More

    ಕವಿವಿ ಬಿ.ಇಡಿ ವಿದ್ಯಾರ್ಥಿಗಳ ಗೋಳಾಟ

    ಧಾರವಾಡ: ಸದಾ ಒಂದಿಲ್ಲೊಂದು ಅವಾಂತರಗಳಿಂದ ಸುದ್ದಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಬಿ.ಇಡಿ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ವಿದ್ಯಾರ್ಥಿಗಳ ಅಸೈನ್​ವೆುಂಟ್ ಪರಿಶೀಲಿಸಲು ನಿರ್ಧರಿಸಿರುವ ಕವಿವಿ, ಸಮನ್ವಯ ಸಮಿತಿ ರಚಿಸಿದೆ. ನಾಲ್ಕು ವರ್ಷಗಳಿಂದ ರದ್ದಾಗಿದ್ದ ಸಮಿತಿ ರಚಿಸಿರುವುದು ಕೋವಿಡ್ ಕಷ್ಟಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

    2020ನೇ ಶೈಕ್ಷಣಿಕ ಸಾಲಿನಲ್ಲಿ ಕರೊನಾ ಮೊದಲ ಅಲೆ ಅಪ್ಪಳಿಸಿತ್ತು. ತಿಂಗಳುಗಟ್ಟಲೇ ಕಾಲೇಜುಗಳು ಬಾಗಿಲು ತೆರೆಯಲಿಲ್ಲ. ಬಿ.ಇಡಿ ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಗಳೂ ನಡೆಯಲಿಲ್ಲ. ದೊಡ್ಡ ಮಟ್ಟದ ಹೋರಾಟದ ಫಲವಾಗಿ ವಿಶ್ವವಿದ್ಯಾಲಯವು 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಿ ಹಿಂದಿನ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಿತು.

    2021ನೇ ಸಾಲಿನ ಬಿ.ಇಡಿ ಶೈಕ್ಷಣಿಕ ವರ್ಷ ಮಾರ್ಚ್​ನಲ್ಲಿ ಆರಂಭವಾಗಿತ್ತು. ತಿಂಗಳು ಕಳೆಯುವಷ್ಟರಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಕಾಲೇಜುಗಳು ಬಂದ್ ಆಗಿವೆ. ಕಾಟಾಚಾರಕ್ಕೆ ಆನ್​ಲೈನ್ ಕ್ಲಾಸ್​ಗಳನ್ನು ನಡೆಸಿದ್ದರೂ, ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಇಂಥ ಸಂದರ್ಭದಲ್ಲಿ ಕವಿವಿ ವಿದ್ಯಾರ್ಥಿಗಳ ದತ್ತಕಾರ್ಯ (ಅಸೈನ್​ವೆುಂಟ್), ಬೋಧನಾ ಉಪಕರಣಗಳನ್ನು ಪರಿಶೀಲಿಸಲು ಸಮಿತಿ ರಚಿಸಿದೆ. 4 ವರ್ಷಗಳಿಂದ ಇಲ್ಲದ ಸಮಿತಿಯನ್ನು ಕೋವಿಡ್ ಸಂದರ್ಭದಲ್ಲಿ ಅಸ್ತಿತ್ವಕ್ಕೆ ತರುವ ಮೂಲಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ವಿದ್ಯಾರ್ಥಿಗಳು ಪದವಿಯಲ್ಲಿ 5, 10 ಮತ್ತು 20 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿ ತೇರ್ಗಡೆಯಾಗಿದ್ದಾರೆ. ಬಿ.ಇಡಿಯಲ್ಲಿ ಪ್ರಾಯೋಗಿಕ ಪರೀಕ್ಷೆ, ಪಾಠ ಬೋಧನೆಗೂ ಅಂಕಗಳಿದ್ದು, ಅಸೈನ್​ವೆುಂಟ್​ಗಳನ್ನೂ ಬರೆಯಬೇಕು. ಆದರೆ, ಪ್ರಥಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳಿಗೆ ಅಸೈನ್​ವೆುಂಟ್​ಗಳೆಂದರೇನು? ಹೇಗೆ ಬರೆಯಬೇಕು ಎಂಬ ಮಾಹಿತಿ ಇಲ್ಲ. ಕಾಲೇಜು ಪ್ರಾರಂಭವಾಗಿ 1 ತಿಂಗಳಾಗುವಷ್ಟರಲ್ಲಿ ಕರೊನಾ ಕಾರಣದಿಂದ ಲಾಕ್​ಡೌನ್ ಘೋಷಣೆಯಾಗಿತ್ತು. 4 ವರ್ಷ ಸುಮ್ಮನಿದ್ದ ವಿಶ್ವವಿದ್ಯಾಲಯ, ಕೋವಿಡ್ ಭೀಕರತೆಯ ದಿನಗಳಲ್ಲಿ ಸಮನ್ವಯ ಸಮಿತಿ ರಚಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆನ್​ಲೈನ್ ಕ್ಲಾಸ್ ಆಧರಿಸಿ ವಿಶ್ವವಿದ್ಯಾಲಯ ಆಗಸ್ಟ್ ಮೊದಲ ವಾರದಲ್ಲಿ ಪರೀಕ್ಷೆ ಆಯೋಜಿಸಲು ಯೋಜಿಸಿದೆ. ಇಷ್ಟು ದಿನ ದತ್ತ ಕಾರ್ಯಗಳ ಮೌಲ್ಯಾಂಕನ ಜವಾಬ್ದಾರಿ ಆಯಾ ಕಾಲೇಜುಗಳ ಮೇಲಿತ್ತು. ಇದೀಗ ಸಮಿತಿ ರಚನೆಯಾಗಿದ್ದರಿಂದ ಅಸೈನ್​ವೆುಂಟ್ ಬರೆಯಬೇಕೋ ಅಥವಾ ಪರೀಕ್ಷೆಗೆ ತಯಾರಿ ನಡೆಸಬೇಕೋ ಎಂಬ ದ್ವಂದ್ವ ವಿದ್ಯಾರ್ಥಿಗಳದ್ದಾಗಿದೆ.

    ಪರೀಕ್ಷೆ ಬೇಡ, ಬಡ್ತಿ ನೀಡಿ: ವಿಶ್ವವಿದ್ಯಾಲಯದ ನೀತಿಗಳಿಂದ ಬೇಸತ್ತ ವಿದ್ಯಾರ್ಥಿಗಳು, ಸಂಘಟನೆಗಳ ಮೊರೆ ಹೋಗಿ ಕಳೆದ ವರ್ಷದಂತೆ ಪರೀಕ್ಷೆ ನಡೆಸದೆ ಬಡ್ತಿ ನೀಡಲು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಅಸೈನ್​ವೆುಂಟ್​ಗಳನ್ನು ಬರೆಯಲು ಕಾಲಾವಕಾಶ ನೀಡಿ ಪರೀಕ್ಷೆಗಳನ್ನಾದರೂ ಮುಂದೂಡಬೇಕು ಎನ್ನುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸುಮಾರು 30 ಬಿ.ಇಡಿ ಕಾಲೇಜ್​ಗಳಿವೆ. ಕುಮಟಾದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಮನವಿ ಮಾಡಿದ ಮಾತ್ರಕ್ಕೆ ಸಮಿತಿ ರಚಿಸಿರುವುದು ಉತ್ತಮ ಕ್ರಮವಲ್ಲ. ಉಳಿದ ಕಾಲೇಜುಗಳ ಪ್ರಾಚಾರ್ಯರ ಗಮನಕ್ಕೆ ತಂದು ರ್ಚಚಿಸಿ, ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀತಿ ನಿರೂಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಕರ್ನಾಟಕ ವಿಶ್ವವಿದ್ಯಾಲಯ ಬೇಕಾದಾಗ ಬೇಕಾದ ನೀತಿ ರೂಪಿಸುತ್ತಿದೆ. ಕೋವಿಡ್​ನಿಂದಾಗಿ ಲಾಕ್​ಡೌನ್ ಆಗಿ ಬಿ.ಇಡಿ ಪರಿಕಲ್ಪನೆಯೇ ಇನ್ನೂ ಆರ್ಥವಾಗಿಲ್ಲ. ಇಂಥ ಸಂದರ್ಭದಲ್ಲಿ ಸಮನ್ವಯ ಸಮಿತಿ ರಚಿಸಿ ಗೊಂದಲ ಮೂಡಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮುಂದಿನ ಸೆಮಿಸ್ಟರ್​ಗೆ ಬಡ್ತಿ ನೀಡಬೇಕು.

    – ಹೆಸರು ಹೇಳಲಿಚ್ಛಿಸದ ಬಿ.ಇಡಿ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts