More

    ನಾನು ಗಾಂಧಿವಾದಿ ಎಂದು ನಿತೀಶ್ ಜೀ​ ಹೇಳುತ್ತಾರೆ…ಆದರೆ ಗಾಂಧಿ ಮತ್ತು ಗೋಡ್ಸೆ ಪರಸ್ಪರ ಕೈಜೋಡಿಸಲು ಹೇಗೆ ಸಾಧ್ಯ ಎಂಬುದು ನನ್ನ ವಾದ: ಪ್ರಶಾಂತ್ ಕಿಶೋರ್​

    ಪಟನಾ: ಚುನಾವಣಾ ಚಾಣಾಕ್ಷ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್​ ಅವರನ್ನು ಜನವರಿ ಅಂತ್ಯದಲ್ಲಿಯೇ ಜೆಡಿಯುದಿಂದ ಉಚ್ಚಾಟನೆ ಮಾಡಲಾಗಿತ್ತು. ಅದಾದ ಬಳಿಕ ದೆಹಲಿ ಚುನಾವಣೆಯಲ್ಲಿ ಆಪ್​ ಗೆಲುವಿಗೆ ಪ್ರಶಾಂತ್​ ಕಿಶೋರ್​ ಶ್ರಮಿಸಿದ್ದರು ಎನ್ನಲಾಗಿತ್ತು.

    ಇದೀಗ ಪ್ರಶಾಂತ್​ ಕಿಶೋರ್​ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ್ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸಲು ಸಿದ್ಧರಾಗುತ್ತಿದ್ದಾರೆ. ಬಿಹಾರದ ಮತದಾರರೊಂದಿಗೆ ಮಾತನಾಡಲು ಬಾತ್​ ಬಿಹಾರ್ ಕೀ ಎಂಬ ಕಾರ್ಯಕ್ರಮವನ್ನೂ ಪ್ರಾರಂಭಿಸಿದ್ದಾರೆ.

    ಬಿಜೆಪಿಯೊಂದಿಗೆ ಮೈತ್ರಿ ಉಳಿಸಿಕೊಳ್ಳಲು ನಿತೀಶ್ ಕುಮಾರ್ ಅವರು ಸೈದ್ಧಾಂತಿಕ ರಾಜಿಯಲ್ಲಿ ತೊಡಗಿದ್ದಾರೆ ಎಂದು ಹೇಳಿದ ಪ್ರಶಾಂತ್ ಕಿಶೋರ್​, ಬಿಹಾರ್ ಅಭಿವೃದ್ಧಿಯಾಗಿದೆ ಎಂದು ಸಿಎಂ ಹೇಳುತ್ತಿರುವ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಬಿಹಾರ ರಾಜ್ಯಸರ್ಕಾರದ ಆಡಳಿತದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    ಪಕ್ಷದ ಸಿದ್ಧಾಂತದ ವಿಚಾರದಲ್ಲಿ ನನ್ನ ಹಾಗೂ ನಿತೀಶ್​ ಜಿ ನಡುವೆ ಅನೇಕ ರೀತಿಯ ಚರ್ಚೆಗಳು ನಡೆದಿವೆ. ನಾನ್ಯಾವತ್ತೂ ಗಾಂಧೀಜಿಯವರ ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ ಎಂದು ನಿತೀಶ್​ ಕುಮಾರ್​ ಅವರು ಯಾವಾಗಲೂ ಹೇಳುತ್ತಾರೆ. ಆದರೆ ಅದೇ ಗಾಂಧಿಯನ್ನು ಕೊಂದ ನಾಥೂರಾಮ್​ ಗೋಡ್ಸೆ ಅವರ ಪರವಹಿಸುವ ಪಕ್ಷದೊಟ್ಟಿಗೆ ಮೈತ್ರಿಯಲ್ಲಿದ್ದಾರೆ. ಆದರೆ ಗಾಂಧೀಜಿ ಮತ್ತು ಗೋಡ್ಸೆ ಪರಸ್ಪರ ಕೈ ಜೋಡಿಸಿ, ಒಟ್ಟಿಗೇ ಹೆಜ್ಜೆ ಹಾಕಲು ಸಾಧ್ಯವೇ ಇಲ್ಲ ಎಂಬುದು ನನ್ನ ವಾದ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

    ಬಿಹಾರ ರಾಜ್ಯ ಪ್ರಗತಿ ಹೊಂದಿದೆ. ಆದರೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಬಿಹಾರ ಇನ್ನೂ ಹಲವು ವಿಚಾರಗಳಲ್ಲಿ ಹಿಂದುಳಿದಿದೆ. ಅನೇಕ ಕೊರತೆಗಳು ಇವೆ. ಅದೇಕೆ ಹೀಗೆ? 2005ರಲ್ಲಿ ಹೇಗಿತ್ತೋ ಹಾಗೇ ಈಗಲೂ ಇದೆ. ದೇಶದಲ್ಲಿ ಜಾರ್ಖಂಡವನ್ನು ಹೊರತು ಪಡಿಸಿದರೆ ಬಿಹಾರವೇ ಅತ್ಯಂತ ಹಿಂದುಳಿದ ರಾಜ್ಯ ಎಂದು ತಿಳಿಸಿದ್ದಾರೆ.

    ನಿತೀಶ್​ ಕುಮಾರ್​ ಅವರು ನನ್ನನ್ನು ಮಗನಂತೆಯೇ ನೋಡಿಕೊಂಡಿದ್ದಾರೆ. ನಾನೂ ಅವರಲ್ಲಿ ನನ್ನ ತಂದೆಯನ್ನು ನೋಡಿದೆ. ನನ್ನನ್ನು ಪಕ್ಷಕ್ಕೆ ಕರೆದುಕೊಳ್ಳುವುದು, ಅಲ್ಲಿಂದ ಉಚ್ಚಾಟಿಸುವುದು ನಿತೀಶ್​ ಕುಮಾರ್​ ಅವರಿಗೆ ಬಿಟ್ಟಿದ್ದು. ನಾನು ಅದನ್ನು ಪ್ರಶ್ನೆ ಮಾಡುವುದಿಲ್ಲ. ಅವರನ್ನು ಮತ್ತು ಅವರ ನಿರ್ಧಾರಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts