More

    ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್- ಹನುಮಗಿರಿ, ವಿಶ್ವದಲ್ಲೇ ಅತೀ ಎತ್ತರದ ಕೃಷ್ಣಶಿಲೆಯ ಕೋದಂಡರಾಮನಿಗೆ ನಿತ್ಯ ಪೂಜೆ

    ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿ ಪರ್ವತವು ಸಾಕ್ಷಾತ್ ಹನುಮಂತನ ನೇರ ಸಾನ್ನಿಧ್ಯವಿರುವಂತಹ ಪುಣ್ಯ ಕ್ಷೇತ್ರ. ಪಂಚಮುಖಿ ಆಂಜನೇಯನ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿ ವಿಶ್ವದಲ್ಲೇ ಅತೀ ಎತ್ತರದ ಕೃಷ್ಣಶಿಲೆಯ ಕೋದಂಡರಾಮನ ಮೂರ್ತಿ ಸಹಿತ ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್ ಜನಮನ ಸೆಳೆದಿದೆ.

    ಹನುಮಗಿರಿಯನ್ನು ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್‌ನ್ನಾಗಿ ಘೋಷಿಸಲಾಗಿದೆ. ಇಲ್ಲಿ ರಾಮಾಯಣದ ಕಥೆಯನ್ನು ಕಲ್ಲಿನಲ್ಲಿ ಚಿತ್ರಗಳನ್ನು ಕೆತ್ತುವ ಮೂಲಕ ಅಕ್ಷರ ರೂಪದಲ್ಲಿ ತೋರಿಸಲಾಗಿದೆ. ಅಲ್ಲದೆ ಆಂಜನೇಯ ಪಾರ್ಕ್ ಕೂಡ ಇದೆ. ಇಲ್ಲಿ ಆಂಜನೇಯನ ಕಥೆಯನ್ನು ವಿವರಿಸಲಾಗಿದೆ. ಥೀಮ್ ಪಾರ್ಕ್‌ನಲ್ಲಿ ಸಂಜೀವನಿ ಉದ್ಯಾನವನವಿದ್ದು, ಸುಮಾರು 300 ಬಗೆಯ ಔಷಧೀಯ ಗಿಡಗಳು ಇಲ್ಲಿವೆ. ಗೋ ಆಶ್ರಮ, ಕ್ಷೇತ್ರದ ನಂದಿ ಬಸವರಾಜ ಹಾಗೂ ನಿತ್ಯ ಅನ್ನದಾನ ಇಲ್ಲಿನ ಪ್ರಮುಖ ಆಕರ್ಷಣೆ.

    *ಕೃಷ್ಣಶಿಲೆಯ ಕೋದಂಡರಾಮನಿಗೆ ನಿತ್ಯ ಪೂಜೆ

    ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಗುಣಂತೇಶ್ವರ ಭಟ್ ಮಾರ್ಗದರ್ಶನದಲ್ಲಿ ಕಾಸರಗೋಡು ಚಟ್ಟಂಚಾಲ್ ರಾಜೇಶ್ ಮತ್ತು ತಂಡದಿಂದ ಕೋದಂಡರಾಮನ 26 ಅಡಿ ಎತ್ತರದ ವಿಶಿಷ್ಠ ಮೂರ್ತಿ ಕೆತ್ತಲಾಗಿದ್ದು, ನಿತ್ಯ ಪೂಜಾ ವಿಧಿವಿದಾನ ನೆವೇರುತ್ತಿದೆ. ಹೊಯ್ಸಳ ಭಂಗಿಯಲ್ಲಿರುವ ಈ ಕೋದಂಡರಾಮನ ಮೂರ್ತಿ ಏಕಶಿಲಾ ಕೃಷ್ಣಶಿಲೆಯಲ್ಲಿ ನಿರ್ಮಾಣಗೊಂಡ ವಿಶ್ವದ ಅತ್ಯಂತ ಎತ್ತರದ ಮೂರ್ತಿ ಎನಿಸಿಕೊಂಡಿದೆ.

    *ಪ್ರಕೃತಿಯೇ ಸೀತೆ

    ಕೋದಂಡರಾಮನ ಮೂರ್ತಿಯು ಬೃಹತ್ ಪಾಣಿ ಪೀಠ ಒಳಗೊಂಡಿದ್ದು ಇದನ್ನು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಸೇವಾ ರೂಪದಲ್ಲಿ ನೀಡಿದ್ದಾರೆ. ಕೋದಂಡರಾಮನ ಪಕ್ಕದಲ್ಲೆ ಭಕ್ತ ಹನುಮಂತನ ಮೂರ್ತಿ ಪ್ರತಿಷ್ಠೆಗೊಂಡಿದೆ. ಅಭಿಷೇಕ ಮಂಟಪವನ್ನು ಎರಡೇ ಕಂಬದಲ್ಲಿ ನಿಲ್ಲಿಸಲಾಗಿರುವುದು ಇಲ್ಲಿನ ಇಲ್ಲಿ ಇನ್ನೊಂದು ವಿಶೇಷ. ಮೂರ್ತಿ ಮತ್ತು ಅಭಿಷೇಕ ಮಂಟಪದ ಮೇಲ್ಬಾಗದಲ್ಲಿ ದೊಡ್ಡ ಕೊಡೆಯೊಂದು ನಿರ್ಮಾಣವಾಗಲಿದ್ದು, ಇದನ್ನು ರಾಮನ ಛತ್ರ ಎಂದು ಕರೆಯುತ್ತಾರೆ. ಇದು ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿ ಕೋದಂಡರಾಮ ಮತ್ತು ಹನುಮನಿದ್ದರೂ ಸೀತೆ ಮಾತ್ರ ಇಲ್ಲ, ಆದರೆ ಇಲ್ಲಿ ಸುತ್ತಲಿನ ಪ್ರಕೃತಿನ್ನೇ ಸೀತೆಗೆ ಹೋಲಿಸಲಾಗಿದೆ.

    —————-

    ಅಪರೂಪದ ಬಯಲು ದೇವಸ್ಥಾನ

    ಈಗಾಗಲೇ ಹನುಮಗಿರಿಯಲ್ಲಿ ಏಕಶಿಲೆಯಿಂದ ನಿರ್ಮಾಣಗೊಂಡ ಪಂಚಮುಖಿ ಆಂಜನೇಯ ವಿಗ್ರಹವು 12 ಅಡಿ ಎತ್ತರವಿದ್ದು, ದಕ್ಷಿಣಕ್ಕೆ ನರಸಿಂಹ, ಪಶ್ಚಿಮಕ್ಕೆ ಗರುಡ, ಉತ್ತರಕ್ಕೆ ವರಹಾ, ಊರ್ದ್ವಮುಖಕ್ಕೆ ಹಯಗ್ರಿವ ಇರುವಂತಹ ಪಂಚಮುಖಿ ಆಂಜನೇಯ ಸ್ವಾಮೀ ವಿಗ್ರಹ ಶನಿದೋಷ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿ ದೇವರಿಗೆ ಗರ್ಭಗುಡಿ ಇಲ್ಲ, ಆದುದರಿಂದ ಕರಾವಳಿ ಕರ್ನಾಟಕದ ಅಪರೂಪದ ಬಯಲು ದೇವಸ್ಥಾನವಿದು.

    ——————

    ಹನುಮಗಿರಿ ಕ್ಷೇತ್ರಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು, ಇಂದು ದೇಶದ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮಿದೆ. ಹನುಮಗಿರಿಯಲ್ಲಿರುವ ಕೋದಂಡರಾಮನ ವಿಗ್ರಹ ಕೃಷ್ಣಶಿಲೆಯಿಂದ ನಿರ್ಮಿತ ವಿಶ್ಚದಲ್ಲೇ ಅತೀ ಎತ್ತರದ ಏಕಶಿಲಾ ವಿಗ್ರಹ. ಇಲ್ಲಿರುವ ಪಂಚಮುಖಿ ಆಂಜನೇಯ ದೇವಸಸ್ಥಾನ ಕರಾವಳಿ ಕರ್ನಾಟಕದ ಅಪರೂಪದ ಬಯಲು ದೇವಸ್ಥಾನ.

    ಶಿವರಾಮ. ಪಿ, ಧರ್ಮದರ್ಶಿಗಳು, ಧರ್ಮಶ್ರೀ ಪ್ರತಿಷ್ಟಾನದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts