More

  ಕಾವೇರಿ ಮಡಿಲಿನಲ್ಲೂ ವಿಪರೀತ ಸೆಖೆ

  ಮಡಿಕೇರಿ:

  ಸಾಮಾನ್ಯವಾಗಿ ವರ್ಷದ ಬಹುತೇಕ ದಿನಗಳು ತಂಪಾದ ಹವಾಮಾನ ಹೊಂದಿರುವ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲೂ ಈಗ ವಿಪರೀತ ಸೆಕೆ. ಎತ್ತರದ ಪ್ರದೇಶದಲ್ಲಿದ್ದು, ದಟ್ಟ ಹಸಿರು ಕಾನನದ ಮಧ್ಯೆ ನೆಲೆಯಾಗಿದ್ದರೂ ಈ ವರ್ಷ ಇಲ್ಲಿಗೂ ಸೂರ್ಯನ ಪ್ರಖರ ಕಿರಣಗಳು ನೆತ್ತಿ ಸುಡುವ ಅನುಭವ ಮೂಡಿಸುತ್ತಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವಾಡಿಕೆಯಂತೆ ಇಲ್ಲಿ ಸುರಿಯಬೇಕಿದ್ದ ಮಳೆ ಮುನಿಸಿಕೊಂಡಿರುವುದೂ ಇದಕ್ಕೆ ಒಂದು ಕಾರಣ ಆಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡುಗಳ ಮಧ್ಯೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಸಮುದ್ರಮಟ್ಟಕ್ಕಿಂತ ೧,೨೭೬ ಮೀಟರ್ ಎತ್ತರದಲ್ಲಿ ತಲಕಾವೇರಿ ಇದೆ. ವಾರ್ಷಿಕವಾಗಿ ಸರಾಸರಿ ೮ ಸಾವಿರ ಮಿಮೀಗಳಷ್ಟು ಮಳೆ ಬೀಳುವ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗದಲ್ಲಿ ಜೀವನದಿ ಕಾವೇರಿ ಉಗಮಿಸಿದರೆ ಮತ್ತೊಂದು ಬದಿಯಲ್ಲಿ ಕಾವೇರಿಯ ಉಪನದಿ ಕನ್ನಿಕೆ ನದಿ ಹುಟ್ಟುತ್ತದೆ. ನಂತರ ಈ ನದಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿಯನ್ನು ಸೇರುತ್ತದೆ. ವರ್ಷದ ಎಲ್ಲಾ ತಿಂಗಳುಗಳಲ್ಲಿ ತಲಕಾವೇರಿಯಲ್ಲಿ ಮಂಜು ಕವಿದ ವಾತಾವರಣ ಸಾಮಾನ್ಯ ದೃಶ್ಯ. ಅದರಲ್ಲೂ ಮಳೆಗಾಲದಲ್ಲಿ ನಮ್ಮ ಕಾಲು ನಮಗೇ ಕಾಣದಷ್ಟು ದಟ್ಟವಾಗಿ ಮಂಜು ಆವರಿಸಿರುತ್ತದೆ.

  ಇಲ್ಲಿಯ ವಾತಾವರಣವೂ ವರ್ಷದ ಎಲ್ಲಾ ಕಾಲದಲ್ಲಿ ತಂಪಾಗಿರುತ್ತದೆ. ಬಿರು ಬೇಸಿಗೆಯ ಏಪ್ರಿಲ್, ಮೇ ತಿಂಗಳುಗಳಲ್ಲಿ ತಾಪಮಾನ ಸ್ವಲ್ಪ ಏರಿಕೆ ಕಂಡರೂ ಸ್ಥಳೀಯರಿಗೆ ಇದು ಅಸಹಜ ಅನ್ನಿಸುವುದಿಲ್ಲ. ಆದರೆ ಈ ವರ್ಷ ಮಾರ್ಚ್ ಆರಂಭದಿಂದಲೇ ತಲಕಾವೇರಿಯಲ್ಲೂ ಬಿಸಿಲು ಸುಡುತ್ತಿದೆ. ದೇವಾಲಯದ ಆವರಣದ ಕಲ್ಲುಗಳ ಮೇಲೆ ಬರಿಕಾಲಿನಲ್ಲಿ ನಡೆಯಲಾಗದ ಸ್ಥಿತಿ ಇದೆ. ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡಿ ತಲೆ ಬುಂಡೆ ಮಾಡಿಸಿಕೊಂಡು ಶ್ರೀ ಕ್ಷೇತ್ರಕ್ಕೆ ಆಗಮಿಸುವವರ ಸ್ಥಿತಿಯಂತೂ ದೇವರಿಗೇ ಪ್ರೀತಿ ಎನ್ನುವಂತೆ ಇರುತ್ತದೆ. ಇಂಥ ಬಿಸಿಲು ಈ ಹಿಂದೆ ಯಾವತ್ತೂ ಅನುಭವ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

  ೨೫-೨೬ ಡಿಗ್ರಿ ಸೆಲ್ಸಿಯಸ್ ಮೀರದ ತಲಕಾವೇರಿಯ ತಾಪಮಾನ ಈ ಬಾರಿ ೩೦ ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದೆ. ಶನಿವಾರದ ಮಾಹಿತಿ ಪ್ರಕಾರ ತಲಕಾವೇರಿಯಲ್ಲಿ ೨೯ ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಆದರೆ ೩೦ ಡಿಗ್ರಿ ಸೆಲ್ಸಿಯಸ್ ಇದ್ದಂತಹ ಅನುಭವ ಆಗುತ್ತಿತ್ತು. ಕನಿಷ್ಠ ಉಷ್ಣಾಂಶ ೨೦ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ತುಂತುರು ಮಳೆಯಾದರೂ ಉಷ್ಣಾಂಶ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ಗರಿಷ್ಠ ಉಷ್ಣಾಂಶ ೩೦ ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಠ ಉಷ್ಣಾಂಶ ೧೯ ಡಿಗ್ರಿ ಸೆಲ್ಸಿಯಸ್ ಕಂಡುಬರಲಿದೆ. ಸೋಮವಾರ ಗರಿಷ್ಠ ಉಷ್ಣಾಂಶ ೩೧ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ ೧೮ ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳವಾರ ಗರಿಷ್ಠ ೩೦ ಮತ್ತು ಕನಿಷ್ಠ ೧೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬರಲಿದೆ.

  ತಲಕಾವೇರಿಯಿಂದ ಕೇವಲ ೮ ಕಿಮೀ ದೂರದಲ್ಲಿರುವ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಸಮುದ್ರಮಟ್ಟದಿಂದ ೮೯೮ ಮಿ. ಎತ್ತರದಲ್ಲಿರುವ ಭಾಗಮಂಡಲದಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ ೩೨ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ೩೩ ಡಿಗ್ರಿ ಉಷ್ಣಾಂಶದ ಅನುಭವ ಇಲ್ಲಿ ಆಗುತ್ತಿತ್ತು. ಕನಿಷ್ಠ ಉಷ್ಣಾಂಶ ೨೧ ಡಿಗ್ರಿ ಸೆಲ್ಸಿಯಸ್ ಕಂಡು ಬಂತು. ಭಾನುವಾರ ಗರಿಷ್ಠ ತಾಪಮಾನ ೩೧ ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ ೨೦ ಡಿಗ್ರಿ ಸೆಲ್ಸಿಯಸ್ ಇರಲಿದೆ. ಸೋಮವಾರ ದಾಖಲೆಯ ೩೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನ ೧೮ ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳವಾರ ಗರಿಷ್ಠ ೩೩ ಡಿಗ್ರಿ ಮತ್ತು ಕನಿಷ್ಠ ೧೯ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

  ಇಲ್ಲಿ ಬೀಳುವ ಮಳೆಯ ಕಾರಣಕ್ಕೆ ಭಾಗಮಂಡಲ ಮತ್ತು ತಲಕಾವೇರಿ ಮಳೆಯ ಊರು ಎಂದೇ ಪ್ರಸಿದ್ಧಿಯಾಗಿದೆ. ಜೂನ್‌ನಿಂದ ಆಕ್ಟೋಬರ್ ಮೊದಲ ವಾರದ ತನಕವೂ ಇಲ್ಲಿ ಸಾಮಾನ್ಯವಾಗಿ ಮಳೆ ಸುರಿಯುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾವೇರಿ ನದಿಯಲ್ಲಿ ವರ್ಷಪೂರ್ತಿ ನೀರಿನ ಹರಿವು ಇರುತ್ತದೆ. ಆದರೆ ಈ ವರ್ಷ ಈ ಭಾಗದಲ್ಲಿ ವಾಡಿಕೆಯ ಮಳೆ ಆಗಿಲ್ಲ. ಇದರ ಪರಿಣಾಮದಿಂದ ನೀರಿನ ಒರತೆಗಳೂ ಹುಟ್ಟಿಕೊಂಡಿಲ್ಲ. ಹಾಗಾಗಿ ಕಾವೇರಿ ನದಿ ಮಾರ್ಚ್ ಮೊದಲ ವಾರದಲ್ಲೇ ಸೊರಗಿ ಹೋಗಿದೆ.

  ಮಳೆ ಇಲ್ಲದೆ ಈಗಾಗಲೇ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದ್ದು, ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಪ್ರಖರ ಬಿಸಿಲು ಇರುವುದರಿಂದ ನದಿ ಮತ್ತಷ್ಟು ಕ್ಷೀಣವಾಗಿದೆ. ತಲಕಾವೇರಿಯಿಂದ ಸುಮಾರು ೨೦ ಕಿಮೀ ದೂರದಲ್ಲಿ ಕೇರಳದ ಗಡಿ ಶುರುವಾಗುತ್ತದೆ. ಪಕ್ಕದ ಕೇರಳದಲ್ಲಿ ಶರೀರವೆಲ್ಲಾ ಒದ್ದೆಯಾಗುವಷ್ಟು ಬೆವರು ಸುರಿಸುವ ಸೆಖೆ ಇರುತ್ತಿದ್ದರೂ ಭಾಗಮಂಡಲ, ತಲಕಾವೇರಿಯಲ್ಲಿ ಈ ಅನುಭವ ಆಗುತ್ತಿರಲಿಲ್ಲ. ಬದಲಿಗೆ ಎಸಿಯಲ್ಲಿ ಇದ್ದಂತೆ ಅನ್ನಿಸುತ್ತಿತ್ತು. ಆದರೆ ಈ ವರ್ಷ ಮಾತ್ರ ಕೇರಳದ ಸೆಖೆಯ ಅನುಭವವೇ ಈ ಪ್ರದೇಶದಲ್ಲಿ ಆಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

  ತಲಕಾವೇರಿಯಲ್ಲಿ ಈ ಬಾರಿ ಭಾರಿ ಸೆಖೆ ಇದೆ. ಈ ಹಿಂದೆ ಇಂತಹ ಅನುಭವ ಆಗುತ್ತಿರಲಿಲ್ಲ. ಬಿಸಲು ಇದ್ದರೂ ಒಂದು ರೀತಿಯ ತಂಪು ಅನುಭವ ಆಗುತ್ತಿತ್ತು. ಆದರೆ ಈ ವರ್ಷ ಎಲ್ಲವೂ ಉಲ್ಟಾ ಆಗಿದೆ. ನಮಗೆ ಕೇರಳದಲ್ಲಿ ಇರುವಂತಹ ಅನುಭವ ಆಗುತ್ತಿದೆ. ವಿಪರೀತ ಬಿಸಲು, ತುಂಬಾ ಸೆಖೆ ಇದೆ. ಮಾರ್ಚ್‌ನಲ್ಲೇ ಇಂಥ ಅನುಭವ ಆದರೆ ಮುಂದೆ ಹೇಗೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ.
  ಸಿರಕಜೆ ಲೋಕಪ್ರಕಾಶ್, ತಲಕಾವೇರಿ ನಿವಾಸಿ

  ಭಾಗಮಂಡಲವನ್ನು ಎಲ್ಲರೂ ತಂಪು ಪ್ರದೇಶ ಎಂದು ಹೇಳುತ್ತಿದ್ದರು. ಆದರೆ ಈ ವರ್ಷ ಇಲ್ಲಿಯ ಬಿಸಿಲು ಸಹಿಸಲು ಸಾಧ್ಯವಾಗುತ್ತಿಲ್ಲ. ತ್ರಿವೇಣಿ ಸಂಗಮದಲ್ಲಿ ನೀರು ಬತ್ತಿಹೋಗಿದೆ. ಆದಷ್ಟು ಬೇಗ ಮಳೆ ಬಾರದಿದ್ದರೆ ಪರಿಸ್ಥಿತಿ ಚಿಂತಾಜನಕ ಆಗುತ್ತದೆ. ಕುಡಿಯುವ ನೀರಿಗೂ ಸಮಸ್ಯೆ ಆಗಬಹುದು.
  ಶಬರೀಶ್ ಕುದುಕುಳಿ, ಭಾಗಮಂಡಲ ನಿವಾಸಿ

  ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆ ಕೊಡಗು ಜಿಲ್ಲೆಯಲ್ಲಿ ಮಾ.೨೩ ರಿಂದ ಮಾ. ೨೭ ವರೆಗೆ ಅಲ್ಪ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆ ಬರುವ ಸಂಭವವಿದೆ. ಗರಿಷ್ಠ ಉಷ್ಣಾಂಶ ೩೨ಡಿ.ಸೆ. ಮತ್ತು ಕನಿಷ್ಠ ಉಷ್ಣಾಂಶ ೧೯ ಡಿ.ಸೆ. ದಾಖಲಾಗುವ ಸಾಧ್ಯತೆಯಿದೆ. ಗಾಳಿ ಗಂಟೆಗೆ ೫-೬ ಕಿಲೋಮೀಟರ್ ವೇಗದಲ್ಲಿ ಬೀಸುವ ಸಾದ್ಯತೆಯಿದೆ.
  ಡಾ. ಸುಮಂತ್‌ಕುಮಾರ್ ಬಿ.ವಿ., ಸಹಸಂಶೋಧಕ, ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಕೇಂದ್ರ, ಎಎಮ್‌ಎಫ್‌ಯು, ನಾಗೇನಹಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts