More

    ಕಳ್ಳತನ ಪ್ರಕರಣ ಪ್ರಮುಖ ಆರೋಪಿ ಬಂಧನ

    ಉಪ್ಪಿನಂಗಡಿ: ಎರಡು ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕಳವು ಪ್ರಕರಣಗಳಲ್ಲಿ 15 ಠಾಣೆಗಳ ಪೊಲೀಸರಿಗೆ ಬೇಕಾಗಿದ್ದ ಬೆಳ್ತಂಗಡಿ ತಾಲೂಕು ಪಡಂಗಡಿ ನಿವಾಸಿ ಹಮೀದ್ ಅಲಿಯಾಸ್ ಕುಂಞಿಮೋನು (46) ಬಿನ್ ಹೈದ್ರೋಸ್ ಬಂಧಿತ ಆರೋಪಿ.

    ಆರೋಪಿ ಹಮೀದ್ ತನ್ನ ಸಹಚರ ಸಜಿಪದ ಫಾರೂಕ್ ಜತೆಗೂಡಿ ಡಿ.11ರಂದು ಉಪ್ಪಿನಂಗಡಿ ಬಾರ್ ಹಾಗೂ ದಿನಸಿ ಅಂಗಡಿಗೆ ನುಗ್ಗಿ ನಗದು ಲಪಟಾಯಿಸಿದ್ದರು. ಉಪ್ಪಿನಂಗಡಿಯ ನಟ್ಟಿಬೈಲಿನ ಮಳಿಗೆ ಹಾಗೂ ನರ್ಸರಿಗೆ ಏಕಾಂಗಿಯಾಗಿ ನುಗ್ಗಿದ್ದ ಹಮೀದ್ ಅಲ್ಲಿಂದಲೂ ನಗದು ಹಣ ಎಗರಿಸಿದ್ದ.

    ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಎಸೈ ಈರಯ್ಯ ಡಿಎನ್ ಮತ್ತವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಸಹಚರ ಫಾರೂಕ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
    ಕೊನೇ ಬಸ್ಸಲ್ಲಿ ಬರುತ್ತಿದ್ದರು.

    ಕಳವು ಆರೋಪಿ ಹಮೀದ್ ಮತ್ತಾತನ ಸಹಚರರು ಮಂಗಳೂರಿನಿಂದ ಉಪ್ಪಿನಂಗಡಿಗೆ ಹೊರಡುವ ಕೊನೆಯ ಬಸ್ಸಿನಲ್ಲಿ ಬಂದು ಕುಮಾರಧಾರ ಸೇತುವೆ ಬಳಿ ಇಳಿದು ಸೇತುವೆಯಡಿ ಆಶ್ರಯ ಪಡೆಯುತ್ತಿದ್ದರು. ಮಧ್ಯರಾತ್ರಿಯಾಗುತ್ತಿದ್ದಂತೆಯೇ ಕಳವಿಗೆ ನಿಗದಿ ಪಡಿಸಲಾದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಅಲ್ಲಿ ಕೆಲಸ ಮುಗಿಸಿ ಮತ್ತೆ ಕಾಲ್ನಡಿಗೆಯಲ್ಲೇ ನದಿಯಲ್ಲಿನ ಸೇತುವೆ ಭಾಗಕ್ಕೆ ಬಂದು ಕದ್ದ ಸೊತ್ತುಗಳನ್ನು ಹಂಚಿಕೊಂಡು ಬೆಳಗಾಗುತ್ತಿದ್ದಂತೆಯೇ ಮಂಗಳೂರಿನತ್ತ ಸಾಗುವ ಬಸ್ಸನ್ನೇರಿ ಮುಂದುವರಿಯುತ್ತಿದ್ದರು.
    ಕಳವು ಕೃತ್ಯ ದಾಖಲಾಗುತ್ತಿದ್ದ ಸಿಸಿ ಕ್ಯಾಮರಾಗಳ ಡಿವಿಡಿಆರ್‌ಗಳನ್ನು ಕಿತ್ತೊಯ್ಯುತ್ತಿದ್ದ ಆರೋಪಿಗಳು ಅವುಗಳನ್ನು ನದಿಗೆಸೆದು ಪರಾರಿಯಾಗುತ್ತಿದ್ದರು. ಕಳ್ಳರ ಮೂಲವನ್ನು ಕೊನೆಗೂ ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿಯೂ ಕಳವು ಮಾಡಿದ ಹಲವು ಪ್ರಕರಣಗಳ ಬಗ್ಗೆ ಕಳ್ಳರಿಂದ ಮಾಹಿತಿ ಪಡೆದಿದ್ದಾರೆ.

    ಸೇತುವೆಗಳೇ ಆಶ್ರಯತಾಣ: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಿಗೆ ಕಟ್ಟಲಾದ ಸೇತುವೆಗಳು ಕಳ್ಳರ ಪಾಲಿಗೆ ಆಶ್ರಯ ತಾಣವಾಗಿದೆ. ಈ ಹಿಂದೆ ನೆಕ್ಕಿಲಾಡಿಯ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳ ನೇತ್ರಾವತಿ ನದಿ ಸೇತುವೆ ಕೆಳಗೆ ಆಶ್ರಯ ಪಡೆದಿದ್ದ. ಈಗ ಪತ್ತೆ ಹಚ್ಚಿದ ಪ್ರಕರಣದ ಆರೋಪಿಗಳು ಕುಮಾರಧಾರಾ ಸೇತುವೆ ಕೆಳಗೆ ಆಶ್ರಯ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts