More

    ಮೆಕ್ಕೆಜೋಳ ಖರೀದಿ ಕೇಂದ್ರ ಇಲ್ಲ

    ಹಿರೇಕೆರೂರ: ಸದ್ಯದ ಪರಿಸ್ಥಿತಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಇದು ಪಡಿತರ ವ್ಯವಸ್ಥೆಯಲ್ಲಿ ಬಾರದ ಕಾರಣ ಕೇಂದ್ರ ಸರ್ಕಾರ ಈ ಬಗ್ಗೆ ಪ್ರಸ್ತಾವನೆ ಕೊಟ್ಟಿಲ್ಲ. ಹಾಗಾಗಿ, ಖರೀದಿ ಕೇಂದ್ರ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ಪಟ್ಟಣದ ಬಸರೀಹಳ್ಳಿ ಪ್ಲಾಟ್​ನಲ್ಲಿ 3 ಎಕರೆ ಜಮೀನಿನಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಹೆಲಿಪ್ಯಾಡ್ ಅನ್ನು ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಬಿಪಿಎಲ್ ಕಾರ್ಡ್ ಬಗ್ಗೆ ಯಾವ ಮಾನದಂಡ ಇಟ್ಟುಕೊಂಡು ಸಚಿವ ಉಮೇಶ ಕತ್ತಿ ಅವರು ಹೇಳಿಕೆ ನೀಡಿದ್ದಾರೆಂಬುದು ಗೊತ್ತಿಲ್ಲ. ಅವರಿಂದ ಸರಿಯಾದ ಉತ್ತರ ಸಿಗಬೇಕು. ನಮ್ಮ ತಾಲೂಕಿನಲ್ಲೂ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದವರಿದ್ದಾರೆ. ಅನಧಿಕೃತ ಕಾರ್ಡ್​ಗಳನ್ನು ರದ್ದು ಮಾಡಲು ಅನುಕೂಲವಾಗಲಿದೆ ಎಂದರು.

    ಹೆಲಿಪ್ಯಾಡ್ ಉದ್ಘಾಟನೆ: ಹೆಲಿಪ್ಯಾಡ್ ಉದ್ಘಾಟಿಸಿದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಅವರು ಸಚಿವ ಬಿ.ಸಿ. ಪಾಟೀಲ ಅವರು ಕಾರ್ಯವನ್ನು ಶ್ಲಾಘಿಸಿದರು.

    ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಉಪಾಧ್ಯಕ್ಷೆ ಸುಧಾ ಚಿಂದಿ, ಜಿಪಂ ಸದಸ್ಯರಾದ ಸುಮಿತ್ರಾ ಪಾಟೀಲ, ಎನ್.ಎಂ. ಈಟೇರ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಕೃಷಿಕ ಸಮಾಜ ತಾಲೂಕಾಧ್ಯಕ್ಷ ಜಿ. ಶಿವನಗೌಡ್ರ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಡಿ.ಸಿ. ಪಾಟೀಲ, ಆರ್.ಎನ್. ಗಂಗೋಳ, ಏಕೇಶಪ್ಪ ಬಣಕಾರ, ರವಿಶಂಕರ ಬಾಳಿಕಾಯಿ, ತಹಸೀಲ್ದಾರ್ ಉಮಾ ಕೆ.ಎ., ಇತರರಿದ್ದರು.

    ಬಿಪಿಎಲ್ ಕಾರ್ಡ್ ರದ್ದಾಗಲ್ಲ: ಟಿವಿ, ಫ್ರಿಜ್, ಬೈಕ್ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಪಡಿಸಲು ಆಗುವುದಿಲ್ಲ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

    ಹಿರೇಕೆರೂರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಮಂತ್ರಿ ಬಂದಿದ್ದಾರೆ. ಕಾರ್ಡ್ ರದ್ದತಿ ಬಗ್ಗೆ ಅವರು ಮಾತಾಡಿರಬಹುದು. ಅದರ ಕುರಿತು ನನಗೆ ಮಾಹಿತಿ ಇಲ್ಲ. ಒಬ್ಬರು ಎರಡು ಮೂರು ಕಾರ್ಡ್​ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಈ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ಕಾರ್ಡ್​ಗಳನ್ನು ರದ್ದು ಮಾಡುವುದಾಗಿ ಹೇಳಿರಬೇಕು ಎಂದು ಉಮೇಶ ಕತ್ತಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

    ಹೊಂದಿಕೊಳ್ಳಬೇಕು: 10 ತಿಂಗಳಿನಿಂದ ಕೋವಿಡ್ 19 ಇರುವುದರಿಂದ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಸ್ವಲ್ಪ ಏರಿಳಿತ ಆಗುತ್ತಿರುತ್ತದೆ. ಅದಕ್ಕೆ ಹೊಂದಿಕೊಂಡು ಹೋಗಬೇಕು ಎಂದು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ರಾಜಾಹುಲಿ ಹೇಳಿಕೆಯ ಸ್ಪಷ್ಟನೆ: ಬಿ.ವೈ. ವಿಜಯೇಂದ್ರ ಅವರು ಮುಂದಿನ ರಾಜಾಹುಲಿ ಅಂತಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 40 ವರ್ಷಗಳ ರಾಜಕಾರಣದಲ್ಲಿ ಅನೇಕ ಏಳು-ಬೀಳುಗಳು, ಸಾವಿರಾರು ಉಳಿಪೆಟ್ಟುಗಳನ್ನು ನೋಡಿದ್ದಾರೆ. ಈಗ 4ನೇ ಬಾರಿ ಮುಖ್ಯಮಂತ್ರಿಯಾಗಿ ರಾಜಾಹುಲಿ ಎನಿಸಿಕೊಂಡಿದ್ದಾರೆ. ಅದೇ ರೀತಿ ನಿಮಗೂ ನೂರಾರು ಉಳಿಪೆಟ್ಟುಗಳು ಬೀಳುತ್ತವೆ. ಈಗಾಗಲೇ ಶೇ. 50-60ರಷ್ಟು ಪೆಟ್ಟು ಬೀಳುತ್ತಿವೆ. ಇವೆಲ್ಲ ಬಿದ್ದ ನಂತರ ಒಂದು ಸುಂದರ ಮೂರ್ತಿಯಾಗಲು ಸಾಧ್ಯ. ತಂದೆ ಹೇಗೆ ರಾಜಾಹುಲಿ ಎನಿಸಿಕೊಂಡಿದ್ದಾರೆ. ಅದೇ ರೀತಿ ನೀವೂ ರಾಜಾಹುಲಿ ಆಗಿ ರಾಜ್ಯದಲ್ಲಿ ಜನತೆಯ ಸೇವೆ ಮಾಡಿರಿ ಎಂಬರ್ಥದಲ್ಲಿ ಮೈಸೂರಿನಲ್ಲಿ ಈ ಹೇಳಿಕೆ ನೀಡಿದ್ದೇನೆ ಎಂದು ಸಚಿವ ಎಸ್.ಟಿ. ಸೋಮಶೇಖರ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts