More

    ಗಮನ ಸೆಳೆಯಲಿದೆ ಮರದ ಕಲಾಕೃತಿ

    ದಸರಾ ಮಹೋತ್ಸವ ಅಂಗವಾಗಿ ಕಲಾಮಂದಿರದ ಆವರಣದಲ್ಲಿ ಆಯೋಜನೆ


    ಅವಿನಾಶ್ ಜೈನಹಳ್ಳಿ ಮೈಸೂರು
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಕಲಾಮಂದಿರ ಆವರಣದಲ್ಲಿ ‘ಮರದ ಕಲಾಕೃತಿಗಳು’ ಅರಳಲಿವೆ. ಅಷ್ಟೇ ಅಲ್ಲ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಪಟಗಳು ರಾರಾಜಿಸಲಿವೆ.
    ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿಯು ರಾಜ್ಯ ಮಟ್ಟದ ಕಲಾಕೃತಿ ಕೆತ್ತನೆ ಶಿಬಿರ ಆಯೋಜಿಸಲು ಮುಂದಾಗಿದೆ. ಈ ಸಂಬಂಧ ಶಿಬಿರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಂತೆ ಶಿಲ್ಪಕಲಾ ಅಕಾಡೆಮಿಗೆ ಸಮಿತಿ ಕೋರಿದೆ.


    ಶಿಲ್ಪಕಲಾ ಅಕಾಡೆಮಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಿದೆ. ಒಟ್ಟಾರೆ ಸಲ್ಲಿಕೆಯಾಗುವ ಅರ್ಜಿಗಳ ಪೈಕಿ, 20 ಕಲಾವಿದರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕಲಾವಿದರು 10 ದಿನಗಳು ಮರದಿಂದ ಕಲಾಕೃತಿ ಕೆತ್ತಲಿದ್ದಾರೆ. ದಸರಾ ಹಬ್ಬ, ಜಂಬೂಸವಾರಿ, ಆನೆ, ಮಹಾರಾಜ, ಮಹಾರಾಣಿ, ಅರಮನೆ ಸೇರಿದಂತೆ ಮೈಸೂರು ಪರಂಪರೆ ಬಿಂಬಿಸುವಂತಹ ಕಲಾಕೃತಿಗಳನ್ನು ರಚಿಸಲಿದ್ದಾರೆ.


    16 ರಿಂದ ಶಿಬಿರ ಆರಂಭ:
    ಶಿಲ್ಪ ಕೆತ್ತನಾ ಶಿಬಿರ ಸೆ.16ರಿಂದ 25 ರವರೆಗೆ ಕಲಾಮಂದಿರ ಆವರಣದಲ್ಲಿ ನಡೆಯಲಿದೆ. ಶಿಬಿರಕ್ಕೆ ಅಗತ್ಯ ತಯಾರಿ ನಡೆಯುತ್ತಿದೆ. ಉತ್ತಮ ಮೂರು ಕಲಾಕೃತಿಗಳಿಗೆ ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿ ವತಿಯಿಂದ ನಗದು ಬಹುಮಾನ ದೊರೆಯಲಿದೆ. ಬಳಿಕ ಎಲ್ಲ ಕಲಾಕೃತಿಗಳನ್ನು ಕಲಾಮಂದಿರ ಆವರಣದಲ್ಲೇ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ.


    ಚಿತ್ರಕಲಾ ಶಿಬಿರ:
    ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿಯು ಕಲಾಕೃತಿ ಕೆತ್ತನೆ ಶಿಬಿರದ ಜತೆಗೆ, ಚಿತ್ರಕಲಾ ಶಿಬಿರವನ್ನೂ ಆಯೋಜಿಸುತ್ತಿದೆ. ಶಿಬಿರದಲ್ಲಿ 20 ಕಲಾವಿದರು ಭಾಗವಹಿಸಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಆ ಕಲಾವಿದರು 3 ದಿನಗಳ ಕಾಲ ಕಲಾಮಂದಿರದ ಆವರಣದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಹಾಗೂ ಪ್ರಕೃತಿ ವರ್ಣ ಚಿತ್ರಗಳನ್ನು ಬಿಡಿಸಲಿದ್ದಾರೆ. ಉತ್ತಮ ಮೂರು ಚಿತ್ರಗಳಿಗೆ ಉಪ ಸಮಿತಿಯಿಂದ ನಗದು ಬಹುಮಾನ ದೊರೆಯಲಿದೆ. ಬಳಿಕ ಎಲ್ಲ ಚಿತ್ರಗಳನ್ನು ದಸರಾ ಮುಗಿಯುವವರೆಗೂ ಕಲಾಮಂದಿರ ಆವರಣದಲ್ಲಿ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ.


    ರಾಜ್ಯಮಟ್ಟದ ಕಲಾ ಪ್ರದರ್ಶನ:
    ಕಲಾಮಂದಿರದ ಆವರಣದಲ್ಲಿ ಸೆ.26ರಿಂದ ಅಕ್ಟೋಬರ್ 4ರವರೆಗೆ ರಾಜ್ಯಮಟ್ಟದ ಕಲಾ ಪ್ರದರ್ಶನ ಆಯೋಜಿಸಲು ಚಿಂತಿಸಲಾಗಿದೆ. ಪ್ರದರ್ಶನದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯಕಲೆ, ಕರಕುಶಲ/ಇನ್ಲೆ ಸೇರಿದಂತೆ ನಾನಾ ಕಲೆಗಳನ್ನು ಪ್ರದರ್ಶಿಸಬಹುದಾಗಿದೆ.
    ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಉಡುಪಿ, ರಾಯಚೂರು, ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು, ಹಾಸನ, ಚಾಮರಾಜನಗರ, ಮಡಿಕೇರಿ ಮೊದಲಾದ ಕಡೆಗಳಿಂದ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ. ನಗರದ ಕಾವಾ, ರವಿವರ್ಮ, ವೈಜಯಂತಿ ಚಿತ್ರಕಲಾ ಶಾಲೆಗಳು ಹಾಗೂ ಶ್ರೀಕಲಾ ನಿಕೇತನದ ವಿದ್ಯಾರ್ಥಿಗಳು ಮತ್ತು ಕಲಾವಿದರ ಕಲೆ ಪ್ರದರ್ಶನಕ್ಕೂ ಅವಕಾಶ ಸಿಗಲಿದೆ. ಒಟ್ಟಾರೆ ನೂರು ಜನ ಕಲಾವಿದರಿಗೆ ತಮ್ಮ ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಉತ್ತಮ ಮೂರು ಕಲೆಗೆ ಉಪ ಸಮಿತಿಯಿಂದ ಬಹುಮಾನ ದೊರೆಯಲಿದೆ.


    ಆಕರ್ಷಿಸಲಿದೆ ಪ್ರಾತ್ಯಕ್ಷಿಕೆ:
    ಚಿತ್ರಕಲೆ, ಶಿಲ್ಪಕಲೆ ಶಿಬಿರಗಳ ಜತೆಗೆ, ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿ ನಾನಾ ಕಲೆಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿ ಜನರಿಗೆ ಆ ಕಲೆಗಳ ಬಗ್ಗೆ ತಿಳಿಸಲು ಮುಂದಾಗಿದೆ. ಗಾಂಧಿ ಚರಕದಿಂದ ನೂಲು ತೆಗೆಯುವುದು, ಪ್ರಾತ್ಯಕ್ಷಿಕೆ, ಬುಟ್ಟಿ ಹೆಣೆಯುವುದು, ಮಡಕೆ ಮಾಡುವ ಪ್ರಾತ್ಯಕ್ಷಿಕೆ ಇರಲಿದೆ. ಜತೆಗೆ ಕಿನ್ನಾಳ ಕಲೆ, ಕೌದಿ ಕಲೆ, ಸೂಕ್ಷ್ಮಕಲೆ ಹಾಗೂ ಚನ್ನಪಟ್ಟಣ ಗೊಂಬೆಗಳ ಪ್ರದರ್ಶನವೂ ಇರಲಿದೆ.


    ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ:
    ಈ ಬಾರಿ ಮಕ್ಕಳಿಗೆ ಒಂದು ದಿನದ ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆ ಆಯೋಜಿಸಲು ಉಪ ಸಮಿತಿ ಮುಂದಾಗಿದೆ. 1ರಿಂದ 4ನೇ ತರಗತಿ, 5 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ಚಿತ್ರ ರಚಿಸಿದ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ.

    ಈ ಬಾರಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ವಿಶೇಷವಾಗಿ ಕಲಾಮಂದಿರದ ಆವರಣದಲ್ಲಿ 10 ದಿನಗಳ ಕಾಲ ಕಲಾಕೃತಿ ಕೆತ್ತನೆ ಸ್ಪರ್ಧೆ, ಮೂರು ದಿನಗಳ ಕಾಲ ಚಿತ್ರಕಲಾ ಸ್ಪರ್ಧೆ, ನಾನಾ ಕಲಾ ಪ್ರದರ್ಶನ, ಮಕ್ಕಳಿಗೆ ಒಂದು ದಿನ ಚಿತ್ರಕಲಾ ಸ್ಪರ್ಧೆ, ನಾನಾ ಕಲೆಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗುತ್ತದೆ.
    ವಿಜಯಕುಮಾರ್, ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿ, ಉಪ ವಿಶೇಷಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts