More

    ಕೊಳ್ಳುವ ಪದಾರ್ಥದ ಹಿಂದಿನ ಕತೆ ಅರಿತಿರಬೇಕು: ದೇಸಿ ಪ್ರಸನ್ನ

    ಸಾಗರ: ಯಾವುದೇ ಒಂದು ಪದಾರ್ಥ ತಯಾರಾಗುವಾಗ ಅದರ ಹಿಂದಿನ ಕತೆ ನಮಗೆ ತಿಳಿಯಬೇಕು. ಇಂದು ಮೊಬೈಲ್‌ನ ಬಟನ್ ಒತ್ತಿದರೆ ಆಹಾರದಿಂದ ಹಿಡಿದು ತೊಡುವ ವಸ್ತ್ರದವರೆಗೆ ಎಲ್ಲವೂ ನಮ್ಮ ಎದುರು ಬಂದು ನಿಂತುಬಿಡುತ್ತದೆ. ಆದರೆ ಅದರ ಹಿಂದಿರುವ ಅಪಾಯದ ಬಗ್ಗೆ ನಾವು ಚಿಂತಿಸುವುದೇ ಇಲ್ಲ. ಕೊಂಡುಕೊಳ್ಳುವವರ ಸಮಾವೇಶದಲ್ಲಿ ಖರೀದಿಸುವವರು ಏಕೆ ಖರೀದಿಸುತ್ತಾರೆ? ಮಾರಾಟ ಮಾಡುವವರು ಹೇಗೆ ಮಾರಾಟ ಮಾಡುತ್ತಾರೆ? ಇವೆಲ್ಲದರ ಚಿಂತನ-ಮಂಥನ ನಡೆಯಬೇಕಾಗುತ್ತದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

    ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಭಾನುವಾರ ಕೈಮಗ್ಗ ಮತ್ತು ಜವಳಿ ಇಲಾಖೆ ಪವಿತ್ರ ವಸ್ತ್ರ ಯೋಜನೆಯಡಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಹಾಗೂ ಕವಿ ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಚರಕ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕೊಡುಕೊಳ್ಳುವವರ ಸಮಾವೇಶದಲ್ಲಿ ಮಾತನಾಡಿದರು.
    100 ರೂ.ಗೆ ಟೀಶರ್ಟ್ ತಯಾರಾಗಿ ನಮ್ಮೆದುರು ನಿಲ್ಲುತ್ತದೆ. ಆದರೆ ಇದು ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ತಯಾರಾಗಿ, ಅದನ್ನು ನಾವು ಧರಿಸುವುದರಿಂದ ಒಂದು ಲಕ್ಷ ರೂ.ನಷ್ಟು ಅಪಾಯ ಪ್ರಕೃತಿಗೆ ಆಯಿತು ಎನ್ನುವುದು ನಮಗೆ ಗೊತ್ತಾಗುವುದೇ ಇಲ್ಲ. ಹಾಗಾಗಿ ಯಾವುದೇ ಉತ್ಪನ್ನ ತಯಾರಾಗುವಾಗ ಅದರ ಹಿಂದಿನ ವೃತ್ತಾಂತ ನಮಗೆ ತಿಳಿದಿರಬೇಕು ಎಂದರು.
    ಮಠಗಳು, ದೇವರ ವಿಗ್ರಹ, ಸನ್ಯಾಸಿಗಳು ಎಲ್ಲವೂ ಪವಿತ್ರ ಎಂಬುದು ನಿಜ. ಆದರೆ ಅವೆಲ್ಲದಕ್ಕೂ ಮಿಗಿಲಾದುದು ಕಾಯಕ. ಏಕೆಂದರೆ ಪವಿತ್ರವಾದದ್ದು ಹುಟ್ಟುವುದೇ ಕಾಯಕದಿಂದ. ಕಾಯಕವೇ ಕೈಲಾಸ ಎನ್ನುವುದು ಕೇವಲ ವೀರಶೈವರ ಅಥವಾ ಲಿಂಗಾಯತರ ತತ್ವವಲ್ಲ. ಅದನ್ನು ಅವರು ಎತ್ತಿಹಿಡಿದರು. ಬಸವಣ್ಣ ಅವರು ಈ ತತ್ವಕ್ಕೆ ವೈಚಾರಿಕತೆಯ ಬಾವುಟ ನೀಡಿದರು ಎಂದು ಹೇಳಿದರು.
    ದೇವರು ಬೇರೆ, ಸಮಾಜವಾದ ಬೇರೆ ಎಂದು ಯೋಚಿಸಿದರೆ ಯಾವುದೂ ಉಳಿಯುವುದಿಲ್ಲ. ನೀವು ಕಾಯಕವನ್ನು ರಾಮರಾಜ್ಯವೆಂದಾದರೂ ಕರೆಯಿರಿ ಅಥವಾ ಗಾಂಧೀಜಿ ಅವರ ಗ್ರಾಮರಾಜ್ಯ ಎಂದಾದರೂ ಕರೆಯಿರಿ. ಒಟ್ಟಾರೆ ಕಾಯಕವನ್ನು ಉಳಿಸಿಕೊಳ್ಳದಿದ್ದರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
    ಆಸ್ಟ್ರೇಲಿಯಾದ ವಸ್ತ್ರವಿನ್ಯಾಸಕಿ ಕೇಟ್ ಮಾತನಾಡಿ, ಕಳೆದ 5 ವರ್ಷಗಳಿಂದ ಇಲ್ಲಿಯ ಕೈಉತ್ಪನ್ನಗಳ ವಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ಭಾರತದಲ್ಲಿ ಕೌಶಲ, ನೈಪುಣ್ಯತೆ ಎಲ್ಲವೂ ಇದೆ. ಆದರೆ ಕೈ-ಉತ್ಪನ್ನಗಳು ತಯಾರಾಗುವ ಹಿಂದಿರುವ ಮಹತ್ವ ಮತ್ತು ಅದರ ಶ್ರಮ ನಾವು ತಿಳಿದಿಕೊಳ್ಳುತ್ತಿಲ್ಲ. ಮೊಬೈಲೇ ನಮ್ಮ ಜೀವನವಾಗಿಬಿಟ್ಟಿದೆ. ಕೈ ಉತ್ಪನ್ನಗಳಲ್ಲಿರುವ ರುಚಿ, ಕೌಶಲದ ವಸ್ತುಗಳು ನಮ್ಮ ಮೇಲೆ ಬೀರುವ ಪ್ರಭಾವವನ್ನು ಅರಿಯಬೇಕು. ಹತ್ತಿ ನೂಲಿನಿಂದ ತಯಾರಾದ ಬಟ್ಟೆಗಳು ನಮ್ಮ ಉಪಯೋಗದ ನಂತರವೂ ಮನೆಯ ಶುಚಿತ್ವ ಕೆಲಸಗಳಿಗೆ ಬಳಸಬಹುದು. ಅದು ಭೂಮಿಗೆ ಸೇರಿದರೆ ಗೊಬ್ಬರವಾಗುತ್ತದೆ. ಆದರೆ ಇಂದು ಇಡೀ ಪ್ರಪಂಚವೇ ಪ್ಲಾಸ್ಟಿಕ್‌ನಂತಹ ಅಪಾಯಕಾರಿ ವಸ್ತುವಿನಿಂದ ಸುತ್ತುವರಿದಿದೆ. ಭೂಮಿ ಮತ್ತು ಬದುಕನ್ನು ವಿಷವಾಗಿಸುತ್ತಿದೆ ಎಂಬುದನ್ನು ಮನಗಾಣಬೇಕು ಎಂದರು.
    ವಸ್ತ್ರ ವಿನ್ಯಾಸಕಿ ತಾಹೀರಾ ಮಾತನಾಡಿ, ಕೈ ಉತ್ಪನ್ನಗಳಲ್ಲಿ ತಯಾರಾಗುವ ವಸ್ತ್ರಗಳು ಗುಣಮಟ್ಟದ್ದಾಗಿದೆ. ನಾವು ಇಲ್ಲಿ ಖರೀದಿಸಿದ ವಸ್ತುಗಳನ್ನು ಯಾವುದೋ ದೊಡ್ಡವರಿಗೆ ಮಾರಾಟ ಮಾಡಿ ಮಾರುಕಟ್ಟೆ ನಿರ್ಮಿಸುತ್ತಿಲ್ಲ. ಜನಸಾಮಾನ್ಯರೂ ಇದನ್ನು ಖರೀದಿಸಿ ಸಂತಸ ಪಡುತ್ತಿದ್ದಾರೆ. ಯಂತ್ರಗಳ ಬಳಸುವಿಕೆಯಿಂದ ಉದ್ಯೋಗವೂ ಕುಗ್ಗುತ್ತದೆ. ಯಂತ್ರದಲ್ಲಿ ತಯಾರಾದ ವಸ್ತುಗಳು ಏಕತಾನತೆಯಿಂದ ಕೂಡಿರುತ್ತವೆಯೇ ಹೊರತು ಶ್ರಮಜೀವಿಯ ವೈವಿಧ್ಯವ ಹಾಗೂ ವಿಭಿನ್ನ ಕೌಶಲವನ್ನೂ ಎಂದಿಗೂ ಪರಿಚಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ, ಕಲಾವಿದರಾದ ಚೆಲುವರಾಜ್, ದ್ವಾರಕೀ, ನ್ಯೂಜಿಲ್ಯಾಂಡ್‌ನ ಆನಂದಿತಾ, ರಮೇಶ್, ಪದ್ಮಶ್ರೀ, ಎಂ.ವಿ.ಪ್ರತಿಭಾ, ಮಹಾಲಕ್ಷ್ಮೀ ಇತರರಿದ್ದರು.

    ಸಮವಸ್ತ್ರಕ್ಕೆ ಖರೀದಿಸಿ ಕೈ ಉತ್ಪನ್ನ
    ಕೈ ಉತ್ಪನ್ನಗಳಲ್ಲಿ ತಯಾರಾದ ಬಟ್ಟೆಗಳನ್ನು ಖರೀದಿಸುವ ಪಾತ್ರ ಗಣನೀಯವಾಗಿ ಹೆಚ್ಚಾಗಬೇಕು. ಶಾಲಾ ಮಕ್ಕಳಿಗೆ ಬಳಸುವ ಸಮವಸ್ತ್ರಗಳನ್ನೂ ನಮ್ಮ ಮೂಲಕ ಖರೀದಿಸುವಂತಾಗಬೇಕು. ಚರಕ ಪ್ರಸನ್ನ ಅವರಂತಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಿದಲ್ಲಿ ಸಾಫಲ್ಯ ಕಾಣಬಹುದು. ಇಲ್ಲವಾದಲ್ಲಿ ಕಷ್ಟಪಟ್ಟು ತಯಾರಿಸಿದ ನಮ್ಮ ಉತ್ಪನ್ನಗಳು ಅಗ್ಗದ ಬೆಲೆಗೆ ಖರೀದಿಯಾಗಿ ದೊಡ್ಡ ವ್ಯಾಪಾರಸ್ಥರು ಇದರಿಂದ ಹೆಚ್ಚಿನ ಲಾಭ ಪಡೆದು ಬೆಳಕು ಕಂಡುಬಿಡುತ್ತಾರೆ. ಶ್ರಮಜೀವಿಗಳಿಗೆ ಏನೂ ಅನುಕೂಲವಾಗುವುದಿಲ್ಲ ಎಂದು ಕೈ ಉತ್ಪನ್ನಗಳ ಉತ್ಪಾದಕ ಕುಲಕರ್ಣಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೈ ಉತ್ಪನ್ನಗಳ ಉತ್ಪಾದಕ ಸೋಮಶೇಖರ್, ಕುಲಕರ್ಣಿ ಅವರ ಮಾತುಗಳು ನ್ಯಾಯಸಮ್ಮತವಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಒಮ್ಮೆ ಅಷ್ಟು ಬೇಡಿಕೆ ನಿರ್ಮಾಣವಾದರೆ, ನಮ್ಮಿಂದ ಇದನ್ನು ಪೂರೈಸಲು ಸಾಧ್ಯವಿದೆಯೇ? ಎಂಬುದನ್ನೂ ಮನಗಾಣಬೇಕು. ಏಕೆಂದರೆ ನೇಕಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಸ ತಲೆಮಾರಿನ ಯುವ ಜನರಿಗೆ ನೇಕಾರಿಕೆಯ ಕಸುಬಿನ ಬಗ್ಗೆ ಆಸಕ್ತಿ ಮೂಡಿಸಬೇಕಾಗಿದೆ. ನೇಕಾರಿಕೆಯಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆಯೂ ನಿರ್ಮಾಣವಾಗಬೇಕು. ಇದರ ತಯಾರಿಕೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಬಗ್ಗೆಯೂ ಗಮನಹರಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts