More

    ಮಳೆಗಾಲದ ದಿನಗಳಲ್ಲಿ ಸೇವಿಸಬೇಕಾದ ಸುಲಭಜೀರ್ಣ ಆಹಾರ ಪದಾರ್ಥಗಳು ಇವು…

    ನಾವು ಮಳೆಗಾಲದಲ್ಲಿ ಯಾವ ರೀತಿ ಬದುಕಬೇಕು, ಯಾವ ರೀತಿಯ ಆಹಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಎಂತಹ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ಸರಿಯಾಗಿ ಅನುಸರಿಸಿದಾಗ ಮಾತ್ರ ನಮ್ಮ ಆರೋಗ್ಯ ಯಾವಾಗಲೂ ಚೆನ್ನಾಗಿರಲು ಸಾಧ್ಯ.

    ಎಲ್ಲಕ್ಕಿಂತ ಮೊದಲು ನಾವು ನೆನಪಿಟ್ಟುಕೊಳ್ಳಬೇಕಾದ್ದೇನೆಂದರೆ ಮಳೆಗಾಲದಲ್ಲಿ ನಮ್ಮ ಅಗ್ನಿ ಬಲ (ಜೀರ್ಣಶಕ್ತಿ) ತುಂಬಾ ಕಡಿಮೆಯಾಗಿರುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮಾತ್ರ ಸೇವಿಸಬೇಕು. ಆಹಾರದಲ್ಲಿ ಹೆಚ್ಚು ಹುಳಿ ಪದಾರ್ಥಗಳನ್ನು ಸೇವಿಸಬೇಕು. ಕೊತ್ತಂಬರಿ, ಜೀರಿಗೆ, ಶುಂಠಿ, ಲವಂಗ, ದಾಲ್ಚಿನ್ನಿ, ಏಲಕ್ಕಿ, ಮೆಣಸಿನಕಾಳು, ಸಾಸಿವೆ ಮುಂತಾದ ಸಾಂಬಾರ ಪದಾರ್ಥಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ದೊಡ್ಡಪತ್ರೆ, ನುಗ್ಗೆ ಸೊಪ್ಪು, ಪುದಿನ ಮುಂತಾದ ಉಷ್ಣ ಗುಣವಿರುವ ಮತ್ತು ಜೀರ್ಣಕ್ಕೆ ಸಹಕಾರಿಯಾದ ಸೊಪ್ಪುಗಳನ್ನು ಬಳಸಬೇಕು. ಊಟದಲ್ಲಿ ಹೆಚ್ಚಾಗಿ ತಿಳಿಸಾರು ಮತ್ತು ಸೂಪ್‌ಗಳನ್ನು ಬಳಸುವುದು ಸೂಕ್ತ. ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು, ಇಂಗು, ಅರಿಶಿನ, ಸಾಸಿವೆಗಳನ್ನು ಒಗ್ಗರಣೆ ಅಥವಾ ಇನ್ನಾವುದಾದರೂ ರೂಪದಲ್ಲಿ ಸೇವಿಸಿದರೆ ಒಳ್ಳೆಯದು. ಕಾಯಿಸಿದ ಬಿಸಿನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ಸೇವಿಸುವುದು ಉತ್ತಮ. ನೀರನ್ನು ಕಾಯಿಸುವಾಗ ಕಾಳುಮೆಣಸು, ಶುಂಠಿ ಮುಂತಾದ ಸಾಂಬಾರ ಪದಾರ್ಥಗಳು ಮತ್ತು ಅರಿಶಿನ ಹಾಕಿದರೆ ಇನ್ನೂ ಒಳ್ಳೆಯದು.

    ಈ ಪದಾರ್ಥಗಳಿಂದ ದೂರವಿರಿ:
    ಜೀರ್ಣಶಕ್ತಿ ಕಡಿಮೆಯಿದ್ದಾಗ ಯಾವುದೇ ರೋಗವಾದರೂ ಸುಲಭವಾಗಿ ಬರುತ್ತದೆ ಮತ್ತು ಅದನ್ನು ಗುಣಪಡಿಸುವುದೂ ಕಷ್ಟವಾಗುತ್ತದೆ. ಆಗಲೇ ಹೇಳಿದಂತೆ, ಮಳೆಗಾಲದಲ್ಲಿ ಅಗ್ನಿ ಬಲ ಕಡಿಮೆ ಇರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಕಷ್ಟವಾಗುವ ಉದ್ದು, ಕರಿದ ಪದಾರ್ಥಗಳು, ಬೇಕರಿ ತಿನಿಸುಗಳು ಮುಂತಾದ ಪದಾರ್ಥಗಳನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಅದರಲ್ಲಿಯೂ ವಿಶೇಷವಾಗಿ ಸೂರ್ಯ ಕಾಣದಂತೆ ಇಡೀ ದಿನ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಅತ್ಯಂತ ಲಘುವಾಗಿ ಇರುವಂತಹ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು. ಮಳೆಗಾಲದಲ್ಲಿ ಒಳ್ಳೆಯ ಕೊಬ್ಬನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಹಾಗಾಗಿ ಮನೆಯಲ್ಲೇ ತಯಾರಿಸಿದ ತುಪ್ಪ ಅಥವಾ ಗಾಣದ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು.

    ಜೇನುತುಪ್ಪ ಪ್ರಯೋಜನಕಾರಿ:
    ಉಷ್ಣ ಗುಣವನ್ನು ಹೊಂದಿದ್ದು ಜೀರ್ಣಕಾರಿಯೂ, ಹಲವಾರು ರೋಗಗಳ ನಿವಾರಕವೂ ಆಗಿರುವಂತಹ ಜೇನುತುಪ್ಪದ ಸೇವನೆ ಮಳೆಗಾಲದಲ್ಲಿ ಅತ್ಯಂತ ಹಿತಕಾರಿ. ಒಂದೆರಡು ಚಮಚ ಜೇನುತುಪ್ಪವನ್ನು ಮಳೆಗಾಲದಲ್ಲಿ ನಿತ್ಯವೂ ಸೇವಿಸುವುದು ಒಳ್ಳೆಯದು.

    ಅತಿಯಾದ ವ್ಯಾಯಾಮ ಬೇಡ:
    ಇನ್ನು ಮಳೆಗಾಲದಲ್ಲಿ ನಮ್ಮ ದಿನಚರಿಯನ್ನು ಸರಿಯಾಗಿಟ್ಟುಕೊಳ್ಳುವುದೂ ಅಷ್ಟೇ ಅವಶ್ಯವಾದದ್ದು. ಬೆಳಿಗ್ಗೆ ಬೇಗ ಎದ್ದು ಲಘು ವ್ಯಾಯಾಮ, ಪ್ರಾಣಾಯಾಮಗಳನ್ನು ಮಾಡಬೇಕು. ಅತಿಯಾದ ವ್ಯಾಯಾಮ ಸರಿಯಲ್ಲ. ಮಳೆಯಲ್ಲಿ ನೆನೆದು ಅಥವಾ ಇನ್ನಾವುದೋ ಕಾರಣಕ್ಕೆ ಮೈ ಒದ್ದೆಯಾದರೆ ಆದಷ್ಟು ಬೇಗ ಅದನ್ನು ಒರೆಸಿಕೊಂಡು ಬೆಚ್ಚಗಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಫಂಗಸ್ ಸಮಸ್ಯೆ ಉಂಟಾಗಿ ತೊಡೆಸಂಧಿ, ಕಂಕುಳು ಮುಂತಾದ ಭಾಗಗಳಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಐಸ್ ಕ್ರೀಮ್, ತಣ್ಣಗಾಗಿಸಿದ ನೀರು, ಶೀತಲೀಕರಿಸಿದ ವಸ್ತುಗಳನ್ನು ಸೇವಿಸಬಾರದು. ಬದಲಿಗೆ ಸಾಂಬಾರ ಪದಾರ್ಥಗಳನ್ನು ಹಾಕಿದ ಮಸಾಲಾ ಮಜ್ಜಿಗೆಯನ್ನು ಸೇವಿಸಬಹುದು. ಮಳೆಗಾಲದಲ್ಲಿ ಹಗಲುನಿದ್ದೆ ಮಾಡಬಾರದು. ಮಾಡಿದರೆ, ನೆಗಡಿ, ಆಲಸ್ಯ, ತಲೆಭಾರ, ಅತಿತೂಕದ ಸಮಸ್ಯೆಗಳು ಕಾಡುತ್ತವೆ. ರಾತ್ರಿ ಊಟವನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು ಮತ್ತು ರಾತ್ರಿಯ ಊಟ ಲಘುವಾಗಿರಬೇಕು.

    ಇವುಗಳ ಕಷಾಯ ಕುಡಿಯಿರಿ:
    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಮತ್ತು ವೈರಸ್ ನಿರೋಧಕವಾಗಿರುವಂತಹ ಕೆಲವು ಗಿಡಮೂಲಿಕೆಗಳ ಕಷಾಯಗಳನ್ನು ವಾರದಲ್ಲಿ ಒಂದೆರಡು ಬಾರಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅನುಕೂಲಕರ. ಉದಾಹರಣೆಗೆ ಭದ್ರಮುಷ್ಟಿ, ನೆಲನೆಲ್ಲಿ, ಶುಂಠಿ, ಕಿರಾತಕಡ್ಡಿ, ಅಮೃತಬಳ್ಳಿ ಮುಂತಾದವುಗಳ ಕಷಾಯವನ್ನು ತಯಾರಿಸಿಕೊಂಡು ಕುಡಿದರೆ ಜೀರ್ಣಶಕ್ತಿ, ರೋಗನಿರೋಧಕ ಶಕ್ತಿಗಳು ಹೆಚ್ಚಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಸಮಸ್ಯೆಗಳು, ಅಗ್ನಿಮಾಂದ್ಯ, ಅಜೀರ್ಣ, ಆಮಶಂಕೆ, ಚರ್ಮದ ರೋಗಗಳು, ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆಯಾಗಲು ಮತ್ತು ಬರದಂತೆ ತಡೆಯಲು ತುಂಬಾ ಸಹಾಯವಾಗುತ್ತದೆ. ಇವಿಷ್ಟನ್ನು ಪಾಲಿಸಿದರೆ ಈ ಮಳೆಗಾಲದಲ್ಲಿ ಆರೋಗ್ಯಯುತವಾಗಿ ಇರಲು ಸಾಧ್ಯ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts