More

    ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

    ಸಾಧನೆಗೆ ಯಾವುದೂ ಅಡ್ಡಿಯಾಗದಲ್ಲ ಅನ್ನೋದಕ್ಕೆ, ಈ ಒಲಿಂಪಿಕ್ಸ್​ನಲ್ಲಿ ಸಾಧಿಸಿದವ್ರೇ ಸಾಕ್ಷಿ. ಇಲ್ಲಿ ಚಿನ್ನದ ಸ್ಪೂನ್​ ಇಟ್ಕೊಂಡು ಬಂದವ್ರು ಯಾರಿಲ್ಲ. ಪ್ರತಿಯೊಬ್ಬರೂ ಕೂಡ ಬಡತನದ ನಡುವೆ ಬೆವರು ಸುರಿಸಿ, ಅದೇ ಬೆವರನ್ನು ಪದಕವಾಗಿ ಬದಲಿಸಿದ ಸಾಧಕರು. ಅದು ಮೊದಲ ಬೆಳ್ಳಿಯಿಂದ ಹಿಡಿದು ಕೊನೆಯ ಬಂಗಾರದವರೆಗೂ ಮುಂದುವರೆದಿದ್ದು, ಒಬ್ಬೊಬ್ಬರು ಎದುರಿಸಿದ ಸವಾಲು ನೋಡಿದ್ರೆ ರೋಮ ರೋಮಗಳು ಪುಟಿದು ನಿಲ್ತವೇ.. ಕಷ್ಟ ಅನ್ನೋದು ಕರಗಿ ಆನಂದದ ಹೆಮ್ಮೆಯ ಕಣ್ಣೀರಾಗುತ್ತವೇ..

    ನೀರಜ್​ ಚೋಪ್ರಾ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಚಿನ್ನದ ಹುಡುಗ. ಈತ ಮಾಡಿದ ಸಾಧನೆ ಅಚ್ಚಳಿಯದ ಪುಸ್ತಕದಲ್ಲಿ ಅಚ್ಚೊತ್ತುವಂತೆ ಆಗಿದ್ದು, ಜಾವೆಲಿನ್ ಥ್ರೋನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಸವಾಲುಗಳನ್ನು ಸಾಧನೆಯ ಮೆಟ್ಟಿಲಗಳನ್ನ ಮಾಡಿಕೊಂಡು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

    ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ರೋಚಕ!
    ಹೌದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಈಟಿಯನ್ನು ಬರೋಬ್ಬರಿ 87.65 ಮೀ ದೂರ ಎಸೆಯುವ ಮೂಲಕ ಚಿನ್ನದ ಅಕ್ಷರದಲ್ಲಿ ಬರೆದಿಡುವ ಸಾಧನೆ ಮಾಡಿದ ನೀರಜ್ ಚೋಪ್ರಾ, ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ. ಅಷ್ಟು ಮಾತ್ರವಲ್ಲ ಒಲಿಂಪಿಕ್ಸ್‌ ಕ್ರೀಂಡಾಗಣದಲ್ಲಿ ಭಾರತದ ರಾಷ್ಟ್ರಗೀತೆಯನ್ನು 13 ವರ್ಷಗಳ ನಂತರ ಹಾಡಿಸುವಂತೆ ಮಾಡಿದ್ದಾರೆ. ಜೊತೆಗೆ ಭಾರತೀಯ ರಾಷ್ಟ್ರಗೀತೆಯು ಒಲಿಂಪಿಕ್ಸ್‌‌ನ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನುಡಿಸಿದ ಕೀರ್ತಿ ನೀರಜ್‌ ಚೋಪ್ರಾ ಅವರ ಪಾಲಿಗೆ ದಕ್ಕಿದೆ.

    ಆದ್ರೆ, ನೀರಜ್ ಈ ಸಾಧನೆ ಮಾಡೋ ಮೊದಲು ಅದಕ್ಕಾಗಿ ಸುರಿಸಿದ ಬೆವರು ಇದ್ಯಲ್ಲ ಅದು ಮಾತ್ರ ಗೊತ್ತಿದ್ದವರಿಗಷ್ಟೇ ಗೊತ್ತು. ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡುವಂತೆ ಆಗಲು ಅವ್ರು ಸವೆಸಿದ ಹಾದಿ ಇದ್ಯಲ್ಲ, ಅದು ಸಾಧನೆ ಅಂದ್ರೇನು ಅಂತ ತೋರಿಸುವಂತದ್ದು. ಅದ್ರಲ್ಲೂ ಏನೇ ಸವಾಲು ಬಂದ್ರೂ ಅದನ್ನು ಮೆಟ್ಟಿ ನಿಲ್ಲುವ ಛಲಗಾರನ ಛಲಕ್ಕೆ ಸಾಕ್ಷಿ ಎನ್ನುವಂತದ್ದು. ಅದ್ರಲ್ಲೂ ಒಂದು ಕುಗ್ರಾಮದಲ್ಲಿ, ಬಡ ರೈತನ ಕುಟುಂಬದಲ್ಲಿ ಹುಟ್ಟಿ ಇಂದು ಮಾಡಿದ ಸಾಧನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕು.

    ಅಂದಹಾಗೆ ಚೋಪ್ರಾದ್ದು ಹರ್ಯಾಣದ ಪಾಣಿಪತ್ ನಗರದ ಖಂದ್ರಾ ಅನ್ನೋ ಒಂದು ಪುಟ್ಟ ಹಳ್ಳಿ. ಅಭಿವೃದ್ಧಿ ಅನ್ನೋ ಹೆಸರನ್ನೇ ಕೇಳದ ಹಳ್ಳಿಯಿದು. ಇಲ್ಲಿರೋ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿ ಬದುಕ್ತಾ ಇದ್ದಾವೇ. ಇಂತಹ ಹಳ್ಳಿಯಲ್ಲಿ ಹುಟ್ಟಿದ ಈ ನೀರಜ್ ಅನ್ನೋ ಬಾಲಕ, ಇಂದು ಇಡೀ ಜಗತ್ತೇ ತನ್ನ ಅದೇ ಹಳ್ಳಿಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ ಆ ಬಡತನದಲ್ಲೂ ಗುರಿಯಿಲ್ಲದೆ ಬಂದವರು ಇಂದು ಕ್ರೀಡಾಲೋಕದ ಗುರಿಕಾರನಾಗಿ ನಿಂತಿದ್ದಾರೆ.

    ಅಪ್ಪನ ಆಸೆಯಂತೆ ತೂಕ ಇಳಿಸಲು ಅಖಾಡಕ್ಕೆ ಎಂಟ್ರಿ!
    ಆಗ್ಲೇ ಹೇಳಿದಂತೆ ನೀರಜ್ ತಂದೆ ಸತೀಶ್ ಕುಮಾರ್ ಒಬ್ಬ ಬಡ ರೈತ. ಬೆಳೆ ಬಂದ್ರೆ ಮಾತ್ರ ಹೊಟ್ಟೆ ತುಂಬಾ ಊಟ. ಇಲ್ಲ ಅಂದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಅನ್ನೋ ಪರಿಸ್ಥಿತಿ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಮಗನಿಗೆ ಬೆನ್ನೆಲುಬಾಗಿ ನಿಲ್ತಾರೆ ಸತೀಶ್ ಕುಮಾರ್. ಅದ್ರಲ್ಲೂ ಮಗನ ತೂಕವನ್ನ ಇಳಿಸೋಕೆ ಅಂತ ಅಖಾಡಕ್ಕೆ ಇಳಿಸಿದ ತಂದೆ ಮಗನ ಸಾಧನೆಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

    ಬಡತನದಲ್ಲಿ ಹುಟ್ಟಿದ ನೀರಜ್ ಕ್ರೀಡೆಯಲ್ಲಿ ಸಾಧನೆ ಮಾಡ್ತಾರೇ ಅಂತ ಯಾರೂ ಅನ್ಕೊಂಡಿರಲಿಲ್ಲ. ಯಾಕಂದ್ರೆ ಹುಟ್ಟಿದೂರಲ್ಲಿ ಸ್ಪೋರ್ಟ್ಸ್ ಬಗ್ಗೆ ಯಾರಿಗೂ ಇಂಟರೆಸ್ಟ್ ಇರ್ಲಿಲ್ಲ. ಆಕಸ್ಮಿಕವಾಗಿ ಅತ್ತ ಗಮನಹರಿಸಿದ ನೀರಜ್​ಗೆ ಸಿಕ್ಕಿದ್ದು ಜಿತೇಂದರ್​ ಜಗ್ಲಾನ್ ಅನ್ನೋ ಕೋಚ್. ಈ ತರಬೇತುದಾರ ನೀರಜ್ ಅನ್ನೋ ಶಿಲೆಯಲ್ಲಿ ಕಲೆಯನ್ನರಳಿಸಿದ ಶಿಲ್ಪಿ. ಆದ್ರೆ, ಏನ್ ಮಾಡ್ತೀರಾ ಕ್ರೀಡಾಕ್ಷೇತ್ರದಲ್ಲಿ ಏನಾದ್ರು ಸಾಧನೆ ಮಾಡ್ಬೇಕು ಅನ್ನೋ ಕಿಚ್ಚು ಮತ್ತು ಹಸಿವೇನೋ ಇತ್ತು. ಆದರೆ, ಅದಕ್ಕೆ ಬೇಕಾದ ಸಾಮಗ್ರಿ ಇರ್ಲಿಲ್ಲ. ಪ್ರೋತ್ಸಾಹನೂ ಇರ್ಲಿಲ್ಲ. ಯಾವುದಾದ್ರು ಅಕಾಡೆಮಿ ಜಾಯಿನ್ ಆಗೋಣ ಅಂದ್ರೆ ಅದಕ್ಕೆ ಬಡತನ ಅಡ್ಡಿ ಮಾಡ್ತು.

    ಬಂಗಾರದ ಹುಡುಗ’ನಿಗೆ ಜಿಂದಾಲ್ ಪ್ರಾಯೋಜಕತ್ವ!
    2016ರಲ್ಲಿ ಸೇನೆಗೆ ಸೇರಿದ ನೀರಜ್, ಚಿನ್ನದ ಬೇಟೆ ಶುರು ಮಾಡಿದ ಮೇಲೆ ಕರುನಾಡಿಗೆ ಬಂದಿದ್ರು. ಹೌದು, ಹರಿಯಾಣ ಮೂಲದ ನೀರಜ್ ಚೋಪ್ರಾ, 2017ರಲ್ಲಿ ಬಳ್ಳಾರಿ ಜಿಲ್ಲೆ ಜಿಂದಾಲ್ ಕಂಪನಿಯಲ್ಲಿರುವ inspire institute of sportsಗೆ ಸೇರಿಕೊಂಡಿದ್ರು. 2017 ರಿಂದ 2020ರವರೆಗೆ ಕೂಡ ನೀರಜ್ ಚೋಪ್ರಾ ಇಲ್ಲಿಯೇ ತರಬೇತಿ ಪಡೆದಿದ್ದಾರೆ ಅನ್ನೋದೇ ವಿಶೇಷ. ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ನಿರಂತರವಾಗಿ ಅಭ್ಯಾಸ ಮಾಡಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕು ಅಂತಾ ಕನಸು ಕಂಡಿದ್ದರಂತೆ. ಅಲ್ಲದೆ ನಮ್ಮ ಕಡುನಾಡಿನ ಕಾಶಿನಾಥ್ ನಾಯ್ಕ್ ಕೋಚ್ ಆಗಿದ್ರು ಅನ್ನೋದು ಇನ್ನೊಂದು ವಿಶೇಷ.

    ಆಶ್ರಯ ಕೊಡಲು ಜಿಂದಾಲ್ ರೆಡಿ ಇದ್ರೆ, ಪಡೆಯೋಕೆ ನೀರಜ್ ಸಿದ್ಧವಿದ್ರು. ಪರಿಣಾಮ inspire institute of sports ಜಿಂದಾಲ್​ನಲ್ಲಿ ತರಬೇತಿ ಶುರು ಮಾಡಿದ್ರು. ಆಗ ಫ್ರಾನ್ಸ್ ಮೂಲದ ಆಂಥೋನಿ ತರಬೇತಿ ನೀಡುತ್ತಿದ್ರು. ಅಷ್ಟು ಮಾತ್ರವಲ್ಲ ಸ್ವತಃ ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ ಪಟಿಯಾಲದಲ್ಲಿರುವ ಸ್ಪೋರ್ಟ್ ಆಥಾರಿಟಿ ಆಫ್ ಇಂಡಿಯಾದಲ್ಲಿ ಕೂಡ ತರಬೇತಿ ಪಡೀತ್ತಾರೆ. ಅಲ್ಲದೇ ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ಯುರೋಪ್​ನಲ್ಲಿ ಕೂಡ ಕೆಲದಿನಗಳ ಕಾಲ ಅಭ್ಯಾಸ ಮಾಡಿದ್ದು, ಹಠ ಹಾಗೂ ಸಾಧಿಸುವ ಛಲವಿದ್ರೆ ಸಾಧನೆ ದೂರವಲ್ಲ ಅನ್ನೋದಕ್ಕೆ ನೀರಜ್​ ಸಾಕ್ಷಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts