More

    ಮಗು ನಾಪತ್ತೆ ಪ್ರಕರಣವೇ ನಡೆದಿಲ್ಲ

    ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಜ.8 ರಂದು ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸರು ನಡೆಸಿದ ತನಿಖೆಯಲ್ಲಿ ಮಗು ನಾಪತ್ತೆಯೇ ಆಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    ತಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಸವಿತಾ ಎಂಬಾಕೆ ಜ.8 ರಂದು ಸಂಜೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನನ್ನ ಏಳು ತಿಂಗಳ ಗಂಡು ಮಗುವನ್ನು ಮಹಳೆಯೊಬ್ಬರು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ಮೊಬೈಲ್‌ನಲ್ಲಿದ್ದ ಮಗುವೊಂದರ ಫೋಟೋ ತೋರಿಸಿ ಹೈಡ್ರಾಮ ಮಾಡಿದ್ದಳು. ಆ ವೇಳೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಿ ಸ್ಥಳಕ್ಕೆ ಪೊಲೀಸರನ್ನು ಕರೆಸಿ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ನಂತರ ಠಾಣೆಗೆ ಕರೆದೊಯ್ದು ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಅವರು ಪ್ರಕರಣ ದಾಖಲಿಸಿಕೊಂಡು ನಿಲ್ದಾಣದ ಸುತ್ತಲಿನ ಕಟ್ಟಡಗಳ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸುವುದರ ಜತೆಗೆ ತನಿಖೆ ಚುರುಕುಗೊಳಿಸಿದ್ದರು. ದೂರು ನೀಡಿದ್ದ ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನೀಡಿದ ಮಾಹಿತಿಯಲ್ಲಿ ಅನುಮಾನಗಳು ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಆಕೆಯ ತವರು ಮನೆ ಚನ್ನಪಟ್ಟಣ ತಾಲೂಕಿನ ನೇರಲೂರಿಗೆ ಪೊಲೀಸರ ತಂಡ ತೆರಳಿದ್ದಾಗ ಇದೊಂದು ಸುಳ್ಳು ಪ್ರಕರಣವೆಂದು ತಿಳಿದುಬಂದಿದೆ.

    ಸುಳ್ಳು ದೂರು ನೀಡಿರುವ ಸವಿತಾ ಎಂಬಾಕೆಗೆ ವಿವಾಹವಾಗಿ 25 ವರ್ಷಗಳು ಕಳೆದಿದ್ದು, ಈಕೆಗೆ ಇಬ್ಬರು ಪದವಿ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಿದ್ದಾರೆ ಎಂಬ ಅಂಶ ತಿಳಿದಿದೆ. ಹೀಗೇಕೆ ಮಾಡಿದ್ದೀಯ? ಎಂದು ಪೊಲೀಸರು ವಿಚಾರಿಸಲಾಗಿ ಪ್ರಜ್ಞೆ ಕಳೆದುಕೊಂಡವರಂತೆ ನಾಟಕವಾಡಿ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಆಕೆಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸ್ ಮೂಲಕಗಳಿಂದ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts