More

    ಚಿನ್ನದ ಸರ ಕಿತ್ತುಕೊಂಡು ಎಸ್ಕೇಪ್​ ಆಗುತ್ತಿದ್ದವರ ಬಂಧನ…

    ಬೆಂಗಳೂರು: ಈ ಮೂವರು ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಮೊಬೈಲ್, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಯಲಹಂಕ ನಿವಾಸಿಗಳಾದ ನರೇಶ್(20), ಅಭಿಷೇಕ್(20) ಮತ್ತು ರಾಜಾನುಕುಂಟೆಯ ನಿವಾಸಿ ರಾಹುಲ್(19) ಬಂಧಿತರು. ಆರೋಪಿಗಳಿಂದ 1.53 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಗಿದ್ದೇನು?
    ಕೋಡುಗಲಹಟ್ಟಿ ಗ್ರಾಮದ ನಿವಾಸಿ ಎಂ.ಸಾಯಿರಾಂ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದಾರೆ. ಡಿ.6ರಂದು ಕರ್ನೂಲ್‌ನಿಂದ ಮುಂಜಾನೆ 4.30 ಕ್ಕೆ ಹುಣಸಮಾರನಹಳ್ಳಿ ಟೊಯೊಟಾ ಶೋ ರೂಮ್ ಬಳಿಯ ಸರ್ವಿಸ್ ರಸ್ತೆಗೆ ಬಸ್‌ನಲ್ಲಿ ಬಂದು ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಮೊಬೈಲ್ ಫೋನ್ ಹೊರಗೆ ತೆಗೆದು ನೋಡಿದ್ದಾರೆ. ನೋಡುವಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಾಯಿರಾಂ ಅವರ ಎರಡು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.

    ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೋಜಿನ ಜೀವನ ನಡೆಸಲು ಹಣ ಹೊಂದಿಸಲು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ಚಿಕ್ಕಜಾಲ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts