More

    ಲಸಿಕೆಗೆ ಹೆದರಿ ಪೋಡು ಬಿಟ್ಟು ಕಾಡಿಗೆ ಗಿರಿಜನರ ಓಟ!; ತಪ್ಪು ತಿಳಿವಳಿಕೆಯಿಂದ ಇಂಜೆಕ್ಷನ್ ಪಡೆಯಲು ಹಿಂದೇಟು..

    | ಡಿ.ಪಿ.ಮಹೇಶ್ ಯಳಂದೂರು

    ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿಗಳಲ್ಲಿ ಕರೊನಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯುವಂತೆ ಮನವೊಲಿಸಲು ಸಿಬ್ಬಂದಿ ಪೋಡುಗಳ ಬಳಿ ಹೋದರೆ ಜನರು ಕಾಡಿಗೆ ಓಡಿ ಹೋಗುತ್ತಿದ್ದಾರೆ. ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಿಗರು, ನಾಯಕ ಸಮುದಾಯ, ಪರಿಶಿಷ್ಟ ಜಾತಿ ಸೇರಿ ಇತರ ಸಮುದಾಯದ ಜನರು ಒಳಗೊಂಡು 2183 ಜನಸಂಖ್ಯೆ ಇದೆ. ಇವರಲ್ಲಿ ಸೋಲಿಗ ಸಮುದಾಯದವರೇ ಹೆಚ್ಚಾಗಿದ್ದಾರೆ. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಈ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ಜನಾಂಗದ 600ಕ್ಕೂ ಹೆಚ್ಚಿನ ಜನರಿದ್ದಾರೆ. ಇದರಲ್ಲಿ 470 ಜನರು ಸೋಲಿಗ ಸಮುದಾಯದವರು. ಇದುವರೆಗೆ ಒಟ್ಟಾರೆ 200 ಜನರು ಲಸಿಕೆ ಪಡೆದಿದ್ದು, ಇದರಲ್ಲಿ 70 ಸೋಲಿಗರು ಸೇರಿದ್ದಾರೆ. ಉಳಿದ 400ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

    ಲಸಿಕೆ ನೀಡಲು ಹೋದರೆ ಕಾಡಿಗೆ ಓಟ!: ಸೋಲಿಗ ಸಮುದಾಯದವರಿಗೆ ಲಸಿಕೆ ನೀಡುವ ಉದ್ದೇಶದಿಂದ ಕರೊನಾ ಲಸಿಕೆ ಉತ್ಸವವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು. 4 ದಿನಗಳ ಕಾಲ ಬಿಳಿಗಿರಂಗನಬೆಟ್ಟ, ಕಲ್ಯಾಣಿಪೋಡು, ಮಂಜಿಗುಂಡಿ ಪೋಡು, ಸೀಗೆಬೆಟ್ಟ, ಯರಕನಗದ್ದೆ, ಮುತ್ತುಗನಗದ್ದೆ, ಹೊಸಪೋಡು, ಬಂಗ್ಲೆಪೋಡು, ಪುರಾಣಿಪೋಡು ಸೇರಿ ವಿವಿಧ ಪೋಡುಗಳಲ್ಲಿ ವಾಸಿಸುವ ಸೋಲಿಗರ ಬಳಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಸಿಬ್ಬಂದಿ ಹೋದರೆ, ಕಡ್ಡಾಯವಾಗಿ ಪಡೆಯಬೇಕೆಂಬ ಮಾಹಿತಿ ತಿಳಿದ ಕೆಲವು ಸೋಲಿಗರು ಕಾಡಿಗೆ ಓಡಿ ಹೋದರೆ, ಸ್ವಲ್ಪ ಜನರು ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು ಎಂದು ವಿಜೆಕೆಕೆ ಆರೋಗ್ಯ ಸಿಬ್ಬಂದಿ ಪುನೀತ್ ತಿಳಿಸಿದರು.

    ಸುಳ್ಳು ಸಂದೇಶದಿಂದ ನಿರ್ಲಕ್ಷ್ಯ: ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ಸುಳ್ಳು ಸಂದೇಶದಿಂದ ಹೆಚ್ಚಿನ ಜನರು ಆಗಮಿಸುತ್ತಿಲ್ಲ. ಲಸಿಕೆ ಪಡೆದ 45 ದಿನ ಮದ್ಯ ಸೇವಿಸಬಾರದು, ಜ್ವರ ಬರುತ್ತದೆ ಇತ್ಯಾದಿ ಅಪಪ್ರಚಾರವೂ ಸೋಲಿಗರು ಹಿಂಜರಿಯುವಂತೆ ಮಾಡಿದೆ. ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ವಿಜೆಕೆಕೆ ಸಿಬ್ಬಂದಿ.

    ಜಾಗೃತಿ ಮೂಡಿಸಲಾಗಿದೆ: ಬೆಟ್ಟದ ವಿವಿಧ ಸೋಲಿಗರ ಪೋಡುಗಳಿಗೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ತೆರಳಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಪ್ರತಿನಿತ್ಯ ವಿಜಿಕೆಕೆಯ ಉಪ ಕೇಂದ್ರದಲ್ಲಿ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ತಿಳಿಸಿದ್ದಾರೆ.

    ಇಂಗ್ಲಿಷ್ ಔಷಧ ಬೇಡ: ನಾವು ಕಾಡಿನ ಮಕ್ಕಳು. ಇಂಗ್ಲಿಷ್ ಔಷಧವನ್ನು ಹೆಚ್ಚಾಗಿ ಬಳಸುವುದಿಲ್ಲ. ನಮಗೆ ಈ ಲಸಿಕೆ ಬೇಡ. ನಮ್ಮ ಕಾಡಿನ ಗಿಡಮೂಲಿಕೆಗಳಲ್ಲಿ ಸಾಕಷ್ಟು ಪ್ರಮಾಣದ ಔಷಧೀಯ ಗುಣಗಳಿವೆ. ಇದನ್ನು ನೀವು ನಮಗೆ ನೀಡುವ ಬದಲು ಪ್ಯಾಟೆ ಮಂದಿಗೆ ನೀಡಿ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಸೋಲಿಗ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

    ಬಿಳಿಗಿರಿರಂಗನಬೆಟ್ಟದ ಹಾಡಿಗಳಲ್ಲಿ ಸೋಲಿಗ ಜನರು ಕರೊನಾ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಧ್ವನಿವರ್ಧಕದ ಮೂಲಕ ಮತ್ತು ಖುದ್ದು ಭೇಟಿ ನೀಡಿ ಅರಿವು ಮೂಡಿಸುವ ಪ್ರಯ್ನತ ಮಾಡಲಾಗಿದೆ.

    | ಸ್ವಾಮಿ ಪಿಡಿಒ ಬಿಳಿಗಿರಿರಂಗನಬೆಟ್ಟ

    ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts