More

    ರಂಗತೋರಣ ಸಂಸ್ಥೆಯಿಂದ ಬಳ್ಳಾರಿಯಲ್ಲಿ 13 ರಿಂದ ವಿದ್ಯಾರ್ಥಿ ನಾಟಕೋತ್ಸವ

    ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗತೋರಣ ಸಂಸ್ಥೆಯಿಂದ ಮಾ.13ರಿಂದ 15ರವರೆಗೆ ರಾಜ್ಯ ಮಟ್ಟದ 13ನೇ ವಿದ್ಯಾರ್ಥಿ ನಾಟಕೋತ್ಸವ ಆಯೋಜಿಸಲಾಗಿದೆ. ರಾಜ್ಯದ 15 ಜಿಲ್ಲೆಗಳ ವಿವಿಧ ತಂಡಗಳು 23 ನಾಟಕಗಳನ್ನು ಪ್ರದರ್ಶಿಸಲಿವೆ.

    ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಮಾ.13ರಂದು ಬೆಳಗ್ಗೆ 10.15ಕ್ಕೆ ರಂಗಮಂದಿರ ಆವರಣದಲ್ಲಿ ರಂಗತೋರಣ ಸಂಸ್ಥೆಯ ಧ್ವಜಾರೋಹಣದ ಮೂಲಕ ನಾಟಕೋತ್ಸವದ ಚಟುವಟಿಕೆಗಳಿಗೆ ಚಾಲನೆ ಸಿಗಲಿದೆ. ಸಂಜೆ 5.30ಕ್ಕೆ ರಂಗ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.

    ಸಂಜೆ 6.45ಕ್ಕೆ ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಟ ಸುಚೇಂದ್ರ ಪ್ರಸಾದ್, ಕನ್ನಡ ವಿವಿ ಕುಲಪತಿ ಸ.ಚಿ.ರಮೇಶ, ಗಂಗೂಬಾಯಿ ಹಾನಗಲ್ಲು ಪ್ರದರ್ಶನ ಕಲೆಗಳ ವಿವಿಯ ನಾಗೇಶ ಬೆಟ್ಟಕೋಟೆ, ಲೆಕ್ಕಪರಿಶೋಧಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಹೊನ್ನೂರುಸ್ವಾಮಿ ಉಪಸ್ಥಿತರಿರಲಿದ್ದಾರೆ. ನಿಕಟಪೂರ್ವ ನಾಟಕೋತ್ಸವದ ಸರ್ವಾಧ್ಯಕ್ಷ ಶಶಿಧರ ಅಡಪ, 13ನೇ ನಾಟಕೋತ್ಸವದ ಅಧ್ಯಕ್ಷ ಪಿ.ಅಬ್ದುಲ್ ಮಾತನಾಡಲಿದ್ದಾರೆ.

    ಮಾ.15ರಂದು ಬೆಳಗ್ಗೆ 11ಕ್ಕೆ ರಂಗಚಾವಡಿ, ಸಂಜೆ 6.45ಕ್ಕೆ ರಂಗತೋರಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಪ್ರತಿ ಗಂಟೆಗೊಂದು ನಾಟಕ ಪ್ರದರ್ಶನ ಇರಲಿದೆ. ನಾಟಕ ಪ್ರದರ್ಶನದ ಬಳಿಕ ರಂಗಕರ್ಮಿಗಳೊಂದಿಗೆ ಯುವ ಕಲಾವಿದರ ಸಂವಾದ ನಡೆಯಲಿದೆ.

    ನಾಟಕ ವೀಕ್ಷಣೆಗೆ ಉಚಿತ ಪ್ರವೇಶ ಇದೆ ಎಂದು ಪ್ರಭುದೇವ ಕಪ್ಪಗಲ್ಲು ತಿಳಿಸಿದರು. ನಾಟಕೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಪಲ್ಲೇದ ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಗಣಪಾಲ ಐನಾಥರೆಡ್ಡಿ, ಉದ್ಯಮಿಗಳಾದ ವಿ.ರವಿಕುಮಾರ, ಮೌಲಾಲಿ, ಲೆಕ್ಕಪರಿಶೋಧಕರಾದ ಎನ್.ಯಶವಂತರಾಜ, ಕೆ.ರಾಜಶೇಖರ ಹಾಗೂ ಇತರರು ಹಾಜರಿದ್ದರು.

    ಮಾ.14ರಂದು ಬೆಳಗ್ಗೆ 10.45ಕ್ಕೆ ರಂಗತೋರಣ ಸುದ್ದಿ ಪತ್ರಿಕೆ ಬಿಡುಗಡೆ, 11.45ಕ್ಕೆ ಬೀದಿ ನಾಟಕ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4ಕ್ಕೆ ರಂಗ ವೈಭವ ಯಾತ್ರೆ ನಡೆಯಲಿದ್ದು, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ರಂಗಪಲ್ಲಕ್ಕಿಗೆ ಪೂಜೆ ನೆರವೇರಿಸಲಿದ್ದಾರೆ. ಸಂಜೆ 6.45ಕ್ಕೆ ಹೊಸಪೇಟೆಯ ಭಾವೈಕ್ಯತಾ ವೇದಿಕೆಯಿಂದ ಬೀದಿ ನಾಟಕ ಪ್ರದರ್ಶನ, 9ಕ್ಕೆ ಹಾಡು, ನೃತ್ಯ, ಕೋಲಾಟ, ರಂಗಗೀತೆಗಳ ರಂಗ ಬೆಳದಿಂಗಳು ಕಾರ್ಯಕ್ರಮ ನಡೆಯಲಿದೆ.
    | ಪ್ರಭುದೇವ ಕಪ್ಪಗಲ್ಲು, ಕಾರ್ಯದರ್ಶಿ, ರಂಗತೋರಣ ಸಂಸ್ಥೆ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts