಣದೆ ಬಿದ್ದು ಕೈ ಕಾಲು ಮುರಿದುಕೊಂಡ, ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಸಂಭವಿಸಿದ ಅಪಘಾತಗಳು ಅಪಘಾತಗಳಿಗೆ ಲೆಕ್ಕವಿಲ್ಲ, ಇಷ್ಟಾದರೂ ಆಡಳಿತ ಮೌನವಾಗಿದ್ದು ಕಂಡೂ ಕಾಣದಂತಿದೆ.

    ಕಳಪೆ ಕಾಮಗಾರಿ: ರಾಜ್ಯ ಹೆದ್ದಾರಿ ಟೆಂಡರ್ ಪ್ರಕ್ರಿಯೆಯ ಮಾನದಂಡನೆಗಳಂತೆ ಗೂಳೂರು ತಿಮ್ಮಂಪಲ್ಲಿ ಮಾರ್ಗದ ಬಿಳ್ಳೂರು ರಸ್ತೆಗೆ ಡಾಂಬರು ಹಾಕಿ ಕಾಮಗಾರಿ ಮಾಡಿದ್ದರೆ, ಕನಿಷ್ಠ ಒಂದು ವಿಧಾನಸಭಾ ಚುನಾವಣೆ ಅವಧಿವರೆಗಾದರೂ ರಸ್ತೆ ಗುಣಮಟ್ಟದಿಂದ ಕೂಡಿರಬೇಕು. ಆದರೇ ಕಾಮಗಾರಿ ಪೂರ್ಣಗೊಳಿಸಿದ ಎರಡೇ ವರ್ಷಕ್ಕೆ ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಗುಂಡಿಗಳು ಬಿದ್ದಿರುವುದನ್ನು ನೋಡಿದರೆ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಗುಣಮಟ್ಟವನ್ನು ಓರೆಗೆ ಹಚ್ಚುವಂತಾಗಿದೆ.

    ಡಾಂಬರು ಹಾಕಿರುವ ರಸ್ತೆಯ ಮೇಲೆ ಮತ್ತೆ ಡಾಂಬರು ಹಾಕಿ ಕಾಮಗಾರಿ ಮಾಡಿರುವುದರಿಂದ ತಿಮ್ಮಂಪಲ್ಲಿ ಬಿಳ್ಳೂರು ಮಾರ್ಗ ರಸ್ತೆಯ ಡಾಂಬರು ಕಿತ್ತು ಗುಂಡಿ ಬಿದ್ದಿವೆ. ಬಯಲುಸೀಮೆ ಪ್ರದೇಶಾಭಿವೃದ್ಧಿಯ ವಿಶೇಷ ಅನುದಾನದ ಕ್ರಿಯಾ ಯೋಜನೆ ಪಟ್ಟಿಯಲ್ಲಿ ಬಿಳ್ಳೂರು ರಸ್ತೆಯ ಕಾಮಗಾರಿಯನ್ನು ಸೇರಿಸಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತೇವೆ.
    ರಾಮಲಿಂಗಾರೆಡ್ಡಿ, ಎಇಇ ಲೋಕೋಪಯೋಗಿ ಇಲಾಖೆ, ಬಾಗೇಪಲ್ಲಿ.

    ಗೂಳೂರು ತಿಮ್ಮಂಪಲ್ಲಿ ಮಾರ್ಗದ ಬಿಳ್ಳೂರು ರಸ್ತೆ ಸಂಪೂರ್ಣ ಗುಂಡಿಗಳ ಮಯವಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಚಾಲನೆ ಕಷ್ಠವಾಗುತ್ತಿದೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸಿವೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖೆ ಅದಿಕಾರಿಗಳು ಹದಗೆಟ್ಟ ರಸ್ತೆಯ ದುರಸ್ಥಿಗೆ ಮುಂದಾಗಬೇಕಾಗಿದೆ.
    ರಾಮಾಂಜಿನಪ್ಪ, ತಟ್ಟನ್ನಗಾರಪಲ್ಲಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts