More

    ಶಾಸಕರ ಎದುರು ದೂರುಗಳ ಸುರಿಮಳೆಗೈದ ಗ್ರಾಮಸ್ಥರು

    ಹನಗೋಡು: ರಸ್ತೆಗೆ ಡಾಂಬರ್ ಹಾಕಿಸಿಕೊಡಿ… ಜಮೀನಿಗೆ ಹೋಗಲು ರಸ್ತೆ ಇಲ್ಲ… ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ಲೇನ್ ತೆರವುಗೊಳಿಸಿ… ನಿರಂತರ ಜ್ಯೋತಿ ಸಂಪರ್ಕ ನೀಡಿ… ಟಿ.ಸಿ ಕೊಡಿಸಿ… ಕೆರೆಗೆ ಕೋಡಿ ನಿರ್ಮಿಸಿ… ಹಾಡಿಗಳ ಮನೆಗೆ ಬಿಲ್ ಆಗಿಲ್ಲ… ಅಕ್ರಮ ಮದ್ಯ ಮಾರಾಟ ನಿಲ್ಲಿಸಿ…!

    ಹನಗೋಡು ಹೋಬಳಿ ನೇರಳಕುಪ್ಪೆ ಹಾಗೂ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ನೀಡಿದ್ದ ವೇಳೆ ಆದಿವಾಸಿಗಳು ಹಾಗೂ ಗ್ರಾಮಸ್ಥರಿಂದ ಬಂದ ದೂರು ಮತ್ತು ಅಹವಾಲುಗಳಿವು.

    ನೇರಳಕುಪ್ಪೆ ಗ್ರಾ.ಪಂ.ನ ಕಚುವಿನಹಳ್ಳಿ ಮುಖ್ಯ ರಸ್ತೆಯಿಂದ ಕೆ.ಜಿ.ಗೆಬ್ಬನಕುಪ್ಪೆ ಹೋಗುವ ರಸ್ತೆಗೆ ವರ್ಷದ ಹಿಂದೆಯೇ ಡಾಂಬರೀಕರಣಕ್ಕೆ ಚಾಲನೆ ದೊರೆತಿದ್ದು, ಮೆಟ್ಲಿಂಗ್ ಹಾಗೂ ಚರಂಡಿ, ಡೆಕ್ ನಿರ್ಮಿಸಲಾಗಿದೆ. ಆದರೆ ಡಾಂಬರ್ ಹಾಕದೆ ವಿಳಂಬ ಮಾಡುತ್ತಿದ್ದು, ಇದರಿಂದ ನಿತ್ಯ ಓಡಾಡುವ ವಾಹನಗಳಿಂದ ರಸ್ತೆ ಬದಿ ಮನೆಗಳಿಗೆ ಧೂಳು ಬರುತ್ತಿದೆ ಗ್ರಾಮಸ್ಥರು ದೂರಿದರು. ಚಂದನಗಿರಿ ಹಾಡಿ ರಸ್ತೆ, ನೇರಳಕುಪ್ಪೆ ಎ ಹಾಡಿ ರಸ್ತೆ, ಕೆ.ಕಿ.ಹೆಬ್ಬನಕುಪ್ಪೆ ಬಸವೇಶ್ವರ ದೇವಸ್ಥಾನ ರಸ್ತೆ, ಬಿಲ್ಲೇನಹೊಸಹಳ್ಳಿಯ ತಾವರೆಕೆರೆ ರಸ್ತೆ, ಹೊಸಕೆರೆ ರಸ್ತೆ, ಚಂದನಗಿರಿ ಹಾಡಿ ರಸ್ತೆ, ಉಡುವೇಪುರದ ಸುಬ್ರಮಣಿ ಮನೆಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

    ಮುಂದೆ ಬರುವ ಅನುದಾನದಲ್ಲಿ ಆದ್ಯತೆ ಮೇರೆಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದ ಶಾಸಕ ಹರೀಶ್‌ಗೌಡ, ಕಚುವಿನಹಳ್ಳಿ ರಸ್ತೆಗೆ ಕೂಡಲೇ ಡಾಂಬರ್ ಹಾಕುವಂತೆ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

    ನೇರಳಕುಪ್ಪೆ ಎ ಹಾಡಿಯ ಬಾಬು ಹಾಗೂ ಕಚುವಿನಹಳ್ಳಿ ಶ್ರೀನಿವಾಸ್ ಎಂಬುವರು, ತಮ್ಮ ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ಲೇನ್ ಸ್ಥಳಾಂತರಿಸಬೇಕೆಂದು ಕೋರಿದರೆ, ಬಿಲ್ಲೇನಹೊಸಹಳ್ಳಿಯ ತಾವರೆ ಕೆರೆಗೆ ಕೋಡಿ ಇಲ್ಲದೆ ಕೆರೆಯ ನೀರು ಪೋಲಾಗುತ್ತಿದೆ. ಅಚ್ಚುಕಟ್ಟುದಾರರಿಗೆ ಬೆಳೆ ಬೆಳೆಯಲು ನೀರು ಸರಾಗವಾಗಿ ಹರಿಯಲು ಕಾಲುವೆ ಇಲ್ಲದೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

    ಬಿಲ್ಲೇನಹೊಸಹಳ್ಳಿಯ ಆದಿವಾಸಿ ಮಹಿಳೆಯರು, ಹಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು. ಹನಗೋಡು, ನೇರಳಕುಪ್ಪೆ ಬಾರ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಎಂಆರ್‌ಪಿ ಬೆಲೆಗೆ ಮದ್ಯ ಮಾರಾಟ ಮಾಡಲು ಆದೇಶ ಮಾಡಬೇಕು ಎಂದು ಕೆ ಜಿ.ಹೆಬ್ಬನಕುಪ್ಪೆಯ ಟಿ.ಎಂ.ಚಂದ್ರಶೇಖರ್ ಒತ್ತಾಯಿಸಿದರು.

    ಇದೇ ವೇಳೆ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಸಿಂಡೇನಹಳ್ಳಿ, ನೇಗತ್ತೂರು, ಶೆಟ್ಟಹಳ್ಳಿ, ಕಚುವಿನಹಳ್ಳಿ, ನೇರಳಕುಪ್ಪೆ, ಬಿಲ್ಲೇನಹೊಹಳ್ಳಿ, ಉಡುವೇಪುರ, ಕಡೇಮನುಗನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ತಿಳಿಸಿದರು.

    ತಾಪಂ ಇಒ ಮನು, ನೇರಳಕುಪ್ಪೆ ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್, ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ತಾ.ಪಂ.ಮಾಜಿ ಸದಸ್ಯ ಗಣಪತಿ, ತಾಲೂಕು ಪ.ಪಂಗಡ ಇಲಾಖೆಯ ಅಧಿಕಾರಿ ಬಸವರಾಜ್, ಜಿ.ಪಂ ಎಇಇ ನರಸಿಂಹಯ್ಯ, ಕುಡಿಯುವ ನೀರು ಯೋಜನೆಯ ಎಇಇ ಮಹಮದ್ ಕಲೀಂ, ಪಿಡಿಒ ದೇವರಾಜ್, ಗ್ರಾಪಂ ಸದಸ್ಯರಾದ ಜವರಮ್ಮ, ಮಾದೇಗೌಡ, ಅಮಾಸೇಗೌಡ, ಸಣ್ಣಮ್ಮ, ಉಡುವೇಪುರ ಸುಬ್ರಮಣಿ, ಮಾಜಿ ಅಧ್ಯಕ್ಷ ಕೆ.ಡಿ.ಮಹೇಶ್, ಮುಖಂಡರಾದ ಕೂಡ್ಲೂರುಜಾರ್ಜ್, ಸಂಜೀವ, ನಟೇಶ್, ಬೀರತಮ್ಮನಹಳ್ಳಿ ಲೋಕೇಶ್, ಜಿ.ಡಿ.ಮೋಹನ್, ವಾಸು, ಅಮ್ಮಣಿ, ರಮೇಶ್, ಪ್ರಸನ್ನ, ಭರತ್, ರಾಮೇಗೌಡ ರವಿ, ಅಬ್ಬೂರುಕರ್ಣೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts