More

    ಹೊಸ ಮನ್ವಂತರದತ್ತ ಚಿತ್ರಮಂದಿರಗಳು

    ಬೆಂಗಳೂರು: ಲಾಕ್​ಡೌನ್​ನಿಂದಾಗಿ ಕಳೆದ ಏಳು ತಿಂಗಳುಗಳಿಂದ ನಿಂತಿದ್ದ ಚಿತ್ರಪ್ರದರ್ಶನ ಪುನಃ ಪ್ರಾರಂಭವಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಅ. 15ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವನ್ನು ಪ್ರಾರಂಭಿಸಬಹುದು ಎಂದು ಇತ್ತೀಚೆಗಷ್ಟೇ ಘೋಷಿಸಿದ್ದ ಸರ್ಕಾರ, ಇದೀಗ ಈ ನಿಟ್ಟಿನಲ್ಲಿ ಮಂಗಳವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಚಿತ್ರಮಂದಿರಗಳ ಪಾಲಿಗೆ ಇದೊಂದು ಹೊಸ ಮನ್ವಂತರ. ಏಕೆಂದರೆ, ಇಲ್ಲಿಯವರೆಗೂ ಇದ್ದ ವ್ಯವಸ್ಥೆ ಬೇರೆ. ಮುಂದಿನ ದಿನಗಳ ವ್ಯವಸ್ಥೆ ಬೇರೆ. ಈ ವ್ಯವಸ್ಥೆ ಕಾಯಂ ಆಗಿರದಿದ್ದರೂ, ಮುಂದಿನ ಕೆಲವು ತಿಂಗಳು ಮುಂದುವರಿಯಲಿದೆ. ಈ ಸಮಯ ಚಿತ್ರಮಂದಿರದವರ ಪಾಲಿಗೆ ಬಹಳ ಮುಖ್ಯ. ಈಗಾಗಲೇ ಕರೊನಾ ಮತ್ತು ಲಾಕ್​ಡೌನ್ ಹೊಡೆತ ತಾಳಲಾರದೆ, ಹಲವು ಚಿತ್ರಮಂದಿರಗಳು ಮುಚ್ಚಿವೆ. ಈಗ ಹೊಸ ನಿಯಮಗಳು ಚಿತ್ರಮಂದಿರಗಳನ್ನು ಅಗ್ನಿಪರೀಕ್ಷೆಗೆ ಒಡ್ಡಲಿವೆ.

    ಪ್ರಮುಖವಾಗಿ ಚಿತ್ರಮಂದಿರದ ಶೇ. 50 ಆಸನಗಳನ್ನು ಮಾತ್ರ ಭರ್ತಿ ಮಾಡಬೇಕು, ಎರಡು ಆಸನಗಳ ಮಧ್ಯೆ ಒಂದು ಆಸನ ಖಾಲಿ ಬಿಡಬೇಕು, ಚಿತ್ರಮಂದಿರವನ್ನು ಚೆನ್ನಾಗಿ ಸ್ಯಾನಿಟೈಸ್ ಮಾಡಬೇಕು, ಚಿತ್ರಮಂದಿರದ ಒಳಗೆ ಮತ್ತು ಹೊರಗೆ ಶುಚಿತ್ವ ಕಾಪಾಡಿಕೊಳ್ಳಬೇಕು, ಚಿತ್ರಮಂದಿರಗಳ ಹೊರಗಡೆ ಸರದಿಯಲ್ಲಿ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು ಮುಂತಾದ ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ.

    ಲಾಕ್​ಡೌನ್ ಸಮಯ ನವೀಕರಣಕ್ಕೆ ಬಳಕೆ: ಬಹಳ ಹಿಂದಿನಿಂದಲೂ ಏಕಪರದೆ ಚಿತ್ರಮಂದಿರಗಳಲ್ಲಿ ಸೂಕ್ತ ಶುಚಿತ್ವ ಇರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇದ್ದವು. ಮುಂದಿನ ದಿನಗಳಲ್ಲಿ ಎಲ್ಲ ಚಿತ್ರಮಂದಿರದವರೂ ಶುಚಿತ್ವವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಬಹಳಷ್ಟು ಏಕಪರದೆ ಚಿತ್ರಮಂದಿರಗಳು ಹೆಜ್ಜೆ ಇಟ್ಟಿದ್ದು, ನವೀಕರಣ ಕೆಲಸಗಳು ನಡೆಯುತ್ತಿವೆ.

    ಕೆ.ಜಿ. ರಸ್ತೆಯಲ್ಲಿರುವ ಅನುಪಮಾ ಚಿತ್ರಮಂದಿರ ಈ ವಿಷಯದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಆಸನಗಳಷ್ಟೇ ಅಲ್ಲ, ಸೌಂಡ್ ಮತ್ತು ಸ್ಕ್ರೀನ್ ವ್ಯವಸ್ಥೆಯಲ್ಲೂ ಮಹತ್ತರ ಬದಲಾವಣೆ ಮಾಡಿಕೊಂಡಿದೆ. ಚಿತ್ರಪ್ರದರ್ಶನ ಶುರುವಾದ ನಂತರ ಪ್ರೇಕ್ಷಕರನ್ನು ಹೊಸ ರೀತಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಬಹಳ ಕಾಲದಿಂದ ನವೀಕರಣ ಮಾಡದಿರುವ ಹಲವು ಚಿತ್ರಮಂದಿರಗಳವರು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇನ್ನು, ಇತ್ತೀಚಿನ ವರ್ಷಗಳಲ್ಲಿ ನವೀಕರಣ ಮಾಡಿದ್ದರೂ, ಏಳು ತಿಂಗಳಿಂದ ಚಿತ್ರಪ್ರದರ್ಶನ ರದ್ದಾಗಿದ್ದರಿಂದ, ಪ್ರೊಜೆಕ್ಟರ್ ಸೇರಿ ಹಲವು ಉಪಕರಣಗಳು ಕೆಲಸ ಮಾಡಿರುವುದಿಲ್ಲ. ಹಾಗೆಯೇ ಮಂದಿರಗಳು ಬಳಕೆಯಾಗದಿರುವುದರಿಂದ, ಸಣ್ಣ-ಪುಟ್ಟ ರಿಪೇರಿ ಕೆಲಸಗಳಿದ್ದು, ಅವೆಲ್ಲವನ್ನೂ ಪೂರೈಸಿ ಹೊಸದಾಗಿ ಬಾಗಿಲು ತೆರೆೆಯಲಿವೆ.

    ನಿರ್ಮಾಪಕರಿಂದ ಹಿಂದೇಟು..

    ಚಿತ್ರಮಂದಿರದವರೇನೋ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಹಾಗಾದರೆ, ಅ.15ರಿಂದ ಚಿತ್ರೀಕರಣ ಆರಂಭವಾಗುತ್ತಾ? ಈ ವಿಷಯವಾಗಿ ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ, ಇದುವರೆಗೂ ನಿರ್ವಪಕ ಕನಕಪುರ ಶ್ರೀನಿವಾಸ್ ಒಬ್ಬರು ತಮ್ಮ ‘ರಣಂ’ ಚಿತ್ರವನ್ನು ಅ.23ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಬಿಟ್ಟರೆ, ಮಿಕ್ಕಂತೆ ಯಾವ ನಿರ್ವಪಕರು ಸಹ ಅ.15ರ ನಂತರ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ. ಒಂದೊಮ್ಮೆ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿರ್ವಪಕರು ಮುಂದಾಗದಿದ್ದರೆ, ಆಗ ಚಿತ್ರಪ್ರದರ್ಶನ ಶುರುವಾಗುವುದು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ. ‘ಕೇಂದ್ರ ಸರ್ಕಾರ ಅ.15ರಿಂದ ಚಿತ್ರ ಪ್ರದರ್ಶನ ಪ್ರಾರಂಭಿಸಬಹುದು ಎಂದು ಹೇಳಿದ್ದರೂ, ಅದೇ ದಿನ ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭವಾಗುತ್ತದೆ ಎಂದು ಹೇಳುವುದು ಕಷ್ಟ. ಮುಖ್ಯವಾಗಿ ಸಿನಿಮಾಗಳು ಬೇಕು. ಸಿನಿಮಾಗಳಿಲ್ಲದೆ ಪ್ರದರ್ಶನ ಹೇಗೆ ಸಾಧ್ಯ? ಹಾಗಾಗಿ ನಿರ್ವಪಕರು ಯಾವತ್ತಿನಿಂದ ತಮ್ಮ ಚಿತ್ರ ಪ್ರದರ್ಶಿಸುವುದಕ್ಕೆ ಸಜ್ಜಾಗುತ್ತಾರೋ, ಅಲ್ಲಿಂದ ಚಿತ್ರಮಂದಿರ ಗಳು ಸಹ ಕಾರ್ಯನಿರ್ವಹಿಸುತ್ತವೆ’ ಎಂದು ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಹೇಳುತ್ತಾರೆ.

    ಅ.15ರಿಂದ ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕಿದೆಯಾದರೂ, ಅಂದೇ ಎಲ್ಲ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತವೆ ಎಂದು ಹೇಳುವುದು ಕಷ್ಟ. ಇದು ಚಿತ್ರಮಂದಿರದವರ ವಿವೇಚನೆಗೆ ಬಿಟ್ಟಿದ್ದು. ಪ್ರದರ್ಶನಕ್ಕೆ ಸಿನಿಮಾಗಳು ಸಿಕ್ಕರೆ ಮತ್ತು ಪರಿಸ್ಥಿತಿ ಪೂರಕವಾಗಿದ್ದರೆ ಚಿತ್ರಮಂದಿರಗಳು ಕಾರ್ಯನಿರ್ವಹಿಸಲಿವೆ.
    | ಜೈರಾಜ್ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ)

    ಅವರು ಬರಲಿ ಅಂತ ಇವರು..

    ಕರೊನಾ ಹಾವಳಿ ಇರುವುದರಿಂದ ನಿರ್ವಪಕರು ಸಹ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಕುರಿತು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಧೈರ್ಯವಾಗಿ ಬಂದು ಚಿತ್ರ ನೋಡುತ್ತಾರಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಬಹುಶಃ ದೊಡ್ಡ ಸ್ಟಾರ್​ಗಳ ಸಿನಿಮಾಗಳು ಬಂದರೆ, ಜನ ಚಿತ್ರಮಂದಿರಕ್ಕೆ ಬರಬಹುದು ಎಂಬ ನಿರೀಕ್ಷೆ ಹಲವರದ್ದು. ಆದರೆ, ದೊಡ್ಡ ಸ್ಟಾರ್​ಗಳ ಚಿತ್ರಗಳೆಂದರೆ ಬಜೆಟ್ ಸಹ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ಜನ ಬರುತ್ತಾರೆ ಎಂಬ ಖಾತ್ರಿ ಇಲ್ಲ. ಮೇಲಾಗಿ ಅರ್ಧ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಿದರೆ, ಹಾಕಿದ ಬಂಡವಾಳವೂ ಬರುವುದಿಲ್ಲ ಎಂಬ ಕಾರಣಕ್ಕೆ ಸದ್ಯಕ್ಕೆ ಬಿಡುಗಡೆ ಬೇಡ ಎಂಬ ನಿರ್ಧಾರಕ್ಕೆ ಹಲವರು ಬಂದಿದ್ದಾರೆ. ಅಲ್ಲಿಗೆ ದೊಡ್ಡ ಚಿತ್ರಗಳು ಬಂದರೆ ನೋಡಿಕೊಂಡು ಬಿಡುಗಡೆ ಮಾಡೋಣ ಎಂದು ಚಿಕ್ಕ ಚಿತ್ರಗಳ ನಿರ್ವಪಕರು ಕಾದರೆ, ಇತ್ತ ದೊಡ್ಡ ಚಿತ್ರಗಳ ನಿರ್ವಪಕರು ಈಗ ಬಿಡೆಗಡೆ ಮಾಡಿ ನಷ್ಟ ಮಾಡಿಕೊಳ್ಳುವ ಬದಲು ಮುಂದಿನ ವರ್ಷ ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts