More

    ನಿವೇಶನಕ್ಕೆ ಜಾಗ ಗುರುತಿಸದ ಹೊರತು ಹೋರಾಟ ಕೈಬಿಡಲ್ಲ

    ಚಿಕ್ಕಮಗಳೂರು: ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿ ಆಜಾದ್ ಪಾರ್ಕ ವೃತ್ತದಲ್ಲಿ ಸಿಪಿಐ ಕಾರ್ಯಕರ್ತರು ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
    ಸಿಪಿಐನ ಜಿಲ್ಲಾ ನಾಯಕಿ ರಾಧಾ ಸುಂದರೇಶ್ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ 40 ಸಾವಿರ ನಿವೇಶನ ರಹಿತರಿದ್ದು, ಇವರಿಗೆ ನಿವೇಶನ ನೀಡಬೇಕು ಎಂದು ಕಳೆದೊಂದು ದಶಕದಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಕೇವಲ ಭರವಸೆ ನೀಡುತ್ತಿದೆ. ನಿವೇಶನಕ್ಕೆ ಜಾಗ ಗುರುತಿಸದ ಹೊರತು ಹೋರಾಟ ಕೈಬಿಡುವುದಿಲ್ಲ. ಜಿಲ್ಲಾಡಳಿತ ಈ ಸಂಬಂಧ ಸ್ಪಷ್ಟನೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
    ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ನಿವೇಶನ ರಹಿತರಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ 40 ಸಾವಿರ ಹಾಗೂ ಚಿಕ್ಕಮಗಳೂರು ನಗರದಲ್ಲಿ 20 ಸಾವಿರ ನಿವೇಶನ ರಹಿತರಿದ್ದಾರೆ. ಬಹುತೇಕ ನಿವೇಶನ ರಹಿತರು ತಳ ಸಮುದಾಯದವರಾಗಿದ್ದು, ಕೂಲಿ ಕೆಲಸ ಮಾಡಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಇಂತಹ ನಿವೇಶನ ರಹಿತರಿಗೆ ತಲೆ ಮೇಲೊಂದು ಸೂರು ನಿರ್ಮಿಸಿಕೊಳ್ಳಲು ತುಂಡು ಜಾಗ ನೀಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ದಶಕದಿಂದ ಸಿಪಿಐ ಎಲ್ಲ ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರದಲ್ಲಿ ಹೋರಾಟ, ಪ್ರತಿಭಟನೆ ಮಾಡಿ ಶಾಸಕರು, ಅಧಿಕಾರಿಗಳು, ಸಚಿವರಿಗೆ ಮನವಿ ಮಾಡಿದರೂ ನಿವೇಶನ ನೀಡಲು ನಿರ್ಲಕ್ಷ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬಡವರಿಗೆ ಸೂರು ಕಲ್ಪಿಸಲಾಗದ ಜಿಲ್ಲಾಡಳಿತ, ತಾಲೂಕು ಆಡಳಿತ ಶ್ರೀ ಮಂತರಿಗೆ ಸರಕಾರಿ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡುತ್ತಿದೆ. ಜಿಲ್ಲಾದ್ಯಂತ ಅಧಿಕಾರಿಗಳು ಲಂಚ ಪಡೆದು ಸರ್ಕಾರಿ ಜಾಗವನ್ನು ಬೇಕಾಬಿಟ್ಟಿ ಮಂಜೂರು ಮಾಡಿದ್ದಾರೆ. ಆದರೆ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಾಗ ಇಲ್ಲ, ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೇ ಆಗಬೇಕು, ಡೀಮ್ಡ್ ಅರಣ್ಯ ಸಮಸ್ಯೆ ಇದೆ ಎಂಬ ಸಬೂಬು ನೀಡುತ್ತಿದ್ದಾರೆ. ಜನಪ್ರತಿನಿಧಿಗಳು, ಜಿಲ್ಲಾಡಳಿತದ ಧೋರಣೆಯಿಂದ ಬೇಸತ್ತು ಇಂದಿನಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಇದು ಸಾಂಕೇತಿಕ ಹೋರಾಟ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
    ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು ಸರ್ಕಾರದ ಕೆಲಸ, ಜಿಲ್ಲಾಡಳಿತ ಇನ್ನಾದರೂ ಕಂದಾಯಾಧಿಕಾರಿಗಳು, ಅರಣ್ಯಾಧಿಕಾರಿಗಳು ಹಾಗೂ ಸರ್ವೇ ಇಲಾಖಾಧಿಕಾರಿಗಳ ಸಭೆ ನಡೆಸಿ ನಿವೇಶನಕ್ಕೆ ಜಾಗ ಗುರುತಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸಲಾಗುವುದು. ನಗರಸಭೆ ಅಧಿಕಾರಿಗಳು ನಗರ ವ್ಯಾಪ್ತಿಯ ನಿವೇಶನ ರಹಿತರಿಗೆ ಪ್ಲಾಟ್ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ನಮಗೆ ಫ್ಲಾಟ್‌ನ ಅಗತ್ಯವಿಲ್ಲ. ಮನೆಕಟ್ಟಿಕೊಳ್ಳಲು ತುಂಡು ಜಾಗ ಹಾಗೂ ಆಶ್ರಯ ಮನೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
    ಸಿಪಿಐ ತಾಲೂಕು ಮುಖಂಡರಾದ ಎಚ್.ಎಂ.ರೇಣುಕಾರಾಧ್ಯ, ಕೆರೆಮಕ್ಕಿ ರಮೇಶ್, ಹೆಡದಾಳುಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts