More

    ದೇವಿ ಆರಾಧನೆಯಿಂದ ಮಾನವರ ಉನ್ನತಿ ಸಾಧ್ಯ

    ಬ್ಯಾಡಗಿ: ಭಗವದ್ಗೀತೆ, ರಾಮಾಯಣ, ಮಹಾಭಾರತ ಹಾಗೂ ದೇವಿ ಪಾರಾಯಣ ಗ್ರಂಥಗಳಲ್ಲಿ ಮಾನವ ಜೀವನದ ಸಿದ್ಧಾಂತ ಹಾಗೂ ಪ್ರಾಕೃತಿಕ ನೈಜ ಬದುಕಿನ ನಿದರ್ಶನಗಳಿದ್ದು, ಪ್ರತಿಯೊಬ್ಬರೂ ಆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗುವಂತೆ ಸಂಸ್ಥಾನ ದಾಸೋಹಮಠದ ಯುವ ಧರ್ಮಾಧಿಕಾರಿ ವೇ.ಮೂ. ಗುರುಸ್ವಾಮಿ ದಾಸೋಹಮಠ ತಿಳಿಸಿದರು.

    ತಾಲೂಕಿನ ಧರ್ಮಜಾಗ್ರತ ಕೇಂದ್ರ ಗುಡ್ಡದಮಲ್ಲಾಪುರ ದಾಸೋಹಮಠದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ದೇವಿ ಪುರಾಣ ಹಾಗೂ 108 ಸುಮಂಗಲೆಯರ ಕುಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿ ಆರಾಧನೆಯಿಂದ ಮಾನವರಲ್ಲಿ ಬದಲಾವಣೆ ಸಾಧ್ಯ. ನಮ್ಮಲ್ಲಿರುವ ದುರಾಚಾರಗಳನ್ನು ತ್ಯಜಿಸಲು ಸಂಕಲ್ಪ ಮಾಡಬೇಕಿದೆ. ಶಿಷ್ಟರನ್ನು ರಕ್ಷಿಸಿ, ದುಷ್ಟಗುಣಗಳು ತುಂಬಿರುವ ರಾಕ್ಷಸರನ್ನು ಜಗನ್ಮಾತೆ ಸಂಹಾರ ಮಾಡಿರುವುದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದು ನಮ್ಮ ಜೀವನಕ್ಕೂ ಉತ್ತಮ ಸಂದೇಶವಾಗಿದೆ. ನವರಾತ್ರಿಯಂದು ಕೇಳಿಸಿಕೊಳ್ಳುವ ದೇವಿಮಹಾತ್ಮೆಯ ಪ್ರತಿಯೊಂದು ಅಧ್ಯಾಯಗಳು ಪ್ರಸ್ತುತ ಜೀವನದ ವೈಚಾರಿಕ ಪ್ರಜ್ಞೆ ಮೂಡಿಸುತ್ತವೆ. ದುರಾಚಾರ, ದುರ್ನಡತೆಯಂಥ ದುಷ್ಟ ಕಾರ್ಯಗಳಿಗೆ ಎಂದಿಗೂ ಜಯಸಿಗಲಾರದು. ನಾವು ಪೌರಾಣಿಕ ಕಥಾಸಾರವನ್ನು ಅರಿತು ನಡೆಯಬೇಕಿದೆ. ನಮ್ಮ ಹಬ್ಬ, ಹರಿದಿನಗಳ ಆಚರಣೆಗಳು ಧರ್ಮ ಸಿದ್ಧಾಂತ, ಮೌಲ್ಯಯುತ ಗುಣಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದರು.

    ಸುಕ್ಷೇತ್ರದಲ್ಲಿ ಪವಾಡಶಾಲಿಯಂತಿರುವ ಬಸವರೂಪದ ಮೂಕಪ್ಪ ಶಿವಾಚಾರ್ಯರು ನಾಡಿನ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಮಠದಲ್ಲಿ ಪ್ರತಿನಿತ್ಯ ಅನ್ನದಾಸೋಹ, ಜ್ಞಾನದಾಸೋಹ, ಧರ್ಮದಾಸೋಹಿಯಾಗಿ ಆರೇಳು ಶತಮಾನಗಳ ಪರಂಪರೆ ನಡೆದಿದೆ. ಇಲ್ಲಿ ಷ.ಬ್ರ.ಮೂಕಪ್ಪಸ್ವಾಮಿಗಳು ಹಾಗೂ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ್ದಾರೆ ಎಂದರು.

    ಬೆಳಗ್ಗೆ 9 ಗಂಟೆಗೆ 108 ಕುಂಭ ಹೊತ್ತ ಸುಮಂಗಲೆಯರು ಗ್ರಾಮದ ಪ್ರಮುಖ ಬೀದಿಯಲ್ಲಿ ತೆರಳಿದರು. ಚಾಮುಂಡೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಜರುಗಿತು. ಸಂಜೆ 7 ಗಂಟೆಗೆ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದ ಆವರಣದಲ್ಲಿ ಬನ್ನಿಪತ್ರಿ ವಿತರಣೆ ಜರುಗಿತು.

    ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಾ.ಪಂ. ಸದಸ್ಯ ಶಾಂತಪ್ಪ ದೊಡ್ಡಮನಿ, ಗ್ರಾಮಸ್ಥರಾದ ಸಂಗಪ್ಪ ಪೂಜಾರ, ಮೂಕಪ್ಪ ಮೂಡಿ, ಎಚ್.ಸಿ. ಹುಚ್ಚಯ್ಯ, ಚನ್ನಬಸಪ್ಪ ಪೂಜಾರ, ರಾಜುಸ್ವಾಮಿ ಪಾಟೀಲ, ಮೂಕಪ್ಪ ಸಿದ್ದಾಪುರ, ಬಸವರಾಜ ಬಸಾಪುರ, ಹನುಮಂತಪ್ಪ ಚೌಟಿ, ಬಸವರಾಜ ದೊಡ್ಡಮನಿ, ಹೊಳಬಸವ್ವ ದಾಸೋಹಮಠ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts