More

    ಪರಿಪೂರ್ಣ ವಿದ್ಯೆಯ ಎರಡು ಪ್ರಮುಖ ಅಂಗಗಳು

    ಪರಿಪೂರ್ಣ ವಿದ್ಯೆಯ ಎರಡು ಪ್ರಮುಖ ಅಂಗಗಳುಹಿಂದಿನ ಹಾಗೂ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಮುಖ್ಯ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು. ಮಕ್ಕಳಿಗೆ ಧನಸಂಪಾದನೆಯ ಮಾರ್ಗವಾಗಿ ಲೌಕಿಕ ಅಥವಾ ಅಪರಾ ವಿದ್ಯೆಯನ್ನು ಮಾತ್ರ ನೀಡುತ್ತಿದ್ದೇವೆ; ಪರಾ ವಿದ್ಯೆಯ ಲವಲೇಶವೂ ಇಂದಿನ ವ್ಯವಸ್ಥೆಯಲ್ಲಿ ಇಲ್ಲ. ಪರಾ ವಿದ್ಯೆಗೆ ಮಾತ್ರ ವ್ಯಕ್ತಿಯಲ್ಲಿ ಉನ್ನತ ಮಾನವೀಯತೆ ಹಾಗೂ ದಿವ್ಯತೆಗಳನ್ನು ಬೆಳೆಸುವ ಶಕ್ತಿಯಿದೆ.

    ವ್ಯಕ್ತಿ ಸಾರ್ಥಕ ಜೀವನ ನಡೆಸಲು ಸಹಾಯಕವಾಗುವಂತೆ ಸನಾತನ ಧರ್ಮವು ಚತುರಾಶ್ರಮ ವ್ಯವಸ್ಥೆಯನ್ನು ನೀಡಿರುವುದು ಮಾತ್ರವಲ್ಲದೆ, ಸಮಾಜದ ಸುಗಮ, ಸಮರಸಮಯ ನಿರ್ವಹಣೆಗಾಗಿ ಚತುರ್ವಣ ವ್ಯವಸ್ಥೆಯ ದಾರಿಯನ್ನೂ ತೋರಿದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸಗಳೆಂಬ ನಾಲ್ಕು ಆಶ್ರಮಗಳನ್ನು ಪಾಲಿಸುವುದರಿಂದ ಮಾನವನು ಸಾರ್ಥಕ ಜೀವನದ ನಾಲ್ಕು ಗುರಿಗಳಾದ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳನ್ನು ಸಾಧಿಸಬಹುದಾಗಿದೆ. ವೈಯಕ್ತಿಕ ಜೀವನಕ್ಕೆ ಅನುಕೂಲಕರವಾದ ಇಂತಹ ವಾತಾವರಣವನ್ನು ಕಲ್ಪಿಸುವ ಸಾಮಾಜಿಕ ವ್ಯವಸ್ಥೆಯೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ಚತುರ್ವಣ ವ್ಯವಸ್ಥೆ. ಒಂದು ಆದರ್ಶ ಸರ್ವಾಗಸುಂದರ ಸುಖೀ ಸಮಾಜದ ಕನಸು ನನಸಾಗಬೇಕಾಗಿದ್ದರೆ ಈ ನಾಲ್ಕು ವರ್ಗಗಳು ಒಂದೇ ದೇಹದ ವಿವಿಧ ಅಂಗಾಂಗಗಳಂತೆ ಸಮರಸದಿಂದ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ವರ್ಣ ವ್ಯವಸ್ಥೆ ಜನ್ಮಾಧಾರಿತವಾದುದಲ್ಲ; ವ್ಯಕ್ತಿಯ ಅಂತರ್ಗತ ಪ್ರವೃತ್ತಿ-ಗುಣಾಧಾರಿತವಾದದ್ದು.

    ಸನಾತನ ಧರ್ಮದ ಕೊಡುಗೆಗಳಾದ ಈ ಎರಡು ವ್ಯವಸ್ಥೆಗಳು ಜಗತ್ತಿನ ವಿವಿಧ ಪ್ರಾಚೀನ ನಾಗರಿಕತೆಗಳಲ್ಲಿ ಕಂಡುಬರುವ ಎಲ್ಲ ವ್ಯವಸ್ಥೆಗಳ ಪೈಕಿ ರ್ತಾಕ ಹಾಗೂ ವ್ಯವಹಾರ್ಯವಾಗಿವೆ. ಆದ್ದರಿಂದಲೇ ಇವು ಇಂದಿನ ಆಧುನಿಕ ಜಗತ್ತಿನಲ್ಲಿ ಕೂಡ ಯಾವುದೇ ಮಾನವ ಸಮುದಾಯಕ್ಕೆ ಸಮಂಜಸವಾಗಿವೆ. ಸಹಸ್ರಾರು ವರ್ಷಗಳಿಂದ ಭಾರತದಲ್ಲಿ ವ್ಯಕ್ತಿ ಹಾಗೂ ಸಮಾಜಗಳ ಯಶಸ್ವೀ ಜೀವನ ವ್ಯವಸ್ಥೆಗಳಿಗೆ ಆಧಾರವಾಗಿರುವುದು ಸನಾತನ ಧರ್ಮದ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ. ಈ ಗುರುಕುಲದ ಕೇಂದ್ರಬಿಂದುವೆಂದರೆ ಜ್ಞಾನಿಯಾದ ಗುರು ಹಾಗೂ ಗುರುವೃಂದ; ಗುರುವಿನೊಂದಿಗೆ ವಾಸಿಸುತ್ತ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಗುರುಕುಲದ ಕಣ್ಮಣಿಗಳು. ಗುರುವು ಉದರ ಪೋಷಣೆಗೆ ಸಹಾಯಕವಾಗುವ ಲೌಕಿಕ ವಿದ್ಯೆಗಳು ಮಾತ್ರವಲ್ಲದೆ, ಮಾನವಜನ್ಮದ ಪರಮ ಪುರುಷಾರ್ಥವಾದ ಮೋಕ್ಷಸಾಧನೆಯ ಮಾರ್ಗವನ್ನು ತೋರಿಸಿಕೊಡುವ ಆತ್ಮವಿದ್ಯೆ ಅಥವಾ ಬ್ರಹ್ಮವಿದ್ಯೆಯಲ್ಲೂ ಪಾರಂಗತನಾಗಿರುತ್ತಿದ್ದನು. ಇವೆರಡನ್ನೂ ತನ್ನ ಶಿಷ್ಯರಿಗೆ ಬೋಧಿಸುತ್ತಿದ್ದನು. ಲೌಕಿಕ ವಿದ್ಯೆಯಿಂದ ಧರ್ಮದ ಆಧಾರದಲ್ಲಿ ಅರ್ಥ ಹಾಗೂ ಕಾಮಗಳ ಸಾಧನೆಯಾಗುತ್ತಿತ್ತು ಹಾಗೂ ಆತ್ಮವಿದ್ಯೆಯಿಂದ ಮೋಕ್ಷವು ಸಿದ್ಧವಾಗುತ್ತಿತ್ತು.

    ಪರಿಪೂರ್ಣ ವಿದ್ಯೆಯ ಈ ಎರಡು ಅಂಗಗಳ ಬಗ್ಗೆ ಮುಂಡಕೋಪನಿಷತ್ತಿನಲ್ಲಿ ಸುಂದರವಾದ ಉಲ್ಲೇಖವಿದೆ. ಮಹಾನ್ ಗೃಹಸ್ಥನಾದ ಶೌನಕನು ಜೀವನದಲ್ಲಿ ತನ್ನ ಎಲ್ಲ ಕರ್ತವ್ಯಗಳನ್ನು ಪೂರೈಸಿದ್ದರೂ ಆವನಿಗೆ ಸಂತೃಪ್ತಿ-ಸಾರ್ಥಕತೆಗಳು ಲಭಿಸಿರಲಿಲ್ಲ. ಆದ್ದರಿಂದ ಅವನು ಆಂಗೀರಸ ಮಹರ್ಷಿ ಬಳಿಗೆ ಬಂದು, ‘ಏನನ್ನು ತಿಳಿಯುವುದರಿಂದ ನಾವು ಎಲ್ಲವನ್ನೂ ತಿಳಿದ ಹಾಗೆ ಆಗುತ್ತದೆ?’ ಎಂದು ಕೇಳಿದ. ಇದಕ್ಕೆ ಮಹರ್ಷಿಯ ಉತ್ತರ ಹೀಗಿತ್ತು: ‘ಮಹಾನ್ ಜ್ಞಾನಿಗಳಾದ ಬ್ರಹ್ಮವಿದರು ಹೇಳಿರುವಂತೆ ಪರಾ ಮತ್ತು ಅಪರಾ ವಿದ್ಯೆಗಳೆರಡನ್ನೂ ಕಲಿತವರು ಎಲ್ಲವನ್ನೂ ಬಲ್ಲವರಾಗುತ್ತಾರೆ. ಅಪರಾ ವಿದ್ಯೆ ಸೃಷ್ಟಿಯ ಬಗ್ಗೆ ತಿಳಿಸಿಕೊಟ್ಟರೆ, ಪರಾ ವಿದ್ಯೆ ಸೃಷ್ಟಿಕರ್ತನ ಬಗ್ಗೆ ಬೋಧಿಸುತ್ತದೆ. ಅಪರಾ ವಿದ್ಯೆಯೆಂದರೆ ಋಗ್ವೇದ, ಯಜುರ್ವೆದ, ಸಾಮವೇದ ಹಾಗೂ ಅಥರ್ವವೇದ; ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಮತ್ತು ಜ್ಯೋತಿಷ. ಪರಾ ವಿದ್ಯೆ ಅವಿನಾಶಿಯಾದ ಆತ್ಮನನ್ನು ತಿಳಿದು ಎಲ್ಲ ದುಃಖಗಳಿಂದ ಮುಕ್ತಿ ಹೊಂದುವ ಮಾರ್ಗವನ್ನು ತೋರಿಕೊಡುತ್ತದೆ. (ಮುಂಡಕೋಪನಿಷತ್ತು 1.1.4-1.1.5).

    ಅಂದಿನ ಕಾಲದಲ್ಲಿ ಅಪರಾ ಅಥವಾ ಲೌಕಿಕ ವಿದ್ಯೆ ವೇದ-ಶಾಸ್ತ್ರಗಳ ಒಂದು ಭಾಗವಾಗಿತ್ತು. ವೇದಗಳ ನಾಲ್ಕು ವಿಭಾಗಗಳ ಪೈಕಿ ಮೊದಲನೆಯ ಮೂರು- ಸಂಹಿತೆ (ಮಂತ್ರಗಳ ಸಂಗ್ರಹ), ಬ್ರಾಹ್ಮಣ (ಯಾಗ-ಯಜ್ಞಗಳ ಆಚರಣೆಗಾಗಿ ಇರುವ ವಿಧಿ-ವಿಧಾನಗಳು), ಹಾಗೂ ಅರಣ್ಯಕ (ಮಂತ್ರಗಳ ಮೇಲಿನ ಧ್ಯಾನ); ಇವುಗಳಲ್ಲದೆ ವೇದಗಳನ್ನು ಸುಗಮವಾಗಿ ಕಲಿಯಲು ಅಗತ್ಯವಾದ ಆರು ವೇದಾಂಗಗಳು- ಶಿಕ್ಷಾ (ಭಾಷಾ ಧ್ವನಿ ಶಾಸ್ತ್ರ), ಕಲ್ಪ (ಆಚರಣೆಯ ವಿಧಿ-ವಿಧಾನಗಳು), ವ್ಯಾಕರಣ, ನಿರುಕ್ತ (ಶಬ್ದ ನಿಷ್ಪತ್ತಿ), ಛಂದಸ್ಸು ಹಾಗೂ ಜ್ಯೋತಿಷ; ಇವೆರಡು ಅಪರಾವಿದ್ಯೆಯ ಭಾಗಗಳು. ಬೌದ್ಧಿಕ-ಆಧ್ಯಾತ್ಮಿಕ ವರ್ಗವಾದ ಬ್ರಾಹ್ಮಣ ವರ್ಣಕ್ಕೆ ಸೇರಿದ ಶೌನಕನು ಸಮಾಜದಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಇವುಗಳೆಲ್ಲವನ್ನೂ ಕಲಿತಿದ್ದ. ವೇದಮಂತ್ರಗಳ ಪಠಣವಲ್ಲದೆ ಅವುಗಳ ಅರ್ಥವನ್ನು ತಿಳಿದುಕೊಂಡು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ವಿಧಿ-ವಿಧಾನಗಳಿಗನುಗುಣವಾಗಿ ಯಜ್ಞ-ಯಾಗಾದಿಗಳನ್ನು ನಡೆಸುವುದು ಆವನಿಗೆ ಕರಗತವಾಗಿತ್ತು. ಈ ಕರ್ಮದಿಂದ ಅವನ ಮತ್ತು ಕುಟುಂಬದ ಪೋಷಣೆಯಾಗುತ್ತಿತ್ತು (ಬ್ರಾಹ್ಮಣರಿಗೆ ಇದೇ ಅಪರಾ ವಿದ್ಯೆಯಾಗಿತ್ತು). ಇಷ್ಟೆಲ್ಲ ಮಾಡಿದ್ದರೂ ಆವನಿಗೆ ಅಂತರಂಗದಲ್ಲಿ ಶಾಂತಿ-ತೃಪ್ತಿಗಳು ಲಭ್ಯವಾಗಿರಲಿಲ್ಲ. ಏಕೆಂದರೆ ಅವನು ಅಂತರಂಗ-ಬಹಿರಂಗಗಳಲ್ಲಿ ಸರ್ವತ್ರ ವ್ಯಾಪಿಸಿರುವ ದಿವ್ಯತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡಿರಲಿಲ್ಲ. ಆದ್ದರಿಂದಲೇ ಆಂಗೀರಸ ಮಹರ್ಷಿ ಅವನಿಗೆ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಪರಾ ವಿದ್ಯೆಯನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿದ. ಜಗತ್ತಿನಲ್ಲಿ ಎಲ್ಲ ವಿದ್ಯೆಯನ್ನು ಕಲಿತರೂ ತನ್ನ ಸತ್ಯಸ್ವರೂಪವನ್ನು ತಿಳಿಯದಿದ್ದರೆ ಜೀವನದಲ್ಲಿ ಸಾರ್ಥಕತೆ ಲಭಿಸುವುದಿಲ್ಲ. ಮಾನವನಿಗೆ ಅಮೃತತ್ತ್ವವನ್ನು ಪ್ರದಾನ ಮಾಡುವ ಪರಾ ವಿದ್ಯೆಯನ್ನು ನಾವು ಹೆಚ್ಚಿನ ಮಟ್ಟಿಗೆ ವೇದಗಳ ನಾಲ್ಕನೆಯ ಭಾಗವಾದ ಉಪನಿಷತ್ತುಗಳಲ್ಲಿ ಕಾಣಬಹುದಾಗಿದೆ.

    ಇಂತಹ ಪರಿಪೂರ್ಣ ವಿದ್ಯೆಯನ್ನು ನಾವು ನಮ್ಮ ಆಧುನಿಕ ಶಿಕ್ಷಣದಲ್ಲಿ ಸಹ ಅಳವಡಿಸಲು ಸಾಧ್ಯವಿದೆ. ಉದಾಹರಣೆಗೆ, ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವನ್ನು ನೋಡೋಣ. ಅಲ್ಲಿ ವಿದ್ಯಾರ್ಥಿಗಳಿಗೆ ಅಪರಾ ವಿದ್ಯೆಯೆಂದರೆ ಶರೀರರಚನಾಶಾಸ್ತ್ರ (Anatomy), ದೈಹಿಕಕ್ರಿಯಾಶಾಸ್ತ್ರ (Physiology), ರೋಗಶಾಸ್ತ್ರ (Pathology), ಔಷಧ ಹಾಗೂ ಶಸ್ತ್ರಕ್ರಿಯಾ ಚಿಕಿತ್ಸೆ ಇತ್ಯಾದಿಗಳು. ಇದೇ ವಿದ್ಯಾರ್ಥಿಗಳಿಗೆ ಪರಾ ವಿದ್ಯೆಯೆಂದರೆ ಪ್ರಾಚೀನ ಕಾಲದಿಂದಲೂ ಹರಿದು ಬಂದಿರುವ ಆಧ್ಯಾತ್ಮಿಕ ಜ್ಞಾನವೇ; ವಿಶ್ವವನ್ನು ವ್ಯಾಪಿಸಿರುವ ದಿವ್ಯತ್ವವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಸಹಾಯಮಾಡುವ ವಿದ್ಯೆ. ಅಪರಾ ವಿದ್ಯೆ ಹಾಗೂ ಪರಾ ವಿದ್ಯೆಗಳೆರಡನ್ನೂ ಕೊಡುವ ಶಿಕ್ಷಣವೇ ಪರಿಪೂರ್ಣ ವಿದ್ಯೆ. ಇಂತಹ ಸಂಯೋಗವನ್ನು ಶಿಕ್ಷಣದ ಎಲ್ಲ ರಂಗಗಳಲ್ಲಿಯೂ ಅನುಷ್ಠಾನಕ್ಕೆ ತರಬಹುದಾಗಿದೆ (ವಿಜ್ಞಾನ, ತಂತ್ರಜ್ಞಾನ, ಕಲೆ, ಲಲಿತ ಕಲೆ ಅಥವಾ ಮತ್ತಾವುದೇ ರಂಗವಾಗಿರಬಹುದು). ಇಂತಹ ಗುರುಕುಲ ಶಿಕ್ಷಣವನ್ನು ಇಂದಿನ ಆಧುನಿಕ ಯುಗದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಗೆ ಶಾಂತಿ-ತೃಪ್ತಿಗಳು ಲಭಿಸುವುದಲ್ಲದೆ ಸಮಾಜದಲ್ಲಿ ಸಮರಸ-ಭದ್ರತೆಗಳು ನೆಲೆಗೊಳ್ಳುತ್ತವೆ.

    ಗುರುಕುಲ ಪದ್ಧತಿಯ ಮುಖ್ಯವಾದ ಅಂಶವೆಂದರೆ, ಅಪರಾ ವಿದ್ಯೆ ಒಬ್ಬ ವಿದ್ಯಾರ್ಥಿಯಿಂದ ಇನ್ನೊಬ್ಬ ವಿದ್ಯಾರ್ಥಿಗೆ ಭಿನ್ನವಾಗಿರುತ್ತಿತ್ತು. ಇದು ಆ ವಿದ್ಯಾರ್ಥಿಯ ಸಹಜ ಪ್ರವೃತ್ತಿ-ಗುಣಗಳಿಗನುಸಾರವಾಗಿ ನಿಗದಿತವಾದ ವರ್ಣಧರ್ಮದ ಆಧಾರದಲ್ಲಿ ನಿರ್ಣಯಿಸಲ್ಪಡುತ್ತಿತ್ತು. ಆದರೆ ಪರಾ ವಿದ್ಯೆ ಮಾತ್ರ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ. ಅಪರಾ ವಿದ್ಯೆಯಲ್ಲಿ ಬ್ರಾಹ್ಮಣರು ವೇದಮಂತ್ರ ಹಾಗೂ ವೈದಿಕ ಕರ್ಮ-ಕ್ರಿಯೆಗಳ ವಿಧಿ-ವಿಧಾನಗಳನ್ನು ಕಲಿತರೆ, ಕ್ಷತ್ರಿಯರು ಯುದ್ಧವಿದ್ಯೆ ಹಾಗೂ ಆಡಳಿತ ಕಲೆಯನ್ನು ಕಲಿಯುತ್ತಿದ್ದರು. ಅದೇರೀತಿಯಲ್ಲಿ ವೈಶ್ಯರು ಅರ್ಥಶಾಸ್ತ್ರ ಹಾಗೂ ವಾಣಿಜ್ಯೋದ್ಯಮ ಕಾರ್ಯಕ್ರಮಗಳನ್ನು ಕಲಿಯುತ್ತಿದ್ದರು; ಶ್ರಮಿಕ ವರ್ಗಕ್ಕೆ ಸೇರಿದ ಶೂದ್ರರು ಕೃಷಿ, ಪಶುಸಂಗೋಪನೆ, ನೇಯ್ಗೆ, ಕುಂಬಾರಿಕೆ, ಅಥವಾ ಸಮಾಜಕ್ಕೆ ಅಗತ್ಯವಾದ ಇತರ ಕುಶಲಕರ್ಮ ಕಲೆಗಳನ್ನು ಕಲಿಯುತ್ತಿದ್ದರು. ಪರಾ ವಿದ್ಯೆ ಎಲ್ಲರಿಗೂ ಒಂದೇ ಆಗಿದ್ದು, ಎಲ್ಲರಿಗೂ ಮೋಕ್ಷ ಸಾಧನೆಗಾಗಿ ಸಮಾನವಾದ ಅವಕಾಶವಿರುತ್ತಿತ್ತು.

    ಗುರುಕುಲಗಳಲ್ಲಿ ಶಿಕ್ಷಣ ಸಂಪೂರ್ಣ ಉಚಿತವಾಗಿ ನೀಡಲ್ಪಡುತ್ತಿತ್ತು. ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿ ಗುರುಕುಲವನ್ನು ಬಿಟ್ಟು ಹೋಗುವಾಗ ಕೃತಜ್ಞತಾದ್ಯೋತಕವಾಗಿ ಗುರುದಕ್ಷಿಣೆ ಸಮರ್ಪಿಸುತ್ತಿದ್ದರು. ಇಂತಹ ಗುರುದಕ್ಷಿಣೆಯ ರೂಪವಾಗಲೀ ಪ್ರಮಾಣವಾಗಲೀ ನಿಗದಿತವಾದುದಾಗಿರಲಿಲ್ಲ. ಅವರವರ ವೃತ್ತಿ ಹಾಗೂ ಸಾಮರ್ಥ್ಯಗಳಿಗನುಗುಣವಾಗಿ ಸ್ವಯಂ ಇಚ್ಛೆಯಿಂದ ಗುರುದಕ್ಷಿಣೆ ನೀಡುತ್ತಿದ್ದರು. ಕೃಷಿಕರ ಮಕ್ಕಳು ತಾವು ಬೆಳೆದ ದವಸ-ಧಾನ್ಯ, ಹಣ್ಣು-ತರಕಾರಿಗಳನ್ನು ನೀಡಿದರೆ, ವೈಶ್ಯರ ಮಕ್ಕಳು ಗುರುಕುಲಕ್ಕೆ ಅಗತ್ಯವಾದ ವಸ್ತು-ಸಾಮಗ್ರಿಗಳನ್ನು ನೀಡುತ್ತಿದ್ದರು. ರಾಜನ ಮಕ್ಕಳು ಭೂಮಿ, ಸುವರ್ಣ, ಗೋವುಗಳ ರೂಪದಲ್ಲಿ ಗುರುದಕ್ಷಿಣೆ ಸಮರ್ಪಿಸಿದರೆ, ಶ್ರಮಿಕನ ಮಕ್ಕಳು ತಾವು ತಯಾರಿಸಿದ ವಸ್ತ್ರ, ಮಣ್ಣಿನ ಪಾತ್ರೆಗಳು, ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ಅರ್ಪಿಸುತ್ತಿದ್ದರು. ಇವೆಲ್ಲವೂ ಅವರ ಹೃತ್ಪೂರ್ವಕ ಕೃತಜ್ಞತೆಯ ಸಾಕಾರ ರೂಪವಾಗಿರುತ್ತಿದ್ದವು. ನಮ್ಮ ಇಂದಿನ ಕಾಲದಲ್ಲಿರುವಂತೆ ಪ್ರವೇಶ ವಂತಿಗೆ/ಶುಲ್ಕ (Capitation Fee), ಬೋಧನಾ ಶುಲ್ಕ, ಕ್ರೀಡಾ ಶುಲ್ಕ, ಪರೀಕ್ಷಾ ಶುಲ್ಕ ಇತ್ಯಾದಿ ಯಾವುದೇ ಶುಲ್ಕಗಳಿರಲಿಲ್ಲ. ಎಲ್ಲರೂ ಗುರುಕುಲದಲ್ಲಿಯೇ ವಾಸಿಸುತ್ತಿದ್ದುದರಿಂದ ಪ್ರಯಾಣ ಶುಲ್ಕ ಇರಲಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಸಮಾನವಾಗಿ ಶಿಕ್ಷಣದ ಅವಕಾಶಗಳು ಲಭ್ಯವಿದ್ದವು; ಶ್ರೀಮಂತ-ಬಡವರೆಂಬ ಭೇದವಿರಲಿಲ್ಲ. ಗುರುಕುಲದ ನಿರ್ವಹಣೆ ಜವಾಬ್ದಾರಿಯನ್ನು ಇಡೀ ಸಮಾಜವು ಹೊರುತ್ತಿತ್ತು. ಇದು ವಿದ್ಯಾರ್ಥಿಗಳ ಪಾಲಕರಿಗೆ ಮಾತ್ರ ಸೀಮಿತವಾಗಿರಲಿಲ್ಲ.

    ಗುರುಕುಲ ಪದ್ಧತಿಯ ಇನ್ನೊಂದು ಪ್ರಧಾನ ಅಂಶವೆಂದರೆ, ಗುರುವು ವಿದ್ಯಾರ್ಥಿಯ ಸಹಜ ಪ್ರವೃತ್ತಿ-ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮಾಜದಲ್ಲಿ ಅದಕ್ಕೆ ಯೋಗ್ಯವಾದ ಕರ್ತವ್ಯ-ಕರ್ಮಗಳನ್ನು ನಿರ್ವಹಿಸಲು ಅಗತ್ಯವಾದ ಲೌಕಿಕ ವಿದ್ಯೆಯನ್ನು ಬೋಧಿಸುತ್ತಿದ್ದನು; ಇದು ವಿದ್ಯಾರ್ಥಿಯ ತಂದೆ-ತಾಯಿಗಳ ವರ್ಣ ಅಥವಾ ವೃತ್ತಿಯಿಂದ ನಿರ್ಣಯವಾಗುತ್ತಿರಲಿಲ್ಲ. ವಿದ್ಯಾರ್ಥಿಯ ಅಂತರಂಗದಲ್ಲಿರುವ ಸಂಸ್ಕಾರ ಹಾಗೂ ಪ್ರತಿಭೆಗಳಿಗೆ ಅನುಸಾರವಾಗಿ ವಿದ್ಯೆ ನೀಡಲ್ಪಡುತ್ತಿತ್ತು. ಗುರುವು ವಿದ್ಯಾರ್ಥಿಯನ್ನು ಅವನ ಅಭಿರುಚಿಗೆ ಅನುಗುಣವಾಗಿ ಆಯಾ ರಂಗಗಳಲ್ಲಿ ಪ್ರೋತ್ಸಾಹಿಸಿ ಅವನಲ್ಲಿ ಸಾಮರ್ಥ್ಯ ಬೆಳೆಸುತ್ತಿದ್ದ. ಆದ್ದರಿಂದ ಸಮಾಜದ ಎಲ್ಲ ವ್ಯವಸ್ಥೆಗಳಿಗೂ ಬೇಕಾದ ಸಮರ್ಥ ಪ್ರಜೆಗಳು ರೂಪಿತವಾಗುತ್ತಿದ್ದರು. ಇಂದು ನಮ್ಮ ಶಿಕ್ಷಣ ರಂಗದಲ್ಲಿ ವಿದ್ಯಾರ್ಥಿಗಳ ವಿದ್ಯಾರಂಗಗಳ ಆಯ್ಕೆ ಕೇವಲ ಧನಸಂಪಾದನೆಯ ಮಾನದಂಡದಿಂದ ಪ್ರಭಾವಿತವಾಗುತ್ತಿರುವುದು ಸಮಾಜದ ದುರಂತವಾಗಿದೆ.

    ಹಿಂದಿನ ಹಾಗೂ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಮುಖ್ಯ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು. ಮಕ್ಕಳಿಗೆ ಧನಸಂಪಾದನೆಯ ಮಾರ್ಗವಾಗಿ ಲೌಕಿಕ ಅಥವಾ ಅಪರಾ ವಿದ್ಯೆಯನ್ನು ಮಾತ್ರ ನೀಡುತ್ತಿದ್ದೇವೆ; ಪರಾ ವಿದ್ಯೆಯ ಲವಲೇಶವೂ ಇಂದಿನ ವ್ಯವಸ್ಥೆಯಲ್ಲಿ ಇಲ್ಲ. ಪರಾ ವಿದ್ಯೆಗೆ ಮಾತ್ರ ವ್ಯಕ್ತಿಯಲ್ಲಿ ಉನ್ನತ ಮಾನವೀಯತೆ ಹಾಗೂ ದಿವ್ಯತೆಗಳನ್ನು ಬೆಳೆಸುವ ಶಕ್ತಿಯಿದೆ. ಇಂದು ಸಮಾಜದಲ್ಲಿ ಕಂಡುಬರುವ ಅನ್ಯಾಯ-ಅಕ್ರಮ-ಅನಾಚಾರಗಳಿಗಾಗಲೀ ಅಥವಾ ನೈತಿಕ ಅಧಃಪತನಕ್ಕಾಗಲೀ ಪರಾ ವಿದ್ಯೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿರುವುದೇ ಕಾರಣವಾಗಿದೆ. ಅಲ್ಲದೆ ಇಂದಿನ ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣದಿಂದಾಗಿ ಸಮಾಜದಲ್ಲಿ ಉಳ್ಳವರ ಹಾಗೂ ಇಲ್ಲದಿರುವವರ Polarisation ಆಗುತ್ತಿರುವುದು ಮಾರಕವಾದ ಬೆಳವಣಿಗೆಯಾಗಿದೆ.

    ಕಳೆದ ಶತಮಾನದಿಂದಲೂ ನಮ್ಮ ದೇಶದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಗಾಂಧೀಜಿಯವರೆಗೆ ಬಹು ಮೇಧಾವಿಗಳು ಲೌಕಿಕ ವಿದ್ಯೆ ಜೊತೆಗೆ ಆಧ್ಯಾತ್ಮಿಕ-ನೈತಿಕ ವಿದ್ಯೆಯನ್ನೊಳಗೊಂಡ ಸಮಗ್ರ (Holistic) ಶಿಕ್ಷಣ ನೀಡಬೇಕೆಂದು ಎಚ್ಚರಿಸುತ್ತಲೇ ಬಂದಿದ್ದಾರೆ. ಅದೃಷ್ಟವಶಾತ್ ಇಂತಹ ಆದರ್ಶ ಶಿಕ್ಷಣವನ್ನು ನೀಡುವ ಕೆಲವು ವಿದ್ಯಾ ಸಂಸ್ಥೆಗಳಾದರೂ ನಮ್ಮ ದೇಶದಲ್ಲಿವೆ. ‘ಶಿಕ್ಷಣವು ಜೀವನೋಪಾಧಿಗಲ್ಲ, ಜೀವನಕ್ಕಾಗಿ-’ ಎಂದು ಸಾರಿದ ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ಸಮಗ್ರ ಶಿಕ್ಷಣ ಸಿದ್ಧಾಂತಕ್ಕೆ ಅನುಗುಣವಾಗಿ (Philosophy of Integral Education) ಇಂದು ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ತಲೆಯೆತ್ತುತ್ತಿರುವ ಶ್ರೀಸತ್ಯಸಾಯಿ ಲೋಕ ಸೇವಾ ಗುರುಕುಲಗಳಲ್ಲಿ ಇಂತಹ ಅಪರಾ ಮತ್ತು ಪರಾ ವಿದ್ಯೆಗಳ ಸಂಗಮವನ್ನು ನೋಡಬಹುದಾಗಿದೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗೆ ಉಚಿತ ಶಿಕ್ಷಣವನ್ನು ನೀಡುವ ಈ ಸನಿವಾಸ (Residential) ವಿದ್ಯಾನಿವೇಶನಗಳು ಪ್ರಾಚೀನ ಗುರುಕುಲಗಳನ್ನು ನೆನೆಪಿಗೆ ತರುತ್ತವೆ. ಇಂತಹ ವಿದ್ಯಾಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಾಗ ಮಾತ್ರ ಸನಾತನಧರ್ಮದ ದಿವ್ಯ, ಭವ್ಯ ಆದರ್ಶಗಳ ಪುನರುತ್ಥಾನವಾಗುತ್ತದೆ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts