More

    ಸಂಕಷ್ಟದ ಪರಿಸ್ಥಿತಿ ನಿಭಾಯಿಸುವಲ್ಲಿ ಮಹಿಳೆಯರದ್ದೇ ಎತ್ತಿದ ಕೈ, ಕರೊನಾ ವಿಷಯದಲ್ಲೂ ಇದು ಸಾಬೀತು

    ನವದೆಹಲಿ: ಯಾವುದೇ ಸಂಕಷ್ಟದ ಪರಿಸ್ಥಿತಿ ಇರಲಿ. ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಹಿಳೆಯರದ್ದೇ ಎತ್ತಿದ ಕೈ. ಜಾಗತಿಕ ಪಿಡುಗು ಕರೊನಾವನ್ನು ಸಮರ್ಥವಾಗಿ ನಿಭಾಯಿಸುವ ವಿಷಯದಲ್ಲೂ ಇದು ಸತ್ಯ ಎಂದು ಸಾಬೀತಾಗಿದೆ. ಮಹಿಳೆಯರು ಆಡಳಿತ ಚುಕ್ಕಾಣಿ ಹಿಡಿದಿರುವ ದೇಶಗಳಲ್ಲಿ ಕರೊನಾ ಸೋಂಕು ಗಣನೀಯವಾಗಿ ಕಡಿಮೆಯಾಗಿರುವುದು ಅಷ್ಟೇ ಅಲ್ಲ, ನ್ಯೂಜಿಲೆಂಡ್​ನಂಥ ರಾಷ್ಟ್ರದಲ್ಲಿ ಸೋಂಕು ಸಂಪೂರ್ಣ ಮಾಯವಾಗುವ ಲಕ್ಷಣಗಳು ಗೋಚರಿಸುತ್ತಿವೆ.

    ತಮ್ಮ ದೇಶದಲ್ಲಿ ಕರೊನಾ ಪಿಡುಗು ಆರಂಭವಾಗುತ್ತಲೇ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ನಿಮಗೇ ಸೋಂಕು ತಗುಲಿರುವಂತೆ ಭಾವಿಸಿಕೊಳ್ಳಿ ಎಂದು ತಮ್ಮ ದೇಶದ ಜನತೆಗೆ ಹೇಳಿದ್ದರು. ಅಲ್ಲದೆ, ಮಾರ್ಚ್​ 12ರಿಂದ ವಿದೇಶದಿಂದ ಬರುವ ಸ್ವದೇಶಿಯರಿಗೆ ಹೋಂ ಕ್ವಾರಂಟೈನ್​ ಅನ್ನು ಕಡ್ಡಾಯಗೊಳಿಸಿದ್ದರು. ಅಲ್ಲದೆ, ಲಾಕ್​ಡೌನ್​ ಘೋಷಿಸಿ, ಸೋಂಕು ಹರಡುವಿಕೆ ತಡೆಗಟ್ಟಲು ಮುಂದಾಗಿದ್ದರು.

    ಇಷ್ಟೆಲ್ಲ ಮುಂಜಾಗ್ರತೆ ಕೈಗೊಂಡಿದ್ದರಿಂದ, ನ್ಯೂಜಿಲೆಂಡ್​ನಲ್ಲಿ ಕಳೆದ ಕೆಲವು ದಿನಗಳಿಂದ ಹೊರ ಪ್ರಕರಣಗಳು ಯಾವುವೂ ವರದಿಯಾಗಿಲ್ಲ. ಏಂಜೆಲಾ ಮರ್ಕೆಲ್​ ನೇತೃತ್ವದ ಸರ್ಕಾರ ಇರುವ ಜರ್ಮನಿಯಲ್ಲಿ 1,18,235 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇವರಲ್ಲಿ 52,407 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸೋಂಕಿಗೆ ಬಲಿಯಾದವರು ಮತ್ತು ಗುಣಮುಖರಾದರು ಸೇರಿ ಒಟ್ಟು ಮುಚ್ಚಲ್ಪಟ್ಟಿರುವ ಪ್ರಕರಣಗಳನ್ನು ಲೆಕ್ಕ ಹಾಕಿದಾಗ ಅಲ್ಲಿ ಶೇ.95 ಯಶಸ್ಸು ದಾಖಲಾಗಿದೆ.

    ಏಂಜೆಲಾ ಮರ್ಕೆಲ್​ ತಮ್ಮ ರಾಷ್ಟ್ರದಲ್ಲಿ ಮಾರ್ಚ್​ 11ರಿಂದಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು. ಜರ್ಮನಿಯಲ್ಲಿ ಸದ್ಯ ಪ್ರತಿದಿನ 5 ಲಕ್ಷ ಜನರನ್ನು ಕೋವಿಡ್​ 19 ಸೋಂಕಿಗಾಗಿ ಪರೀಕ್ಷಿಸಲಾಗುತ್ತಿದೆ. ಅಲ್ಲದೆ, ತಮ್ಮ ದೇಶದಲ್ಲಿನ ಆಸ್ಪತ್ರೆಗಳ ಸುಧಾರಣೆ, ಐಸಿಯು, ವೆಂಟಿಲೇಟರ್​ಗಳ ಸಂಖ್ಯೆ ಹೆಚ್ಚಳ ಸೇರಿ ಆರೋಗ್ಯ ವಿಭಾಗದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

    ಸೋಫಿ ವಿಲಮ್ಸ್​ ಬೆಲ್ಜಿಯಂನ ಪ್ರಧಾನಿಯಾಗಿದ್ದಾರೆ. ಈ ರಾಷ್ಟ್ರದಲ್ಲಿ ಕರೊನಾ ಪಿಡುಗಿಗೆ ಬಲಿಯಾಗುವವರ ಸಂಖ್ಯೆ ಶೇ.50 ಕಡಿಮೆಯಾಗಿದೆ. ಈ ರಾಷ್ಟ್ರದಲ್ಲಿನ ಗುಣಮುಖರಾಗುವವರ ಸಂಖ್ಯೆ ಶೇ.67 ಇದೆ. ಬೆಲ್ಜಿಯಂನಲ್ಲಿ 10 ಜನರು ಸೋಂಕಿಗೆ ಬಲಿಯಾಗುತ್ತಲೇ ಅವರು ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದರು. ಇದನ್ನು ಪರಿಪೂರ್ಣವಾಗಿ ಜಾರಿಗೊಳಿಸಿದರು. ಸೋಂಕನ್ನು ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಇದು ತುಂಬಾ ಪರಿಣಾಮಕಾರಿ ಎನಿಸಿತು.

    ಫಿನ್ಲೆಂಡ್​ ಪ್ರಧಾನಿ ಸನ್ನಾ ಮಾರಿನ್​ ಕೈಗೊಂಡ ಕ್ರಮಗಳಿಂದಾಗಿ ಕರೊನಾ ಸೋಂಕಿತರ ಗುಣಮುಖರಾಗುವ ಸಂಖ್ಯೆ ಶೇ.88 ಆಗಿದೆ. ಐಸ್ಲೆಂಡ್​ ಪ್ರಧಾನಿ ಕ್ಯಾಟ್ರಿನ್​ ಜಾಕೋಬ್​ಸ್ಟಿರ್​ ಕೈಗೊಂಡ ಕ್ರಮಗಳಿಂದಾಗಿ ಆ ದೇಶದಲ್ಲಿ ಶೇ.99 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

    ಡೆನ್ಮಾರ್ಕ್​ನಲ್ಲಿ ಮೆಟ್ಟೆ ಫೆಡ್ರಕ್ಕಿನ್ಸನ್​ ಪ್ರಧಾನಿಯಾಗಿದ್ದು, ಇಲ್ಲಿ ಏಪ್ರಿಲ್​ 6ರಂದು ಕರೋನಾ ವಿರುದ್ಧದ ಹೋರಾಟವನ್ನು ಸಂಪೂರ್ಣವಾಗಿ ಜಯಿಸಲಾಗಿದೆ. ಏಪ್ರಿಲ್​ 15ರಿಂದ ಶಾಲಾಕಾಲೇಜುಗಳು ಆರಂಭವಾಗಲಿವೆ.

    ಹಬ್ಬ ಮುಗಿದ ಮರುದಿನ ವಿಶೇಷ ಪ್ರಾರ್ಥನೆಗೆ ಮನವಿ ಮಾಡಿ ಎಡವಟ್ಟು ಮಾಡಿಕೊಂಡ ಪಾಕ್​ ಪ್ರಧಾನಿ, ಟ್ವಿಟರ್​ನಲ್ಲಿ ಅಪಹಾಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts