More

    ಎರಡು ಕಾಡಾನೆಗಳ ಘರ್ಷಣೆಗೆ ಬೆಚ್ಚಿದ ಗ್ರಾಮಸ್ಥರು


    ಹಾಸನ: ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದ ಸಮೀಪ ಗುರುವಾರ ಕಾಡಾನೆಗಳ ಗುಂಪಿನಲ್ಲಿದ್ದ ಎರಡು ಆನೆಗಳ ನಡುವೆ ಕಾದಾಟ ನಡೆದು ಒಂದಕ್ಕೊಂದು ಅಟ್ಟಾಡಿಸಿರುವುದು ಕೆಲ ಕಾಲ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿತ್ತು.


    ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಕಡೇಗರ್ಜೆ ಗ್ರಾಮದ ಸಮೀಪ ಕಾಡಾನೆಗಳ ಗುಂಪು ಕಾಣಿಸಿಕೊಂಡಿತ್ತು. ಇದೇ ಹಿಂಡಿನಲ್ಲಿದ್ದ ಎರಡು ಕಾಡಾನೆಗಳು ಪ್ರತ್ಯೇಕಗೊಂಡು ಕಾದಾಟಕ್ಕೆ ಇಳಿದಿವೆ. ಆದರೆ ಕಾಡಾನೆಗಳು ಒಂದಕ್ಕೊಂದು ಕಾದಾಡುವ ಸಂದರ್ಭದಲ್ಲಿ ಒಂದು ಕಾಡಾನೆ ಮತ್ತೊಂದು ಕಾಡಾನೆ ನಡುವೆ ಜೋರಾಗಿ ಬಡಿದಾಟ ನಡೆದಿದೆ. ಕಾದಾಟದಿಂದ ಆಕ್ರೋಶಗೊಂಡ ಕಾಡಾನೆಗಳು ಎಲ್ಲಿ ಜನ ವಸತಿ ಪ್ರದೇಶದತ್ತ ನುಗ್ಗುತ್ತವೆಯೋ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದರು. ಆದರೆ, ಆನೆಗಳ ಕಾದಾಟದ ಸಂದರ್ಭ ಒಂದು ಆನೆ ಸೋತು ಓಡಿತು.

    ಆದರೆ, ಸೋತ ಆನೆಯನ್ನು ಬಿಡದ ಮತ್ತೊಂದು ಆನೆ ಅದನ್ನು ಪುನ: ಅಟ್ಟಾಡಿಸಿಕೊಂಡು ಹೋಗಿ ತನ್ನ ಸೊಂಡಿಲು ಮತ್ತು ದಂತದಿಂದ ತಿವಿಯುತ್ತಲೇ ಮುಂದೆ ಸಾಗಿತು.

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಈ ಘಟನೆಯನ್ನು ನೋಡಿ ಸ್ಥಳದಿಂದ ಕಾಲ್ಕಿತ್ತು ಸಮೀಪದ ಮನೆಯೊಂದಕ್ಕೆ ಸೇರಿಕೊಂಡರು. ಈ ಆನೆಗಳ ಕಾದಾಟಕ್ಕೆ ಸಿಲುಕಿ ಜಮೀನಿನಲ್ಲಿ ಬೆಳೆದಿದ್ದ ಅಡಕೆ ಗಿಡಗಳು ಹಾನಿಯಾಗಿವೆ. ಈ ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಪರಿಸೀಲಿಸಿದ್ದಾರೆ.

    ತಾಲೂಕಿನ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜತೆಗೆ ಅವುಗಳ ಉಪಟಳದಿಂದ ಬೆಳೆಗಾರರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಾಡಾನೆಗಳು ಕಾದಾಟಕ್ಕಿಳಿದರೆ ಅವುಗಳ ಘರ್ಷಣೆಗೆ ಸಿಲುಕಿದ ಗಿಡಗಳು, ಫಸಲು ಸಂಪೂರ್ಣವಾಗಿ ನಾಶವಾಗುತ್ತವೆ. ಆದ್ದರಿಂದ ಕಾಡಾನೆಗಳನ್ನು ಕಾಡಿಗೆ ಓಡಿಸಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts