More

    ಕೆರೆಯಲ್ಲಿ ಸಂಗ್ರಹವಾದ ನೀರು ಮಾಯ!; ಪಂಪ್ ಮೋಟಾರ್‌ನಿಂದ ಜೀವಜಲಕ್ಕೆ ಕನ್ನ; ಕ್ರಮಕ್ಕೆ ಮುಂದಾಗದ ಅಧಿಕಾರಿಗಳು

    ಎಂ. ರಾಮೇಗೌಡ ನಂದಗುಡಿ: ಸರ್ಕಾರ ಅಂತರ್ಜಲಮಟ್ಟ ಹೆಚ್ಚಿಸಲು ಪ್ರತಿ ವರ್ಷ ನೂರಾರು ಕೋಟಿ ರೂ. ಖರ್ಚು ಮಾಡಿ, ಕೆರೆ, ಕಲ್ಯಾಣಿ, ಕುಂಟೆ, ಕಾಲುವೆ ಅಭಿವೃದ್ಧಿ ಪಡಿಸುತ್ತಿದೆ. ಆದರೆ ಹಾಡಹಗಲೇ ಕೆರೆ ನೀರನ್ನು ಅಕ್ರಮವಾಗಿ ಬರಿದು ಮಾಡಲಾಗುತ್ತಿದೆ.

    ಹೊಸಕೋಟೆ ತಾಲೂಕಿನಲ್ಲಿ ಕಳೆದ ವರ್ಷ ಮುಂಗಾರು ತಡವಾಗಿ ಆರಂಭವಾದರೂ ಸುರಿದ ಮಳೆಗೆ ಕುಂಟೆ, ಚೆಕ್ ಡ್ಯಾಂಗಳು ತುಂಬಿ ಅಂತರ್ಜಲಮಟ್ಟ ವೃದ್ಧಿಸಿತ್ತು. ಕೊಳವೆಬಾವಿಗಳಲ್ಲಿ ನೀರು ಸಂವೃದ್ದಿಯಾಗಿತ್ತು. ಈ ಬಾರಿಯೂ ಮಳೆ ಭರವಸೆ ಮೂಡಿಸಿದೆ. ಆದರೆ ಕೆರೆ-ಕುಂಟೆಗಳಲ್ಲಿ ನೀರು ನಿಲ್ಲದಂತೆ ಮಾಡುವ ಹುನ್ನಾರ ನಡೆಯುತ್ತಿದೆ.

    ಕೆಲವು ಕೆರೆ-ಕಟ್ಟೆಗಳಲ್ಲಿ ಸಂಗ್ರಹವಾಗಿರುವ ಅಲ್ಪ ಪ್ರಮಾಣದ ನೀರಿಗೂ ಪಂಪ್ ಮೋಟಾರ್ ಅಳವಡಿಸಿ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿದ್ದು, ಇದರಿಂದ ಒಂದೇ ದಿನದಲ್ಲಿ ನೀರು ಖಾಲಿಯಾಗುತ್ತಿದ್ದು, ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯುವಂತಾಗಿದೆ.

    ಮರಳು ದಂಧೆಗೂ ಬಳಕೆ: ನಂದಗುಡಿ ಹೋಬಳಿಯ ಸಿದ್ದನಹಳ್ಳಿಯ ಸರ್ಕಾರಿ ಕೆರೆ ಹಾಗೂ ಕುಂಟೆಗಳಲ್ಲಿ 10ಕ್ಕೂ ಹೆಚ್ಚು ಪಂಪ್ ಮೋಟಾರ್ ಅಳವಡಿಸಿ ಅಕ್ರಮವಾಗಿ ಮರಳು ಫಿಲ್ಟರ್ ದಂಧೆ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

    ಹೋಬಳಿಯಾದ್ಯಂತ ಇಂಥ ಅಕ್ರಮ ಚಟುವಟಿಕೆ ಸಾಮಾನ್ಯ ಎಂಬಂತಾಗಿದೆ. ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ದಿನೇ ದಿನೆ ನೀರಿನ ಪ್ರಮಾಣ ಕಡಿಮೆಯಾಗಿ ಮತ್ತೆ ಅಂತರ್ಜಲಮಟ್ಟ ಕುಸಿಯುವ ಆತಂಕ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬರಿದಾಗುತ್ತಿರುವ ಜಲ ಮೂಲ ಉಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಕೆರೆ, ಕುಂಟೆಗಳ ನೀರಿಗೆ ಪಂಪ್ ಮೋಟಾರ್‌ಗಳನ್ನಿಟ್ಟು ಅಕ್ರಮವಾಗಿ ನೀರನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
    ರಾಮಾಂಜಿನಪ್ಪ, ಉಪ-ತಹಸೀಲ್ದಾರ್, ನಂದಗುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts